ಕರ್ಮಣ್ಯೇವಾಧಿಕಾರಸ್ತೇ

ಕರ್ಮಣ್ಯೇವಾಧಿಕಾರಸ್ತೇ

ವೇದಜ್ಞಾನವೂ ಕರ್ಮಗಳೂ ಅನುಭವದಲ್ಲೇ ಪರ್ಯವಸಾನವಾಗಬೇಕೇ ಹೊರತು “ಕರ್ಮಠತ್ವ”ಕ್ಕೆ ಜಾರಬಾರದು’ ಎನ್ನುವ ನೀತಿಯನ್ನು ಕೃಷ್ಣನು ಮನವರಿಕೆ ಮಾಡುಕೊಡುತ್ತಿದ್ದಷ್ಟೆ? ಹಾಗಾದರೆ, ಕರ್ಮಗಳನ್ನು ಸುತರಾಂ ಮಾಡಲೇಬೇಕಿಲ್ಲ? ಎನ್ನುವುದು ಕೃಷ್ಣನ ಮಾತಿನ ಅರ್ಥವೇ? ಕೃಷ್ಣನ ಮುಂದಿನ ಮಾತೇ ಇದಕ್ಕೆ ಸ್ಪಷ್ಟತೆ ಕೊಡುತ್ತದೆ.
ಕರ್ಮಣ್ಯೇವಾಧಿಕರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋsಸ್ತ್ಯ ಕರ್ಮಣಿ ||(ಭ.ಗೀ.:2.47)
ನಿನಗೆ ಕರ್ಮದ ಮೇಲೆ ಮಾತ್ರವೇ ಅಧಿಕಾರ, ಫಲಗಳ ಮೇಲಲ್ಲ. ಹಾಗಾಗಿ ಫಲಕಾಗಿ ಕರ್ಮ ಮಾಡಬೇಡ. ಕರ್ಮವನ್ನೇ ಬಿಟ್ಟುಬಿಡಲೂ ಬೇಡ.
ಕರ್ಮಣಿ ಏವ ತೇ ಅಧಿಕಾರಃ ಮಾ ಫಲೇಷು – ‘ಕರ್ಮ ಮಡಿಯೂ ಫಲದ ಮೇಲೆ ಹಕ್ಕಿಲ್ಲವಂತೆ! ಇದೆಂತಹ ಅನ್ಯಾಯ!’ ಎನ್ನಿಸಬಹುದು. ಆದರೆ ಇಲ್ಲಿ ‘ಅಧಿಕಾರ’ ಎಂದರೆ ‘ಹಕ್ಕು’ ಎಂದರ್ಥವಲ್ಲ, ಫಲದ ಮೇಲಿನ ‘ಹತೋಟಿ, ನಿಯಂತ್ರಣ’ ಎಂದು ಸಾಂದರ್ಭಿಕವಾಗಿ ಅರ್ಥಮಾಡಿಕೊಳ್ಳಬೇಕು. ಮಾಡಿದ ಪ್ರತಿಯೊಂದು ಕಾರ್ಯಕ್ಕೂ ತನ್ನದೇ ಫಲವಿದ್ದೇ ಇರುತ್ತದೆ. ಆದರೆ ಯಾವ ಕರ್ಮಕ್ಕೆ ಯಾವ ಫಲವು. ಯಾವ ಪ್ರಮಾಣದಲ್ಲಿ, ಹೇಗೆ ಒದಗಬೇಕೆನ್ನುವುದು ದೈವೇಚ್ಛೆಗೆ ಬಿಟ್ಟದ್ದು. ಹೊಲವನ್ನು ಹದ ಮಾಡಿ. ಗೊಬ್ಬರ – ನೀರು ಹಾಕಿ, ಬೀಜಗಳನ್ನು ಬಿತ್ತಿ. ಬೇಲಿ ಕಟ್ಟಿ, ಬೆಳೆಗಾಗಿ ಕಾಯುವುದು ವ್ಯವಸಾಯದ ಕ್ರಮ. ಆದರೆ ಕೆಲವೊಮ್ಮೆ ಮಳೆಯೇ ಕೈಕೊಡಬಹುದು. ಅತಿವೃಷ್ಟಿಯಾಗಿ ಪೈರು ಕೊಳೆಯಬಹುದು. ನಿರೀಕ್ಷೆಗಿಂತ ಕಡಿಮೆ ಬೆಳೆಯಾಗದು. ಆಡು- ಪಕ್ಷಿಗಳು ಮೆದ್ದು ಹಾಳುಮಾಡಬಹುದು. ಬೆಳೆದ ಧಾನ್ಯಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಹೋಗಬಹುದು . ಕಳ್ಳರು ಧಾನ್ಯವನ್ನು ಕದ್ದೊಯ್ಯಬಹುದು! -ಹೀಗೆ ನಾನಾ ಕಾರಣಗಳಿಂದ ಫಲವು ದಕ್ಕದೆ ಹೋಗಬಹುದು. ಮುನ್ನೆಚ್ಚರಿಕೆ, ಜಾಣ್ಮೆ, ಅನುಭವಸ್ಥರ ಸಲಹೆ ಹಾಗೂ ಕಾನೂನುಗಳಿಂದ ಇಂತಹವುಗಳನದನು ತಕ್ಕಮಟ್ಟಿಗೆ ನಿಭಾಯಿಸಬಹುದು ನಿಜ. ಆದರೆ ಬದುಕಿನಿಂದ ಇಂತಹ ಕಟುವಾಸ್ತವಗಳನ್ನು ಸಂಪೂರ್ಣ ಉಚ್ಚಾಟಿಸಲಂತೂ ಸಾಧ್ಯವೇ ಇಲ್ಲ. ಜೀವನದ ಎಲ್ಲ ರಂಗಗಳಲ್ಲೂ ಇಂತಹ ಅನಿಶ್ಚಿತ ಏಳುಬೀಳುಗಳು ಇದ್ದೇ ಇರುತ್ತವೆ. ಅದನ್ನೇ ಇಲ್ಲಿ ‘ ಫಲದ ಮೇಲೆ ಅಧಿಕಾರವಿಲ್ಲ’ ಎಂಬ ಮಾತಿನಲ್ಲಿ ಸೂತ್ರೀಕರಿಸಲಾಗಿದೆ.
ಮಾ ಕರ್ಮಫಲಹೇತುಃ ಭೂಃ- ಕೇವಲ ಫಲಕ್ಕಾಗಿ ಕರ್ಮಗೈಯಬೇಡ – ಎನ್ನುತ್ತಾನೆ ಕೃಷ್ಣ, ‘ಫಲಕ್ಕಾಗಿ ಕರ್ಮ ಮಾಡುವುದಲ್ಲಿ ತಪ್ಪೇನಿದೆ?’ ಅನಿಸಬಹುದು. ಫಲಾಫಲಗಳು ಅನಿಶ್ಚಿತ. ಅನಿಶ್ಚಿತವಾದುದರ ಬಗ್ಗೆಯೇ ಚಿಂತಿಸುತ್ತಿದ್ದರೆ ಮನಸ್ಸು ಭಾವುಕವಾಗುತ್ತದೆ, ಬುದ್ಧಿಯು ವಿಚಲಿತವಾಗುತ್ತದೆ, ಮನಸ್ಸು ಭಾವುಕವಾಗುತ್ತದೆ, ಬುದ್ಧಿಯು ವಿಚಲಿತವಾಗುತ್ತದೆ, ಮಾಡುತ್ತಿರುವ ಕೆಲಸ ಕೆಡುತ್ತದೆ.
ಶಿಖರದಿಂದ ಶಿಖರಕ್ಕೆ ಹಗ್ಗದ ಮೇಲೆ Tightrope walk  ಮಾಡುವ ಕ್ಷಣಗಳಲ್ಲಿ, ಆ ಸಾಹಸಿಯು, ತಾನಿಡುವ ಹೆಜ್ಜೆಗಳ ಮೇಲೂ, ದೇಹದ ಸಮತೋಲನದ ಮೇಲೂ ಮಾತ್ರವೇ ಗಮನವಿಟ್ಟಿರಬೇಕು, ಅಲ್ಲವೆ? ಆದರೆ ಆತ ಮಧ್ಯೆ ಮಧ್ಯೆ ‘ನಾನಿನ್ನೂ ಎಷ್ಟು ದೂರ ಹೋಗಬೇಕಾಗಿದೆಯೋ?’ ‘ಕೆಳಗಡೆ ಕಣಿವೆ ಎಷ್ಟು ಆಳವಿದೆಯೋ?’ ಎಂದು ನೋಡಹೊರಟರೆ?! ಅಥವಾ ‘ಇಷ್ಟು ದೂರ ಬಂದಾಗಿದೆಯಲ್ಲ! ಇನ್ನು ಸಾಕು!’ ಎಂದು ಅಲ್ಲೇ ನಿಂತರೇ?! ‘ಬಿದ್ದರೆ ನನ್ನ ಗತಿಯೇನು?’ ‘ಗೆದ್ದ ಮೇಲೆ ನನಗೇನೇನು ಸಮ್ಮಾನಗಳಾಗಬಹುದೋ!’ ‘ಆಹ! ನನ್ನ ಈ ಸಾಹಸವನ್ನು ವೀಕ್ಷಿಸಲು ಎಷ್ಟು ಜನರು ನೆರೆದಿದ್ದಾರೆ!’ ಎಂದೆಲ್ಲ ಆಲೋಚಿಸತೊಡಗಿದರೆ ಏನಾದೀತು ಹೇಳಿ? ಆತಂಕ ತಲೆಯೆತ್ತಿ ಬುದ್ಧಿಯನ್ನು ಕಾರ್ಯವಿಮುಳಗೊಳಿಸುತ್ತದೆ. ತಕ್ಷಣ ಬಿದ್ದೇಹೋದಾನು! ಅಲ್ಲವೆ? ಜೀವನದಲ್ಲೂ ಹಾಗೆಯೇ. ಕೆಲಸದ ಫಲೋದ್ದೇಶಗಳು ಮನದಲ್ಲಿರುತ್ತದೆ ನಿಜ, ಆದರೆ ಕೆಲಸಗೈಯುವಾಗ ಅದನದನ್ನೇ ನೆನೆಯುತ್ತಿದ್ದರೆ, ಮನಸ್ಸು ಸುಖದುಃಖಗಳಲ್ಲಿ ಹೊಯ್ದಾಡತೊಡಗುತ್ತದೆ, ಕೈಯಲ್ಲಿರುವ ಕೆಲಸ ಕೆಡುತ್ತದೆ. ಹೀಗೆ ಫಲಾಪಲಗಳ ನಿರ್ಲಿಪ್ತಿಯನ್ನೂ ಸಾಧಿಸಲು ಸಾಧ್ಯವಾದಾಗ ಮಾತ್ರವೇ ಕಾರ್ಯಪರಿಣತಿಯ ಸಿದ್ಧಿ!
ರಣರಂಗಕ್ಕಿಳಿದ ಸೈನಿಕನು, ಕೋವಿ ಹಿಡಿದು ಕೂತ ಕ್ಷಣದಲ್ಲಿ, ತನ್ನ ಲಕ್ಷ್ಯವನ್ನಷ್ಟೇ ಧ್ಯಾನಿಸಬೇಕು,’ಯುದ್ಧದಲ್ಲಿ ಗೆದ್ದು ಬಂದರೆ ಎನೆಲ್ಲ ಸಮ್ಮಾನಗಳು ಸಿಕ್ಕಾವು?’ ‘ಸತ್ತರೆ ನನ್ನ ಕುಟುಂಬದವರ ಗತಿಯೇನು?’ ಎಂದು ಆಲೋಚಿಸತೊಡಗಿದರೆ ಏನಾಗುತ್ತದೆ ಹೇಳಿ? ಚಂಚಲನಾಗುತ್ತಾನೆ, ಗುರಿ ತಪ್ಪುತ್ತಾನೆ!
ವೇದಿಕೆಯ ಮೇಲೆ ಪ್ರತಿಭಾಪ್ರದರ್ಶನ ಮಾಡುತ್ತಿರುವ ಕಲಾವಿದೆಯು, ರಾಗ ತಾಳ ಭಾವಗಳ ಸೌಷ್ಟವದ ಕಡೆಗೆ ಗಮನ ಹರಿಯಿಸಬೇಕು. ಅದರ ಬದಲು ‘ಸಭೆಯಲ್ಲಿ ಏಕೆ ಕಡಿಮೆ ಜನರಿದ್ದಾರೆ?’ ‘ಮನೆಗೆ ಹೋದ ಮೇಲೆ ಬಿಟ್ಟುಬಂದ ಕೆಲಸಗಳನ್ನೆಲ್ಲ ಪೂರೈಸಬೇಕಲ್ಲಪ್ಪಾ!’ ‘ನನ್ನ ಗಾನಕ್ಕೆ ಎಷ್ಟು ದಕ್ಷಿಣೆ-ಮೆಚ್ಚುಗೆಗಳು ಸಿಗುತ್ರವೊ’ ಎಂದೆಲ್ಲ ಆಲೋಚಿಸತೊಡಗಿದರೆ? ಸ್ವರವೋ ತಾಳವೋ ತಪ್ಪಿ ಎಡವಟ್ಟಾದೀತು! ಅಲ್ಲವೆ?
ಜೀವನದ ಯಾವುದೇ ರಂಗವನ್ನೇ ತೆಗೆದುಕೊಂಡರೂ ಅಷ್ಟೇ ಫಲಫಲಗಳ ಕಡೆಗೇ ಗಮನ ಹರಿಯಿಸತೊಡಗಿದರೆ, ಅನಗತ್ಯ ಭಾವನೆಗಳೂ ಲೆಕ್ಕಾಚಾರಗಳು ಎದ್ದು ಕೆಲಸವನ್ನು ಕೆಡಿಸುತ್ತವೆ. ಪರಿಣಾಮವೂ ಕೆಡುತ್ತದೆ, ಈ ಕರ್ಮರಹಸ್ಯವನ್ನರಿತವರು ವ್ಯಾಪಾರ ರಾಜನೀತಿ ಕಲೆ ಅಥವಾ ಪರಿವಾರ – ಮುಂತಾದ ಯಾವುದೇ ರಂಗದಲ್ಲಿ ಕರ್ಮವೆಸಗಲಿ, ಅಲ್ಲಿ ಅವರು ಉತ್ತರೋತ್ತರ ನೈಪುಣ್ಯವನ್ನು ಪಡೆಯುತ್ತ ಸಾಗುತ್ತಾರೆ. ಆಚಾರ್ಯ ಕೃಷ್ಣನು ಈ ಕರ್ಮನೀತಿಯನ್ನೇ ಇಲ್ಲಿ ಮನಗಾಣಿಸುತ್ತಿದ್ದಾನೆ.

ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply