“ಕಿಂಗ್ ಕೋಬ್ರಾ ಕತೆಯ ಕೇಳಿ….”,

ತೋಟದಂಚಿನ ಬೆಟ್ಟದಲ್ಲಿದ್ದ ಕಾಳಿಂಗ ಒಮ್ಮೆಲೇ ಮರವೇರಿದ. ಸರಸರ ತೆವಳುತ್ತಲೇ ಮೇಲಕ್ಕೆ ಹೋದ. ನಾನು ರೆಂಬೆ–ಕೊಂಬೆ ಬಳಸುತ್ತ ಅವನನ್ನು ಹಿಂಬಾಲಿಸಿದೆ. ದಿಗಿಲುಗೊಂಡ ಆತ ಮರ ಜಿಗಿಯುವ ಆಟವಾಡ ಹತ್ತಿದ. ನಾನು ನಿಧಾನಕ್ಕೆ ಸಾಗಿ ಅವನ ಹಿಂದಿದ್ದ ರೆಂಬೆಯ ಮೇಲೆ ಬೋರಲಾಗಿದ್ದೆ. ಸರಕ್ಕನೆ ಹಿಮ್ಮುಖವಾಗಿ ತಿರುಗಿದ್ದೇ ಅದೇ ರೆಂಬೆಯ ಮೇಲೆ ಹೆಡೆಯೆತ್ತಿ ನಿಂತ. ಆ ರೆಂಬೆ ಸರಿಯಾಗಿ ನನ್ನ ನೆತ್ತಿಯ ಮೇಲಿತ್ತು…. ಕೆಳಗೆ ನೂರಾರು ಜನರಿದ್ದರು. ನೆಲಕ್ಕೆ ಬೆರಳನ್ನು ಅಮುಕಿ, ಕೈ ಮುಷ್ಠಿ ಬಿಗಿದು, ಜೀವ ಹಿಡಿದಿಟ್ಟುಕೊಂಡವರಂತೆ ನಿಂತಿದ್ದರು ಅವರೆಲ್ಲ. ನಾನೂ ಒಂದು ಕ್ಷಣಕ್ಕೆ ದಿಗಿಲಾದೆ. ಆದರೆ, ಗಾಬರಿಗೊಳ್ಳಲಿಲ್ಲ. ‘ಕಾಳಿಂಗ ದಾಳಿಕೋರನಲ್ಲ, ಎದುರಾಳಿ ಶಾಂತನಾಗಿದ್ದರೆ ಆತ ನಿರುಪದ್ರವಿ’ ಎಂದು ;ಅಪ್ಪ ಹೇಳಿಕೊಟ್ಟ ಪಾಠ ನೆನಪಾಯಿತು. ಕೊಂಚವೂ ಅಲುಗಾಡದೆ ಯಥಾಸ್ಥಿತಿ ಕಾಯ್ದುಕೊಂಡೆ. ನಾಲ್ಕೈದು ನಿಮಿಷ ಕಳೆದ ಮೇಲೆ ಕಾಳಿಂಗ ಹೆಡೆಯಿಳಿಸಿ, ಶಾಂತನಾಗಿ ಮತ್ತೆ ತೆವಳಲು ಶುರು ಮಾಡಿದ. ಅವನನ್ನು ಸುರಕ್ಷಿತವಾಗಿ ಹಿಡಿದು ತಂದು ಕಾಡಿಗೆ ಬಿಟ್ಟೆ’. ಪ್ರಶಾಂತ ಹುಲೇಕಲ್ ಅವರ ಕತೆ ಕೇಳುವಾಗ, ಜೊರ್ ಎಂದು ಬೀಳುವ ಮಳೆ, ಮೈಕೊರೆಯುವ ಚಳಿಯಲ್ಲೂ ಬೆವರ ಹನಿಗಳು ಮುಖದ ಮೇಲೆ ಮೂಡುತ್ತಿದ್ದವು. ಶಿರಸಿಯಲ್ಲಿ ಬಹುಶಃ ಸುರೇಶ ಹುಲೇಕಲ್ (ಹಾವು ಹಿಡಿಯುವ ಸುರೇಶ) ಬಗ್ಗೆ ಗೊತ್ತಿಲ್ಲದವರಿಲ್ಲ. ಅವರು ಈಗ ನಮ್ಮ ನಡುವೆ ಇಲ್ಲ. ಆದರೆ, ಹಾವನ್ನು ಕಂಡಾಗ ಈಗಲೂ ತಕ್ಷಣಕ್ಕೆ ನೆನಪಾಗುವುದೇ ಅವರ ಹೆಸರು. ಅಪ್ಪನ ಹವ್ಯಾಸವನ್ನು ಮಗ ಪ್ರಶಾಂತ ರೂಢಿಸಿಕೊಂಡು ಬಂದಿದ್ದಾರೆ. ಶಿರಸಿ ಸುತ್ತಮುತ್ತಲಿನ ಊರುಗಳಲ್ಲಿ ಹಾವು ಮನೆಗೆ ಬಂತೆಂದರೆ ಮೊದಲು ಫೋನಾಯಿಸುವುದು ಪ್ರಶಾಂತಗೆ. ಅವರು 24 ವರ್ಷಗಳಿಂದ ಹಾವಿನ ರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ‘ಆಗಿನ್ನೂ ನನಗೆ ಐದು ವರ್ಷ. ಅಪ್ಪ ಹಿಡಿದಿದ್ದ ಹಾವನ್ನು ನನ್ನ ಮೈಮೇಲೆ ಬಿಟ್ಟಿದ್ದರು. ಚಿಕ್ಕ ಕೂಸು, ಏನೂ ತಿಳಿಯದು, ಒಮ್ಮೆ ಭಯಗೊಂಡೆ. ಆಮೇಲೆ ಅದೇ ಬದುಕಿನ ಭಾಗವಾಯಿತು. ನಾನು ಎಸ್ಸೆಸ್ಸೆಲ್ಸಿಯಲ್ಲಿದ್ದೆ. ಆಗ ಫೋನಿಲ್ಲದ ಕಾಲ. ಯಾರೋ ಒಬ್ಬರು ಮನೆಗೆ ಹಾವು ಬಂದಿದೆಯೆಂದು ಅಪ್ಪನನ್ನು ಹುಡುಕಿಕೊಂಡು ಬಂದರು. ಅಪ್ಪ ಮನೆಯಲ್ಲಿರಲಿಲ್ಲ. ನಾನೇ ಹೋಗಿ ಆ ನಾಗರಹಾವನ್ನು ಹಿಡಿದೆ. ಅಲ್ಲಿಂದ ನನಗೆ ಈ ವಿದ್ಯೆ ಕರಗತವಾಯಿತು’ ಎನ್ನುತ್ತಾರೆ ಪ್ರಶಾಂತ. ಕಾಳಿಂಗ ಸರ್ಪ, ನಾಗರಹಾವು, ಕ್ರೇಟ್, ಹಪ್ರೆ ಹಾವು ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುವ ಎಲ್ಲ ರೀತಿ ಹಾವುಗಳನ್ನು ಒಂದಿಲ್ಲೊಂದು ಸಂದರ್ಭದಲ್ಲಿ ರಕ್ಷಣೆ ಮಾಡಿ ಅವರು ಕಾಡಿಗೆ ಬಿಟ್ಟಿದ್ದಾರೆ. ಅವರು ಹಿಡಿದಿರುವ ಹಾವುಗಳ ಸಂಖ್ಯೆ 8000 ದಾಟಿರಬಹುದು. ಅವರ ನಾಲ್ಕು ವರ್ಷದ ಮಗಳು ಆಕರ್ಷಾ, ಎರಡೂವರೆ ವರ್ಷದ ಮಗ ವಿರಾಜ ಇಬ್ಬರಿಗೂ ಹಾವಿನ ಬಗ್ಗೆ ಅತೀವ ಆಸಕ್ತಿ. ಇವರಿಬ್ಬರೂ ಅನೇಕ ಹಾವುಗಳನ್ನು ಗುರುತಿಸುತ್ತಾರೆ. ‘ಸಾಮಾನ್ಯವಾಗಿ ಮಕ್ಕಳು ಚಾಕೋಲೆಟ್ ತಂದ್ಯಾ ಅಂತ ಕೇಳಿದ್ರೆ, ನನ್ನ ಮಗ ಡ್ಯಾಡಿ ಹಾವು ತಂದ್ಯಾ ಅಂತ ಕೇಳ್ತಾನೆ’ ಎಂದರು ಪ್ರಶಾಂತ. ನಾಗರಪಂಚಮಿಯಲ್ಲಿ ಹಾವಿಗೆ ಪೂಜೆ ‘ಅಪ್ಪ ಹಾವಿನ ನಡುವೆ ಬದುಕಿದವರು. ಹಾವು ಅವರಿಗೆ ಬದುಕನ್ನೂ ಕೊಟ್ಟಿತ್ತು. ಅದಕ್ಕೆ ಅವರು ಪ್ರತಿ ನಾಗರಪಂಚಮಿಯಲ್ಲಿ ಹಾವನ್ನು ಪೂಜಿಸುತ್ತಿದ್ದರು. ಅವರ ಕಾಲಾನಂತರದಲ್ಲಿ ನಾವು ಮಕ್ಕಳು ಅದನ್ನು ಮುಂದುವ ರಿಸಿದ್ದೇವೆ. ಹಾವಿನ ರಕ್ಷಣೆಯ ವೇಳೆ ಎಂಟು ಬಾರಿ ನಾಗರ ಹಾವಿನಿಂದ ಕಚ್ಚಿಸಿಕೊಂಡಿದ್ದೆ. ಆದರೂ, ಜೀವ ಉಳಿದಿದೆ. ನಮ್ಮನ್ನು ಕಾಪಾಡಿದವರನ್ನು ನಾವು ಕಾಪಾಡಬೇಕು ಎಂಬ ತತ್ವದಲ್ಲಿ ನಾನು ಪೂಜೆ ಮಾಡುತ್ತೇನೆಯೇ ವಿನಾ, ದೇವರೆಂಬ ಭಕ್ತಿಯಿಂದಲ್ಲ. ಅದಕ್ಕೆ ಹಿಂಸೆ ಕೊಟ್ಟು ಪೂಜಿಸುವ ಕ್ರಮವೂ ಇಲ್ಲ. ಪೂಜೆಯ ನಂತರ ಅದು ಕಾಡಿನ ಮನೆ ಸೇರುತ್ತದೆ’ ಎಂದ ಅವರು ಕೊನೆಯದಾಗಿ ಒಂದು ಮಾತು ಇದನ್ನು ಜನರಿಗೆ ತಿಳಿಸಿಬಿಡಿ ಎಂದರು. ‘ಪರಿಸರ ಆಹಾರ ಕೊಂಡಿಯ ಹಾವು ಮನುಷ್ಯನಿಗೆ ಹತ್ತಿರದ ಜೀವಿ. ಮನೆಯಲ್ಲಿ ಇಲಿ ಕಂಡರೆ ಸುಮ್ಮನಿರುತ್ತೇವೆ. ಹಾವನ್ನು ಕಂಡರೆ ಹೊಡೆಯಲು ಮುಂದಾಗುತ್ತೇವೆ. ಇಲಿಯನ್ನು ಅರಸಿ ಹಾವು ಮನೆಗೆ ಬರುವುದೇ ವಿನಾ ಉಪದ್ರವ ಕೊಡಲ್ಲ. ಜೀವಕ್ಕೆ ಅಪಾಯ ಬಂದಾಗ ಸ್ವಯಂ ರಕ್ಷಣೆಗೆ ಅದು ಕಚ್ಚಬಹುದು ಅಷ್ಟೇ. ಹಾವು ಶುದ್ಧ ಮಾಂಸಾಹಾರಿ. ಸುಖಾಸುಮ್ಮನೆ ನಾಗರಪಂಚಮಿಯಲ್ಲಿ ಅದಕ್ಕೆ ಹಾಲೆರೆಯಬೇಡಿ…’

“author”: “ಸಂಧ್ಯಾ ಹೆಗಡೆ ಆಲ್ಮನೆ”,

courtsey:prajavani.net

https://www.prajavani.net/artculture/article-features/story-king-cobra-655941.html

Leave a Reply