‘ಪ್ರತಿ ಸೈನಿಕನಿಗೂ ಇರುವಂತೆ, ನನಗೂ ಯುದ್ಧದಲ್ಲಿ ಭಾಗವಹಿಸುವ ಕನಸಿದೆ. ಆದರೆ ಯುದ್ಧದ ಬಗ್ಗೆ ನಾನು ಬರೆಯಲಾರೆ’ ಎಂದು ನಗರದಲ್ಲಿ ತಮ್ಮ ಪುಸ್ತಕ ಬಿಡುಗಡೆಗಾಗಿ ಬಂದಿದ್ದ ಮೇಜರ್ ಪೀಯೂಷ್ ಸೆಮ್ವಾಲ್ ಹೇಳಿದರು.‘ದಿ ಲಾಸ್ಟ್ ಫೇತ್’ ಪುಸ್ತಕವನ್ನು ಬಿಡುಗಡೆ ಮಾಡಿದ ಅವರು, ತಮ್ಮ ಬರಹದ ಬದುಕಿನ ಬಗ್ಗೆ ‘ಮೆಟ್ರೊ’ದೊಂದಿಗೆ ಹಂಚಿಕೊಂಡರು.‘ಸೈನಿಕನಾಗಿ ನಾನು ನನ್ನ ಬರವಣಿಗೆಯಲ್ಲೂ ಯುದ್ಧವನ್ನು ಬರೆಯಲು ಇಷ್ಟಪಡುವುದಿಲ್ಲ. ಥ್ರಿಲ್ಲರ್, ಹಾರರ್ ಸೇರಿದಂತೆ ಪ್ರೇಮಕಥೆಗಳನ್ನು ಬರೆಯಲು ಇಷ್ಟಪಡುತ್ತೇನೆ’ ಎಂದರು. ‘ಸೈನ್ಯ ನನಗೆ ಜೀವನದಲ್ಲಿ ಎಲ್ಲವನ್ನೂ ನೀಡಿದೆ. ಧೈರ್ಯ, ಆತ್ಮವಿಶ್ವಾಸದ ಬದುಕನ್ನು ನೀಡಿದೆ. ಕುಟುಂಬ ಹಾಗೂ ವೃತ್ತಿ ಎರಡನ್ನೂ ನಿಭಾಯಿಸುವುದರ ಜೊತೆಗೆ ನಮ್ಮ ಹವ್ಯಾಸಗಳನ್ನು ಕಾಪಿಡುವುದು ತುಂಬಾ ಕಷ್ಟ. ರಾತ್ರಿ ವೇಳೆ ಸಿಗುವ ಸ್ವಲ್ಪ ಸಮಯದಲ್ಲಿಯೇ ಬರೆಯಲು, ಓದಲು ಸಾಧ್ಯ. ದೇಹದ ಬಳಲಿಕೆಯ ನಡುವೆ ಕೆಲವೇ ದಿನಗಳನ್ನು ಮಾತ್ರ ಈ ಕೆಲಸಗಳಿಗೆ ಉಳಿಸಿಕೊಳ್ಳಬಹುದು’ ಎನ್ನುತ್ತಾರೆ ಅವರು. ‘ದೇಶ ಸೇವೆಯಲ್ಲಿ ತೊಡಗಿರುವ ನಮಗೆ, ಮನಸ್ಸಿಗೆ ಬಂದದ್ದನ್ನೆಲ್ಲಾ ಬರೆಯುವ ಸ್ವಾತಂತ್ರ್ಯ ಇಲ್ಲ. ಸೈನ್ಯಕ್ಕೆ ಸಂಬಂಧಿಸಿದ ಯಾವ ವಿಷಯಗಳನ್ನೂ ಬರೆಯುವಂತಿಲ್ಲ. ಹವ್ಯಾಸಕ್ಕಷ್ಟೇ ಇದು ಮೀಸಲಾಗಿರಬೇಕು. ನಾವು ಬರೆದ ಕಂಟೆಂಟ್‌ಗೆ ಮೇಲಧಿಕಾರಿಗಳಿಂದ ಅನುಮತಿ ಬೇಕು. ಸೈನ್ಯದ ರಹಸ್ಯಗಳಿಗೆ ಸಂಬಂಧಿಸಿದ ಯಾವ ಅಂಶಗಳೂ ಅದರಲ್ಲಿ ಇಲ್ಲ ಎಂದು ಖಾತ್ರಿಯಾದ ಬಳಿಕವೇ ಮುದ್ರಣಕ್ಕೆ ಅನುಮತಿ ಸಿಗಲಿದೆ’ ಎಂದು ತಮ್ಮ ಬರವಣಿಗೆಯ ಹಾದಿಯನ್ನು ಹಂಚಿಕೊಂಡರು. ‘ಸೈನ್ಯದಲ್ಲಿರುವವರು ಹವ್ಯಾಸವನ್ನು ವ್ಯಾಪಾರ ಮಾಡಿಕೊಳ್ಳುವಂತಿಲ್ಲ. ಪುಸ್ತಕ ಮುದ್ರಿಸಿ ಅದರ ಹಕ್ಕು ಹೊಂದುವ ಮೂಲಕ ದುಡ್ಡು ಮಾಡುವಂತಿಲ್ಲ. ಆಲ್ಬಂ ಬಿಡುಗಡೆ ಮಾಡಿ, ಅದನ್ನು ಮಾರಾಟ ಮಾಡುವಂತಿಲ್ಲ. ಹವ್ಯಾಸ ಕೇವಲ ಹವ್ಯಾಸವಾಗಿಯೇ ಉಳಿಯಬೇಕು ಎಂಬುದು ಇಲ್ಲಿಯ ನಿಯಮ. ನಾವು ಇದಕ್ಕೆ ಬದ್ದರಾಗಿರಬೇಕು’ ಎನ್ನುತ್ತಾರೆ. ಸ್ನೇಹಿತರ ನಡುವೆ ನಡೆಯುವ ಒಂದು ರೋಚಕ ಸನ್ನಿವೇಶವನ್ನು ಕತೆಯ ಮೂಲಕ ಹೇಳಿದ್ದಾರೆ. ಇದರಲ್ಲಿ ಅತಿರೇಕದ ಯುದ್ಧ ಸನ್ನಿವೇಶಗಳಿಲ್ಲ. ತಿಳಿ ಹಾಸ್ಯದ ಮೂಲಕ ಕತೆಯನ್ನು ಕಟ್ಟಿದ್ದಾರೆ. ಶಿವದೇವಾಲಯವಿರುವ ದುರ್ಗಮ ಪ್ರದೇಶಕ್ಕೆ ಇಬ್ಬರು ಸ್ನೇಹಿತರು ಪ್ರವಾಸ ಹೋಗುತ್ತಾರೆ. ತೋಳಗಳು ಹೆಚ್ಚಿರುವ ಪ್ರದೇಶ ಅದಾಗಿರುತ್ತದೆ. ಸಾಹಸದ ಜೊತೆ ಸ್ನೇಹಿತರ ಧೈರ್ಯ ಸಾಹಸಗಳನ್ನು ಒಳಗೊಂಡ ಪತ್ತೇದಾರಿ ಕತೆ ಇದಾಗಿದೆ.
courtsey:prajavani.net
https://www.prajavani.net/amp/artculture/book-review/lost-faith-book-675840.html