ಪ್ರಜಾವಾಣಿಯ ಸುಧಾ ಬಳಗದ ಬರಹಗಾರ ಎನ್ ರಾಮನಾಥ್ ಅವರು ವೈಎಮ್ಮೆನ್ ಮೂರ್ತಿ ಅವರನ್ನು ಸಂದರ್ಶನ ಮಾಡಿದ್ದರು. ಇದು 2015ರ ಏಪ್ರಿಲ್ ತಿಂಗಳ ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ…ತಲೆಗೆ ಪೇಸ್ಟ್ ಆಗಿರುವಂತಹ ರೀತಿಯ ಕಪ್ಪನೆಯ ಟೋಪಿ. ಎದ್ದು ಕಾಣುವ ಕನ್ನಡಕ. 88 ವಸಂತಗಳ ಪ್ರತಿ ಗೆರೆಯೂ ಎದ್ದು ಕಾಣುವ ಮುಖ. ಆದರೆ 88 ವಯಸ್ಸಿನವರು ‘ಅಯ್ಯೋ ನೋವು; ಅಯ್ಯೋ ಜೀವನ ಸಾಕಪ್ಪ’ ಎಂಬ ಮಾಮೂಲು ಭಾವ ತಪ್ಪಿಯೂ ಕಾಣದ ಕಿರುನಗೆಯ ನೋಟ; ಆ ವಯಸ್ಸಿಗೆ ಹೆಚ್ಚೇ ಎನಿಸುವ ನಡಿಗೆಯ ಓಟ. ನಾನು ಅವರಲ್ಲಿಗೆ ಬರುವುದಕ್ಕೆ ಮುಂಚೆ ಫೋನ್ ಮಾಡಿದೆ. “ಸರ್ ಸಂದರ್ಶನವಾಗಬೇಕಿತ್ತು. ಫೋನ್ನಲ್ಲೇ ಸಂದರ್ಶಿಸಲೋ, ಅಲ್ಲಿಗೇ ಬರಲೋ?” “ನೋಡಿ ರಾಮ್, ನಿಮಗೆ ಎರಡು ಪ್ರಸಂಗಗಳನ್ನು ಹೇಳುತ್ತೇನೆ. ನಮ್ಮ ಮನೆಯಲ್ಲಿ ಕೆಳಗೊಂದು ಫೋನ್. ಮೇಲೆ ಅದಕ್ಕೊಂದು ಎಕ್ಸ್ಟೆನ್ಷನ್. ಒಮ್ಮೆ ಯಾರೋ ತರುಣಿ ಫೋನ್ ಮಾಡಿ ‘ವೈಎಮ್ಮೆನ್ ಮೂರ್ತಿ ಇದ್ದಾರಾ?’ ಅಂತ ಕೇಳಿದರು. ನಾನು ಮನೆಗೆ ಬಂದುದನ್ನು ಗಮನಿಸಿರದಿದ್ದ ನನ್ನ ತಂಗಿ ‘ಇನ್ನೂ ಬಂದಿಲ್ಲ’ ಅಂದಳು. ಅಷ್ಟರಲ್ಲಿ ಫೋನ್ ಎತ್ತಿಕೊಂಡಿದ್ದ ನಾನು ‘ನಾನು ಫೋನ್ ತೆಗೆದುಕೊಂಡಿದ್ದೇನೆ ಸುಂದರಾಗಿ’ ಅಂದೆ. ಆ ತರುಣಿ ನಾನೆಲ್ಲೋ ಅವಳನ್ನು ಕಿಚಾಯಿಸುತ್ತಿದ್ದೇನೆ ಎಂದುಕೊಂಡು “ಏನ್ ಸಾರ್ ಹೀಗೆಲ್ಲಾ ಮಾತ್ನಾಡ್ತೀರಾ’ ಎಂದು ಕೆರಳಿ ನುಡಿದಳು “ತಪ್ಪು ತಿಳಿಯಬೇಡಿ. ನನಗೆ ಮೂವರು ಸೋದರಿಯರು – ಲಲಿತಾಂಗಿ, ಸರಸಾಂಗಿ, ಕೋಮಲಾಂಗಿ ಅಂತ ಅವರ ಹೆಸರುಗಳು” ಎಂದೆ. “ಗಂಡು ಮಕ್ಕಳು?” “ಇಬ್ಬರು” “ಸರಿಯೇ; ಒಂದು ಕೋಡಂಗಿ, ಒಂದು ಕಮಂಗಿ!” ಎಂದು ಆಕೆ ಫೋನ್ ಇಟ್ಟೇಬಿಟ್ಟಳು. ನಾನು ‘ಸುಂದರಾಂಗಿ’ ಎಂದದ್ದು ನನ್ನ ತಂಗಿಗೆ. ಅಪಾರ್ಥ ಮಾಡಿಕೊಂಡು ಫೋನ್ ಇಟ್ಟದ್ದು ತರುಣಿ. ಈ ಫೋನ್ ಸಂದರ್ಶನಕ್ಕಿಂತ ದರ್ಶನವೂ ಆಗಿ, ಸಂದರ್ಶನವೂ ಆದರೆ ಒಳ್ಳೆಯದು.” “ಸರಿ ಸರ್. ಬರುತ್ತೇನೆ” “ಹುಷಾರು! ಈಗ ಅಡ್ಡಾದಿಡ್ಡಿ ಟ್ರಾಫಿಕ್ನ ಯುಗ. ಇಟ್ ಈಸ್ ನಾಟ್ ಸಫಿಷಿಯಂಟ್ ಇಫ್ ಯೂ ಆರ್ ಎ ಗುಡ್ ಡ್ರೈವರ್. ಯೂ ಷುಡ್ ಅಲೋ ಫಾರ್ ಅರ್ಸ್ ಮಿಸ್ಟೇಕ್ಸ್ ಆಲ್ಸೋ ಎಂಡ್ ಡ್ರೈವ್” “ಥ್ಯಾಂಕ್ಯೂ ಫಾರ್ ಯುವರ್ ಕೈಂಡ್ ಕರ್ನ್ಸನ್ ಸರ್”“ಬನ್ನಿ. ಮನೆಯ ಮುಂದೆ ಬೀವೇರ್ ಆಫ್ ಡಾಗ್’ ಅಂತ ಬೋರ್ಡ್ ಇದೆ. ನಾಯಿ ಇರುವುದಿಲ್ಲ. ನಾನಿರುತ್ತೇನೆ” ಮಾತಿನ ಹಿಂದೆಯೇ ಅಲೆ ಅಲೆಯಾಗಿ ಕಿಲಕಿಲ ನಗು. ಮನೆಗೆ ಹೋದೆ. ಬ್ರಿಟಿಷರ ಕಾಲದ ಬಂಗಲೆ. ನನಗಂತೂ ಆ ಮನೆಗೆ ಹೆಚ್ಚು ವಯಸ್ಸಾಗಿದೆಯೋ, ವೈಎಮ್ಮೆನ್ಗೋ ಎಂದೇ ತಿಳಿಯದಾಯಿತು. ಅವರನ್ನೇ ಕೇಳಿದೆ. “ನನ್ನ ವಯಸ್ಸಂತೂ ಗೆಸ್ ಮಾಡೋದು ಕಷ್ಟ ಬಿಡಿ. ಮೊನ್ನೆ ಒಬ್ಬಾಕೆ ಸಿಕ್ಕಿ ‘ಮಿಸ್ಟರ್ ವೈಎಮ್ಮೆನ್, ವಾಟ್ ಈಸ್ ಯುವರ್ ಏಜ್?’ ಎಂದರು. ‘88’ ಅಂದೆ. ‘ಓ! ನಿಮಗೆ ಎಂಬತ್ತೆಂಟು ಅಂತ ಹೇಳಕ್ಕೇ ಆಗಲ್ಲ’ ಅಂದ್ರು. ನನಗೆ ಬಹಳ ಖುಷಿಯಾಯ್ತು. ಕತ್ತಿನ ಕಾಲರ್ ಸರಿಮಾಡಿಕೊಂಡು, ಇದ್ದಿದ್ದರಲ್ಲಿ ಸೆಟೆದು ನಿಂತು ‘ದೆನ್ ಹೌ ಓಲ್ಡ್ ಡೂ ಐ ಲುಕ್?’ ಅಂದೆ. ‘ಡೆಫನೆಟ್ಲಿ ನಾಟ್ 88. ಕ್ಲೋಸರ್ ಟು 89’ ಅಂದ್ರು!” ತುಟಿಯಲ್ಲಿ ತುಂಟ ನಗೆ, ಮುಖದಲ್ಲಿ ಲವಲವಿಕೆ. ವೈಎಮ್ಮೆನ್ ಎಂದರೆ ವೈನವಾದ ಮಾತುಗಳ ನಗೆಗಾರನೇ ಸೈ! ವೈ.ಎಂ.ಎನ್. ತಮ್ಮ ನೆಚ್ಚಿನ ಜಯನಗರ ಕಾಂಪ್ಲೆಕ್ಸ್ ಬಳಿ ಓಡಾಡುತ್ತಿದ್ದಾಗ ಮೂವರು ಹುಡುಗಿಯರ ಒಂದು ಗುಂಪು ಬಳಿ ಸಾರಿ “ಸರ್, ನಿಮ್ಮ ಆಟೋಗ್ರಾಫ್ ಕೊಡ್ತೀರಾ ಪ್ಲೀಸ್” ಎಂದರು. ಭಾಷಣದ ಸ್ಥಳವಲ್ಲದೆ, ಸಾರ್ವಜನಿಕ ಸ್ಥಳದಲ್ಲಿ ಮೂವರು ಹುಡುಗಿಯರು ಬಂದು ಆಟೋಗ್ರಾಫ್ ಕೇಳಿದುದನ್ನು ಕಂಡು ಸಂತೋಷಗೊಂಡು ವೈಎಮ್ಮೆನ್ “ಷೂರ್. ಬಟ್ ನಾನು ಯಾರು ಅಂತ ನಿಮಗೆ ಗೊತ್ತಾ?” ಎಂದರು. “ಗೊತ್ತಿಲ್ದೇ ಏನು ಸಾರ್! ನೀವು ಇಡೀ ಪ್ರಪಂಚಕ್ಕೇ ಗೊತ್ತಿರುವವರು. ವರ್ಲ್ಡ್ ಫಿಗರ್ ಸಾರ್ ನೀವು” ಇವರ ಸಂತೋಷಕ್ಕೆ ಪಾರವೇ ಇಲ್ಲ. “ಹಾಗಿದ್ದರೆ ನನ್ನ ಹೆಸರು ಹೇಳಿ ನೋಡೋಣ” “ಗೊತ್ತಿಲ್ಲದೆ ಏನು ಸಾರ್! ಆರ್.ಕೆ. ಲಕ್ಷ್ಮಣ್ ಅಲ್ವಾ?” ವೈಎಮ್ಮೆನ್ ಮುಖದಲ್ಲಿ ನಗು ಮಾಸಲಿಲ್ಲ. “ಸರಿಯಾಗಿ ನೋಡಿ ಮಿಸ್. ನಾನು ಆರ್.ಕೆ. ಲಕ್ಷ್ಮಣ್ ಅಲ್ಲ; ಅವರು ಬರೆಯುವ ಒಂದು ಕಾರ್ಟೂನ್ನಂತಿದ್ದೇನಷ್ಟೆ”. ಹುಡುಗಿಯರು ಪೆಚ್ಚಾಗಿ, ಸಾವರಿಸಿಕೊಂಡು, ಇವರ ನಗೆಯೊಡನೆ ಅವರ ನಗೆಯನ್ನೂ ಸೇರಿಸಿದರು. ನಿಜ. ಮೂರ್ತಿಯವರು ಕಾಣುವುದೂ ಲಕ್ಷ್ಮಣ್ ಕಾಮನ್ ಮ್ಯಾನ್ನಂತೆಯೇ! ಮಾತುಮಾತಿಗೂ ನಗು ಚಿಮ್ಮಿಸುವ ವೈಎಮ್ಮೆನ್ ವೈಚಾರಿಕ ಮಾತುಗಳ ನಿರ್ಮಾತೃವೂ ಹೌದು. ಅವರ ಸ್ಟಿಕರ್ಗಳು ಬದುಕಿನ ಕಾವ್ಯಕ್ಕೆ ಅಗತ್ಯವಾದ ಹೊನ್ನುಡಿಗಳು. “ನೀವೇ ಹಣ ಖರ್ಚು ಮಾಡಿ ಹ್ಯೂಮರ್ ಕ್ಲಬ್ ನಡೆಸುತ್ತೀರಿ; ಸ್ಟಿಕರ್ಗಳನ್ನು ಪ್ರಿಂಟಿಸಿ ಫ್ರೀಯಾಗಿ ಹಂಚುತ್ತೀರಿ. ಏಕೆ?” “ನಗು ಕೊಟ್ಟು ನಗದು ಪಡೆದರೆ ನಗೆ ಬದಲು ಹೊಗೆ ಏಳತ್ತೆ. ಭಗವಂತ ಕೊಟ್ಟ ನಗೆ, ಭಗವಂತ ಕೊಟ್ಟ ಐಶ್ವರ್ಯವನ್ನು ಹಾಸ್ಯದ ಹಾದಿಗೆ ಹಾಕಿದರೆ ಸದ್ವಿನಿಯೋಗ” “ಮೂರ್ತಿಯವರೆ, ಆಗಿನ ಸಾಮಾಜಿಕ ಧೋರಣೆಗೂ ಈಗಿನ ಧೋರಣೆಗೂ ಏನು ವ್ಯತ್ಯಾಸ?” “ಆಗ ಸರ್ವೇ ಜನಾಃ ಸುಖಿನೋ ಭವಂತು ಅಂತಿದ್ರು, ಈಗ ಕೆಲವೇ ಜನಾಃ ಸುಖಿನೋ ಭವಂತು; ಆಗ ಜನಸೇವೆಯೇ ಜನಾರ್ದನ ಸೇವೆ, ಈಗ ಜನಾರ್ದನ ಸೇವೆಯೇ ಜನಸೇವೆ” ವೈಎಮ್ಮೆನ್ ಒಂದು ಫಾರ್ಮಸ್ಯುಟಿಕಲ್ ಸಂಸ್ಥೆಯನ್ನೂ ನಡೆಸುತ್ತಿದ್ದರು. ಪ್ರತಿ ಸಂಜೆ ಕೆಲಸ ಬಿಡುವುದಕ್ಕೆ ಒಂದು ಗಂಟೆ ಮುಂಚೆ ಎಲ್ಲ ಉದ್ಯೋಗಿಗಳನ್ನೂ ಕರೆದು, ಇಡೀ ಗಂಟೆ ಜೋಕ್ಗಳನ್ನು ಹೇಳಿ, ಹೇಳಿಸಿ, ಉದ್ಯೋಗಿಗಳು ಮನೆಗೆ ಪ್ರಫುಲ್ಲಚಿತ್ತದಿಂದ ಹೋಗುವುದಕ್ಕೆ ಕಾರಣವಾಗುತ್ತಿದ್ದರು. ಅದರಲ್ಲೂ ಕೆಲವರು “ಒನ್ ಅವರ್ ಮುಂಚೆ ಮನೆಗೆ ಕಳಿಸಿದರೆ ಇನ್ನೂ ಖುಷಿ ಇರತ್ತಪ್ಪ” ಎನ್ನುತ್ತಿದ್ದ ಹರಳೆಣ್ಣೆ ಮುಖಗಳು ಇರುತ್ತಿದ್ದವಾದರೂ ಹೆಚ್ಚಿನ ಉದ್ಯೋಗಿಗಳಿಗೆ ಇದು ಬಹಳ ಪ್ರಿಯವಾಗಿತ್ತು. ಆ ಒಂದು ಗಂಟೆಯ ಅವಧಿಯಲ್ಲಿ ಯಾರೂ ಬಾಸ್ ಅಲ್ಲ, ಯಾರೂ ನೌಕರನಲ್ಲ. ಸಮಾನತೆಯ ಉತ್ತುಂಗವನ್ನು ಜಾರಿಗೆ ತಂದವರಲ್ಲಿ ವೈಎಮ್ಮೆನ್ ಅಗ್ರಗಣ್ಯರು.“ಈಗಿನ ವೇಗದ ಬದುಕಿನ ಬಗ್ಗೆ ಏನು ಹೇಳುತ್ತೀರಿ?”“ಯಾವುದು ಕೂಲ್ ಆಗಿರತ್ತೋ ಅದು ಜಾಸ್ತಿ ದಿನ ಬಾಳತ್ತೆ. ಯಾವುದು ಹಾಟ್ ಆಗಿರತ್ತೋ ಅದು ಬೇಗ ಸುಟ್ಟುಹೋಗತ್ತೆ. ಅತಿ ವೇಗವಾಗಿ ಸಾಗಿದರೆ ಅತಿ ಬೇಗ ಕೊನೆ ಮುಟ್ಟುತ್ತೇವೆ” ಎನ್ನುತ್ತಾ ನಸುನಕ್ಕರು ವೈಎಮ್ಮೆನ್. “ಸರ್, ನೀವು ಹ್ಯೂಮರ್ ಕ್ಲಬ್ ಸ್ಥಾಪಿಸಿದ್ದೇಕೆ?” “ನಮ್ಮಲ್ಲಿ ಶ್ರೇಷ್ಠಮಟ್ಟದ ಹಾಸ್ಯಪ್ರಜ್ಞೆ ಇದೆ ಎಂದು ಸಾಬೀತುಪಡಿಸಲಿಕ್ಕೆ. ತೆನಾಲಿರಾಮನಂತಹ ವಿದೂಷಕರ ಪರಂಪರೆ ಇರುವ ನಮ್ಮಲ್ಲಲ್ಲದೆ ಇನ್ನೆಲ್ಲಿ ಈ ಕ್ಲಬ್ ಆಗಬೇಕು ಬಿಡಿ. ಅಲ್ಲದೆ ಲಯನ್ಸ್, ರೋಟರಿಗಳಂತೆ ನಮ್ಮದೇ ಎನ್ನಿಸಿಕೊಳ್ಳುವ ಕ್ಲಬ್ ಇರಬೇಕೆಂಬ ಆಶಯ ನನ್ನದಾಗಿತ್ತು” ವೈಎಮ್ಮೆನ್ ಮನೆಯಲ್ಲಿ ಏಳು ಜನ ಎಪ್ಪತ್ತರ ಗಡಿ ದಾಟಿದವರಿದ್ದಾರೆ. “ನಮ್ಮ ಮನೆಯೇ ಒಂದು ವೃದ್ಧಾಶ್ರಮ” ಎಂದು ಯಾರಿಗೋ ಹೇಳಿದಾಗ ಅವರು ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ “ತೊಗೊಳ್ಳಿ, ನಿಮ್ಮ ವೃದ್ಧಾಶ್ರಮಕ್ಕೆ ನನ್ನದೊಂದು ಕಿರುಕಾಣಿಕೆ” ಎಂದು ನೂರು ರೂಪಾಯಿಗಳನ್ನು ಕೊಡಲು ಬಂದಿದ್ದರಂತೆ. ಆಗರ್ಭ ಶ್ರೀಮಂತರಾಗಿ, ಇಪ್ಪತ್ತುಕೋಟಿಗೂ ಹೆಚ್ಚು ಬೆಲೆಬಾಳುವ ಮನೆಯಲ್ಲಿ ಬಾಳುತ್ತಿರುವ ಇವರಿಗೆ ಆ ಸನ್ನಿವೇಶ ನೆನೆಸಿಕೊಂಡಾಗಲೆಲ್ಲಾ ನಗೆಯೋ ನಗೆ! “ನೀವು ಜೂನ್ 15ರಂದು ವಿಶ್ವ ಚಿಂತಕರ ದಿನ ಎಂದು ಆರಂಭಿಸಿದ್ದೀರಿ. ಆ ದಿನಾಂಕವೇ ಏಕೆ?” “ಸಿಂಪಲ್! ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನ ಹಾಲ್ ಖಾಲಿ ಇದ್ದದ್ದು ಅವತ್ತು ಮಾತ್ರ” “ಎ ಹ್ಯೂಮರಿಸ್ಟ್ ಈಸ್ ಒನ್ ಹೂ ಕ್ಯಾನ್ ಸ್ಪಾಟ್, ಕ್ರಿಯೇಟ್ ಎಂಡ್ ರೆಂಡರ್ ಎ ಜೋಕ್ – ಹಾಸ್ಯೋತ್ಸಾಹಿಗೆ ಜೋಕನ್ನು ಗುರುತಿಸುವ, ಹುಟ್ಟುಹಾಕುವ ಮತ್ತು ಪ್ರಸ್ತುತಪಡಿಸುವ ಕಲೆ ಕರಗತವಾಗಿರಬೇಕು” ಎನ್ನುವ ವೈಎಮ್ಮೆನ್ ಹಲವಾರು ಹ್ಯೂಮರ್ ಕ್ಲಬ್ ಬ್ರ್ಯಾಂಚ್ಗಳನ್ನು ಹುಟ್ಟುಹಾಕಿದವರು. ಲಕ್ಷಾಂತರ ರೂಗಳಷ್ಟು ಪ್ರಬುದ್ಧ ಹೇಳಿಕೆಗಳ ಸ್ಟಿಕರ್ ಹಂಚಿದವರು. ಹಲವಾರು ಹಾಸ್ಯಪಟುಗಳಿಗೆ ಮಾತಿನ ಕಲೆ ಕರಗತ ಮಾಡಿಕೊಳ್ಳಲು ಅವಕಾಶ ನೀಡಿದವರು. “ಮುಂದಿನ ಜನ್ಮದಲ್ಲಿ ನೀವು ಏನಾಗಿ ಹುಟ್ಟಲು ಬಯಸುತ್ತೀರಿ?” “ಯಾವುದಾದರೂ ಸಾಧುಪ್ರಾಣಿಯಾಗಿ. ಹಸುವಾದರೆ ಕೊಂಬಿಲ್ಲದ ಹಸುವಾಗಿ, ನಾಯಿಯಾದರೆ ಕೇವಲ ಬೊಗಳುವ ನಾಯಿಯಾಗಿ!” ನೋವಿಲ್ಲದ ನಗೆಯ ವೈಎಮ್ಮೆನ್ನಿಂದ ಬೀಳ್ಕೊಂಡು ಕಾರ್ ಏರಿದೆ. ಕೊಂಚ ಮುಂದೆ ಬಂದನಂತರ ಸೈಡ್ ಮಿರರ್ನಲ್ಲಿ ನೋಡಿದೆ. ಹಿರಿನಡೆಯ, ಕಿರುಗಾತ್ರದ ಅದಮ್ಯ ಚೇತನ ಕಿರುನಗುತ್ತಾ ನಿಂತಿದ್ದರು. ಬದುಕು ಕೆಲವರನ್ನಾದರೂ ಚಿರಂಜೀವಿಗಳನ್ನಾಗಿಸಿದರೆ ಎಷ್ಟು ಚೆನ್ನ ಅಲ್ಲವೇ!!!
courtsey:prajavani.net
https://www.prajavani.net/artculture/article-features/ymn-murthy-711015.html