ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾಗಿ ಹಲವು ಪ್ರಥಮಗಳಿಗೆ ಕಾರಣರಾದ ಮುತ್ಸದಿ ವಾಜಪೇಯಿಯೊಳಗೆ ಮಿಡಿಯುತ್ತಿದ್ದ ಕವಿಮನಸ್ಸು ಹೇಗಿತ್ತು? ವಾಜಪೇಯಿ ಅವರ ಜೀವನ ಚರಿತ್ರೆ;ಹಾರ್ ನಹಿ ಮಾನೂಂಗಾ’ ಪುಸ್ತಕವನ್ನು ‘ಸೋಲೊಪ್ಪಲಾರೆ’ ಶೀರ್ಷಿಕೆಯಡಿ ಕನ್ನಡಕ್ಕೆ ತಂದ ಹಿಂದಿ ಶಿಕ್ಷಕ ಶೇಷಾದ್ರಿ ಹೊಳವನಹಳ್ಳಿ ಈ ಲೇಖನದಲ್ಲಿ ಉತ್ತರ ಹುಡುಕಲು ಯತ್ನಿಸಿದ್ದಾರೆ. ಅಂದ ಹಾಗೆ ಇಂದು ವಾಜಪೇಯಿ ಅವರ ಪ್ರಥಮ ಪುಣ್ಯಸ್ಮರಣೆ.‘ವಾಜಪೇಯಿ ;ಒಬ್ಬ ವಿಚಾರವಂತ ಲೇಖಕ, ;ಸಂವೇದನಾಶೀಲ ಕವಿ ಮತ್ತು ಸೋಲರಿಯದ ವಾಗ್ಮಿ, ಇವೆಲ್ಲಕ್ಕಿಂತ ಹೆಚ್ಚಾಗಿ ಓರ್ವ ಉತ್ತಮ ಮನುಷ್ಯ. ಮನುಷ್ಯತ್ವದ ಥರ್ಮಾಮೀಟರ್ನಲ್ಲಿ ಅತ್ಯಂತ ವಿಸ್ತಾರದ ಡಿಗ್ರಿವರೆಗೆ ಅವರ ಹೃದಯದ ಮಟ್ಟ ತಲುಪುತ್ತದೆ. ಅವರು ಮೊದಲು ಕವಿ, ಆಮೇಲೆ ರಾಜಕಾರಣಿ. ಅವರ ಆಚಾರ ವಿಚಾರ, ಮಾತುಕತೆ ಇತರೆ ವ್ಯವಹಾರಗಳು ಎಲ್ಲವೂ ಒಬ್ಬ ಕವಿಯಂತಿವೆ. ರಾಜಕಾರಣಿಯಂತಿಲ್ಲ’ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರೂ ಮತ್ತು ಉತ್ತರ ಪ್ರದೇಶದ ರಾಜ್ಯಪಾಲರೂ ಆಗಿದ್ದ ವಿದ್ವಾನ್ ಪ್ರೊಫೆಸರ್ ವಿಷ್ಣುಕಾಂತಶಾಸ್ತ್ರಿ ಅವರು ವಾಜಪೇಯಿ ಅವರ ಬಗ್ಗೆ ನೀಡಿರುವ ಈ ಹೇಳಕೆಯನ್ನು ನಾನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ವಿಷ್ಣುಕಾಂತ ಶಾಸ್ತ್ರಿ ಅವರ ಮಾತು ಇಷ್ಟಕ್ಕೇ ನಿಲ್ಲುವುದಿಲ್ಲ. ‘ವಾಜಪೇಯಿ ಅವರು ತಮ್ಮ ಸ್ವಚ್ಛ ಹಾಗೂ ನಿಷ್ಠೆಯೇ ಪ್ರಧಾನವಾದ ವಿಚಾರಧಾರೆಯಿಂದ ಉಪಮೇಯದಿಂದ ಉಪಮಾನವಾಗಿ ಹೋಗಿದ್ದಾರೆ’ ಎಂದೂ ಅವರು ಉದ್ಗರಿಸುತ್ತಾರೆ. ಹಿರಿಯ ನಾಯಕರಾದ ದೀನಾನಾಥ ಮಿಶ್ರ ಅವರ ಈ ಮಾತುಗಳನ್ನೂ ನಾನು ಮೆಲುಕು ಹಾಕುತ್ತಿರುತ್ತೇನೆ. ಅವರ ಪ್ರಕಾರ, ‘ವಾಜಪೇಯಿ ಅರ್ಧ ರಾಜಕಾರಣಿ, ಅರ್ಧ ಕವಿ. ಮತ್ತು ಇನ್ನರ್ಧ ಸರ್ವಮಾನ್ಯ ವ್ಯಕ್ತಿ. ನ್ಯಾಯವಾಗಿ ಮೂರು ಅಂಶಗಳು ಒಂದಾಗಬೇಕಿತ್ತು. ವಾಜಪೇಯಿಯವರ ವಿಚಾರದಲ್ಲಿ ಇವೆಲ್ಲ ಸೇರಿದರೂ ಅರ್ಧವೇ ಕಾಣುತ್ತದೆ. ಈ ಅರೆಬರೆಯೇ ಅವರ ಜೀವನದ ಸತ್ಯ. ಅದೇ ಒಂದು ಬಂಡವಾಳವಾಗಿದೆ. ಅವರ ಅರೆಬರೆಯೆದುರು ಅವರ ಪೂರ್ಣತ್ವವೂ ಕುಬ್ಜವಾಗಿ ಕಾಣುತ್ತದೆ ಎನ್ನುವುದು ಬೇರೆ ಮಾತು. ಆದರೆ ಅವರ ಅರ್ಧತನದ ಅನುಭವವು ಅಪೂರ್ಣತೆಯ ಗೊಂದಲವನ್ನು ಕಾಯ್ದುಕೊಳ್ಳುತ್ತದೆ. ಅವರು ತಮ್ಮ ಅಪೂರ್ಣತೆಯ ಬಹಳ ವಿನಮ್ರ ತೋರ್ಪಡಿಕೆಯ ಯಾವುದೇ ಸಂದರ್ಭವನ್ನು ಬಹುಶಃ ಎಂದೂ ಕೈಯಿಂದ ಜಾರಿ ಹೋಗಲು ಬಿಟ್ಟಿಲ್ಲ. ಇದು ವಿನಯವಷ್ಟೇ ಅಲ್ಲ ಅಭಿವ್ಯಕ್ತಿಯ ಪ್ರಾಮಾಣಿಕತೆಯೂ ಆಗಿದೆ’. ತಂದೆಯೂ ಕವಿ ಕಾವ್ಯ ಕಲೆಯು ವಾಜಪೇಯಿಯವರಿಗೆ ವಂಶಪಾರಂಪರ್ಯವಾಗಿ ಬಂದಿತ್ತು. ಅವರ ತಂದೆ ಪಂಡಿತ ಕೃಷ್ಣ ಬಿಹಾರಿ ವಾಜಪೇಯಿ ಗ್ವಾಲಿಯರ್ ಸಂಸ್ಥಾನದ ಹೆಸರಾಂತ ಕವಿಗಳಲ್ಲಿ ಒಬ್ಬರಾಗಿದ್ದರು. ಅವರು ಬ್ರಜ ಭಾಷೆ ಹಾಗೂ ಖಡೀಬೋಲಿ (ಇವತ್ತಿನ ಹಿಂದಿ) ಎರಡೂ ಭಾಷೆಗಳಲ್ಲಿ ಬರೆಯುತ್ತಿದ್ದರು. ‘ಈಶ್ವರ’ ಎಂಬ ಅವರ ರಚನೆಯನ್ನು ಸಂಸ್ಥಾನದ ಎಲ್ಲ ಸ್ಕೂಲುಗಳಲ್ಲಿ ಪ್ರಾರ್ಥನೆಯ ರೂಪದಲ್ಲಿ ಪ್ರತಿನಿತ್ಯ ಹಾಡಲಾಗುತ್ತಿತ್ತು. ಸ್ವತಃ ಅಟಲ್ ಬಿಹಾರಿ ವಾಜಪೇಯಿಯವರೇ ಒಂದು ಇಂಟರ್ವ್ಯೂನಲ್ಲಿ ತಮ್ಮ ತಂದೆಯ ಬಗ್ಗೆ ಪ್ರಸ್ತಾಪಿಸುತ್ತ ಹೀಗೆ ಹೇಳಿದ್ದರು, ‘ಆಗೆಲ್ಲ ಕವಿ ಸಮ್ಮೇಳನಗಳ ಭರಾಟೆಯಿತ್ತು. ಆ ಸಮ್ಮೇಳನಗಳಲ್ಲಿ ಹಾಸ್ಯ–ವಿನೋದಗಳದೇ ಪ್ರಾಬಲ್ಯ. ಒಗಟು ಬಿಡಿಸುವವರಿಗೆ ಅಂತ್ಯದಲ್ಲಿ ಪುರಸ್ಕಾರವಿರುತ್ತಿತ್ತು. ಒಮ್ಮೆ ಕವಿಗಳಿಗೆ ತಿಹರೀ ಬೆಡಗು ಬಿಡಿಸುವ ಸವಾಲು ಎದುರಾಯಿತು. ಆಗ ನಮ್ಮ ತಂದೆ ಕೃಷ್ಣ ಬಿಹಾರಿಯವರು ಒಗಟಿನ ರೂಪದ ಕವಿತೆ ರಚಿಸಿ ಹಾಡಿದರು. ಅಟಲ್ ಬಿಹಾರಿ ವಾಜಪೇಯಿ ಜನಿಸಿದ್ದು ಗ್ವಾಲಿಯರ್ನಲ್ಲಿಯೇ ಆದರೂ ಅವರ ಬಾಲ್ಯದ ನೆನಪುಗಳಲ್ಲಿ ಬಟೇಶ್ವರ ದಟ್ಟೈಸಿದೆ. ಶ್ರೀರಾಮನ ತಮ್ಮ ಶತ್ರುಘ್ನ ನಿರ್ಮಿಸಿದ ಎನ್ನಲಾದ ಈ ಊರಿನಲ್ಲಿ ಯಮುನೆ ನಿಶ್ಚಲಭಾವದಿಂದ ಹರಿಯುತ್ತಾಳೆ. ಕೃಷ್ಣನ ಕಥೆಯೊಂದಿಗೂ ಬಟೇಶ್ವರಕ್ಕೆ ನಂಟು ಇದೆ;ಬಟೇಶ್ವರವನ್ನು ‘ಬೃಜದ ಕಾಶಿ’ ಎಂದು ಕರೆಯಲಾಗುತ್ತದೆ. ಇದೇ ಬಟೇಶ್ವರದಲ್ಲಿ ಸನಾತನ ವೈದಿಕ ಕಾನ್ಯಕುಬ್ಜ ಬ್ರಾಹ್ಮಣ ಕುಟುಂಬ ವಾಸಿಸುತ್ತಿತ್ತು. ವಾಜಪೇಯಿಯವರ ತಾತ ಪಂಡಿತ ಶ್ಯಾಮಲಾಲ್ ವಾಜಪೇಯಿ ಬಟೇಶ್ವರದಲ್ಲೇ ಇದ್ದರು. ಅವರು ಸಂಸ್ಕೃತದ ವಿದ್ವಾಂಸರಾಗಿದ್ದರು. ಆದರೆ ಅವರು ತಮ್ಮ ಮಗನಾದ ಕೃಷ್ಣ ಬಿಹಾರಿಗೆ ಗ್ವಾಲಿಯರ್ಗೆ ಹೋಗಿ ವಾಸಿಸಲು ಸಲಹೆ ಕೊಟ್ಟರು. ಗ್ವಾಲಿಯರ್ನಲ್ಲಿ ಅವರು ರಾಷ್ಟ್ರಪ್ರೇಮದ ಕವಿತೆಗಳನ್ನು ಬರೆಯತೊಡಗಿದರು. ಗ್ವಾಲಿಯರ್ನ ರಾಜದರ್ಬಾರಿನಲ್ಲಿಯೂ ಅವರಿಗೆ ಸಕಲ ಗೌರವಾದರಗಳಿದ್ದವು. ತಂದೆಯ ಜೊತೆ ಬಾಲಕ ಅಟಲರು ಕವಿ ಸಮ್ಮೇಳನಕ್ಕೆ ಹೋಗುತ್ತಿದ್ದರು. ಗ್ವಾಲಿಯರ್ನ ವಿಕ್ಟೋರಿಯಾ ಕೊಲಿಜಿಯೆಟ್ ಹೈಸ್ಕೂಲಿನಲ್ಲಿ ಅವರು 9ನೇ ತರಗತಿ ಓದುತ್ತಿದ್ದಾಗ ಕವಿತಾ ರಚನೆ ಮಾಡುತ್ತಿದ್ದರು. ಆಗ ಅವರು ರಚಿಸಿದ ಒಂದು ಕವಿತೆ .. ಕವಿ ಹಾಡೊಂದ ಆಲಿಸಿದನು ಆಲಿಸಿ ಕಣ್ತೆರೆದನು ನರನಾಡಿಯಲ್ಲೆಲ್ಲ ಜೀವನ ಝೇಂಕಾರ ಮಾಡಿತು ಅಂಗಾಂಗದಲೂ ಉತ್ಸಾಹ ಉಕ್ಕಿತು ಮಾನವನೇ ಒಡೆಯ ಮಾನವನೇ ಗುಲಾಮ ಯಾರು ಮಾಡಿದರೀ ನಿಯಮ..? ಯಾರದೀ ಆಜ್ಞೆ..? ಹುಟ್ಟಿರುವರೆಲ್ಲರೂ ಸ್ವಚ್ಛಂದವಾಗಿ ಎಲ್ಲರಿಗೂ ಇದೆ ಸಾವು ಅದೆಂಥಹುದು ಪಶುವಿನಂತೆ ಕಟ್ಟಿ ಹಾಕುವ ಈ ಬಂಧನ..? ಬಂದಿದೆ ನಮಗಿಂದು ಅಮಲಿನ ಮದಿರೆ ಕುಡಿದು ಹುಚ್ಚುತನ ಎಲ್ಲರಲು ಉಲ್ಲಾಸ ತುಂಬುವೆವು. ಜ್ವಾಲೆಗೆ ಸಿಲುಕಿ ಹೇ..ಕವಿ..ಸ್ವರಲಹರಿಯಿಂದ ನೀನು ಬೆಂಕಿಗೆ ಆಹುತಿಯಾಗು ಝಂಕೃತಗೊಳಿಸಿ ಹೃದಯ ತಂತಿ ವೇಗವಾಗಿ ದಹದಹಿಸು ವಾಜಪೇಯಿಯವರ ಕವಿತೆಗಳಲ್ಲಿ ಪರಿಪಕ್ವತೆ ಇತ್ತು. ಜನರ ಮನಸ್ಸನ್ನು ಸೆಳೆಯುತ್ತಿದ್ದವು. ಅವರ ಕವಿತೆಗಳಲ್ಲಿ ಕೇವಲ ರಸವಷ್ಟೇ ಇರಲಿಲ್ಲ. ಅವರ ಭಾಷಣಗಳೂ ಕೂಡ ಕವಿತೆಗಳಂತೆಯೇ ಇದ್ದವು. ಎಲ್ಲರೂ ಅವರ ಭಾಷಣ ಕೇಳಲು ಹೋಗುತ್ತಿದ್ದರು. ಎಂದು ಸೀಂಘಾಲರು ಹೇಳುತ್ತಿದ್ದರು. ನೆಹರೂ ಶ್ರದ್ಧಾಂಜಲಿ ಭಾಷಣ ಮೇ 1964ರಲ್ಲಿ ನೆಹರೂ ನಿಧನದ ನಂತರ ವಾಜಪೇಯಿ ಮಾಡಿದ ಶ್ರದ್ಧಾಂಜಲಿ ಭಾಷಣವವನ್ನು ದೇಶ ಇಂದಿಗೂ ಮರೆತಿಲ್ಲ. ವಾಜಪೇಯಿಯವರ ಕಾವ್ಯಮಯವಾದ ಶ್ರದ್ಧಾಂಜಲಿ ಭಾಷಣದ ನಂತರ ಇಡೀ ಸದನ ಭಾವುಕವಾಯಿತು. ಒಂದು ಕನಸು ಅರ್ಧದಲ್ಲೇ ಉಳಿಯಿತು ಒಂದು ಹಾಡು ಮೌನವಾಯಿತು ಮತ್ತು ಒಂದು ಜ್ವಾಲೆ ನಂದಿಹೋಯಿತು ಜಗತ್ತನ್ನೆ ಹಸಿವಿನಿಂದ, ಭಯದಿಂದ ಮುಕ್ತಿಗೊಳಿಸುವ ಕನಸು ಗುಲಾಬಿಯ ಗಂಧ ಮತ್ತು ಗೀತೆಯ ಜ್ಞಾನದಿಂದ ಕೂಡಿದ ಹಾಡು ಮತ್ತು ದಾರಿ ತೋರುವ ಜ್ವಾಲೆ. ಏನೂ ಉಳಿಯಲಿಲ್ಲ ಅವರು ಮುಂದುವರಿದು ಹೇಳತೊಡಗಿದರು… ‘ಇದು ಪರಿವಾರವೊಂದರ, ಸಮಾಜವೊಂದರ ಅಥವಾ ಪಾರ್ಟಿಯೊಂದರ ನಷ್ಟವಷ್ಟೇ ಅಲ್ಲ. ತನ್ನ ಪ್ರಿಯ ರಾಜಕುಮಾರ ನಿದ್ರಿಸಿದನೆಂದು ಭಾರತಾಂಬೆ ಶೋಕದಿಂದಿದ್ದಾಳೆ. ತನ್ನನ್ನು ಪೂಜಿಸುತ್ತಿದ್ದವನು ಹೊರಟು ಹೋದನೆಂದು ಮಾನವತೆ ಶೋಕದಲ್ಲಿದೆ. ಜಗದ್ವೇದಿಕೆಯ ಪ್ರಧಾನ ಕಲಾವಿದ ತನ್ನ ನಾಟಕ ಪ್ರದರ್ಶನ ಮುಗಿಸಿ ನಡೆದುಬಿಟ್ಟ. ಯಾರೂ ತುಂಬಲಾರರು ಅವನ ಜಾಗ’. ಕೇವಲ ಇಷ್ಟಕ್ಕೇ ವಾಜಪೇಯಿಯವರು ಸುಮ್ಮನಾಗಲಿಲ್ಲ… ‘ಹೊರಟು ಹೋಗಿದ್ದಾನೆ ನಾಯಕ. ಆದರಿಸುವವರು ಈಗಲೂ ಇದ್ದಾರೆ. ಸೂರ್ಯಾಸ್ತವಾಗಿಬಿಟ್ಟಿದೆ. ಆದರೆ ನಕ್ಷತ್ರಗಳ ಬೆಳಕಿನಲಿ ದಾರಿ ಹುಡುಕಿಕೊಳ್ಳೋಣ. ಶೋಧನೆಯ ಸಮಯವಿದು. ಭಾರತವನ್ನು ಬಲಿಷ್ಠಗೊಳಿಸುವುದೇ. ಅವರಿಗರ್ಪಿಸುವ ನಿಜವಾದ ಶ್ರದ್ಧಾಂಜಲಿ’. ಕಾವ್ಯದ ಹಾದಿಗೆ ರಾಜಕೀಯ ತೊಡಕು ವಾಜಪೇಯಿಯವರು ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು ಸಂದರ್ಶಕ: ನೀವು ರಾಜಕೀಯಕ್ಕೆ ಬರದೇ ಸಾಹಿತ್ಯದ ಕ್ಷೇತ್ರದಲ್ಲಿ ಮುಂದುವರೆದಿದ್ದರೆ, ಉಚ್ಚ ಶ್ರೇಣಿಯ ಕವಿಯಾಗಿರುತ್ತಿದ್ದಿರಿ, ಎಂದು ನಿಮ್ಮ ಕೆಲ ಮಿತ್ರರು ಹೇಳುತ್ತಾರೆ…’ ವಾಜಪೇಯಿ: ನನಗೆ ಉಚ್ಚ ಶ್ರೇಣಿ ಅಥವಾ ಕಡಿಮೆ ಶ್ರೇಣಿಯ ಕವಿಯ ತುಲನೆ ಗೊತ್ತಿಲ್ಲ. ಆದರೆ ಇದಂತೂ ಸತ್ಯ, ಏನೆಂದರೆ ರಾಜಕೀಯವು ನನ್ನ ಕಾವ್ಯದಾರಿಯಲಿ ತೊಡಕುಂಟುಮಾಡಿತು. ಕಾವ್ಯ ಮತ್ತು ರಾಜಕೀಯ ಎರಡೂ ಜೊತೆಜೊತೆಗೆ ಹೆಜ್ಜೆ ಹಾಕಲು ಸಾಧ್ಯವಿಲ್ಲ. ಕವಿತೆಯ ಏಕಾಂತ ಸಾಧನೆಗೆ ಸಮಯ ಮತ್ತು ವಾತಾವರಣ ರಾಜಕಾರಣದಲ್ಲಿ ಎಲ್ಲಿ ಸಿಗಬೇಕು…? ನನ್ನೊಳಗಿನ ಕವಿಗೆ ನಾನು ಪ್ರಾಮಾಣಿಕವಾಗಿ ಬದ್ಧನಾಗಿರಲು ತುಂಬಾ ಬೆಲೆ ತೆತ್ತಿದ್ದೇನೆ. ಎಲ್ಲವನ್ನು ತ್ಯಜಿಸಿ ಎಲ್ಲಾದರೂ ಏಕಾಂತದಲ್ಲಿ ಕೂತು ಓದುತ್ತಾ , ಬರೆಯುತ್ತಾ, ಚಿಂತನೆ ಮಾಡುತ್ತಾ ನನ್ನನ್ನೇ ನಾನು ಮರೆತು ಬಿಡೋಣ ಎಂದು ಒಮ್ಮೊಮ್ಮೆ ಅನ್ನಿಸುತ್ತಿರುತ್ತೆ. ಆದರೆ ಹಾಗೆ ಮಾಡಲು ಆಗುತ್ತಲೇ ಇಲ್ಲ.ಬಹುಶಃ ಕವಿ ಮನಸ್ಸು ಕಳೆದುಹೋಗಬಹುದೇನೋ…! ಇಷ್ಟದ ಕವಿತೆ ‘ನಿಮ್ಮ ಇಷ್ಟದ ಕವಿತೆ ಯಾವುದು’ ಎಂದು ಯಾರಾದರೂ ಕೇಳಿದರೆ ವಾಜಪೇಯಿ ನಕ್ಕು ಸುಮ್ಮನಾಗುತ್ತಿದ್ದರು. ಆದರೆ ಅವರಿಗೂ ಒಂದು ಇಷ್ಟದ ಕವಿತೆ ಇತ್ತು ಎಂದು ಆಪ್ತರಿಗೆ ಗೊತ್ತಿತ್ತು. ವಾಜಪೇಯಿ ಅವರಿಗೆ ತುಂಬಾ ಇಷ್ಟವಾದ ಕವಿತೆಯೆಂದರೆ…ಸೋಲೊಪ್ಪಲಾರೆ ಜಗಳ ಕಾಯಲಾರೆ ಸಮಯದ ಹಣೆಯ ಮೇಲೆ ಬರೆದು ಅಳಿಸುವೆನು ಹೊಸ ಹಾಡು ಹಾಡುವೆನು ಹೊಸ ಹಾಡು ಹಾಡುವೆನು ಸೋಲಲ್ಲಾಗಲೀ ಗೆಲುವಿನಲ್ಲಾಗಲೀ ಕಿಂಚಿತ್ತೂ ಹೆದರೆನು ನಾನು ಕರ್ತವ್ಯ ಪಥದಲ್ಲಿ ಏನೇ ಸಿಗಲಿ ಇದೂ ಸರಿಯೇ ಅದೂ ಸರಿಯೇ ವಿನಮ್ರ ವ್ಯಕ್ತಿತ್ವ ಯಾವುದೇ ಕ್ಷೇತ್ರದಲ್ಲಾಗಲಿ ಯಾರಿಗಾದರೂ ಪ್ರಶಸ್ತಿ ಅಥವಾ ಪುರಸ್ಕಾರಗಳು ಬಂದರೆ ಅವರ ಪಾದಗಳು ನೆಲದಲ್ಲಿರುವುದೇ ಇಲ್ಲ. ಹಿಡಿಯಲು ಆಗುವುದೇ ಇಲ್ಲ. ಆದರೆ ಅಟಲರಲ್ಲಿ ಇಂಥ ಗುಣ ನೋಡಲು ಸಿಗುವುದಿಲ್ಲ. ಕಾರಣ ಅವರ ವ್ಯಕ್ತಿತ್ವದಲ್ಲಿ ಬೆರೆತಿರುವ ವಿನಮ್ರತೆ. 1992ರ ಏಪ್ರಿಲ್ 24 ರಂದು ರಾಷ್ಟ್ರಪತಿಗಳು ಅಟಲರನ್ನು ಪದ್ಮವಿಭೂಷಣದಿಂದ ಗೌರವಿಸಿದಾಗ ಅವರು ಆ ಸಂದರ್ಭದಲ್ಲಿ ಒಂದು ಕವಿತೆ ವಾಚಿಸಿದ್ದರು. ಅದು ಅವರ ಸ್ವಂತ ಬದುಕಿನ ಲೆಕ್ಕದ ಪುಸ್ತಕದಂತಿದೆ. ಅತಿ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬೆಳೆದು ದೇಶದ ಪ್ರಧಾನ ಮಂತ್ರಿಯಾದಾಗಲೂ, ಆ ಸ್ಥಾನದ ತಾಕಲಾಟಗಳು ಎದುರಾದಾಗಲೆಲ್ಲ ಅವರು ಈ ಕವಿತೆಯನ್ನು ನೆನೆಯುತ್ತಿದ್ದರು. ಆ ಕವಿತೆ ಹೆಸರು ‘ಎತ್ತರ’. ಎತ್ತರದ ಬೆಟ್ಟಗಳಲಿ ಮರ ಹುಟ್ಟುವುದಿಲ್ಲ ಗಿಡಗಳೂ ಇರುವುದಿಲ್ಲ ಹುಲ್ಲೂ ಬೆಳೆಯುವುದಿಲ್ಲ ನಿಜ ಹೇಳಬೇಕೆಂದರೆ, ಬರೀ ಎತ್ತರವೇ ಮುಖ್ಯವಲ್ಲ ಎಲ್ಲರಿಂದ ಬೇರೆಯಾಗಿ ಪರಿಧಿಯಿಂದ ದೂರಾಗಿ ತನ್ನವರಿಂದ ಬೇರೆಯಾಗಿ ಶೂನ್ಯದಲ್ಲಿ ನಿಲ್ಲುವುದು… ಬೆಟ್ಟದ ಮಹಾನತೆಯಲ್ಲ…! ಅದರ ಅಸಹಾಯಕತೆ ಎತ್ತರ ಮತ್ತು ತಗ್ಗಿನಲ್ಲಿ ಆಕಾಶ ಮತ್ತು ಪಾತಾಳದಷ್ಟು ಅಂತರವಿದೆ ಎಷ್ಟೆಷ್ಟು ಎತ್ತೆರವಿರುವನೋ ಅಷ್ಟ್ಟಷ್ಟು ಒಬ್ಬಂಟಿಯಾಗಿರುತ್ತಾನೆ ಎಲ್ಲ ಭಾರ ಒಬ್ಬನೇ ಹೊತ್ತಿರುತ್ತಾನೆ ಮುಖದಲ್ಲಿ ನಗು ಮೆತ್ತಿಕೊಂಡು ಒಳಗೊಳಗೆ ಅಳುತ್ತಿರುತ್ತಾನೆ ವಸಂತವೂ ಇಲ್ಲ, ಶಿಶಿರವೂ ಇಲ್ಲ ಎತ್ತರದ ಬರೀ ಬಿರುಗಾಳಿ ಮಾತ್ರ ಒಬ್ಬಂಟಿತನದ ಮೌನ ಮಾತ್ರ ಓ ನನ್ನ ಪ್ರಭುವೆ.. ಕೊಡಬೇಡ ನನಗಿಂತಹ ಎತ್ತರ ಅನ್ಯರನು ಆಲಂಗಿಸಲಾಗದು ಕರೆದು ಹತ್ತಿರ ನೀಡದಿರು ಇಂತಹ ಶುಷ್ಕತೆ ಎತ್ತರೆತ್ತರದ ಬೆಟ್ಟಗಳಲ್ಲಿ ಮರಗಳಿರುವುದಿಲ್ಲ ಹುಲ್ಲಿರುವುದಿಲ್ಲ ಗಿಡ ಗಂಟಿಗಳು ಬೆಳೆಯುವುದಿಲ್ಲ ಕೇವಲ ಹಿಮ ಮಡುಗಟ್ಟಿರುತ್ತದೆ ಕೇವಲ ಹಿಮ ಮಡುಗಟ್ಟಿರುತ್ತದೆ ಅಣ್ವಸ್ತ್ರ ದುರಂತ ಮಾನವೀಯತೆಯ ಹರಿಕಾರರಾದ ವಾಜಪೇಯಿಯವರು ದೇಶದ ರಕ್ಷಣೆಯ ದೃಷ್ಟಿಯಿಂದ ಸ್ವತಃ ಪೋಖ್ರಾನ್ ಅಣು ಪರೀಕ್ಷೆಗೆ ಹಸಿರು ನಿಶಾನೆ ತೋರಿದ್ದರು. ಆದರೆ ಅವರೊಳಗಿನ ಕವಿಯ ಹೇಗೆ ಯೋಚಿಸಿದ್ದನೋ ಯಾರಿಗೆ ಗೊತ್ತು? ಅವರೊಮ್ಮೆ ಹಿರೋಶಿಮಾ ಮತ್ತು ನಾಗಸಾಕಿಯ ದುರಂತದ ಬಗ್ಗೆ ಆ ದಿನಗಳಲ್ಲೇ ಹೀಗೆ ಬರೆದಿದ್ದರು. ಕವಿತೆಯ ಹೆಸರು ‘ಹಿರೋಶಿಮಾ’ ಯಾವುದೋ ಒಂದು ರಾತ್ರಿ ನನ್ನ ನಿದ್ದೆ ಹಾರಿ ಹೋಗುತ್ತದೆ ಕಣ್ಣುಗಳು ತೆರೆಯುತ್ತವೆ ಹಿರೋಷಿಮಾ, ನಾಗಸಾಕಿಯ ಭೀಷಣ ನರಸಂಹಾರವನ್ನು ನೋಡಿ ಅಣ್ವಸ್ತ್ರಗಳನ್ನು ನಿರ್ಮಿಸಿದಂಥ ವಿಜ್ಞಾನಿಗಳು ರಾತ್ರಿ ಹೊತ್ತು ಹೇಗೆ ನಿದ್ರಿಸಿದರೆಂದು ಯೋಚಿಸುತ್ತೇನೆ ನಾನು ನಾವು ಮಾಡಿದ್ದು ತಪ್ಪೆಂದು ಅವರಿಗೆ ಒಂದು ಕ್ಷಣವಾದರೂ ಅನ್ನಿಸುವುದಿಲ್ಲವೇ..? ಅವರಿಗೇನಾದರೂ ಹಾಗೆ ಅನ್ನಿಸಿದ್ದರೆ ಸಮಯ ಅವರನ್ನು ಕಟಕಟೆಯಲಿ ನಿಲ್ಲಿಸುವುದಿಲ್ಲವೇ..? ಒಂದು ವೇಳೆ ಹಾಗೆ ಅವರಿಗೆ ಅನ್ನಿಸಲಿಲ್ಲವೆಂದರೆ ಇತಿಹಾಸ ಅವರನ್ನು ಎಂದೂ ಕ್ಷಮಿಸದು ಕವಿತೆ ಕೇಳಲು ಬಚ್ಚಲ ಮನೆ ಮುಂದೆ 60 ಜನ ನಿಂತಿದ್ದರು ಗ್ವಾಲಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ವಾಜಪೇಯಿಯವರು ಅನೇಕ ಕವಿ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದರು. ಒಮ್ಮೆ ಆಗ್ರಾದ ಕಾಲೇಜಿನಲ್ಲಿ ಕವಿತಾ ಸ್ಪರ್ಧೆ ಇತ್ತು. ;ಆಗ ವಾಜಪೇಯಿಯವರು ಬಿ.ಎ ಓದುತ್ತಿದ್ದರು. ಕಾಲೇಜಿನಲ್ಲಿ ಹೆಣ್ಣುಮಕ್ಕಳ ಒಂದು ಹಾಸ್ಟೆಲ್ ಇತ್ತು. ಅದರ ಹೆಸರು ಡೆವಿಸ್ ಹಾಸ್ಟೆಲ್. ಗ್ವಾಲಿಯರ್ನ ಕವಿಗಳನ್ನು ಹೂಟ್ (ಕೂಗುತ್ತಾ ಲೇವಡಿ ಮಾಡುವುದು) ಮಾಡಬೇಕೆಂದು ಹುಡುಗಿಯರೆಲ್ಲ ತೀರ್ಮಾನಿಸಿದರು. ಸ್ಪರ್ಧೆ ಶುರುವಾಗುವುದಕ್ಕೆ ಮೊದಲೇ ಅವರೆಲ್ಲ ಮುಂದೆ ಬಂದು ಕೂತಿದ್ದರು. ವೀರೇಂದ್ರ ಮಿಶ್ರ ಎಂಬ ಕವಿಯನ್ನು ಹೂಟ್ ಮಾಡಿದ್ದನ್ನು ನೋಡಿ ಅವರ ಜೊತೆಗಿನ ಕವಿಯೊಬ್ಬರು ಹೆದರಿಕೊಂಡು ಸಭೆಯಿಂದ ಮಾಯವಾದರು. ಆಗ ವಾಜಪೇಯಿಯವರು ತಮ್ಮ ವೀರರಸದ ಕವಿತೆ ವಾಚಿಸಿದರು. ನಲವತ್ತೆರಡನೇ ಆಗಸ್ಟ್ ಒಂಭತ್ತರ ಸ್ವರ್ಣದ ರಕ್ತ ಪ್ರಭಾತ ಕಣ್ಣೀರಿನ ಕಾರಾಗೃಹದಲಿ ಉರಿಯಿತು ಕಾರಿರುಳು ಹೀಗೆ ಅವರು ಕವಿತೆ ಶುರು ಮಾಡಿದರು. ಅಷ್ಟರಲ್ಲಿ ಆ ಹುಡುಗಿಯರೆಲ್ಲ ‘ಪ್ರಭಾತ ಪ್ರಭಾತ’ ಎಂದು ಕೂಗತೊಡಗಿದರು. ವಾಜಪೇಯಿಯವರು ಗಲಿಬಿಲಿಗೊಂಡರು. ಅಧೀರರಾದರೂ ಕೂಡಲೆ ಸಾವರಿಸಿಕೊಂಡರು. ನೋಡ ನೋಡುತ್ತಿದ್ದಂತೆ ಅವರು ಪೂರ್ಣಮಗ್ನರಾಗಿ ವಾಚಿಸತೊಡಗಿದರು. ಆಗ ಕವಿಗೋಷ್ಠಿಯ ಕಳೆಯೇ ಬದಲಾಯಿತು. ಆಗ್ರಾದ ಕಾಲೇಜಿನಲ್ಲಿ ಕವಿತಾ ವಾಚನ ಮಾಡಲು ಬಂದಿದ್ದ ವಾಜಪೇಯಿಯವರು ಸೆಂಟ್ ಜಾನ್ಸ್ ಹಾಸ್ಟೆಲ್ನಲ್ಲಿ ತಮ್ಮ ಸ್ನೇಹಿತರೊಡನೆ ಇಳಿದುಕೊಂಡಿದ್ದರು. ಸ್ಪರ್ಧೆಗೆ ಹೋಗುವುದಕ್ಕಿಂತ ಮುಂಚೆ ತಮ್ಮ ಸ್ನೇಹಿತನಾದ ರಾಮ್ ಕುಮಾರ್ ಚತುರ್ವೇದಿಯೊಡನೆ ಬಚ್ಚಲಿಗೆ ಹೋದರು. ಅಲ್ಲೇ ಎತ್ತರದ ಧ್ವನಿಯಲ್ಲಿ ಕವಿತೆ ವಾಚಿಸತೊಡಗಿದರು. ನಂತರ ಸ್ನೇಹಿತ ತನ್ನ ಕವಿತೆ ವಾಚಿಸಿದ. ಬಚ್ಚಲಲ್ಲೇ ಸಣ್ಣ ಕವಿಗೋಷ್ಠಿ ಮುಗಿದ ನಂತರ ಅವರುಗಳು ಬಚ್ಚಲುಗಳಿಂದ ಈಚೆ ಬಂದು ನೋಡುತ್ತಾರೆ. ಸುಮಾರು 50–60 ವಿದ್ಯಾರ್ಥಿಗಳು ಕವಿತೆ ಕೇಳುತ್ತಿದ್ದಾರೆ. ಚಪ್ಪಾಳೆ ತಟ್ಟುತ್ತಿದ್ದಾರೆ! ಹಲವರ ಪ್ರಭಾವ ವಾಜಪೇಯಿಯವರ ರಚನೆಗಳಲ್ಲಿ ಹರಿವಂಶರಾಯ್ ಬಚ್ಚನ್, ಶಿವಮಂಗಲ್ ಸುಮನ್, ಸೂರ್ಯಕಾಂತ ತ್ರಿಪಾಠಿ ನಿರಾಲ ಮತ್ತು ಫೈಜ್ ಅಹಮದ್ ಫೈಜ್ ಅವರ ಪ್ರಭಾವ ಕಾಣಬಹುದು. ಶಿವಮಂಗಲ್ ಸುಮನ್ ಅವರನ್ನು ವಾಜಪೇಯಿ ತಮ್ಮ ಗುರುಗಳೆಂದು ಭಾವಿಸುತ್ತಾರೆ. ತಮ್ಮ ಪ್ರತಿ ಜನ್ಮದಿನದಲ್ಲೂ ಅವರು ಕವಿತೆಯೊಂದನ್ನು ಬರೆದು ಜೀವನ ದರ್ಶನವನ್ನು ಮಾಡುವ ಮತ್ತು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆದ್ದರಿಂದ ಪ್ರತಿ ವರ್ಷ ಅವರ ಕವಿತೆಯ ರೂಪ, ಮನೋಭಾವ, ಮತ್ತು ದರ್ಶನ ಬದಲಾಗುತ್ತಿತ್ತು. 1993ರ ಡಿಸೆಂಬರ್ 25 ರಂದು ಅವರ ಜೀವನದಲ್ಲಿ ಮತ್ತೊಂದು ತಿರುವು ಬಂದಿತು. ಅವರ ವಯಸ್ಸು ಎಪ್ಪತ್ತರ ಹತ್ತಿರವಿತ್ತು. ಆಗ ‘ತಿರುವಿನಲ್ಲಿ’ ಎಂಬ ಈ ಕವಿತೆ ಬರೆದರು. ದೂರದ್ದು ಕಾಣುವುದೆನಗೆ ಓದಬಲ್ಲೆ, ಗೋಡೆ ಮೇಲಿನ ಬರಹಗಳ ಓದಲಾರೆ ಅಂಗೈ ಗೆರೆಗಳ ಕಾಣುವುದೆನಗೆ ಗಡಿಯಲಿ ಕುದಿಯುತಿರುವ ಕೆಂಡದುಂಡೆ ಆದರೆ ಕಾಣದು ಕಾಲಡಿ ಅತ್ತಿತ್ತ ಬಿದ್ದಿರುವ ಬೂದಿ ಗುಡ್ಡೆ ಮುದುಕನಾದೆನೆ ನಾನು…? ಸುಧಾರಿಸಬಲ್ಲೆನು ಜನರ ಗುಂಪನು ಆದರೆ ನನ್ನೊಳಗಿಗೆ ಉತ್ತರಿಸಲಾರೆನು ನನ್ನ ಮನವು ತನ್ನದೇ ನ್ಯಾಯಾಲಯದಲಿ ನಿಲ್ಲಿಸಿ ಮಾಡುವಾಗ ವಾದ ನಿಲ್ಲುವುವು ನನ್ನ ಸಂಕಲ್ಪಗಳೇ ನನ್ನ ವಿರುದ್ಧ ಮೊಕದ್ದಮೆಯಲಿ ಸೋಲುವೆನು ನನ್ನ ಕಣ್ಣಿಗೆ ನಾನೇ ಅಪರಾಧಿಯಂತೆ ಕಾಣುವೆನು ಬದುಕಿನ ದಾರ ಕಡಿಮೆಯಾಗುತಿದೆ ಆದರೆ ಗಂಟು ಜಾಸ್ತಿಯಾಗುತಿದೆ ‘ಕೈದಿ ಕವಿರಾಯನ ಕುಂಡಲಿಗಳು’ (ಕುಂಡಲಿಗಳೆಂದರೆ, ಛಂದಸ್ಸಿನ ಒಂದು ಪ್ರಕಾರ) ಇದನ್ನು ಪತ್ರಕರ್ತರಾಗಿದ್ದ ಹಾಗೂ ನಂತರ ರಾಜ್ಯಸಭಾ ಸದಸ್ಯರಾಗಿದ್ದ ಪಂಡಿತ ದೀನಾನಾಥ ಮಿಶ್ರರು ಸಂಪಾದಿಸಿದ್ದರು. ಮಿಶ್ರರಿಗೆ ಅದರಲ್ಲಿ ಒಂದು ಕವಿತೆ ತುಂಬಾ ಇಷ್ಟವಾಯಿತಂತೆ. ಎದುರಿಸುತ್ತೇವೆ, ತಲೆಬಾಗುವುದಿಲ್ಲ ಅಧಿಕಾರದೆದುರು ಸತ್ಯದ ಹೋರಾಟ ನ್ಯಾಯ ಹೋರಾಡಿದೆ ನಿರಂಕುಶತೆಯೊಡನೆ ಕತ್ತಲು ಹಾಕಿದೆ ಸವಾಲು ಮುಳುಗುತಿದೆ ಕಿರಣ ನಿಷ್ಠೆಯ ದೀಪ ಹಿಡಿದು ಅಲ್ಲಾಡಿಸದೆ ಮುರಿದು ಬೀಳಲಿ ವಜ್ರವೇ, ಘಟಿಸಲಿ ಭೂಕಂಪನವೇ ಪರಸ್ಪರ ಸಮನಾದ ಯುದ್ಧವಲ್ಲ ಇದು ನಮ್ಮ ಕೈಯಲ್ಲಿ ಆಯುಧವಿಲ್ಲ. ಶತ್ರು ಸನ್ನದ್ಧನಾಗಿಹನು ಸಕಲ ಶಸ್ತ್ರಗಳಿಂದ ಸಜ್ಜಾಗಿಹನು ಪಶುಬಲವೇ ನಿರ್ಲಜ್ಜವಾಗಿವೆ ಆದರೂ ಸೆಣಸುವ ಸಂಕಲ್ಪವಿದೆ ಮತ್ತೆ ಅಂಗದನು ಮುಂದಡಿಯಿಟ್ಟ ಪ್ರಾಣ ಪಣವಿಟ್ಟು ಕೈಗೊಳ್ಳುವೆವು ಪ್ರತೀಕಾರ ಸಮರ್ಪಣೆಯ ಬೇಡಿಕೆ ಅಸ್ವೀಕಾರವಾಗಿದೆ ಎಲ್ಲವನು ಪಣಕ್ಕಿಡಲಾಗಿದೆ. ನಿಲ್ಲೆವು ಎದುರಿಸುತ್ತೇವೆ, ತಲೆಬಾಗುವುದಿಲ್ಲ ವಾಜಪೇಯಿಯವರು ತಮ್ಮ ಕಾವ್ಯದ ಹಲವು ಕೋನಗಳನ್ನು ಕಂಡಿದ್ದು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ. 1975ರಲ್ಲಿ ಜೈಲು ಕೋಣೆಯಲ್ಲಿ ಕೂತು ಅವರು ಸತತವಾಗಿ ಕವಿತೆಗಳನ್ನು ರಚಿಸುತ್ತಿದ್ದರು. ಇದರಲ್ಲಿ ಅವರ ಆಕಾಂಕ್ಷೆ, ಸಂಕಲ್ಪ ಮತ್ತು ಹೋರಾಡುವ ಶಕ್ತಿಯ ಸ್ಪಷ್ಟ ಚಿತ್ರವನ್ನು ನೋಡಬಹುದು.ಕವಿತೆಯ ಹೆಸರು ‘ಪರಿಚಯ’ (ಪೆಹಚಾನ್) ಮರ ಹತ್ತಿದ ಮನುಷ್ಯ ಎತ್ತರವಾಗಿ ಕಾಣುವನು ಬುಡದಲಿ ನಿಂತವನು ಸಣ್ಣಗೆ ಕಾಣುವನು ಮನುಷ್ಯ ಮೇಲೂ ಇಲ್ಲ ಕೀಳೂ ಇಲ್ಲ ದೊಡ್ಡವನೂ ಅಲ್ಲ ಚಿಕ್ಕವನೂ ಅಲ್ಲ ಮನುಷ್ಯ ಕೇವಲ ಮನುಷ್ಯನಾಗಿದ್ದಾನೆ ಇಂತಹ ಸರಳ, ಸುಲಭ ಸತ್ಯವನು ಜಗತ್ತೇಕೆ ತಿಳಿಯುತ್ತಲೇ ಇಲ್ಲ ತಿಳಿದರೂ ಮನಃಪೂರ್ವಕವಾಗಿ ಏಕೆ ಒಪ್ಪುತ್ತಿಲ್ಲ ಸಣ್ಣ ಮನಸ್ಸಿನಿಂದ ಯಾರೂ ದೊಡ್ಡವರಾಗುವುದಿಲ್ಲ. ಒಡೆದ ಮನಸ್ಸಿನಿಂದ ಯಾರೂ ಮೇಲೆದ್ದು ನಿಲ್ಲುವುದಿಲ್ಲ ಆದ್ದರಿಂದಲೇ.. ಭಗವಾನ್ ಕೃಷ್ಣನು ಶಸ್ತಾಸ್ತ್ರಧಾರಿಯಾಗಿ, ರಥಾರೂಢನಾಗಿ ಕುರುಕ್ಷೇತ್ರದ ಮೈದಾನದಲ್ಲಿ ನಿಂತು ಅರ್ಜುನನಿಗೆ ಗೀತೋಪದೇಶ ಮಾಡಿದನು ಸೋತ ಮನಸ್ಸಿನಿಂದ ಮೈದಾನವಾಗಲೀ, ಮನವನ್ನಾಗಲೀ ಗೆಲ್ಲಲಾಗದು ಮನುಷ್ಯನ ಪರಿಚಯವಾಗುವುದು ಸಂಪತ್ತಿನಿಂದ ಅಥವಾ ಅಧಿಕಾರದಿಂದಲ್ಲ, ಅವನ ಮನೋಸ್ಥಿತಿಯಿಂದ ಮನಸ್ಸಿನ ಸಾಧುತ್ವದ ಸಂಪತ್ತಿನೆದುರು ಕುಬೇರನ ಐಶ್ವರ್ಯವೂ ರೋದಿಸುತ್ತದೆ ಜೈಲಿನಲ್ಲಿದ್ದಾಗಲೂ ವಾಜಪೇಯಿಯವರ ಓದು ಮತ್ತು ಬರಹ ನಡೆದೇ ಇತ್ತು. ಜೈಲಿನಲ್ಲಿ ಒಂದು ರಾತ್ರಿ ಅವರು ಹೀಗೆ ಬರೆದಿದ್ದರು… ಕಳವಳದ ರಾತ್ರಿ ಮುಂಜಾವು ಕೂಡ ರುಚಿಸದು ಕಾರ್ಮೋಡ ದಟ್ಟೈಸಿದವು ಯಾವ ಹಕ್ಕಿಯೂ ಹಾಡುತ್ತಿಲ್ಲ ತನುವೆಲ್ಲ ಭಾರ, ಮನಸ್ಸು ಖಿನ್ನಗೊಂಡಿದೆ ಹಳೆಯ ನೋವು ಕಾಡಿದೆಮತ್ತೊಬ್ಬರ ನೋವರಿಯದ ಎಲ್ಲರೂ ತಮ್ಮ ಪಾಡಿಗೆ ತಾವಿರುವರು ದುರ್ದಿನಗಳು ಬಂದವೆಂದು ಹೇಳು ಕವಿರಾಯ ಕೈದಿಯೆ ಅವನಿಟ್ಟಂತೆ ಇರೋಣ ಇದು ಮೇಲಿರುವವನ ಮಾಯೆ ಜೈಲಿನಲ್ಲಿ ಒಂದು ಕಡೆ ಆಡ್ವಾಣಿಯವರು ಪುಸ್ತಕಗಳನ್ನು ಓದುತ್ತಿದ್ದರೆ ಮತ್ತು ಡೈರಿ ಬರೆಯುತ್ತಿದ್ದರೆ. ಇನ್ನೊಂದೆಡೆ ವಾಜಪೇಯಿಯವರ ಕವಿ ಮನಸ್ಸು ಎದ್ದಿರುತ್ತಿತ್ತು. ತಮ್ಮ ಜೈಲಿನ ಡೈರಿಯಲ್ಲಿ ಒಂದು ಕಡೆ ಅವರು ಹೀಗೆ ಬರೆದಿದ್ದರು. ಕೋಣೆಯೆಲ್ಲ ಖಾಲಿ ಖಾಲಿ ಬಳಲಿಹೆ ಎರಡು ಪಟ್ಟು ವೇದನೆಯಲಿ ಜೀರುಂಡೆಗಳ ಸದ್ದು ಒಳಗನು ಕೊರೆದಿದೆ ಆಕಾಶವೇ ಸೆರೆಯಾಗಿ ಉಸಿರುಗಟ್ಟುತಿದೆ ಮತ್ತೊಂದು ಕವಿತೆಯನ್ನು ವಾಜಪೇಯಿಯವರು ಅದೇ ಸಂದರ್ಭದಲ್ಲಿ ಬರೆದರು ಅದರಲ್ಲಿ ಬಹಳ ಮುಖ್ಯವಾಗಿ ಹೊಗಳುಭಟ ನಾಯಕರನ್ನು ವ್ಯಂಗ್ಯವಾಗಿ ಚಿತ್ರಿಸಲಾಗಿತ್ತು. ಸಿಂಹದ ಸಂತಾನವನು ಕಬ್ಬಿಣದ ಸಲಾಕೆಗಳಲಿ ಬಂಧಿಸಿ ಸಂಸತ್ತಿನ ಭವನದಲಿ ನರಿಗಳು ಬೊಬ್ಬೆ ಹೊಡೆಯುತಿವೆ ಹೊಗಳುಭಟ ಚಮಚಗಳ ಹಿಡಿ ಫಳಫಳ ಹೊಳೆದಿದೆ ನಿಷ್ಕಳಂಕ, ನಿರ್ಭಯ ನಮ್ರತೆ ತಲೆ ಎತ್ತಿ ನಡೆದಿದೆ ನಿರ್ಲಜ್ಜ, ನಿರ್ದಯೀ ಲಕ್ಷ್ಯಕ್ಕೆ ಗುರಿಯಿಟ್ಟು ಹೊಡೆದು ಹುಲಿಯಂತೆ ಹಕ್ಕಿಗಳ ಪ್ರಾಣ ಹೀರುತಿವೆ ಮರ್ಯಾದೆಗೆಟ್ಟು ಮರ್ಯಾದೆಯ ಕುತ್ತಿಗೆ ಹಿಸುಕಿ ನಿಯಮ, ನೀತಿಯೆಂದೊರಲಿ ಅಧಿಕಾರಕ್ಕೆ ಸಾಯುತಿವೆ ಎಲ್ಲೆಲ್ಲೂ ತುಂಬಿ ತುಳುಕಿರುವ ಮೋಸ, ದಗ, ವಂಚನೆ, ದ್ರೋಹ, ಇವನ್ನೆಲ್ಲ ನೋಡಿದ ವಾಜಪೇಯಿಯವರು ತಮ್ಮ ಭಾವನೆಯನ್ನು ಈ ರೀತಿ ವ್ಯಕ್ತ ಪಡಿಸಿದ್ದರು. ಕೌರವರು ಯಾರು..? ಪಾಂಡವರು ಯಾರು..? ವಿಚಿತ್ರ ಪ್ರಶ್ನೆಯಿದು ಶಕುನಿಯ ದುಷ್ಟ ಜಾಲ ಎರಡೂ ಕಡೆ ಹಬ್ಬಿಹುದು ಬಿಡದೆ ಧರ್ಮರಾಯ ಕೂತಿಹನು ಜೂಜಿನ ಚಟದಲಿ ಅಪಮಾನಿತಳಾಗಿಹಳು ಪಾಂಚಾಲಿ ಪ್ರತಿ ಪಂಚಾಯತಿಯಲಿ ವಾಜಪೇಯಿಯವರು ಮೊದಲು ಕವಿ. ಅವರ ಮನಸ್ಸು, ಕವಿ ಮನಸ್ಸು. ಈ ಕಾರಣದಿಂದಲೇ ಅವರು ಶ್ರೇಷ್ಠ ಮಾನವನಾಗಿದ್ದಾರೆ. ಯಾವುದೇ ಕೆಲಸವಾಗಲಿ ಮನಸ್ಸಿಟ್ಟು ಮಾಡುತ್ತಾರೆ. ಕವಿಯಾಗಿ ಅವರಿಗೆ ಯಾವಾಗ ಮನಸ್ಸಿಗೆ ನೋವಾಗುವುದೋ, ಬೇಸರವಾಗುವುದೋ, ನೆಮ್ಮದಿ ಇಲ್ಲದಂತಾಗುವುದೋ ಆಗ ಅವರು ಏನಾದರೂ ಬರೆಯತೊಡಗುತ್ತಿದ್ದರು. ಹಾಡುವುದಿಲ್ಲ ನಾನು ಮುಸುಕಿಲ್ಲದ ಮುಖಗಳು ಗಂಭೀರ ಮಚ್ಚೆಗಳು ಸರಿಯಿತು ಮಾಯೆಯಿಂದು ನಿಜವಾಗಿ ಹೆದರಿದೆನು ಹಾಡುವುದಿಲ್ಲ ನಾನು ಗಾಜಿನಂತಹ ನಗರ ತೋರಿಸುವ ನೋಟಕೆ ಸಿಲುಕಿದೆ ನನ್ನದೇ ಜಾತ್ರೆಗಳಲಿ ಗೆಳೆಯ ಸಿಗಲಿಲ್ಲ ಹಾಡುವುದಿಲ್ಲ ನಾನು ಬೆನ್ನಲ್ಲಿ ಚೂರಿಯಂತಹ ಚಂದ್ರ ರೇಖೆ ದಾಟಿ ಹೋದ ರಾಹು ಮುಕ್ತಿಯ ಕ್ಷಣಗಳಲಿ ಮತ್ತೆ ಮತ್ತೆ ಬಂಧಿತನಾಗುತಿರುವೆನು ಹಾಡುವುದಿಲ್ಲ ನಾನು ನಾನು ಸುಮ್ಮನಿಲ್ಲ. ನಾನು ಹಾಡುತ್ತಿಲ್ಲ ಸಮಯದ ತಣ್ಣನೆ ಉಸಿರು ಚಿನಾರ್ ಮರಗಳನ್ನು ಸುಟ್ಟು ಹಾಕಿತು ಆದರೆ ಒಂದು ಮರಸಾಲು ಹಿಮಪಾತಕೆ ಹಾಕಿದೆ ಸವಾಲು ಗೂಡುಗಳು ಚೆಲ್ಲಾಪಿಲ್ಲಿಯಾದವು ಚೀಡ್ಮರ ನಕ್ಕಿತು ಕಣ್ಣೀರಿಲ್ಲ, ನಗುವಿದೆ ಹಿಮದ ಕೊಳದ ದಡದಲಿ ಒಬ್ಬನೇ ಗುನುಗುನಿಸುತ್ತಿರುವೆ ನಾನು ಸುಮ್ಮನಿಲ್ಲ. ನಾನು ಹಾಡುತ್ತಿಲ್ಲ ನಾನು ಸುಮ್ಮನಿಲ್ಲ, ನಾನು ಹಾಡುತ್ತಿಲ್ಲ ಎಂದು ಹೇಳಿದ ವಾಜಪೇಯಿಯವರು ಆಗಾಗ ಹೀಗೆ ರಚಿಸುತ್ತಿದ್ದರು… ಒಡೆದ ನಕ್ಷತ್ರಗಳಿಂದ ಹೊರಟಿತು ವಾಸಂತಿ ಸ್ವರ ಕಲ್ಲಿನೆದೆಯಲಿ ಮೊಳಕೆಯೊಡೆಯಿತು ನವ ಅಂಕುರ ಉದುರಿದವು ಹಳದಿಯೆಲೆಗಳು ಕೋಗಿಲೆಯ ಕುಹುವಿನಿರುಳು ಅರುಣ ಬಣ್ಣ ಪೂರ್ವದಲ್ಲಿ ನೋಡತೊಡಗುವೆ ಹೊಸ ಹಾಡು ಹಾಡುವೆ 1999ರ ಫೆಬ್ರುವರಿ 20. ದೆಹಲಿಯಿಂದ ಲಾಹೋರ್ಗೆ ತೆರಳಲಿರುವ ಬಸ್ಗಾಗಿ ಗೇಟ್ ತೆರೆಯುತ್ತಿದ್ದಂತೆಯೇ ಟಿವಿ ಚಾನಲ್ಗಳಲ್ಲಿ ಸುದ್ದಿ ದಾಂಗುಡಿಯಿಟ್ಟಿತ್ತು. ವಾಜಪೇಯಿ ಹಾಗೂ ನವಾಜ್ ಶರೀಫರು ಎರಡು ದೇಶಗಳ ನಡುವೆ ಸ್ನೇಹದ ಕದ ತೆರೆದು ಇತಿಹಾಸ ನಿರ್ಮಿಸಿದ್ದರು. ಹಿಂದೂಸ್ತಾನದ ಎಲ್ಲ ವರ್ಗ, ಅಸಕ್ತಿಗಳ ಪ್ರಾತಿನಿಧಿಕ ಜನರು ;ಆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ವಾಜಪೇಯಿಯವರ ಮೆಚ್ಚಿನ ಹಾಗೂ ದೇಶದ ಹೆಸರಾಂತ ಗೌರವಾನ್ವಿತರೆಲ್ಲರೂ ಇದ್ದರು. ಈ ಬಸ್ಸಿನಲ್ಲಿ ವಾಜಪೇಯಿಯವರ ಅತಿ ಮೆಚ್ಚಿನ ಫಿಲಂ ತಾರೆ ಹಾಗೂ ತಮ್ಮ ಕಾಲದ ಸೂಪರ್ ಸ್ಟಾರ್ ದೇವಾನಂದ್, ಕಲಾವಿದ ಸತೀಶ ಗುಜ್ರಾಲ್, ಗೀತರಚನೆಕಾರರಾದ ಜಾವೇದ್ಅಖ್ತರ್, ಹಿರಿಯ ಪತ್ರಕರ್ತರಾದ ಕುಲದೀಪ್ ನಯ್ಯರ್, ಕ್ರಿಕೆಟ್ಟಿಗ ಕಪಿಲ್ದೇವ್, ಡ್ಯಾನ್ಸರ್ ಮಲ್ಲಿಕಾ ಸಾರಾಭಾಯಿ ಮತ್ತು ಫಿಲಂ ನಟರಾದ ಹಾಗೂ ಬಿಜೆಪಿ ನಾಯಕರಾದ ಶತೃಘ್ನ ಸಿನ್ಹಾ ಸಮೇತ 22 ಮಂದಿ ಇದ್ದರು. ಭಾರತ ಪಾಕೀಸ್ತಾನ ನೆರೆಹೊರೆಯವರು ಜೊತೆ ಜೊತೆಯಲೆ ಬಾಳಬೇಕು ಪ್ರೀತಿಯಿರಲಿ ಅಥವಾ ಯುದ್ಧವಿರಲಿ ಇಬ್ಬರೂ ಸಹಿಸಬೇಕು ಈ ಕವಿತೆ ವಾಜಪೇಯಿಯವರದಾಗಿತ್ತು. ಇದರ ಕೆಲವು ಸಾಲುಗಳನ್ನು ಪಾಕೀಸ್ತಾನದ ಪ್ರಧಾನಿ ನವಾಜ್ ಶರೀಫರು ವಾಜಪೇಯಿಯವರ ಗೌರವ ಸೂಚಕವಾಗಿ ಲಾಹೋರಿನ ಕೆಂಪು ಕೋಟೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ವಾಚಿಸಿದ್ದರು. ಶರೀಫರ ಭಾಷಣದ ನಂತರ ವಾಜಪೇಯಿಯವರು ಶರೀಫರಿಗಿಂತಲೂ ಮುಂದೆ ಹೋದರು. ತಮ್ಮ ಕವಿತೆಯನ್ನು ಈ ರೀತಿ ವಾಜಪೇಯಿಯವರು ವಾಚಿಸಿದ್ದರು. ಶಾಂತಿ ಬೇಕು ನಮಗೆ. ಬದುಕು ನಮಗಿಷ್ಟ ರಷ್ಯದ್ದಿರಲಿ ಇಲ್ಲ ಅಮೇರಿಕಾದ್ದಿರಲಿ ಬಾಂಬು ಹರಿಸಬೇಕು ಒಂದೇ ರಕ್ತ ನಮಗಾದುದು ನಮ್ಮ ಮಕ್ಕಳಿಗೂ ಆಗಬೇಕೇನು..? ನಡೆಯಲು ಬಿಡೆವು ಯುದ್ಧವನು ಶಾಂತಿ ಬೇಕು ನಮಗೆ. ಅದರ ಸ್ಥಾಪನೆಗೆ ನಡೆದಿದೆ ತಯಾರಿ ಹಸಿವಿನೊಡನೆ , ರೋಗ ರುಜಿನದೊಡನೆ ಹೋರಾಡಿದೆವು ಜಗತ್ತೇ ಮುಂದೆ ಬಂದು ಸಹಾಯ ಹಸ್ತ ಚಾಚಿತು ರಕ್ತಸಿಕ್ತಗೊಳಿಸಲು ಬಿಡೆವು ಹಸಿರು ಹಸಿರಾದ ನೆಲವನು ನಡೆಯಲು ಬಿಡೆವು ಯುದ್ಧವನು ತಮ್ಮ ಕವಿತೆಯ ಸಾಲುಗಳನ್ನು ವಾಜಪೇಯಿಯವರು ವಾಚಿಸುತ್ತಿದ್ದಂತೆಯೇ ನಾಲ್ಕೂ ಕಡೆಯಿಂದ ಚಪ್ಪಾಳೆ ಮಾರ್ದನಿಸಿತು. ವಾಜಪೇಯಿಯವರ ಭಾಷಣದಿಂದ ವಾತಾವರಣದ ದಿಕ್ಕೇ ಬದಲಾಗತೊಡಗಿತು. ದೆಹಲಿಯ ಯಾವುದೋ ಒಂದು ಕಿಕ್ಕಿರಿದ ಸಾರ್ವಜನಿಕ ಸಭೆಯಲ್ಲಿ ಅವರು ಮಾತಾಡುತ್ತಿದ್ದಾರೋ ಏನೋ ಎಂದು ಭಾಸವಾಗುತ್ತಿತ್ತು. ಅವರ ಭಾಷಣಕ್ಕೆ ರಂಗೇರುತ್ತಿತ್ತು. ವಾಗ್ಝರಿಯ ಪರಾಕಾಷ್ಠೆ ತಲುಪಿದ್ದರು. ಈ ಸಂದರ್ಭದಲ್ಲಿ ವಾಜಪೇಯಿಯವರು ಅಂದಿನ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸರ್ದಾರ್ ಅಲೀ ಸಾಹೇಬರ ಕವಿತೆಯ ಈ ಸಾಲುಗಳನ್ನೂ ಕೂಡ ವಾಚಿಸಿದ್ದರು. ಲಾಹೋರಿನ ಹೂದೋಟದಿಂದ ಬಾ ನೀನು ಹೂ ಬಿಡಿಸಿಕೊಂಡು ಮುಂಜಾನೆ ಬರುವೆನು ನಾನು ಬನಾರಸ್ನ ಕಿರಣ ಹೊತ್ತುಕೊಂಡು. ಆಮೇಲೆ ಕೇಳಿಕೊಳ್ಳೋಣ ನಾವು ಶತ್ರು ;ಯಾರೆಂದು…? ರಾಜಕಾರಣಿ ಹಾಗೂ ಕವಿ ಎರಡೂ ಆಗಿ ಸಾಧನೆ ಮಾಡಿ ಮರೆಯಾದ ಅಜರಾಮರರಾದ ವಾಜಪೇಯಿಯವರ ಈ ಸಾಲುಗಳು ಎಲ್ಲರನ್ನೂ ಯಾವಾಗಲೂ ಕಾಡುತ್ತಿರುತ್ತವೆ. ವರ್ತಮಾನದ ಮೋಹಜಾಲಕೆ ಸಿಲುಕಿ ಬರಲಿರುವ ನಾಳೆಯ ಮರೆಯದಿರೋಣ ಬಾ ಮತ್ತೆ ದೀಪ ಹಚ್ಚೋಣ.
“author”: “ಸಿ.ವಿ.ಶೇಷಾದ್ರಿ ಹೊಳವನಹಳ್ಳಿ”,
courtsey:prajavani.net
https://www.prajavani.net/artculture/article-features/vajapayee-poet-658420.html