ಕಷ್ಟ ನಷ್ಟಗಳಿಂದ ಹೊರಬರುವುದು ಹೇಗೆ…?
ಶ್ರೀಮತಿ ಪ್ರೇಮಾ ಭಟ್, ಬೆಂಗಳೂರು
ಬದುಕು ಎಂದ ಮೇಲೆ ಕಷ್ಟ ನಷ್ಟಗಳು ದುಃಖ ದುಮ್ಮಾನಗಳು ಇದ್ದೇ ಇರುತ್ತವೇ, ಜೀವನದ ಗತಿ ಚಲಿಸುವ ಚಕ್ರದ ಹಾಗೇ ಒಮ್ಮೆ ಕಷ್ಟ ಮಗದೊಮ್ಮೆ ಸುಖ. ಸುಖವನ್ನು ಎರಡು ಕೈಯಿಂದ ಭೋಗಿಸಿದ ಹಾಗೆ ಕಷ್ಟವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಕಷ್ಟ ನಷ್ಟಗಳ ಹೊರೆಯನ್ನು ಇರಿಸಿಕೊಳ್ಳಬೇಕಾದರೆ ಭಗವಂತನ ಮೊರೆ ಹೋಗುವುದು ಸುಲಭಮಾರ್ಗ, ಮನೋವೇದನೆಯನ್ನು ತಣಿಸುವ ಮಹಾಮದ್ದು ಆಧ್ಯಾತ್ಮ.
ಪರಮಾತ್ಮ ಒಲಿಯುವುದು ನಿಷ್ಕಾಮ ಪ್ರೇಮಕ್ಕೆ, ನಿಷ್ಕಪಟವಾದ ಭಕ್ತಿಗೆ. ದೇವರೇ ಇಲ್ಲವೆಂದು ಹೇಳುವ ಹುಚ್ಚಪ್ಪಗಳು ಪ್ರಪಂಚದಲ್ಲಿ ಬಹಳ ಮಂದಿ ಸಿಗುತ್ತಾರೆ. ಇಂತಹ ನಾಸ್ತಿಕ ಮಹಾಶಯರಿಗೆ ತಿಳಿಸಿ ಹೇಳಿದರೂ ಅರ್ಥವಾಗುವುದಿಲ್ಲ ಅಥವಾ ತಾವೇ ತಿಳಿದುಕೊಳ್ಳಲು ಪ್ರಯತ್ನಿಸುವುದೂ ಇಲ್ಲ. ಅನುಭಾವಿ ಕವಿಯೊಬ್ಬರು, ಆ “ತಿಳಿಸುವ ಮಾತಲ್ಲ; ತಿಳಿಸದೆ ತಿಳಯುವಂತೆಯೂ ಇಲ್ಲ; ತಿಳಿಯದೆ ಹೊಳೆಯುವುದೂ ಇಲ್ಲ! ಹೊಳೆಯದೆ ಇಳಿಯದು; ಇಳಿಯದೆ ಹೊಳೆಯದು” ಎಂದು. ಇದು ಸತ್ಯಸ್ಯ ಸತ್ಯ ಯಾವುದು ಅನುಭವಕ್ಕೆ ಬರಬೇಕು, ಅನುಭವವಾಗದೇ ಯಾವುದೂ ತಿಳಿಯುವುದೂ ಇಲ್ಲ. ಆ ಅನುಭವ ಬರಬೇಕಾದರೆ, ಭಗವಂತನಲ್ಲಿ ನಿರಂತರ ನಿಷ್ಕಾಮ ಭಕ್ತಿ ಇರಬೇಕಾಗುತ್ತದೆ. ಒಂದು ದಳ ತುಳಸಿಯನ್ನು ಭಕ್ತಿಯಿಂದ ಅರ್ಪಿಸಿ ರುಕ್ಮಿಣಿ, ಕೃಷ್ಣಪರಮಾತ್ಮನನ್ನು ಸಂತೃಪ್ತಿ ಪಡಿಸಿದಳು. ಗೆದ್ದೆ ಎಂದು ಬೀಗಲಿಲ್ಲ. ಇದು ನಿಷ್ಕಾಮ ಭಕ್ತಿ. ‘ಕೃಷ್ಣ… ನೀನೇ ಕಣಪ್ಪ ನನ್ನ ಮಾನ ಹರಣವಾಗುತ್ತಿರುವ ಈ ಸಂದರ್ಭದಲ್ಲಿ ರಕ್ಷಿಸಬೇಕಾದವನು’ ಎಂದು ಕೈಗಳೆರಡನ್ನೂ ಎತ್ತಿ ಸರ್ವ ಸಮರ್ಪಣಾ ಭಾವದಿಂದ ಕೃಷ್ಣನಿಗೆ ಮೊರೆ ಹೋದ ದ್ರೌಪದಿಯನ್ನು ಶ್ರೀಕೃಷ್ಣ ಅಕ್ಷಯ ವಸ್ತ್ರವನ್ನಿಟ್ಟು ಕರುಣಿಸಿದ. ದ್ರೌಪದಿಯದು ನಿಷ್ಕಪಟ ಭಕ್ತಿ, ಇದನ್ನೆ ಪ್ರೇಮ ಎಂದರು.
ಡಾಂಭಿಕತೆ, ಅಬ್ಬರದ ಪೂಜೆ ಪುನಸ್ಕಾರದಿಂದ ಅವನನ್ನು ಮೆಚ್ಚಿಸಲು ಸಾಧ್ಯವಿಲ್ಲವೆನ್ನುವುದನ್ನು ಕನಕದಾಸರು ತಮ್ಮ ಕೀರ್ತನೆಯೊಂದರಲ್ಲಿ ಸೊಗಸಾಗಿ ಬಣ್ಣಿಸಿದ್ದಾರೆ.
ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ
ಕಳ್ಳರಿಗೆ ಕಳ್ಳನಂತೆ – ಬೆಳ್ಳಕ್ಕಿಯಂದದಿ ಡಂಭ
ಗಾಣದೆತ್ತಿನಂತೆ ಕಣ್ಣಮುಚ್ಚಿ ಪ್ರದಕ್ಷಿಣೆ ಮಾಡಿ
ಕಾಣದೇ ತಿರುಗುವೆನೆರೆಡು ಕನ್ನಿದ್ದ ನಾನು…
ಗುಂಡು ಮುಳುಗಿನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿ ಮಂಡೆ ಶೂಲೆ ಬಾಹೋದಲ್ಲದೆ ಗತಿಯ ಕಾಣೆನೋ.. ಭಕ್ತಿ ಭಾವವಿಲ್ಲದೆ ಗಾಣದೆತ್ತಿನಂತೆ ಪ್ರದಕ್ಷಿಣೆ ನಮಸ್ಕಾರ ಮಾಡಿದರೆ ಹರಿ ಮೆಚ್ಚಬಹುದೇ? ಹಾಗೆ ಗುಂಡು ಮುಳುಗನ ಹಕ್ಕಿಯಂತೆ ಕಂಡ ಕಂಡ ನೀರಲ್ಲಿ ಮುಳುಗಿದರೆ ತಲೆಶೂಲೆ ಬರುತ್ತದೆಯೇ ಹೊರತು ಹರಿ ಎಂದಿಗೂ ಮೆಚ್ಚಲಾರ. ಅವನಿಗೆ ಬೇಕಾದ್ದು ದ್ರೌಪದಿಯಂತಹ ಸರ್ವಸಮರ್ಪಣಾ ಭಾವದ ಭಕ್ತಿ, ರುಕ್ಮೀಣಿಯಂತಹ ನಿಷ್ಕಾಮ ಪ್ರೇಮ. ಇಂಥ ಭಕ್ತಿಗೆ ಭಗವಂತ ಒಲಿಯಬಹುದೇ ಹೊರತು ಡಾಂಭಿಕತೆಗಲ್ಲ ಎನ್ನುವುದನ್ನು ಕನಕದಾಸರು ಸೊಗಸಾಗಿ ತಿಳಿಸಿಕೊಟ್ಟಿದ್ದಾರೆ.
ಆತ್ಮವನ್ನು ಪರಮಾತ್ಮನಿಗೆ ಅರ್ಪಿಸದೆ ಅವನು ಒಲಿಯುವುದಾದರು ಹೇಗೆ? ಭಕ್ತಿ ಮನದೊಳಗೆ ಹುಟ್ಟಿ ಬರಬೇಕಾದರೂ ಕಾಯಾ ವಾಚಾ ಮನಸಾ ಅವನನ್ನು ಬೇಡಿಕೊಳ್ಳಬೇಕು. ಕಷ್ಟ ನಷ್ಟಗಳಿಗೆ ಒಳಗಾದೆನೆಂದು ಕೊರಗುತ್ತಾ ಕೂತರೆ ಕಷ್ಟ ಪರಿಹಾರವಾಗುವುದೇ ಖಂಡಿತಾ ಇಲ್ಲ. ಭಕ್ತಿಯಿಂದ ಪರಮಾತ್ಮನನ್ನು ಬೇಡಿಕೊಂಡರೆ ಕಷ್ಟವನ್ನು ಅವನು ನೀಗಿಸನೇ ಎನ್ನುವುದು ಗುರು ವಾದಿರಾಜರ ನುಡಿ. ಮೋಹವನ್ನು ಬಿಟ್ಟು ಒಂದೇ ಮನಸ್ಸಿನಿಂದ ಪರಮಾತ್ಮನನ್ನು ಧ್ಯಾನಿಸಬೇಕು. ಸುಖ ಸಂಪತ್ತಿಗೆ ಹಾತೊರೆದರೆ ಭಕ್ತಿಯ ಪಥದತ್ತ ಹೆಜ್ಜೆಯಿಡಲು ಸಾಧ್ಯವಿಲ್ಲ ಎನ್ನುವುದನ್ನು ಹಾಗೂ ಭಕ್ತಿ ಎನ್ನುವುದು ಮನದಲ್ಲಿ ಹುಟ್ಟಿ ಬರಬೇಕಾದರೂ ಕೂಡ ಅವನನ್ನು ಧ್ಯಾನಿಸದ ಹೊರತು ಬರುವುದಿಲ್ಲ. ಎನ್ನುವುದನ್ನು,
ನಿನ್ನ ಧ್ಯಾನದ ಶಕ್ತಿಯ ಕೊಡೊ
ಅನ್ಯರಲ್ಲಿ ವಿರಕ್ತಿಯ ಕೊಡೊ
ನಿನ್ನ ನೋಡುವ ಯುಕ್ತಿಯ ಕೊಡೊ
ನಿನ್ನ ಪಾಡುವ ಭಕ್ತಿಯ ಕೊಡೊ
ನಿನ್ನತ್ತ ಬರುವ ಸಂಪತ್ತಿಯ ಕೊಡೊ
ಚಿತ್ತದಿ ತತ್ವದ ಕೃತ್ಯವ ತೋರೊ
ಮತ್ತೆ ತುದಿಯಲಿ ಎನಗೆ ಮುಕ್ತಿಯ ಕೊಡೊ
ಅತ್ತತ್ತ ಮಾಡೊ ಭವ ಕತ್ತಲೆಯೆನಗೆ
ಮುತ್ತಿದೆ ಹಯವದನ!
ಮನನ ಮಾಡಿಕೊಟ್ಟಿದ್ದಾರೆ
ಹರಿದಾಸರ ತಾತ್ವಿಕ ಚಿಂತನೆಗಳೆಲ್ಲವೂ ಮೂಲಭೂತವಾಗಿ ಮಾನವ ಧರ್ಮಕ್ಕೆ ಸಂಬಂಧಿಸಿದುದೇ ಆಗಿದ್ದು, ಭಕ್ತಿಯೇ ಇಲ್ಲಿ ಪ್ರಧಾನವಾಗಿರುವುದನ್ನು ಗಮನಿಸಬಹುದು. ಅಲ್ಲದೆ ಹರಿದಾಸರಿಗೆ ಹರಿಯೇ ಪರನೆಂಬ ಏಕನಿಷ್ಠೆ ಇರುವುದನ್ನು ಕಾಣುತ್ತೇವೆ. ಸಂಸಾರವನ್ನು ಅಸಾರವೆಂದು ಹೊರದೂಡಿ ಬನ್ನಿರೆಂದು ಯಾವ ದಾಸರು ಹೇಳಿಲ್ಲ. ಏನೆ ಕಷ್ಟ ನಷ್ಟಗಳು ತಲೆದೋರಿದರೂ ಅದಕ್ಕಾಗಿ ಹೆದರದೆ ಬದುಕು ನಡೆಸುವಂತರಾಗಬೇಕು ಎನ್ನುವುದಕ್ಕೆ ‘ಈಸಬೇಕು ಇದ್ದು ಜಯಿಸಬೇಕು’ ಎಂದರು. ಸಂಸಾರದಲ್ಲಿ ನೆಲೆನಿಂತು ಎಲ್ಲವನ್ನು ಜಯಿಸಬೇಕಾದರೆ ಭಗವಂತನ ಧ್ಯಾನದಲ್ಲಿ ನಿರತರಾಗುವಂತೆ ಉಪದೇಶಿಸಿದರು. ದುಃಖ ದುಮ್ಮಾನಗಳ ಮನಸ್ಥಿತಿಯನ್ನು ಹೋಗಲಾಡಿಸಲು ಭಗವದ್ಭಕ್ತಿಯೇ ರಾಮಬಾಣ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ ಪುಂಡರೀಕ್ಷಾ ಪುರುಷೋತ್ತಮ ದೇವಾ
ಬಂಧುಗಳು ಎನಗಿಲ್ಲ ಬದುಕಿನಲ್ಲಿ ಸುಖವಿಲ್ಲ
ನಿಂದೆಯಲ್ಲಿ ನೊಂದೆನೈ ನೀರಜಾಕ್ಷ!
ತಂದೆ ತಾಯಿಯು ನೀನೆ ಬಂಧು ಬಳಗವೂ ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣ ! ಎಂದರೆ, ನೀಗದೆ ಕಷ್ಟ ನಷ್ಟಗಳು, ದುಃಖ ದುಮ್ಮಾನಗಳು, ಒಮ್ಮೆ ಕೃಷ್ಣ… ಎನ್ನ ನೀಗದೆ ನಿಮ್ಮ ಕಷ್ಟಗಳು ಎಂದು ಸ್ವತಃ ಹಾಡಿ ಮಾನವ ಕುಲಕ್ಕೆ ಮನವರಿಕೆ ಮಾಡಿಕೊಟ್ಟರು. ಪರಮಾತ್ಮನ ಸ್ಮರಣೆ ಮಾಡದೆ ಅನುದಿನವೂ ಇತರರನ್ನು ದೂಷಿಸುತ್ತ ಕಾಲ ಕಳೆಯುವುದರಿಂದ ವ್ಯಕ್ತಿತ್ವ ಸುಟ್ಟು ಕರಕಲಾಗುತ್ತದೆಯೇ ಹೊರತು ಅದರಿಂದೇನೇನೂ ಲಾಭವಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಮಹಾಮದ್ದು ಭಗವನ್ನಾಮ ಸ್ಮರಣೆ ಎಂಬುವುದನ್ನು ಒತ್ತಿ ಒತ್ತಿ ಹೇಳಿದ ಧೀಮಂತರು ದಾಸವರೇಣ್ಯರು. ದುಡ್ಡಿನ ಬಲದಿಂದ ಎಲ್ಲರ ಪ್ರೀತಿ ವಿಶ್ವಾಸಗಳಿಸಿದಂತಲ್ಲ, ಭಗವಂತನ ಪ್ರೀತಿ ಗಳಿಸಬೇಕಾದರೆ ಮೊದಲು ನೀಚಬುದ್ಧಿಯನ್ನು ಬಿಡು ಎಂದು ಮಾನವ ಕುಲಕ್ಕೆ ಬುದ್ಧಿ ಹೇಳಿ ತಿದ್ದಲು ಪ್ರಯತ್ನಿಸಿದರು. ಭಕ್ತಿ ಮಾರ್ಗಕ್ಕೆ ಬೇಕಾದ್ದು ಭಗವಂತನಲ್ಲಿ ನಿಷ್ಕಾಮ ಪ್ರೇಮ, ನಾಲಿಗೆಯ ಮೇಲೆ ಹತೋಟಿಯಿಲ್ಲದೆ ಹೊದರೆ ಭಗವಂತ ಒಲಿಯುವುದಿಲ್ಲ. ಶುದ್ಧವಾದ ನಿರ್ಮಲ ಮನಸ್ಸಿನಿಂದ ಭಗವಂತನಲ್ಲಿ ಮೊರೆ ಹೋದರೆ ಮಾತ್ರ ‘ನಿನ್ನ ಮನೆಯ ದಾಸನಾಗಬಲ್ಲ’ ಎನ್ನುವುದನ್ನು ಸಾರಿ ಸಾರಿ ಹೇಳಿದರು. ಭಗವಂತನಲ್ಲಿ ಮನಸ್ಸು ಕೂರಬೇಕಾದರೆ ‘ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎಂದರು, ಮೊದಲು ನಾಲಿಗೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕೆಂದರು. ಭಕ್ತಿ ಭಾವಕ್ಕೆ ಭಗವಂತ ಹೇಗೆ ಒಲಿದು ಕರುಣಿಸುತ್ತಾನೆ. ಎನ್ನುವುದನ್ನು ಪ್ರಹ್ಲಾದನ ಭಕ್ತಿಗೆ ಕಂಭ ಸೀಳಿ ಬಂದ ನರಸಿಂಹನನ್ನು, ದಾಸಿಯ ಸಂಗದಿಂದ ದೋಷಿತನಾಗಿ ಮಾಡಬಾರದ ಅಕೃತ್ಯಗಳನ್ನೆಲ್ಲಾ ಮಾಡಿ, ಅಂತ್ಯ ಕಾಲದಲ್ಲಿ ನಾರಾಯಣ ಸ್ಮರಣೆ ಮಾತ್ರದಿಂದ ವೈಕುಂಠಕ್ಕೆ ಹೋದ ಅಜಾಮಿಳನನ್ನು, ಕೃಷ್ಣನಿಂದ ಅಕ್ಷಯ ವಸ್ತ್ರವನ್ನು ಪಡೆದ ದ್ರೌಪದಿಯನ್ನು ಉದಾಹರಿಸುತ್ತಾ ‘ಕಂದನು ಕರೆಯಲು ಕಂಭದಿ ಬಂದೆ! ಅಂದು ಅಜಾಮಿಳ ದ್ರೌಪದಿಗೊಲಿದೆ’ ಎನ್ನುವ ಕೀರ್ತನೆಯನ್ನು ರಚಿಸಿ ಭಕ್ತರ ಕಣ್ಣು ತೆರೆಯುವಂತೆ ಮಾಡಿದ್ದಾರೆ. ನವರಸಗಳಲ್ಲಿ ಎಲ್ಲಾ ರಸಭಾವಕ್ಕಿಂತ ಭಕ್ತಿರಸ ಶ್ರೇಷ್ಠವಾದುದೆಂದು ದಾಸರು ಪ್ರತಿಯೊಂದು ಕೀರ್ತನೆಗಳಲ್ಲೂ ಭಕ್ತಿರಸ ಹರಿಸಿರುವುದನ್ನು ನೋಡಬಹುದು. ಭಕ್ತಿ ಇದ್ದಲ್ಲಿ ಭಗವಂತನಿದ್ದಾನೆ. ಅವನಿದ್ದಲ್ಲಿ ಕಷ್ಟಗಳು ನಿರಾಯಾಸವಾಗಿ ಕಳೆದು ಸುಖದ ದಿನಗಳು ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆ ಇದ್ದವರು ಸುಖ ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸಬಲ್ಲರು. ಕಷ್ಟದಿಂದ ಹೊರಬರಬೇಕಾದರೂ ಮೊದಲು ಅತಿಯಾದ ವ್ಯಾಮೋಹವನ್ನು ತೊರೆದು ಹೊರಬರಬೇಕು. ಇದನ್ನೇ ಡಿ.ವಿ.ಜಿ ಯವರು ಹೇಳಿದ್ದಾರೆ.
ಬೆದಕಾಟ ಬದುಕೆಲ್ಲಾ; ಚಣ ಚಣವು ಹೊಸ ಹಸಿವು!
ಅದಕಾಗಿ ಇದಕಾಗಿ ಮತ್ತೊಂದಕಾಗಿ!!
ಅಧಿಕಾರಿ ಸಿರಿಸೊಗಸು ಕೀರ್ತಿಗಳ ನೆನೆದು ಮನ!
ಕುದಿಯುತಿಹುದಾವಗಂ – ಮಂಕುತಿಮ್ಮ !
ಬದುಕೆಲ್ಲ ಹುಡುಕಾಟದಲ್ಲಿ ಕಳೆದು ಹೋಗುತ್ತದೆ. ಅದ್ಯಾವ ಹುಡುಕಾಟವೆಂದರೆ ಕ್ಷಣ ಕ್ಷಣವೂ ಅದು ಇದು ಎಂದು ಬೇರೆ ಬೇರೆಯ ವಿಷಯ ವಸ್ತುಗಳಿಗಾಗಿ ಹುಡುಕಾಟ, ಅದರಲ್ಲಿ ಅಧಿಕಾರ ಐಶ್ವರ್ಯ ಕೀರ್ತಿಯ ಸುತ್ತಲೆ ಗಿರಕಿ ಹೊಡೆಯುತ್ತಾ ಮನಸು ಯಾವಾಗಲೂ ಕುದಿಯುತ್ತಿರುತ್ತದೆ. ಇಂತಹ ಕಷ್ಟಗಳನ್ನು ನಾವಾಗಿ ತಂದುಕೊಂಡದ್ದಲ್ಲವೇ? ಅದರಿಂದ ಹೋರಬರದೆ ಕಷ್ಟಗಳು ಪರಿಹಾರವಾಗುವುದಾದರೂ ಹೇಗೆ? ಪರಿಹಾರಕ್ಕೆ ಸುಲಬೋಪಾಯವೇ ಭಗವಂತನ ನಾಮಸ್ಮರಣೆ.