ಯೌವನದ ರಸಗಳಿಗೆ…
ಈ ಜೀವನ ಅನ್ನೋದೇ ಅನುಭವಗಳ ರಸಗಟ್ಟಿ.. ಪಾಕ ಏರಾದರೆ ಕಲ್ಲು.. ಕಲ್ಲು.. ಪಾಕ ಇಳಿಯಾದರೆ ರಾಡಿ… ಸರಿಯಾದರೇ ರಸಪಾಕದ ಜೀವನಾನುಭವ…
ಹದಿಹರೆಯದ ದಿನಗಳು ಅಂದ್ರ ಪ್ರತಿದಿನವೂ ಹೊಸ ಹೊಸ ಅನುಭವಗಳು… ನಾನು ಅದೇತಾನೇ ಪಿಯುಸಿಗೆ ಪಾದಾರ್ಪಣೆ ಮಾಡಿದ್ದೆ. ಎಸ್ಸೆಸ್ಸೆಲ್ಸಿ ವರೆಗೂ ನಾನು ಓದಿದ್ದು ಗರ್ಲ್ಸ್ ಹೈಸ್ಕೂಲ್. ಈಗ ಕಂಬೈಂಡ್ ಶಾಲೆ. ಮನೆಯಿಂದ ಹತ್ತು ನಿಮಿಷಗಳ ಹಾದಿ. ಗೆಳತಿಯರೆಲ್ಲ ಸೇರಿ ಕಾಲೇಜಿಗೆ (!) ಹೋಗುತ್ತಿದ್ದೆವು.. ಒಮ್ಮೆ ಮಾತ್ರ ನಾವು ಮೂರು ಜನ ಗೆಳತಿಯರಲ್ಲಿ ಜಗಳ ಬಂದು ಠೂ ಬಿಟ್ಟು ಬಿಟ್ಟೆವು. ಈಗ ನನಗೆ ಅನಿವಾರ್ಯವಾಗಿ ಒಬ್ಬಳೇ ಹೋಗಬೇಕಾಗಿ ಬಂತು. ಎರಡು ದಿನ ಹೋಗಿಬಂದೆ. ಮೂರನೆಯ ದಿನ ಒಬ್ಬ ಧಡಿಯ ಹಿಂದೆ ಬೆನ್ನತ್ತಿಬರತೊಡಗಿದ…ನಾನು ಸಾವಕಾಶವಾಗಿ ಹೋದರೆ ತಾನೂ ಸಾವಕಾಶವಾಗಿ.. ನಾನು ಜೋರಾಗಿ ಹೋದರೆ ತಾನೂ… ನನ್ನ ಎದೆ ಡವಡವ ಎನ್ನತೊಡಗಿತ್ತು… ಆಗಿನ ದಿನಗಳಲ್ಲಿ ಅಂಥವರಿಗೆ ತಿರುಗಿ ನಿಲ್ಲುವ ಧೈರ್ಯವೂ ಇರುತ್ತಿರಲಿಲ್ಲ.. ಮನೆಯಲ್ಲಿ ಪಟ್ಟಿ ಓದಿಸಿರುತ್ತಿದ್ದರಲ್ಲ… ಗಂಡು ಹುಡುಗರ ಜೋಡಿ ಮಾತಾಡಬಾರದು, ಅವರು ಏನೇ ಮಾತಾಡಿದ್ರೂ ತಿರುಗಿ ಉತ್ತರಿಸದೆ ಮನೆ ಸೇರಬೇಕೂ ಅಂತೆಲ್ಲ! ಅವನು ಮೂರು ನಾಲ್ಕು ದಿನ ಗಳ ವರೆಗೂ ನನ್ನ ಬೆನ್ನು ಹತ್ತಿ ಬಂದ! ಐದನೇ ದಿನ ಪಿಯುಸಿ… ಕಾಲೇಜಿನ ಓದು.. ಇದೆಲ್ಲದರ ಉಬ್ಬು ಇಳಿದುಹೋಯಿತು! ನಾ ಸಾಲೀಗೆ ಹೋಗಂಗಿಲ್ಲಾಂತ ರಗಳೀ ತಗದೆ. ನಮ್ಮ ಅವ್ವ, ಅಕ್ಕ ಎಲ್ಲರೂ ಕಾರಣ ಕೇಳಿದಾಗ ಮೊದಮೊದಲು ಹೇಳದೆಹೋದರೂ ನಂತರ ಹೇಳಿದೆ. ಅಕ್ಕನಿಗೆ ಎರಡನೆ ಮಗುವಿನ ಹೆರಿಗೆಯಾಗಿತ್ತು. ನಮ್ಮ ಮನೆಯಲ್ಲಿಯೇ ಇದ್ದಳು. ಅವಳು “ನಡಿ, ನಾ ಬರತೇನಿ.. ಯಾವ ಅಂವಾ ನೋಡತೇನೀ” ಎಂದಾಗ “ಬ್ಯಾಡಾ.. ಇವತ್ತು ಒಂದಿನಾ ನೀ ಬರತೀ… ಅಂವನ ಜೋಡಿ ಜಗಳಾ ತಗೀತೀ… ನಾಳೆ ನಾ ಒಬ್ಬಾಕಿನ ಸಿಕ್ಕಾಗ ಅಂವಾ ನನಗ ಏನರೇ ಮಾಡಿದ್ರ?” ಎಂದೆ. ಆಗ ಅಕ್ಕ, “ಹುಚ್ಚೀ, ಅವನ ಸಲವಾಗಿ ನೀ ಮುಂದ ಕಲಿಯೋದ ಬಿಡತೀಯೇನು? ನೀ ಸಾಲೀ ಕಲಿಯೋದ ಬಿಟ್ಟು ಮನ್ಯಾಗ ಕೂತರ ಅಪ್ಪ ಲಗ್ನಾ ಮಾಡತಾನ… ಇಷ್ಟು ಲಗೂ ಲಗ್ನಾ ಮಾಡ್ಕೊಳ್ಳಿಕ್ಕೆ ತಯಾರಿದ್ದೀಯೇನು? ಅದೆಲ್ಲಾದರಕ್ಕಿಂತ ಛೊಲೋ ಅಂದ್ರ ಅವನ್ನ ಒಂದ ಕೈ ತೊಗೊಳ್ಳೋದು.. ಹೆದರಿದರ ಮತ್ತಷ್ಟು ಹೆಚಿಗೀ ಮಾಡತಾರ… ಇಲ್ಲಾಂದ್ರ ನಿನ್ನ ಗೆಳತೇರನ ಅಹಂಕಾರ ಬಿಟ್ಟು ಮಾತಾಡಸೋದು.. ಎರಡರೊಳಗ ಯಾವದ ಆರಿಸ್ಕೋತೀ ನೋಡು!” ಎಂದಿದ್ದಳು! ನಾನು ಗೆಳತಿಯರೊಂದಿಗೆ ಮತ್ತೆ ಸ್ನೇಹ ಮಾಡಿಕೊಂಡೆ! ಅವನು ನಮ್ಮ ದಂಡು ನೋಡಿ ಹೆದರಿ ನನ್ನ ಸುದ್ದಿಗೆ ಬರಲಿಲ್ಲ! ಈಗ ಅದೆಲ್ಲ ನೆನಪಾದರೆ ನಗೆ ಬರುತ್ತದೆ. ಹದಿಹರೆಯದ ಆ ವಯಸ್ಸು ಎಂಥ ಮುಗ್ಧವಲ್ಲವೆ?