ಯಾದೋಂ ಕಿ ಗಲಿಯೋಂ ಮೆ ಹಮ್ ರಖೇಂಗೆ ಕದಮ್..
ಈಗ ಎರಡು ದಿನಗಳ ಹಿಂದೆ ನನ್ನೊಬ್ಬ ಹಳೆಯ ವಿದ್ಯಾರ್ಥಿಯಿಂದ ನನಗೆ ಫೋನ್ ಬಂತು. ನಿಮ್ಮನ್ನು ಭೇಟಿಯಾಗಬೇಕಾಗಿತ್ತು ಟೀಚರ್ ಅಂದ. ಇಪ್ಪತೈದು ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿಯಾದವ. ಈಗ ಅವನುದ್ದದ ಮಗನೋ, ಮಗಳೋ ಇರಬಹುದು ಅವನಿಗೆ.. ಆದರೂ ನನಗೇನೂ ಆಶ್ಚರ್ಯ ಆಗಲಿಲ್ಲ ನನಗೆ. ಇತ್ತೋಚೆಗೆ ಹತ್ತು ವರ್ಷಗಳಿಂದ ಕೆಲಸದ ನಿಮಿತ್ತ ಬೇರೆ ಬೇರೆಕಡೆಯಲ್ಲಿ ಕೆಲಸ ಮಾಡುವ ಸ್ನೇಹಿತರು ಆಗಾಗ ತಮ್ಮ ತಾಯಿಬೇರು ಹುಡುಕಿಕೊಂಡು ಬಂದು, ಆ ಭೇಟಿಗಳಿಗೆ Reunion ಅಥವಾ ಸ್ನೇಹ ಮೇಳ ಅನ್ರಿ ಬೇಕಾರ, ಹೆಸರಿಟ್ಟು, ಸಾಕಷ್ಟು ತೊಂದರೆ ತೆಗೆದುಕೊಂಡು ಸಂಘಟನೆ ಮಾಡಿ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ವರ್ಗ ಮಿತ್ರರನ್ನು, ಕಲಿಸಿದ ಗುರುಗಳನ್ನು ಕಲೆಹಾಕಿ ಒಟ್ಟುಗೂಡಿಸಿ ಒಂದೆರಡು ದಿನ ಸಂಭ್ರಮಿಸೋದು trend ಆಗಿ ಬೆಳೆಯುತ್ತಿದೆ. ಅಭ್ಯಾಸ/ ಪರೀಕ್ಷೆ/ ಮಾಕ್ರ್ಸ/ class ಗಳ ಗೊಡಿವೆನೇ ಇಲ್ಲದೇ ಭೇಟಿಗಾಗಿ, ಆನಂದಕ್ಕಾಗಿ, ಅನುಭವಿಸುವದಕ್ಕಾಗಿ ಇರುವ ಇಂಥ ಭೇಟಿಗಳ ಉದ್ದೇಶ ಮಳೆ ನೀರಿನಷ್ಟೇ ಶುದ್ಧ, ಪವಿತ್ರ…
ಬಾಲ್ಯ, ಹರಯಗಳನ್ನು ಕಳೆದು ಹೆಗಲೇರಿದ ಜವಾಬ್ದಾರಿಗಳನ್ನು ತೂಗಿಸುವ ಹೊಣೆ, ಅದಕ್ಕಾಗಿ ಬೇಕಾಗುವ ಹೆಣಗಾಟ, ಈಗ ಮಾತ್ರ ಅರ್ಥವಾಗುತ್ತಿರುವ ಸಮಯದಲ್ಲಿ ಅವರೂ cross ರೋಡಗಳಲ್ಲಿ ಇರುವಂತೆ ಒಂದು ರೀತಿಯ ಆಯ್ಕೆಯ ಹುಡುಕಾಟದಲ್ಲಿ ಇರುತ್ತಾರೆ. ಇಂಥ ವೇಳೆಯಲ್ಲಿ ಸಮಾನ ಮನಸ್ಕರ, ಸಮಾನ ವಯಸ್ಕರ ನೆನಪಾಗಿ ಆಗುವ ಭೇಟಿಯ ಅರ್ಥವ್ಯಾಪ್ತಿ ಹೆಚ್ಚು ವಿಸ್ತಾರವಾಗಿರುತ್ತದೆ. ಉಭಯತರ ಅಂದರೆ ಕಲಿಸಿದ ಶಿಕ್ಷಕರ/ ವಿದ್ಯಾರ್ಥಿಗಳ ಭೇಟಿ, ಒಂದು ರೀತಿಯಲ್ಲಿ ಹಳೆಬೇರು “ಹೊಸ-ಚಿಗುರು” ಗಳು ಕೂಡಿರಲು ಮರ ಸೊಗಸು ಎಂಬ ಕವಿವಾಣಿಗೆ ಸೂಕ್ತ ನಿದರ್ಶನವಾಗುವ ಪರಿಯೇ ಅನನ್ಯ…
ಎಷ್ಟೋ ದಿನಗಳ ಕಾಲ ಪಕ್ಕದ ಮನೆಯವರ ಮುಖಗಳನ್ನೇ ನೋಡಲಾಗದಿರುವ ಇಂದಿನ ನಾಗಾಲೋಟದ ದಿನಗಳಲ್ಲಿ ಪ್ರಪಂಚದ ದಿಕ್ಕು- ದಿಕ್ಕುಗಳಿಂದ ಚುಂಬಕಗಾಳಿಯೊಂದು ಬೀಸಿ ಸೂರ್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ (ಪೂರ್ವ- ಪಶ್ಚಿಮ) ನಗೆಯನು ಸೂಸುವ ಅಪರೂಪದ ಕೆಲಸ ಮಾಡುತ್ತದೆ ಎಂದು ಹೇಳಿದರೆ ತಪ್ಪಾಗದನೋ!
ಕಲಿಯುವ ದಿನಗಳ ಪರಸ್ಪರ ತಗಾದೆ, ತಕರಾರುಗಳು, ಕ್ಷುಲ್ಲಕ, ಮೂರ್ಖತನದ ಪರಮಾವಧಿ ಎನಿಸಿ, ಪುಟ್ಟದೊಂದು ಪಶ್ಚಾತ್ತಾಪ ಭಾವ ಅಂಕುರಿಸಿ ಹೃದಯಪೂರ್ವಕವಾಗಿ ನೀಡಿದ ಹಸ್ತಲಾಘವದ ಬಿಸುಪನ್ನು ಹೃದಯಕ್ಕೆ ತಲುಪಿಸುತ್ತವೆ. ಪರಸ್ಪರ ಸುಖ-ದುಃಖಗಳ ವಿನಿಮಯವು ಒಂದು ರೀತಿಯ soothing effect ಕೊಡುತ್ತದೆ. ಮೇಲಾಗಿ ಬೇರಾರೊಂದಿಗೂ ಹಂಚಿಕೊಳ್ಳಲಾಗದ, ಹಂಚಿಕೊಳ್ಳ ಬಾರದು ಎಂದೆನಿಸುವ, ಕೇವಲ ಸ್ನೇಹ ವ್ಯಾಪ್ತಿಗೆ ಸಲ್ಲುವ ‘ರಸ’ ಗಳಿಗೆ’ಯ ಗಳಿಗೆಗಳು ರೆಕ್ಕೆ ಪುಕ್ಕಗಳು ಮೂಡಿ ಸ್ವಚ್ಛಂದ ಹಾರಾಟಕ್ಕೆ ಸಾಕ್ಷಿಯಾಗುತ್ತವೆ. ಇತ್ತ ಶಿಕ್ಷಕರಿಗೂ ಪಾಠದ ಒತ್ತಡವಿಲ್ಲ. ಏನಾದರೂ ಅಡ್ಡಡ್ಡ ಪ್ರಶ್ನೆಗಳ ಭಯವಿಲ್ಲ…. paper correction, marks calculation, ಅಂಕಪಟ್ಟಿ ಸಲ್ಲಿಕೆಗಳ ಹಾವಳಿಯಿಲ್ಲ. ಎಲ್ಲರಿಗೂ ಎಲ್ಲವೂ ಮುಕ್ತ ಮುಕ್ತ… ಮುಕ್ತ… ಇಂಥದೇ ಮೇಳದಲ್ಲಿ ಒಂದು ಬಾರಿ ಭಾಷಣದ ವೇಳೆ ಹದಿನೈದು ವರ್ಷಕ್ಕೂ ಮಿಕ್ಕಿದ ಒಂದು ಗಲಾಟೆಯ ವಿಷಯ ಪ್ರಸ್ತಾಪಿಸಿ ಒಬ್ಬ ತುಂಟ ವಿದ್ಯಾರ್ಥಿ ಅದಕ್ಕೆ ಯಾವ ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿತ್ತೋ ಅವರುಗಳ ಬಹಿರಂಗ ಕ್ಷಮೆ ಕೇಳಿ ತಾನೇ ಅಂದಿನ ಗಲಾಟೆಯ ಕಾರಣ ಪುರುಷನಾಗಿದ್ದನ್ನು ಸಂಬಂಧಿಸಿದ ಗುರುಗಳಿಗೆ ಚಂದದ ಸಾಭಿನಯದ ಕಥೆಯಾಗಿಸಿ ವಿಸ್ತಾರವಾಗಿ ಹೇಳಿ ಇಡೀ ಸಭಾಮಂಟಪವನ್ನೇ ಹಿಗ್ಗಿನ ಕಡಲಾಗಿಸಿದ್ದು ಇಂದಿಗೂ ನೆನಪಿದೆ.. ಯಾವುದೇ ಅಪರಾಧಿ ಪ್ರಜ್ಞೆಯಿಲ್ಲದೇ, ನಿರಂಬಳವಾಗಿ ಸ್ಷಚ್ಛಂದವಾಗಿ ಅಲೆ ಅಲೆಯಾಗಿ ನಗುತ್ತಿದ್ದ ಅವನ ಗೆಳೆಯರಿಗೆ ಅದು ಅಂದು ಹಬ್ಬವೆನಿಸಿತ್ತು…
ಎಂಥ ಕಟ್ಟುನಿಟ್ಟಿನ, ಕಠೋರ ನಿಯಮ ಪಾಲನೆಯ ಶಿಕ್ಷಕರೂ ಆ ರಸವತ್ತಾದ ಗಳಿಗೆಗಳನ್ನು ಪೆಪ್ಪರಮೆಂಟಿನಂತೆ ಮೆಲ್ಲತೊಡಗಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಇಂಥ ಪವಾಡಗಳು ಇಂಥ ಸಮ್ಮಿಲನಗಳಲ್ಲಿ ಮಾತ್ರ ಸಾಧ್ಯ… ಇದೇ ಕಾರಣಕ್ಕೇ ಇಂಥ ಕಾರ್ಯಕ್ರಮಗಳು ಮನದ ಕಲ್ಮಶಗಳನ್ನು ತೊಳೆದು, ಹಗುರಾಗಿಸಿ, ದೇಹದ ತೂಕ ಇಳಿಸಿ, ಮನದ ತೂಕ ಹೆಚ್ಚಿಸುತ್ತವೆ. ಬಹುಶಃ ವೇಗದ ಬದುಕಿನ ಓಟಗಳಲ್ಲಿ ಓಡಿ ಹಣ್ಣಾಗಿರುವ, ಆಗುತ್ತಿರುವ ಯುವ ಹೃದಯಗಳಿಗೆ ಹೆಚ್ಚು ಹೆಚ್ಚು ಗ್ರಾಹ್ಯವಾಗುತ್ತಿರುವದರಿಂದಲೇ ಇಂಥ ಸ್ನೇಹ ಮಿಲನಗಳು ಹೆಚ್ಚು ಆಯೋಜಿತವಾಗುತ್ತಿರಬಹುದೇನೋ….