ಆಣೆಕಟ್ಟು – ಗೋಡೆಗಡಿಯಾರ – ಬಾಗು – ಚಿಕ್ಕವನಾದರೇನು

ಆಣೆಕಟ್ಟು – ಗೋಡೆಗಡಿಯಾರ – ಬಾಗು – ಚಿಕ್ಕವನಾದರೇನು

ಅದೊಂದು ದಿನ—
ನಾ ತೂರಿದ ಚಂಡು
ಗೋಡೆ ಗಡಿಯಾರಕ್ಕೆ ಬಡಿದು
ಗಾಜು ಚೂರುಚೂರಾಯಿತು…
ಮುತ್ತಾತನ ಕಾಲದ ಆ
ಗಡಿಯಾರ ನನಗೆ
ಪಳವುಳಿಕೆಯಂತೆ ಕಂಡರೂ
ಉಳಿದವರಿಗೆ
ಸಮಯಕ್ಕಿಂತಲೂ
ಅಮೂಲ್ಯವಾಗಿತ್ತು….

“ಚಿಕ್ಕವನಾದರೇನು..
ತಪ್ಪು ತಪ್ಪೇ….”
ಎಂಬ ಮನೋಭಾವದ
ಹಿರಿಯರು ಕೊಡಬಹುದಾದ
ಶಿಕ್ಷೆಯ ಬರಿ ಊಹೆಯಿಂದಲೇ
ತಲೆ ಬೆನ್ನು ಎರಡೂ ಬಾಗಿಸಿ
ಗಡಗಡ ನಡಗುತ್ತಾ ನಿಂತೆ…

ದುಃಖದ ಆಣೆಕಟ್ಟು ಇನ್ನೇನು
ಒಡೆಯಬೇಕು..

ಅಷ್ಟರಲ್ಲಿ ಹೊರಬಂದ ಎಲ್ಲರಿಗೂ
ಅಜ್ಜ ಹೇಳಿದ ಮಾತು..
“ಯಾರೂ ಅವನಿಗೆ ಏನೂ
ಅನ್ನಕೂಡದು..
ಒಡೆದ ಗಾಜಿನಚೂರುಗಳನ್ನು
ಗಳಿಗೆಯೊಂದರಲ್ಲಿ
ಹೊರಗೆಸೆದು ಮತ್ತೊಂದು
ಜೋಡಿಸಬಹುದು..
ಪುಟ್ಟ ಹೃದಯ
ಒಡೆದರೆ ಏನೂ
ಮಾಡಲಾಗುವದಿಲ್ಲ….”

Leave a Reply