ಬೆಂಗಳೂರಿನಂತಹ ನಾಗಾಲೋಟದ ನಗರದಲ್ಲಿ, ಆಧುನಿಕತೆಯ ಜೊತೆಗೆ ತನ್ನದೇ ಆದ ಸಾಂಸ್ಕೃತಿಕ ಅನನ್ಯತೆಯೂ ಬೇರೂರುತ್ತಿರುವುದು ಸಾಂಸ್ಕೃತಿಕ ಸಲ್ಲಕ್ಷಣ. ಕಲೆ-ಕಲಾವಿದರಿಗೆ ಪ್ರೋತ್ಸಾಹದ ಜೊತೆಯಲ್ಲಿ, ಕಲೆಯನ್ನು ಕಲಿತು ಕರಗತ ಮಾಡುವ ಹಂಬಲದ ಮನಸ್ಸುಗಳು ಇಲ್ಲಿ ಸೇರುತ್ತಿವೆ. ಮಹಾನಗರದ ಧಾವಂತದ ಬದುಕಿನ ನಡುವೆಯೂ ಬೇರೆ ಬೇರೆ ಕಲಾ ಪ್ರಕಾರಗಳನ್ನು ಹವ್ಯಾಸಕ್ಕಾಗಿ ಮತ್ತು ಉದ್ಯೋಗಕ್ಕಾಗಿ ಸ್ವೀಕರಿಸಿದವರಿದ್ದಾರೆ. ಈ ಪೈಕಿ ಕರಾವಳಿ, ಮಲೆನಾಡಿನ ಯಕ್ಷಗಾನವೂ ಒಂದು. ಯಕ್ಷಗಾನದ ಸಿದ್ಧ ಪ್ರೇಕ್ಷಕರ ಜೊತೆಯಲ್ಲಿ ಹೊಸ ಪ್ರೇಕ್ಷಕರನ್ನು ಸೃಷ್ಟಿಸುವ, ಪ್ರದರ್ಶನಗಳನ್ನು ನೋಡುವಂತೆ ಮಾಡುವ, ಕಲೆ ಮತ್ತು ಲಾವಿದರನ್ನು ಪ್ರೋತ್ಸಾಹಿಸುವ, ಬೇರೆ ಬೇರೆ ಕಲೆಗಳೊಂದಿಗೆ ಯಕ್ಷಗಾನವನ್ನು ನಿಲ್ಲಿಸುವ ಸಾಹಸವೂ ಇಲ್ಲಿ ನಡೆಯುತ್ತಿದೆ. ಇಂತಹ ಅನೇಕ ಪ್ರಯತ್ನಗಳಲ್ಲಿ ಬೆಂಗಳೂರಿನ ಮಟ್ಟಿಗೆ ಹೊಸ ಹೊಳವನ್ನು ಕೊಟ್ಟವರಲ್ಲಿ ಕೃಷ್ಣಮೂರ್ತಿ ತುಂಗರೂ ಒಬ್ಬರು. ತುಂಗರದ್ದು ಬಹುಮುಖಿ ವ್ಯಕ್ತಿತ್ವ. ಒಬ್ಬ ಉತ್ತಮ ಕಲಾವಿದನಾಗಿ, ದಕ್ಷ ನಿರ್ದೇಶಕನಾಗಿ, ಸಮರ್ಥ ಸಂಘಟಕನಾಗಿ ಮತ್ತು ಒಬ್ಬ ಶ್ರೇಷ್ಠ ಯಕ್ಷ ಗುರುವಾಗಿ ಇವರು ಗುರುತಿಸಿಕೊಂಡವರು. ಯಕ್ಷಗಾನ ವಲಯದಲ್ಲಿ ಇಂದು ಹಲವಾರು ಮಂದಿ ಯಕ್ಷ ಗುರುಗಳಿದ್ದಾರೆ. ಅನೇಕ ಬಾರಿ ಕೇವಲ ಸೀಮಿತ ಪ್ರದರ್ಶನಕ್ಕೆ ಅಥವಾ ಕೆಲವು ಪದ್ಯಗಳಿಗೆ, ಪಾತ್ರಗಳಿಗೆ ಮಾತ್ರ ಸಂದರ್ಭೋಚಿತ ನೃತ್ಯವನ್ನು, ಅಭಿನಯವನ್ನು ಕಲಿಯುವವರು, ಕಲಿಸುವವರೇ ಹೆಚ್ಚು. ಆದರೆ, ಸಮಗ್ರವಾದ ಯಕ್ಷಗಾನದ ಶಿಕ್ಷಣವನ್ನು ನೀಡಬಲ್ಲ ಬೆರಳೆಣಿಕೆ ಮಂದಿ ಯಕ್ಷ ಗುರುಗಳಲ್ಲಿ ಕೃಷ್ಣಮೂರ್ತಿ ತುಂಗರೂ ಒಬ್ಬರು. ಹೆಜ್ಜೆಗಾರಿಕೆ, ಹಿಮ್ಮೇಳ, ಅಭಿನಯ, ಮಾತುಗಾರಿಕೆ, ನಿರ್ದೇಶನ, ಆಹಾರ್ಯ, ಪ್ರಸಾದನ ಹೀಗೆ ಎಲ್ಲ ವಿಷಯಗಳಲ್ಲಿ ಪರಿಣಿತರಾಗಿ, ಅದನ್ನು ಆಸಕ್ತರಿಗೆ ಪರಿಣಾಮಕಾರಿಯಾಗಿ ಕಲಿಸುವ ತುಂಗರ ಚಾಕಚಕ್ಯತೆಗೆ ತುಂಗರೇ ಸರಿಸಾಟಿ. ತಾನು ಗುರುಪರಂಪರೆಯಿಂದ ಕಲಿತ ಯಕ್ಷ ಶಿಕ್ಷಣವನ್ನು, ತನ್ನ ಶಿಷ್ಯರಿಗೆ ಧಾರೆಯೆರೆದು ಅವರಿಂದ ಗುಣಮಟ್ಟದ ಪ್ರದರ್ಶನವನ್ನು ಬಯಸುವ ತುಂಗರ ಕಲಾನಿಷ್ಠೆ ಕಾಳಜಿಯಿಂದಾಗಿ ಅವರ ಬಳಿ ಪ್ರತಿಭಾವಂತ ವಿದ್ಯಾರ್ಥಿಗಳೇ ತಯಾರಾಗುತ್ತಿದ್ದಾರೆ. ಇತ್ತೀಚಿನ ಯಕ್ಷಗಾನದಲ್ಲಿ ನಾವು ಕಳೆದುಕೊಳ್ಳುತ್ತಿರುವ ಅಂಶಗಳೇ ಹೆಚ್ಚು. ಆಧುನಿಕ ಚಲನಚಿತ್ರ, ನಾಟಕ, ಮತ್ತಿತರ ಸಾಮಾಜಿಕ, ಕಳಪೆ ಅಭಿರುಚಿಗಳ ಪ್ರಭಾವದಿಂದ ಯಕ್ಷಗಾನ ಕಲೆಯ ಮೂಲ ಅಸ್ತಿತ್ವಕ್ಕೆ ಧಕ್ಕೆಯಾಗಿದ್ದು ಸುಳ್ಳಲ್ಲ. ಇವುಗಳ ಸಾಲಿನಲ್ಲಿ ಪೂರ್ವರಂಗವೂ ಕೂಡ ಒಂದು. ಪೂರ್ವರಂಗ, ಒಡ್ಡೋಲಗಗಳು, ಯುದ್ಧ ನೃತ್ಯ, ಪ್ರಯಾಣ ಕುಣಿತ ಮೊದಲಾದವುಗಳು ಕೇವಲ ಕಾರ್ಯಾಗಾರದ, ಪ್ರಾತ್ಯಕ್ಷಿಕೆಯ ವಸ್ತುವಾಗಿರದೇ, ಪ್ರದರ್ಶನದ ಅಂಗವಾಗಿರಬೇಕು ಎಂಬುದು ತುಂಗರ ಚಿಂತನೆ. ಇದಕ್ಕಾಗಿ ಈ ಎಲ್ಲ ಅಪರೂಪದ ಯಕ್ಷಗಾನದ ಸಾಂಪ್ರದಾಯಿಕ ಭಾಗಗಳನ್ನು ತನ್ನ ಶಿಷ್ಯರಿಗೆ ಕಲಿಸಿ, ಈ ಮೂಲಕ ಅವಕಾಶ ಇರುವ ಕಡೆಗಳೆಲ್ಲೆಲ್ಲ ಅವುಗಳನ್ನು ಪ್ರದರ್ಶನಗೊಳಿಸುತ್ತಲೇ ಬಂದಿದ್ದಾರೆ. ಕೋಡಂಗಿ ವೇಷ, ಪೀಠಿಕಾ ಸ್ತ್ರೀವೇಷ, ಪಾಂಡವರ ಒಡ್ಡೋಲಗ, ಯುದ್ಧ ನೃತ್ಯ, ಬಣ್ಣದ ಒಡ್ಡೋಲಗ, ಕಿರಾತ ಒಡ್ಡೋಲಗ, ಕೃಷ್ಣನ ಒಡ್ಡೋಲಗ, ಗುಹನ ಒಡ್ಡೋಲಗ, ಪ್ರಯಾಣ ಕುಣಿತ ಇತ್ಯಾದಿಗಳನ್ನು ಮರೆತೇಹೋಗಿದ್ದ ಬೆಂಗಳೂರಿನ ಪ್ರೇಕ್ಷಕರು ತುಂಗರ ಮೂಲಕ ಪುನಃ ಅದನ್ನು ನೋಡುವಂತಾಗಿದೆ. ಬದಲಾಗುತ್ತಿರುವ ಯಕ್ಷಗಾನ ಪ್ರದರ್ಶನಗಳು ನೃತ್ಯ ರೂಪಕಗಳಾಗುತ್ತಿದೆ. ಕೇವಲ ಕೆಲವು ಕಲಾವಿದರಿಗೆ, ಕೆಲವು ಪದ್ಯಗಳಿಗೆ, ಕೆಲವು ಸನ್ನಿವೇಶಗಳಿಗೆ ಮಾತ್ರ ಯಕ್ಷಗಾನ ಪ್ರದರ್ಶನಗೊಳ್ಳುತ್ತಿರುವುದು ಅಥವಾ ಪ್ರಾಮುಖ್ಯತೆ ಪಡೆದುಕೊಳ್ಳುವುದು ಯಕ್ಷಗಾನದ ಮೂಲ ತತ್ವಕ್ಕೆ ಧಕ್ಕೆ ಅನ್ನುವುದು ತುಂಗರ ಅಭಿಮತ. ಎಲ್ಲ ಪಾತ್ರಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ, ಸ್ಥಾನ, ಗೌರವ, ಪಾತ್ರದೌಚಿತ್ಯವಿದೆ. ಅದು ಪ್ರದರ್ಶನಗಳಲ್ಲಿ ವ್ಯಕ್ತವಾಗಲೇಬೇಕು. ಅದಕ್ಕಾಗಿ ತಮ್ಮ ಯಾವ ಪ್ರದರ್ಶನವೂ ಕೂಡ ಏಕಮುಖವಾಗಿರುವುದಕ್ಕೆ ಅವಕಾಶ ಕೊಡದೆ, ಪಾತ್ರಕ್ಕೆ ಬೇಕಾದಷ್ಟೆ ನೃತ್ಯ, ಅಭಿನಯ, ಮಾತುಗಾರಿಕೆಯನ್ನು ಅಳವಡಿಸಿ, ಪ್ರಸಂಗದ ಸಂದೇಶವನ್ನು ಅತ್ಯಂತ ಸುವ್ಯವಸ್ಥಿತವಾಗಿ ಹೊರಹೊಮ್ಮಿಸುವ ಅವರ ಪ್ರಯತ್ನ ಕೂಡ ಯಶಸ್ವಿಯಾಗಿದೆ. ಮಕ್ಕಳ ಅಭಿಮನ್ಯು ಕಾಳಗದ ಸುಭದ್ರೆ-ಅಭಿಮನ್ಯು ಪಾತ್ರಗಳು ಪ್ರತೀ ಬಾರಿಯೂ ಪ್ರೇಕ್ಷಕರ ಕಣ್ಣು ಒದ್ದೆಯಾಗುವಂತೆ ಮಾಡುತ್ತಿದ್ದು, ಕೃಷ್ಣಾರ್ಜುನ ಕಾಳಗದ ಅರ್ಜುನ-ಸುಭದ್ರೆಯ ಸನ್ನಿವೇಶ ಜನ ಭಾವಲಹರಿಯಲ್ಲಿ ಮೀಯುವಂತೆ ಮಾಡಿದ್ದು, ಭೀಷ್ಮೋತ್ಪತ್ತಿಯ ವಿಶಿಷ್ಟ ಕಂದರನ ಪಾತ್ರ ನಗೆಗಡಲಿನಲ್ಲಿ ತೇಲುವಂತೆ ಮಾಡಿದ್ದು ಇವರ ಸಾಮರ್ಥ್ಯದ ಬಗೆಗಿನ ಕೆಲವು ಉದಾಹರಣೆಗಳು. ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನದಲ್ಲಿ ನಿರ್ದೇಶಕನ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಒಬ್ಬ ನಿರ್ದೇಶಕನಿಗೆ ಕೇವಲ ಪದ್ಯದ ಆಯ್ಕೆಯ ಸಾಮರ್ಥ್ಯ ಮಾತ್ರವಲ್ಲದೆ ಒಟ್ಟು ಪ್ರದರ್ಶನ ಹೇಗೆ ಮೂಡಿಬರಬೇಕು, ಪ್ರಸಂಗದ ಸಂದೇಶವೇನು ಎಂಬ ಕಲ್ಪನೆ ಕೂಡ ಇರಬೇಕಾಗುತ್ತದೆ. ತುಂಗರ ನಿರ್ದೇಶನದಲ್ಲಿ ಇವನ್ನು ಕಾಣಬಹುದು. ಪ್ರಸಂಗಗಳ ಸಂದರ್ಭಕ್ಕೆ ಅನುಗುಣವಾದ ರಾಗ, ತಾಳಗಳ ಆಯ್ಕೆ, ಪ್ರಸಂಗ ನಡೆಯನ್ನು ರೂಪಿಸುವ, ಕಲಾವಿದರುಗಳಿಂದ ಪಾತ್ರವನ್ನು ಸಮರ್ಥವಾಗಿ ಚಿತ್ರಿಸುವಂತೆ ಮಾಡುವ, ನೃತ್ಯ ಮತ್ತು ಅಭಿನಯಗಳ ಸ್ವರೂಪ, ಪಾತ್ರಗಳ ಔಚಿತ್ಯ, ಪಾತ್ರಗಳ ಮಾತುಗಾರಿಕೆ, ಕಲಾವಿದರೆ ಆಯ್ಕೆ, ಹೀಗೆ ಸಮಗ್ರವಾದ ಚಿಂತನ ದೃಷ್ಟಿಕೋನದಲ್ಲಿ ಪ್ರದರ್ಶನವಿರುತ್ತದೆ. ಒಬ್ಬ ರಂಗಭೂಮಿಯ ನಿರ್ದೆಶಕನಿಗಿರಬೇಕಾದ ಹೊಣೆಗಾರಿಕೆಯನ್ನು ತುಂಗರು ಯಕ್ಷಗಾನದ ಪರಿಧಿಯಲ್ಲಿ ಅರಿತು ನಿರ್ವಹಿಸುತ್ತಿದ್ದಾರೆ. ಮಕ್ಕಳ ಮೂಲಕ ಪ್ರದರ್ಶನವೆಂದರೆ ಮಕ್ಕಳಾಟಿಕೆಯೆಂದು ತಿಳಿದವರು ಬಹಳ. ಮಕ್ಕಳಿಂದ ಭೀಷ್ಮೋತ್ಪತ್ತಿ, ಕೃಷ್ಣಾರ್ಜುನ, ಮಹಿಷಮರ್ಧಿನಿ, ಪಾರಿಜಾತ, ವೃಷಸೇನ ಕಾಳಗ ಇತ್ಯಾದಿ ಮೌಲ್ಯಯುತ ಪ್ರಸಂಗಗಳನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ಪ್ರದರ್ಶನಗೊಳಿಸಿದ ಖ್ಯಾತಿಯೂ ತುಂಗರಿಗೆ ಸೇರುತ್ತದೆ. ಯುಕ್ಷಗಾನ ರಂಗಭೂಮಿಯಲ್ಲಿ ಕಾಣಸಿಗದೇ ಇರುವ ರುಕ್ಮಿಣಿ ಕಲ್ಯಾಣ, ಚಿತ್ರಸೇನ ಕಾಳಗ, ತಾಮ್ರಧ್ವಜ ಕಾಳಗ, ಕಚ ದೇವಯಾನಿ, ರಾವಣ ವಧೆ, ದ್ರೌಪದಿ ಸ್ವಯಂವರ, ಭಾರ್ಗವ ರಾಮ ಇತ್ಯಾದಿ ಅಪರೂಪದ ಪ್ರಸಂಗಗಳ ಅಧ್ಯಯನ ಮಾಡಿ, ಅವುಗಳನ್ನು ಹಿರಿಯ ಶಿಷ್ಯರಿಂದ ಪುನಃ ಪ್ರದರ್ಶನಗೊಳ್ಳುವಂತೆ ಮಾಡುತ್ತಿದ್ದಾರೆ. ಯಕ್ಷಗಾನದ ಪರಿಧಿ, ಕ್ಷೇತ್ರ ವಿಸ್ತಾರವಾಗಬೇಕು, ಬೇರೆ ಕಲೆಗಳೊಂದಿಗೆ ನಿಲ್ಲಬೇಕಾದರೆ ಯಕ್ಷಗಾನ ಹೆಚ್ಚಿನ ಶಿಸ್ತನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎನ್ನುವುದು ಅವರ ನಿಲುವು. ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಬೇರೆ ಬೇರೆ ರೂಪಗಳಲ್ಲಿ, ಯಕ್ಷಗಾನೇತರ ವೇದಿಕೆಗಳಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿ, ಹೆಚ್ಚು ಹೆಚ್ಚು ಹೊಸ ಆಸಕ್ತರು ಯಕ್ಷಗಾನ ನೋಡುವಂತಾಗಬೇಕು ಅನ್ನುವುದು ಅವರ ವಾದ. ಅದಕ್ಕೆ ಅವರೇ ನಿರ್ದೇಶಿಸಿ, ಅಭಿನಯಿಸಿದ, ನಗರಗಳಲ್ಲಿ ಹೆಚ್ಚಾಗಿ ಕಾಣುವ ಫ್ಯೂಷನ್ ನೃತ್ಯಗಳಲ್ಲಿ ಯಕ್ಷಗಾನವನ್ನು ಅಳವಡಿಸಿ ಯಕ್ಷಗಾನದ ವೇಷ, ನೃತ್ಯ, ಬಣ್ಣಗಾರಿಕೆ, ಅಭಿನಯ ಇತ್ಯಾದಿಗಳ ಬಗ್ಗೆ ಹೊರ ಜಗತ್ತು ಬೆಕ್ಕಸ ಬೆರಗಾಗುವಂತೆ ಮಾಡಿ ಯಕ್ಷಗಾನದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದ್ದಾರೆ. ಈಗಾಗಲೇ ಬೇರೆ ಬೇರೆ ನಗರಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ನರಸಿಂಹ ಅವತಾರ, ಸಮುದ್ರ ಮಥನ, ಕಂಸ ವಧೆ ಇತ್ಯಾದಿ ಪುರಾಣ ಕಥೆಗಳಿಗೆ ಸಹ ಯಕ್ಷ ನೃತ್ಯರೂಪಕ ಅಳವಡಿಸಿದ್ದಾರೆ. ಕಟ್ಟುನಿಟ್ಟಿನ ಅಭ್ಯಾಸಕ್ಕೆ ಕೊಡುವ ಪ್ರಾಮುಖ್ಯತೆ, ಶಿಸ್ತಿನ ಶಿಕ್ಷಣ, ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳದಿರುವುದು ಇವರ ಯಕ್ಷಗಾನ ತರಗತಿಗಳ ವಿಶಿಷ್ಟತೆ. ಯಕ್ಷಗಾನ ಪದ್ಯದ ಭಾವಾಭಿನಯವನ್ನು ಸಮಗ್ರವಾಗಿ ಕಟ್ಟುವ, ಪ್ರತಿಭೆಗಳನ್ನು ಹುರಿದುಂಬಿಸಿ ಅಣಿಗೊಳಿಸುವ, ಆತ್ಮಸ್ಥೈರ್ಯ ಬೆಳೆಯುವಂತೆ ಮಾಡಿ ಪಕ್ವಗೊಳಿಸುವ, ಯಕ್ಷಗಾನದ ಪ್ರತೀ ಅಂಶಗಳನ್ನು ಸ್ಪಷ್ಟವಾಗಿ ಕಲಿಯುವ ಅನಿವಾರ್ಯತೆಯನ್ನು ತನ್ನ ಶಿಷ್ಯರಲ್ಲಿ ತುಂಬುವ ವೈಖರಿಯೇ ಬೆರಗುಗೊಳಿಸುವಂತದ್ದು. ಅವರಲ್ಲಿ ಕಲಿತ ಕಲಾವಿದರ ಯಕ್ಷಗಾನ ವೇಷದ ನಿರ್ವಹಣೆಯೇ ಖುಷಿ ಕೊಡುವಂತದ್ದು ಕೇವಲ ಗುರುವಾಗಿ ಅಷ್ಟೇ ಅಲ್ಲ, ಒಬ್ಬ ಶ್ರೇಷ್ಠ ಕಲಾವಿದನಾಗಿ ಪುಂಡುವೇಷ, ರಾಜವೇಷ, ಬಣ್ಣದ ವೇಷ ಕಿರಾತವೇಷ, ಸ್ತ್ರೀವೇಷ, ಹಾಸ್ಯ ಹೀಗೆ ಯಾವ ವೇಷವಾದರೂ ಸೈ. ಅದಕ್ಕೆ ಬೇಕಾದ ಪೂರ್ಣ ನ್ಯಾಯ ಒದಗಿಸಬಲ್ಲ ಸಾಮರ್ಥ್ಯವನ್ನೂ ಈಗಾಗಲೇ ಸಾಧಿಸಿ ತೋರಿಸಿದ್ದಾರೆ. ಯಕ್ಷಗಾನದ ಶ್ರೇಷ್ಠ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಶಿಷ್ಯರಾಗಿ ಅವರು ನಡೆದ ಮಾರ್ಗದಲ್ಲಿ ಸಾಗುತ್ತಿರುವುದು ವೀಶೇಷ. ಜೊತೆಯಲ್ಲಿ ಬಿ.ವಿ.ಕಾರಂತ, ಬಿ.ವಿ.ರಾಜಾರಾಂ ಮೊದಲಾದ ರಂಗಭೂಮಿ ದಿಗ್ಗಜರು, ನೃತ್ಯಲೋಕದ ವೀಣಾ ವಿಜಯ್, ವೈಜಯಂತಿ ಕಾಶಿ, ನಿರುಪಮಾ ರಾಜೇಂದ್ರ ಮೊದಲಾದ ಖ್ಯಾತನಾಮರ ಜೊತೆಗೆ ಒಡನಾಟ ಹೊಂದಿರುವ ತುಂಗರು, ಯಕ್ಷಗಾನೇತರ ಪ್ರಾಕಾರಗಳ ಕಲಾವಿದರಿಗೆ ಯಕ್ಷಗಾನವನ್ನು ಸಮರ್ಥವಾಗಿ ಪರಿಚಯಿಸಿ, ಯಕ್ಷಗಾನದ ಬಗೆಗೆ ಗೌರವ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಹೆಮ್ಮೆ ಪಡುವ ವಿಷಯ. ಇಂಥವರ ಯಕ್ಷಗಾನದ ಬಗೆಗಿನ ಉತ್ತಮ ಚಿಂತನೆಗಳು ಎಲ್ಲ ಯಕ್ಷಗಾನಾಭಿಮಾನಿಗಳಿಗೆ ಹರಿಯುವಂತಾಗಲಿ. ಯಕ್ಷಗಾನವನ್ನು ಸ್ವಸ್ಥವಾಗಿ ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನೆಲ್ಲರೂ ಅರಿಯುವಂತಾಗಲಿ ಎಂದು ಆಶಿಸೋಣ.
courtsey:prajavani.net
https://www.prajavani.net/artculture/article-features/krishnamurthy-thunga-662757.html