ವರ್ಣವ್ಯವಸ್ಥೆಗಾಗಿ ಎಲ್ಲ ಮೂಲಗಳ ಅವಲೋಕನ
ಕುಲವೃತ್ತಿಯನ್ನೇ ಹೆಚ್ಚಾಗಿ ಮಾನ್ಯ ಮಾಡುತ್ತಿದ್ದ ಕಾಲದಲ್ಲಿ, ಹಲವರು ಅಭಿರುಚಿಯನ್ನನುಸರಿಸಿ ಅನ್ಯವೃತ್ತಿಯನ್ನು ಹಿಡಿದು ಸಾಗುವುದೂ ನಡೆಯುತ್ತಿತ್ತು ಎನ್ನುವುದನ್ನು ಕೆಲವು ಪುರಾಣಕಾಲದ ಉದಾಹರಣೆಗಳ ಮೂಲಕ ನೋಡುತ್ತಿದ್ದೆವು.
ವರ್ಣವ್ಯವಸ್ಥೆಯ ಬಗ್ಗೆ ವಿಶ್ಲೇಶಣೆ ಮಾಡಬೇಕಾದರೆ ನಾವು ಪ್ರಾಚೀನತಮ ಉಲ್ಲೇಖಗಳನ್ನು ಅವಲೋಕಿಸುವುದು ಅನಿವಾರ್ಯ. ಅರ್ವಾಚೀನ ಕಾಲದಲ್ಲಿ ಪರಕೀಯರು ಅವರವರ ಮೂಗಿನ ನೇರಕ್ಕೆ ಮಾಡಿಟ್ಟ ‘ದಾಖಲೆ’ಗಳನ್ನು ‘ಪುಟ ತಿರುವಿ’ದರೆ ಏನು ತಾನೇ ಅರ್ಥವಾದೀತು? ಪುರಾಣಗಳಲ್ಲಿರುವುದೆಲ್ಲವೂ ‘ಇತಿಹಾಸ’ ಎಂದು ಹಠ ಹಿಡಿಯುವುದು ಹೇಗೆ ಅಸಮಂಜಸವೋ, ಅಂತೆಯೇ ಅಲ್ಲಿನ ಎಲ್ಲವೂ ‘ಕಾಲ್ಪನಿಕ’, ‘ಅರ್ಥಹೀನ’ ಎಂದು ತಳ್ಳಿಹಾಕುವುದೂ ಮೂರ್ಖತನವೇ! ಪುರಾಣಗಳ ಸ್ವರೂಪ ಉದ್ದೇಶಗಳು ಸಂಕೀರ್ಣವಾಗಿವೆ. ಪ್ರಾಚೀನ ಇತಿಹಾಸ ವೃತ್ತಾಂತಗಳು, ಸಾಂಕೇತಿಕ ಕಥೆಗಳು, ಸ್ತುತಿ-ಮಂತ್ರ-ಉಪಾಸನಾ ವಿಧಾನಗಳು, ತತ್ವಗರ್ಭಿತ ದೇವತಾವರ್ಣನೆಗಳು, ನೀತಿಬೋಧಕ ಸಂಭಾಷಣೆಗಳು, ಸ್ವಾರಸ್ಯಕರ ಕಾವ್ಯವರ್ಣನೆಗಳು ಮುಂತಾದವನ್ನು ಹೆಣೆದು, ವರ್ಣಮಯವಾದ ವಿಚಾರ-ಚಿತ್ತಾರವನ್ನು ನಮ್ಮ ಮುಂದಿರಿಸುತ್ತವೆ. ಅದರಲ್ಲಿ ರಂಜನೆಯೊಂದಿಗೆ, ಕಾವ್ಯ-ಕಲಾ-ಸಾಮಗ್ರಿ, ಸರಳ ಬೋಧೆ, ಭಕ್ತಿಗೆ ಪುಷ್ಟಿ, ತತ್ವಚಿಂತನೆಗೆ ಆಯಾಮವನ್ನು ತೆರೆದಿಡುವುದೂ ಪುರಾಣಗಳ ಉದ್ದೇಶಗಳಲ್ಲಿ ಕೆಲವು. ಹಾಗಾಗಿ ಅವು ಪಂಡಿತ-ಪಾಮರರೆಲ್ಲರಲ್ಲೂ ಜನಪ್ರಿಯವಾಗಿ ಉಳಿದಿವೆ.
ಭಾರತೀಯ ಮೂಲದ ಪುರಾಣಕಾವ್ಯಾದಿಗಳ ಸಾಹಿತ್ಯವನ್ನೆಲ್ಲ ‘ಮಿಥಾಲಜಿ’ ಎಂದು ಹೆಸರಿಸಿ (ಮಿಥ್ ಎಂದರೆ ಸುಳ್ಳು) ಅವುಗಳನ್ನು ‘ಕಾಲ್ಪನಿಕ’ ಅಥವಾ ‘ಪ್ರಯೋಜನಾತೀತ’ ಎಂದೆಲ್ಲ ‘ವಿಶ್ಲೇಷಿಸಿ’, ಅಧ್ಯಯನದ ಪಠ್ಯದಿಂದಲೇ ದೂರವಿರಿಸಿರುವ ಆಂಗ್ಲಮೂಲದ ಈ ಶಿಕ್ಷಣಪದ್ಧತಿಯ ಪ್ರಭಾವದಿಂದಾಗಿ ನಾವು ಪುರಾಣ-ಕಾವ್ಯಾದಿಗಳ ವಿಷಯದಲ್ಲಿ ಮನದ ಬಾಗಿಲನ್ನು ಮುಚ್ಚಿಕೊಳ್ಳುವ ‘ತರಬೇತಿ’ಗೆ ಒಳಪಟ್ಟಿದ್ದೇವೆ! ಆದರೆ ತೆರೆದ ಮನದಿಂದ ಎಲ್ಲ ಮೂಲಗಳನ್ನೂ ಅವಲೋಕಿಸಿದರೆ ಮಾತ್ರವೇ ಅಧ್ಯಯನ ಪ್ರಾಮಾಣಿಕವೆನಿಸೀತಲ್ಲವೆ?
ಇರಲಿ, ವರ್ಣವ್ಯವಸ್ಥೆಯು ‘ಬಿಗಿ’ಯಾಗಿದ್ದರೂ ಅದು ಇಂದು ನಾವು ಅರ್ಥೈಸುವಂತಹ ಪರಿಯ ‘ಜಾತಿಯ ಹಠ’ವಾಗಿರಲಿಲ್ಲ ಎನ್ನುವುದಕ್ಕೆ ವೇದಪುರಾಣಾದಿಗಳ ಕೆಲವಾರು ಉದಾಹರಣೆಗಳಲ್ಲಿ ನೋಡಿದ್ದೇವೆ. ಇನ್ನು ಮುಂದೆ ಇತಿಹಾಸದ ಉದಾಹರಣೆಗಳನ್ನೂ ಸ್ವಲ್ಪ ಅವಲೋಕಿಸೋಣ. ‘ಇತಿಹಾಸದ ಅಧ್ಯಯನ’ ಎಂದರೆ ‘ನಡೆದದ್ದನ್ನು ಹಿಂಬಾಲಿಸಿಕೊಂಡು ಹೋಗಿ ಅರಿಯುವುದು’ ಎಂದರ್ಥವೇ ಹೊರತು ಹಿಂದೆ ಆಂಗ್ಲರಿಂದಲೂ, ಇಂದು ವಾಮರಿಂದಲೂ ಅವರ ಪೋಷಕರ ನಿರ್ದೇಶದಂತೆಯೂ ‘ತಯಾರಿಸಲಾದ’ ಇತಿಹಾಸವನ್ನಲ್ಲ. ಬಣ್ಣದ ಮುಖಪುಟ, ಬೆರಗಿನ ಆಂಗ್ಲಭಾಷೆ, ಒಂದಲ್ಲ ಒಂದು ಪ್ರಕಾರದ ನಿರಂತರ ಧರ್ಮನಿಂದನೆ, ಸಮಾಜದಲ್ಲಿ ದೋಷವನ್ನೇ ತೋರುವುದು, ತಾರತಮ್ಯವನ್ನೇ ಹಿಡಿದು ವಿಶ್ಲೇಷಿಸುವುದು, ಮನಗಳನ್ನು ಕಲಕಿಸಿ ರೋಷವೆಬ್ಬಿಸಲೆಂದೇ ಸೃಷ್ಟಿಯಾದ ಸುಳ್ಳನ್ನು ಅಥವಾ ತಿರುಚಲಾದ ಸತ್ಯದ ಕಥೆಗಳನ್ನೇ ಬಿಂಬಿಸುವ ‘‘ಕೃತಕ ಇತಿಹಾಸ’’ವನ್ನೇ ಇಂದು ಕೃತಕವಾಗಿ ಸರ್ವತ್ರ ವ್ಯವಸ್ಥಿತವಾಗಿ ಪ್ರಸಿದ್ಧಗೊಳಿಸಲಾಗಿದೆ. ಪ್ಲಾಸ್ಟಿಕ್ ಹೂವಿನ ಬೆರಗಿನ ಮುಂದೆ ನಿಜವಾದ ಹೂವೇ ಒಮ್ಮೊಮ್ಮೆ ಮಂಕಾಗಿ ಕಾಣಬರುವಂತೆ, ಪೂರ್ವಗ್ರಹಪೀಡಿತರ ‘ಸುಳ್ಳು ವಿಶ್ಲೇಷಣೆ’ಗಳ ಆರ್ಭಟಕ್ಕೆ ಹೆದರಿ ವರ್ಣವ್ಯವಸ್ಥೆಯ ನಿಜವಾದ ಸ್ವರೋಪೋದ್ದೇಶಗಳು ಕತ್ತಲೆಯ ಮೂಲೆ ಸೇರಿವೆ! ಮರೆಯಲ್ಲಿ ನಿಂತ ಅಂತಹ ಇತಿಹಾಸದ ಸತ್ಯಗಳನ್ನು ಇಣುಕುವ ಸಣ್ಣ ಪ್ರಯತ್ನವನ್ನು ಮಾಡೋಣ.
ಶಾಕ್ಯಕುಲದ ರಾಜಕುಮಾರನಾಗಿ ಹುಟ್ಟಿದ ಕ್ಷತ್ರಿಯವೀರ ಸಿದ್ಧಾರ್ಥನು, ವಿರಕ್ತಿಯನ್ನು ಹೊಂದಿ ರಾಜ್ಯವನ್ನು ಬಿಟ್ಟು ಹೊರಟ. ಬ್ರಾಹ್ಮವೃತ್ತಿಯಲ್ಲಿ ನಿಂತು ತಪಗೈದು ‘ಭಗವಾನ್ ಬುದ್ಧ’ನಾಗಿ ಅರಳಿದ. ಕ್ಷಾತ್ರಕರ್ತವ್ಯಗಳನ್ನು ಬಿಟ್ಟಿದ್ದಕ್ಕಾಗಿ ಆತನನ್ನು ಸಮಾಜವು ಮೊದಲು ಸ್ವಲ್ಪ ಆಡಿಕೊಂಡಿತಾದರೂ ಕಾಲಾಂತರದಲ್ಲಿ ‘ವೈರಾಗ್ಯಚಕ್ರವರ್ತೀ’ ಎಂದು ಪೂಜಿಸಿತು! ವೇದಭಿನ್ನವಾದ ನವಪಂಥವನ್ನೇ ಹುಟ್ಟುಹಾಕಿದಾಗ, ಸಮಾಜವು ಅವನನ್ನು ‘ವಿಷ್ಣುವಿನ ನವಮಾವತಾರ’ವೆಂದೇ ಶ್ಲಾಘಿಸಿತು! ವರ್ಣವ್ಯವಸ್ಥೆಯು ವಿಕಾಸಕ್ಕೆ ಹೇಗೆ ಆಸ್ಪದವಿತ್ತಿತ್ತು ಎನ್ನುವುದು ಇಲ್ಲಿ ಗಮನೀಯ.
ಕ್ಷತ್ರಿಯವೀರ ಭಗವಾನ್ ಋಷಭದೇವನು ಭೋಗವಿರಕ್ತನಾಗಿ ಎಲ್ಲವನ್ನೂ ಬಿಟ್ಟು ನಿರ್ವಾಣಪಥವನ್ನು ತುಳಿದ, ಅವೈದಿಕ ಸ್ವರೂಪದ ಜೈನಮತವನ್ನು ಪ್ರಾರಂಭಿಸಿದ. ಆತನ ವೃತ್ತಾಂತವನ್ನು ಭಾಗವತಪುರಾಣವೂ ಸೇರಿದಂತೆ ಹಲವು ದಾಖಲೆಗಳು ಸಾರುತ್ತವೆ. ಭಾರತೀಯರು ಆತನನ್ನು ‘ವಿಷ್ಣುವಿನ ಅವತಾರ’ವೆಂದು ಪೂಜಿಸಿತು! ವರ್ಣವ್ಯವಸ್ಥೆಯ ವಿಕಾಸಾನುಕೂಲಕ್ಕೆ ಇದೂ ಕನ್ನಡಿ ಹಿಡಿದಂತಿದೆ.
ಎಲ್ಲ ಕಾಲಘಟ್ಟಗಳಲ್ಲೂ ಹೀಗೆಯೇ, ವೇದಭಿನ್ನವೆನಿಸುವ ಇಂತಹ ಪಂಥಗಳ ಉಗಮವಾಗುತ್ತಲೇ, ಒಂದಷ್ಟು ಕಾಲ ವೈದಿಕರೂ ಅವೈದಿಕರೂ ವಾಗ್ಯುದ್ಧಗಳನ್ನು ಮಾಡಿದರೂ, ಕಾಲಾಂತರದಲ್ಲಿ ಸಹಬಾಳ್ವೆಯನ್ನು ರೂಢಿಸಿಕೊಂಡೇಬಿಟ್ಟರು ಎನ್ನುವುದೂ ಗಮನೀಯ! ಯೋಗ್ಯರಾದವರು ಸ್ವವೃತ್ತಿಗಳನ್ನು ಬಿಟ್ಟು ನವಪಥವನ್ನರಸಿ ಹೊರಟಾಗ, ಸಮಾಜವು ಅವರನ್ನು ಕ್ರಮೇಣ ಸ್ವೀಕರಿಸಿದೆ. ಅಷ್ಟೇ ಅಲ್ಲ, ನೂತನ ಆಯಾಮವೆಂದು ಅಂಗೀಕರಿಸಿ ಪೋಷಿಸಿಕೊಂಡಿದೆ ಕೂಡ! ಇಲ್ಲದಿದ್ದಲ್ಲಿ ಈ ನಾಡಿನಲ್ಲಿ ಇಷ್ಟೆಲ್ಲ ಬಗೆಯ ಮತ-ಪಥಗಳು ವೃತ್ತಿಗಳು ಪರಸ್ಪರರಲ್ಲಿ ಸಾಮ್ಯ-ವೈಷಮ್ಯಗಳನ್ನು ಇರಿಸಿಕೊಳ್ಳುತ್ತಲೇ ಸಹಸ್ರಮಾನಗಳಿಂದ ಸಹಬಾಳ್ವೆ ನಡೆಸಲು ಸಾಧ್ಯವೇ ಆಗುತ್ತಿರಲಿಲ್ಲ!
ಇನ್ನೂ ಹೆಚ್ಚಿನ ಪ್ರಾಚೀನ-ಅರ್ವಾಚೀನ ಐತಿಹಾಸಿಕ ಉದಾಹರಣೆಗಳನ್ನು ಮುಂದೆ ನೋಡೋಣ.
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ