ಔರಾದ್:ತಾಲ್ಲೂಕಿನ ವಡಗಾಂವ್ ಗ್ರಾಮದ ಬಡ ವಿದ್ಯಾರ್ಥಿಯೊಬ್ಬ ಚಿತ್ರಕಲೆಯಲ್ಲಿ ವಿಭಾಗ ಮತ್ತು ರಾಜ್ಯಮಟ್ಟದಲ್ಲಿ ತಮ್ಮ ಕಲೆ ಪ್ರದರ್ಶಿಸಿದ್ದಾನೆ. ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿ ವಿರೇಶ ಮಷ್ಣಪ್ಪ ಸಗರ ವೈವಿದ್ಯಮಯ ಚಿತ್ರ ಬಿಡಿಸುವ ಕಲೆ ಬೆಳೆಸಿಕೊಂಡಿದ್ದು. ಎರಡು ಸಲ ರಾಜ್ಯ ಮಟ್ಟದಲ್ಲಿ ಒಂದು ಸಲ ವಿಭಾಗ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾನೆ. ವಿರೇಶನದ್ದು ಬಡ ಕುಟುಂಬ. ತಂದೆ-ತಾಯಿಗೆ ಕೆಲಸದಲ್ಲಿ ನೆರವಾಗುತ್ತ ಊರಿನ ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವರೆಗೆ ಓದಿದ್ದಾರೆ. ಓದಿನ ಜತೆ ಚಿತ್ರ ಬಿಡಿಸುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಶಿಕ್ಷಕ ಚಂದ್ರಶೇಖರ ಅವರ ಮಾರ್ಗದರ್ಶನದಲ್ಲಿ ಅನೇಕ ಒಳ್ಳೆ ಮತ್ತು ಆಕರ್ಷಕ ಚಿತ್ರ ಬಿಡಿಸಿದ್ದಾರೆ. 2017 ಮತ್ತು 2018ರಲ್ಲಿ ಎರಡು ಬಾರಿ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದಿದ್ದಾರೆ. 2017ರಲ್ಲಿ ಬೀದರ್‌ನಲ್ಲಿ ನಡೆದ ಜನಪರ ಉತ್ಸವದಲ್ಲಿ ಅತ್ಯುತ್ತಮ ಜಾನಪದ ಕಲೆ ಮತ್ತು ಕಲಾವಿದರ ಚಿತ್ರ ಬಿಡಿಸಿ ಬಹುಮಾನ ಪಡೆದಿರುವನು. ಮೂರು ಬಾರಿ ತಾಲ್ಲೂಕು ಮಟ್ಟದ ಮತ್ತು ಎರಡು ಬಾರಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲೂ ಪ್ರಥಮ ಬಹುಮಾನ ಗಿಟ್ಟಿಸಿಕೊಂಡು ಕಲಾ ಪ್ರತಿಭೆ ಮೆರೆದಿದ್ದಾರೆ. 2018ರಲ್ಲಿ ಭಾರತ ಚುನಾವಣಾ ಆಯೋಗ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನ ಚಿತ್ರ ಬಿಡಿಸುವಲ್ಲಿಯೂ ಅಧಿಕಾರಿಗಳಿಂದ ಬೆನ್ನು ತಟ್ಟಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಯಲ್ಲಿ ಇಷ್ಟೆಲ್ಲ ಪ್ರತಿಭೆ ಇದ್ದರೂ ಬಡತನದಿಂದಾಗಿ ಚಿತ್ರ ಬಿಡಿಸುವುದನ್ನು ನಿಲ್ಲಿಸಿದ್ದಾರೆ. ಸದ್ಯ ಬೀದರ್‌ನ ಸಿದ್ಧಾರ್ಥ ಕಾಲೇಜಿನಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ಓದುತ್ತಿದ್ದಾರೆ. ‘ನನಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವುದರಲ್ಲಿ ತುಂಬಾ ಆಸಕ್ತಿ. ಚಿತ್ರಕಲಾ ಶಿಕ್ಷಕ ಚಂದ್ರಶೇಖರ ಅವರ ಮಾರ್ಗದರ್ಶನ ನನಗೆ ಮತ್ತಷ್ಟು ಅಭಿರುಚಿ ಹುಟ್ಟಿಸಿತ್ತು. ಮುಂದೆ ದೊಡ್ಡ ಚಿತ್ರ ಕಲಾವಿದನಾಗಬೇಕಂಬ ಆಸೆ ಇದೆ. ಆದರೆ ಬಡತನ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ’ ಎಂದು ವಿರೇಶ ಬಹಳ ನಿರಾಶೆಯಿಂದ ಹೇಳುತ್ತಾರೆ. ‘ವಿರೇಶನಲ್ಲಿ ಅದ್ಭುತ ಪ್ರತಿಭೆ ಇದೆ. ಸರ್ಕಾರಿ ಚಿತ್ರಕಲಾ ಕಾಲೇಜಿಗೆ ಸೇರಿಸಬೇಕಾದರೆ ಅವರ ಬಳಿ ಅರ್ಜಿ ಹಾಕಲು ಹಣವಿಲ್ಲ. ಇನ್ನು ಖಾಸಗಿ ಚಿತ್ರಕಲಾ ಕಾಲೇಜಿಗೆ ಸೇರಿಸುವುದಂತ ದೂರದ ಮಾತು. ಇನ್ನು ಪಿಯುಸಿ ಬಳಿಕ ಚಿತ್ರಕಲಾ ಡಿಪ್ಲೊಮಾ ಮಾಡಲು ಅವಕಾಶವಿದೆ. ಯಾರಾದರೂ ನೆರವು ನೀಡಿದರೆ ಆತನಿಗೆ ಉತ್ತಮ ಭವಿಷ್ಯವಿದೆ’ ಎನ್ನುತ್ತಾರೆ ಚಿತ್ರಕಲಾ ಶಿಕ್ಷಕ ಚಂದ್ರಶೇಖರ ತೂಗಾ. ‘ನಾನು 2010ರಲ್ಲಿ ವಡಗಾಂವ್ ಸರ್ಕಾರಿ ಶಾಲೆಗೆ ಚಿತ್ರಕಲಾ ಶಿಕ್ಷಕರಾಗಿ ಸೇವೆಗೆ ಸೇರಿಕೊಂಡೆ. ಇಲ್ಲಿಯ ತನಕ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರಕಲೆಯಲ್ಲಿ ಪ್ರತಿಭೆ ಮೆರೆದಿದ್ದಾರೆ. ಶೈಲು, ಶಾಮರಾವ, ಶಿವಬಸವ, ವಿವೇಕ, ಅಭಿಲಾಷ ಎಂಬ ವಿದ್ಯಾರ್ಥಿಗಳು ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ತಮ್ಮ ಕಲೆ ಪ್ರದರ್ಶಿಸಿದ್ದಾರೆ. ಅವರೆಲ್ಲರಿಗೂ ಬಡತನ ಮತ್ತು ಸೂಕ್ತ ಪ್ರೋತ್ಸಾಹ ಸಿಗದೆ ಕಾರಣ ಅವರ ಪ್ರತಿಭೆ ಅಲ್ಲಿಗೆ ಮೊಟುಕುಗೊಂಡಿದೆ’ ಎನ್ನುತ್ತಾರೆ ಅವರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲೂ ಅದ್ಭುತ ಕಲಾ ಪ್ರತಿಭೆ ಇದೆ. ಆದರೆ ಬಡತನ ಮತ್ತು ಸೂಕ್ತ ಪ್ರೋತ್ಸಾಹ ಕೊರತೆಯಿಂದ ಅವರು ಮುಂದೆ ಬರಲು ಆಗುತ್ತಿಲ್ಲ. – ಚಂದ್ರಶೇಖರ ತೂಗಾ, ಚಿತ್ರಕಲಾ ಶಿಕ್ಷಕರು, ವಡಗಾಂವ್ ಶಾಲೆ
author-ಮನ್ಮಥಪ್ಪ ಸ್ವಾಮಿ
courtsey:prajavani.net
https://www.prajavani.net/artculture/art/student-veeresh-art-663041.html