ಯೋಚಿಸಿ ಆಲೋಚಿಸಿ ವಿಚಾರಿಸಿ

ಅಲ್ಲೊಂದು ಊರು; ಆ ಊರಿನಲ್ಲೊಬ್ಬ ಕುರುಬನಿದ್ದ; ಬಡವ; ಆದರೆ ಪ್ರಾಮಾಣಿಕ. ಅವನಲ್ಲಿ ನಾಯಿ ಒಂದಿತ್ತು; ಅದು ತುಂಬ ಬುದ್ಧಿವಂತ ನಾಯಿ. ಒಮ್ಮೆ ಆ ಕುರುಬನಿಗೆ ಹಣಕಾಸಿನ ಬಿಕ್ಕಟ್ಟು ತುಂಬ ಹೆಚ್ಚಾಯಿತು. ಸಾಲವನ್ನು ಮಾಡದೆ ಬೇರೆ ದಾರಿಯೇ ಉಳಿಯಲಿಲ್ಲ. ಆದರೆ ಅವನಿಗೆ ಸಾಲವನ್ನು ಯಾರು ಕೊಡುತ್ತಾರೆ? ಪಕ್ಕದ ಹಳ್ಳಿಯ ಸಾಹುಕಾರ ಅವನಿಗೆ ಸಾಲ ಕೊಡಲು ಒಪ್ಪಿದ. ಆದರೆ ಅವನಲ್ಲಿ ಅಡವಿಡಲು ಏನೂ ಇರಲಿಲ್ಲ. ಕೊನೆಗೆ ನಾಯಿಯನ್ನೇ ಆ ಸಾಹುಕಾರನಲ್ಲಿ ಅಡವಿಟ್ಟು ಹಣವನ್ನು ಪಡೆದ. ಇತ್ತ ಆ ನಾಯಿ ಸಾಹುಕಾರನ ಮನೆಯಲ್ಲಿ ಬೆಳೆಯುತ್ತಿತ್ತು. ಆ ಸಾಹುಕಾರನಿಗೆ ಒಂದು ಪುಟ್ಟ ಕೂಸಿತ್ತು. ಒಂದು ದಿನ ಅವನ ಮನೆಯಲ್ಲಿ ಎಲ್ಲರೂ ಹೊರಗೆ ಇದ್ದಾರೆ. ಮಗು ಹಾಸಿಗೆಯಲ್ಲಿದೆ. ನಾಗರಹಾವೊಂದು ಅಲ್ಲಿಗೆ ಬಂದಿತು. ಇನ್ನೇನು ಮಗುವನ್ನು ಅದು ಕಚ್ಚಬೇಕು; ಆಗ ಆ ನಾಯಿ ಅದನ್ನು ಗಮನಿಸಿತು. ಕೂಡಲೇ ಅದರ ಮೇಲೆರೆಗಿದ ನಾಯಿ ಆ ಹಾವನ್ನು ಕೊಂದುಹಾಕಿತು. ಅಷ್ಟರಲ್ಲಿ ಸಾಹುಕಾರ ಮತ್ತು ಅವನ ಹೆಂಡತಿ ಅಲ್ಲಿಗೆ ಬಂದರು. ಅಲ್ಲಿಯ ದೃಶ್ಯವೇ ಅವರಿಗೆ ಎಲ್ಲವನ್ನೂ ಹೇಳುವಂತಿತ್ತು. ಮಗುವಿ ಪ್ರಾಣವನ್ನು ಕಾಪಾಡಿದ ನಾಯಿಯ ಬಗ್ಗೆ ಅದವರಿಗೆ ಕೃತಜ್ಞತೆಯ ಭಾವ ಮೂಡಿತು. ಅದರ ಒಡೆಯ, ಕುರುಬನಿಗೆ ಅವರು ಕೊಟ್ಟಿದ ಸಾಲವನ್ನು ಈಗ ಈ ನಾಯಿ ಬಡ್ಡಿ ಸಮೇತ ತೀರಿಸಿದೆ – ಎಂದು ಉದ್ಗರಿಸಿದರು. ಇನ್ನು ಈ ನಾಯಿಯನ್ನು ತಮ್ಮಲ್ಲಿ ಉಳಿಸಿಕೊಳ್ಳುವುದು ಸರಿಯಲ್ಲ ಎಂದು ತೀರ್ಮಾನಿಸಿದರು. ‘ಇನ್ನು ನಿನ್ನ ಯಜಮಾನನಲ್ಲಿಗೆ ಹೋಗು’ ಎಂದು ಹೇಳಿ ಅದನ್ನು ಅಟ್ಟಿದರು. ಈ ಕಡೆ ಆ ಕುರುಬ ನಾಯಿಯನ್ನು ದಾಸ್ಯದಿಂದ ಬಿಡಿಸಿಕೊಳ್ಳಬೇಕೆಂಬ ಹಟದಿಂದ ಹಣವನ್ನು ಕಷ್ಟಪಟ್ಟ ಹೊಂದಿಸಿಕೊಂಡ. ಸಾಲವನ್ನು ಹಿಂದುರಿಗಿಸಿ, ಅದನ್ನು ಕರೆದುಕೊಂಡು ಬರಲು ಸಾಹುಕಾರನ ಊರಿನತ್ತ ನಡೆದ. ದಾರಿಯಲ್ಲಿ ಆ ನಾಯಿಯೇ ಎದುರಾಯಿತು. ‘ಅರೆ! ನಾನು ನಿನ್ನನ್ನು ಬಿಡಿಸಿಕೊಂಡು ಬರಲು ಬರುತ್ತಿದ್ದರೆ, ನೀನು ಅಲ್ಲಿಂದ ತಪ್ಪಿಸಿಕೊಂಡು ಓಡಿಬರುತ್ತಿರುವೆಯಾ? ನಿನ್ನಿಂದ ನಾನು ಅಪರಾಧಿ ಸ್ಥಾನದಲ್ಲಿರುವಂತಾಗಿದೆ’ ಎಂದು ಒದರಿದ; ಅವನಿಗೆ ತುಂಬ ಸಿಟ್ಟು ಕೂಡ ಬಂದಿತ್ತು. ಹತ್ತಿರದಲ್ಲೇ ಇದ್ದ ಮರದ ತುಂಡಿನಿಂದ ಅದನ್ನು ಹೊಡದೇಬಿಟ್ಟ! ನಾಯಿ ಆ ಪೆಟ್ಟಿನ ರಭಸಕ್ಕೆ ಸತ್ತುಹೋಯಿತು. ಸತ್ತ ನಾಯಿಯ ಕೊರಳಲ್ಲಿದ್ದ ಚೀಟಿಯೊಂದು ಅವನಿಗೆ ಕಂಡಿತು. ಆ ಸಾಹುಕಾರನೇ ಅದನ್ನು ಅದರ ಕೊರಳಿನಲ್ಲಿ ಕಟ್ಟಿದ್ದ. ‘ನಿನ್ನ ನಾಯಿ ನನ್ನ ಮಗುವಿನ ಪ್ರಾಣವನ್ನು ಉಳಿಸಿದೆ. ನನ್ನ ಸಾಲವನ್ನು ಮಾತ್ರವೇ ಅದು ತಿರಿಸಿಲ್ಲ; ಈಗ ನಾವೇ ಅದರ ಋಣದಲ್ಲಿದ್ದೇವೆ. ದಯವಿಟ್ಟು ಇದನ್ನು ಸ್ವೀಕರಿಸು’ ಎಂದು ಅದರಲ್ಲಿ ಒಕ್ಕಣಿಸಲಾಗಿತ್ತು. ಅದನ್ನು ಓದಿದ ಕುರುಬನಿಗೆ ಪ್ರಜ್ಞೆಯೇ ತಪ್ಪಿದಂತಾಯಿತು. ತನ್ನ ದುಡುಕತನಕ್ಕೆ ತಾನೇ ನಿಂದಿಸಿಕೊಂಡ. ತಾಳ್ಮೆಯನ್ನು ಕಳೆದುಕೊಂಡರೆ ಅಪಾಯಗಳೂ ಅನಾಹುತಗಳೂ ಎದುರಾಗುತ್ತವೆಯಷ್ಟೆ. ನಮಗೆ ಕಣ್ಣಿಗೆ ಕಾಣುವುದಷ್ಟೇ ಸತ್ಯ ಆಗಿರುವುದಿಲ್ಲ. ನಾವು ಕಂಡದ್ದನ್ನು ಪರಾಮರ್ಶಿಸಿಬೇಕು; ಸಮಾಧಾನದಿಂದ ವಿಶ್ಲೇಷಿಸಬೇಕು. ದುಡುಕಿನಲ್ಲಿ ನಿರ್ಣಯಗಳನ್ನು ತೆಗೆದುಕೊಂಡರೆ ಅದರ ‘ಫಲ’ವನ್ನು ನಾವೇ ಅನುಭವಿಸಬೇಕು. ಕೋಪದಲ್ಲಿ ಕತ್ತರಿಸಿಕೊಂಡು ಮೂಗು ಮತ್ತೆ ಬಾರದು, ಅಲ್ಲವೆ?

“author”: “ಭಾನುಶ್ರೀ”,

courtsey:prajavani.net

https://www.prajavani.net/artculture/short-story/moral-story-658452.html

Leave a Reply