ಅರಿವು

kvn.2013
ನಮ್ಮವರೆಂಬರು ನಮ್ಮವರಲ್ಲ; ಮೋಹಕೆ ಸಿಲುಕಿ ಬಳಲಿದೆನಲ್ಲ |
ದೇವ ನಿನ್ನನು ನೆನೆಯಲೆ ಇಲ್ಲ; ಹುಟ್ಟಿನ ಮಹತಿ ತಿಳಿಯಲೆ ಇಲ್ಲ || ಪ ||

ಕಂಡದ್ದೆಲ್ಲ ಬಯಸಿದೆನಲ್ಲ; ಸಿಕ್ಕದೆ ಇರಲು ಶಪಿಸಿದೆನಲ್ಲ |
ಇಲ್ಲದ ಬಯಸಿ ಕೊರಗಿದೆನಲ್ಲ; ಇದ್ದುದ ಬಿಟ್ಟು ಕೆಟ್ಟೆನಲ್ಲ || 1 ||

ಚಪಲತೆ ಕಣ್ಣನು ಮುಚ್ಚಿತಲ್ಲ; ನಿಜ ಕಾಣದಾಯಿತಲ್ಲ |
ಚಂಚಲ ಬುದ್ಧಿ ಆಡಿದ ಆಟಕೆ ಎಡವಿ ಬಿದ್ದೆನಲ್ಲಾ || 2 ||

ಸಜ್ಜನ ಸಂಗವ ಮಾಡಲಿಲ್ಲ; ಸದ್ಗತಿ ಸಿಗಲಿಲ್ಲ |
ಕೋಪವು ಮತಿಯ ತಿಂದಿತಲ್ಲ; ಮನಸೇ ಸರಿಯಿಲ್ಲ || 3 ||

ಮಿಗಿಲಾರೆಂದು ಬೀಗಿದೆನಲ್ಲ; ನಗೆಪಾಟಲಾಯಿತಲ್ಲ |
ರಜೋ ತಮಗಳ ಆರ್ಭಟದಲ್ಲಿ ಸತ್ವ ಸತ್ತಿತಲ್ಲಾ || 4 ||

ನಾನು ಎಂಬುದು ನಿಜವಲ್ಲ; ನಾನೇ ಎಂಬುದು ತರವಲ್ಲ |
ನಿನ್ನನು ಬಿಟ್ಟು ನಾನೇನೆಂಬುದ ಅರಿಯಲಿಲ್ಲವಲ್ಲಾ || 5 ||

ಕ.ವೆಂ.ನಾಗರಾಜ್.

2 Comments

  1. ಎಲ್ಲರು ಜೀವನದಲ್ಲಿ ಎಡವುವ ವಿಚಾರಗಳನ್ನು ಚೆನ್ನಾಗಿ ತೋರಿಸಿದ್ದೀರಿ.
    ಕೊನೆಯ ಸಾಲುಗಳು ನಿಜವಾಗಿಯೂ ಸತ್ಯ…
    “ನಾನು ಎಂಬುದು ನಿಜವಲ್ಲ; ನಾನೇ ಎಂಬುದು ತರವಲ್ಲ |
    ನಿನ್ನನು ಬಿಟ್ಟು ನಾನೇನೆಂಬುದ ಅರಿಯಲಿಲ್ಲವಲ್ಲಾ”

  2. ಸುಂದರ
    ಸತ್ಯ ದರ್ಶನ
    ಆತ್ಮ ಶೋಧನೆ
    ನಾ “ನಾರು”?
    ನಾನಾರು?
    ನಾನಾ (ರೂ)ಪು?

Leave a Reply