ಓದನ್ನು ಸಾರ್ಥಕಗೊಳಿಸಿದ ಕೃತಿಗಳು ವರ್ಷಪೂರ್ತಿ ಓದಿದ ಪುಸ್ತಕಗಳ ಲೆಕ್ಕ ಹಾಕುವುದು ಅಷ್ಟು ಸುಲಭ ಸಾಧ್ಯವಲ್ಲವಾದರೂ ತಮ್ಮದೇ ಅನನ್ಯತೆಯಿಂದ ಕೆಲವು ಕೃತಿಗಳು ಮನಸಿನಲ್ಲಿ ಶಾಶ್ವತವಾಗಿ ಅಚ್ಚಳಿಯದೇ ಉಳಿದುಕೊಂಡು ಬಿಡುತ್ತವೆ. ಒಂದು ಸೃಜನಶೀಲ ಕೃತಿ ನಮ್ಮ ಆಳವನ್ನು ಇನ್ನಿಲ್ಲದಂತೆ ಕಲಕಿ ತಲ್ಲಣಿಸುವ ಹಾಗೆ ಮಾಡಬಹುದು, ಅಲ್ಲಿನ ಕಲ್ಪಿತ, ವಾಸ್ತವ ಬದುಕು ಬೆಚ್ಚಿ ಬೀಳಿಸಬಹುದು, ಜಗವ ಮರೆಸಿ ಎದೆಯೊಳಗೆ ಹುಣ್ಣಿಮೆ ಬೆಳದಿಂಗಳು ಸುರಿಸಬಹುದು, ಪ್ರಜ್ಞೆಯನ್ನು ತಿದ್ದಿ ವಿಸ್ತರಿಸಬಹುದು. ಆಗ ಮಾತ್ರವೇ ಕೃತಿ ಶ್ರೇಷ್ಠವಾಗುವುದು. ನನ್ನ ಅನುದಿನದ ಒತ್ತಡದಲ್ಲೂ ಇಂತಹ ಹತ್ತಾರು ಕೃತಿಗಳು ಈ ವರ್ಷದ ಓದನ್ನು ಸಾರ್ಥಕ್ಯಗೊಳಿಸಿವೆ. ಓ.ಎಲ್.ನಾಗಭೂಷಣ ಸ್ವಾಮಿ ಅವರು ಅನುವಾದಿಸಿದ ಒರ್ಹಾನ್ ಪಮುಕ್‌ನ ‘ಮುಗ್ಧ-ಪ್ರಬುದ್ಧ’ ಕೃತಿ ಅದು ಒಳಗೊಂಡ ವಸ್ತು ವೈವಿಧ್ಯತೆಯಿಂದಲೇ ನಮ್ಮನ್ನು ಹಿಡಿದು ನಿಲ್ಲಿಸುತ್ತದೆ. ಕಾದಂಬರಿ ಓದುವಾಗ ಬರೆಯುವಾಗ ನಮಗೇನಾಗುತ್ತದೆ ಎಂಬುದನ್ನು ಪಮುಕ್ ಸೊಗಸಾಗಿ ಕಟ್ಟಿಕೊಟ್ಟಿದ್ದಾನೆ. ಕಾದಂಬರಿಕಾರ ಬರೆಯುವಾಗ ವಿಷಯಗಳನ್ನು ಎಲ್ಲಿಂದ ಮೊಗೆದುಕೊಳ್ಳುತ್ತಾನೆ? ಅದನ್ನು ಹೇಗೆ ಕಲಾತ್ಮಕಗೊಳಿಸುತ್ತಾನೆ? ಓದುವಾಗ ನಮಗೇನಾಗುತ್ತದೆ ಎಂಬ ಹತ್ತೆಂಟು ಸಂಗತಿಗಳನ್ನು ಶೋಧಿಸುವ ಈ ಕೃತಿ ಅಪರೂಪದ್ದು. ‘ನೇರಳೆ ಮರ’ ಕೇಶವ ಮಳಗಿಯವರ ಕಥೆಗಾರ ಕಂಡ ರೂಪಕ ಲೋಕದ ಕಥನ. ಪ್ರತಿ ಸಾಲುಗಳಲ್ಲೂ ಕಾವ್ಯ ಜಿನುಗಿ ಚಿತ್ತ ಚಕಿತಗೊಳಿಸುತ್ತದೆ. ನಿಜ ಬದುಕನ್ನು ಕಾವ್ಯವಾಗಿಸೋದು ಅಥವಾ ಯಾವುದೇ ಪ್ರಕಾರದ ಬರಹವಾಗಿಸೋದು ಸವಾಲಿನ ಕೆಲಸ. ಮಳಗಿಯವರು ಈ ಕೃತಿಯ ಮೂಲಕ ತಾಜಾ ಅನ್ನಿಸುವ ಬರಹದ ಮಾದರಿಯೊಂದನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಬಗೆಬಗೆಯ ಕಥನಗಳನ್ನು ಓದುತ್ತಲೇ ಮನಸ್ಸು ವಿಚಿತ್ರ ಸುಖದಲ್ಲಿ ಅದ್ದಿ ಹೋಗುತ್ತದೆ. ಸಂಯಮ ಮತ್ತು ಖಚಿತತೆ ನಟರಾಜ್ ಹುಳಿಯಾರ್ ಅವರ ಬರವಣಿಗೆಯ ಗುಣ. ‘ಕಾಮನ ಹುಣ್ಣಿಮೆ’ ಕಾದಂಬರಿಯಲ್ಲೂ ಅದು ಎದ್ದು ಕಾಣುತ್ತದೆ. ನಾಡು ಕಂಡ, ಕೇಳಿದ ಜೀವಂತ ವ್ಯಕ್ತಿಗಳನ್ನು ಪಾತ್ರಗಳಾಗಿಸುವುದು ಬಲುಕಷ್ಟ. ಹುಳಿಯಾರ್ ಅವರ ಬರವಣಿಗೆಯ ಕುಶಲತೆಯಲ್ಲಿ ಅದು ಸಾಧ್ಯವಾಗಿದೆ. ಗ್ರಾಮ ಬದುಕಿನ ಚೆಲವು, ಅದರ ಒಲವು, ಗಟ್ಟಿಗಿತ್ತಿ ಸ್ತ್ರೀ ಪಾತ್ರಗಳು, ಚನ್ನಪಟ್ಟಣದ ಗೊಂಬೆ, ಪ್ರೇಮ-ಕಾಮದ ವಿವರಗಳು, ಇಡೀ ಊರನ್ನೇ ಸಮುದಾಯದಂತೆ ಚಿತ್ರಿಸಿದ ಬಗೆ ಗಮನ ಸೆಳೆಯುತ್ತದೆ. ಮಾನವೀಯತೆ ಎಂಬುದು ಕಾದಂಬರಿಯ ತುಂಬಾ ಅಂತರ್ ಪ್ರವಾಹದಂತೆ ಹರಿದಿದೆ. ‘ಲಖನೌ ಹುಡುಗ’ ಔಟ್‌ಲುಕ್ ಪತ್ರಿಕೆಯ ಸಂಪಾದಕನಾಗಿದ್ದ ವಿನೋದ್ ಮೆಹ್ತಾ ಅವರ ಬದುಕಿನ ಕಥನ. ಇದನ್ನು ಶಶಿ ಸಂಪಳ್ಳಿ ಹಾಗೂ ಸತೀಶ್ ಜಿ.ಟಿ. ಕನ್ನಡಕ್ಕೆ ತಂದಿದ್ದಾರೆ. ಮಾನವೀಯ ಕಣ್ಣು, ಅಂತಃಕರಣದ ಹೃದಯ ಕಳೆದುಕೊಳ್ಳುತ್ತಿರುವ ಈ ಹೊತ್ತಿನ ಪತ್ರಿಕೋದ್ಯಮಕ್ಕೆ ವಿನೋದ್ ಮೆಹ್ತಾ ಅಂತಹವರು ಮದ್ದಾಗಬಲ್ಲರು. ಬಹಳ ಸುಲಭವಾಗಿ ಅಧಿಕಾರ, ಅಂತಸ್ತು, ಹಣ ಸಂಪಾದಿಸಬಹುದಾಗಿದ್ದ ಮೆಹ್ತಾ ವೃತ್ತಿಪರತೆಗೆ ಬದ್ಧವಾಗಿದ್ದರು. ಅವರು ಖರೆ ಸಂಪಾದಕರ ಸಂಪಾದಕ. ಮೆಹ್ತಾ ಅವರ ಪತ್ರಿಕೋದ್ಯಮ ಹೊಸ ತಲೆಮಾರಿನ ಪತ್ರಕರ್ತರ ಭ್ರಮೆ ಕಳಚುತ್ತದೆ ಮತ್ತು ಪತ್ರಿಕೋದ್ಯಮ ಮಾಡಬೇಕಾದ ನಿಜದ ಹಾದಿ ತೋರುತ್ತದೆ. ಚನ್ನಪ್ಪ ಕಟ್ಟಿಯವರ ‘ಏಕತಾರಿ’ ಅದರ ಕಥನಗಾರಿಕೆಯಿಂದ ಇಷ್ಟವಾಯಿತು. ಯಾವ ಅವಸರವೂ ಇಲ್ಲದೆ ನಿಸೂರಾಗಿ ಸಾಗುವ ಇಲ್ಲಿನ ಕತೆಗಳ ಜಗತ್ತು ಬೆರಗುಗೊಳಿಸುತ್ತದೆ. ಲೋಕದ ಕಣ್ಣಿಗೆ ಕ್ಷುದ್ರವೆನ್ನಬಹುದಾದ ವಸ್ತು, ಹುಲುಮಾನವರು, ಪರಿಸರ, ಉತ್ತರ ಕರ್ನಾಟಕದ ಜವಾರಿತನ ಇಲ್ಲಿ ಕತೆಗಳಾಗಿ ಅರಳಿವೆ. ಕತೆಗಳ ಮಾಂತ್ರಿಕತೆ ಓದುಗನನ್ನು ಮೈ ಮರೆಸುತ್ತದೆ. ಈ ವರ್ಷ ನೀವು ಓದಿದ ಪುಸ್ತಕಗಳಲ್ಲಿ ನಿಮಗೆ ಖುಷಿ ಕೊಟ್ಟ ಐದು ಕೃತಿಗಳು ಯಾವುವು? ಸಾಹಿತ್ಯ ವಿಹಾರದಲ್ಲಿ ತೊಡಗಿದ ಹಿರಿ–ಕಿರಿಯರ ಮುಂದೆ ಈ ಪ್ರಶ್ನೆ ಇಟ್ಟಾಗ ಅವರು ಕೊಟ್ಟ ಪಟ್ಟಿ ಇಲ್ಲಿದೆ. ಮೊದಲೇ ಸ್ಪಷ್ಟಪಡಿಸಿದಂತೆ ಇದೇನು ಪುಸ್ತಕಗಳ ರ‍್ಯಾಂಕಿಂಗ್ ಅಲ್ಲ. ಆಯಾ ಓದುಗರಿಗೆ ಖುಷಿಕೊಟ್ಟ ಕೃತಿಗಳ ಪಟ್ಟಿಯಷ್ಟೆ.
author- ಟಿ.ಎಸ್.ಗೊರವರ
courtsey:prajavani.net
https://www.prajavani.net/artculture/article-features/t-s-goravara-write-up-on-good-books-691697.html