ವೈವಿಧ್ಯಮಯ ಆರತಿಗಳು…!
ಭಾರತೀಯರಲ್ಲಿ ಹಬ್ಬ – ಹರಿದಿನಗಳು ಸಾಮಾನ್ಯ , ಈ ಶುಭ ಸಂದರ್ಭಗಳಲ್ಲಿ ನಡೆಯುವ ಸಾಂಪ್ರದಾಯಿಕ ಆಚರಣೆಗಳಲ್ಲಿ ದೇವರಿಗೆ ಹೂವಿನ ಅಲಂಕಾರ ಪೂಜೆ , ನೈವೇದ್ಯದ ಜೊತೆಗೆ ಪೂಜಾ ಸಮಯದಲ್ಲಿ ದೇವರಿಗೆ ಆರತಿ ತೋರುವುದು ಕೂಡಾ ಪೂಜೆಯ ಒಂದು ಅವಿಭಾಜ್ಯ ಅಂಗ, ಆರತಿಯ ಸಂಪ್ರದಾಯ ವೇದಕಾಲದಿಂದಲೂ ನಡೆದು ಬಂದದ್ದೆಂದು ಹೇಳಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ದೇವರಿಗೆ ಜ್ಯೋತಿ ಬೆಳಗುವುದು ದೇವರಿಗೆ ನಾವು ಸಲ್ಲಿಸುವ ಒಂದು ಉಪಚಾರ (ಮಂಗಳಾರತಿ, ಷೋಡಶೋಪಚಾರ ಪೂಜಾವಿಧಿಯಲ್ಲಿ ಬರುವ ಹದಿನಾರು ವಿಧದ ಸೇವೆಯಲ್ಲಿ ಒಂದು). ಈ ಕಾರ್ಯಕ್ರಮಗಳು ಪೂಜೆಯ ಸಂಭ್ರಮವನ್ನು ಹೆಚ್ಚಿಸುತ್ತವೆ.
ದೀಪ, ಪ್ರಕಾಶಿಸುವ ಸಂಕೇತ : ತಾನು ಬೆಳಗಿ ಬೇರೆಯವರಿಗೆ ಬೆಳಕಾಗುವ ಶಕ್ತಿ ದೀಪಕ್ಕಿದೆ . ಜ್ಯೋತಿ ತನ್ನನ್ನೂ ಪರರನ್ನೂ ಪ್ರಕಾಶಿಸುವುದನ್ನುವ ಸಾಂಕೇತಿಕ ರೂಪವಾಗಿ ಆರತಿ ಬೆಳಗುವುದು ರೂಢಿಯಲ್ಲಿದೆ . ಸಂಸ್ಕೃತದಲ್ಲಿ ‘ ದೀಪಯತಿ ಸ್ವಂ ಪರಚ ಇತಿ ದೀಪ!’ ಎಂಬ ಉಕ್ತಿಯೂ ಇದೆ. ದೇವರ ಮೂರ್ತಿಗೆ ಬೆಳಗಿದ ಆರತಿಯು ನಮ್ಮ ಧೀಶಕ್ತಿಯನ್ನು ಬೆಳಗಿ, ನಮ್ಮ ದೃಷ್ಟಿಯನ್ನು ದಿವ್ಯತೆಯತ್ತ ನೆಡುವಂತಾಗಲಿ ಎಂಬುದಲ್ಲದೇ , ದೇವರ ಕುರಿತಾಗಿ ನಾವು ವ್ಯಕ್ತಪಡಿಸುವ ಸಂಪೂರ್ಣವಾದ ಹಾಗೂ ನಿಷ್ಕಲ್ಮಶವಾದ ಪ್ರೀತಿಯ ದ್ಯೋತಕವೇ ಆರತಿ ಎಂಬುದಾಗಿದೆ. ನೀರಾಂಜನವು ಪೂಜಾವಿಧಿಯಲ್ಲಿ ಮುಖ್ಯವಾಗಿರುವ ಕಾರಣಕ್ಕೆ ಏಕಾರತಿ, ಪಂಚಾರತಿ, ನೆಲಆರತಿ, ಸರ್ಪಾರತಿ , ಕೂರ್ಮಾರತಿ ಮುಂತಾದುವುಗಳು ಬಳಕೆಗೆ ಬಂದಿವೆ. ನಮ್ಮ ಪೂಜೆಯ ಪರಿಕರಗಳೂ ಕೂಡಾ ಹತ್ತು ಹಲವು ವೈವಿಧ್ಯಗಳಿಂದ ಕೂಡಿರುವುದು ವಿಶೇಷ. ಮನೆಯಲ್ಲಿ ವಿಶೇಷ ಪೂಜೆಗಳು ನಡೆಯುವಾಗ ಹಾಗೂ ಹಬ್ಬದ ಸಂದರ್ಭಗಳಲ್ಲಿ ಆಕರ್ಷಕವಾದ ವಿವಿಧ ಬಗೆಯ ಆರತಿಯ ಪರಿಕರವನ್ನು ದೇವರ ಆರತಿಗಾಗಿ ಅಣಿಗೊಳಿಸುವುದು ಪೂಜೆಯ ಒಂದು ಅಂಗ ಎಂಬಂತೆ ನಡೆದು ಬಂದಿದೆ.
ಮೊದಲಿನಿಂದಲೂ ಆರತಿಯಲ್ಲಿ ವಿವಿಧ ವಿನ್ಯಾಸದ ಪರಿಕರಗಳನ್ನು ಕಾಣಬಹುದು, ಎರಡು ಬತ್ತಿಗಳಿಂದ ಹಿಡಿದು ಅನೇಕ ಬತ್ತಿಗಳನ್ನು ಉಪಯೋಗಿಸಿ ದೀಪ ಬೆಳಗುವಂತಹ ಆರತಿಗಳೂ ಇವೆ. ಹಲವು ಬತ್ತಿಗಳನ್ನು ಬಳಸಿ ಉಪಯೋಗಿಸುವ ಆರತಿಯಲ್ಲಿ ತೇರು ಆರತಿ ಮುಖ್ಯವಾದುದು. ಸಾಂಪ್ರದಾಯಿಕ ಆಕಾರ ಹೊರತುಪಡಿಸಿ ನಾನಾ ಬಗೆಯ ಆಕೃತಿಗಳ ಆರತಿಗಳು ನೋಡಲು ಸುಂದರವಾಗಿರುತ್ತವೆ. ಆಮೆ, ತೇರು , ಹೆಡೆ ಎತ್ತಿದ ನಾಗ , ನಕ್ಷತ್ರ ಇತ್ಯಾಧಿ ‘ ಆಕಾರದ ಸಾಕಷ್ಟು ವೈವಿಧ್ಯಮಯ ಬೆಳ್ಳಿ , ತಾಮ್ರ , ಹಿತ್ತಾಳೆ , ಕಂಚು , ಪಂಚಲೋಹಗಳ ದೊಡ್ಡ ಮಧ್ಯಮ ಮತ್ತು ಸಣ್ಣ ಗಾತ್ರದ ಆರತಿಯ ಪರಿಕರಗಳು ವಿನ್ಯಾಸಗೊಂಡಿರುವುದು ಗಮನಿಸುವಂತಹದು .
ಕೆಲವು ಬಗೆಯ ಆರತಿಗಳು ವಿನ್ಯಾಸಗಳು ಅದ್ಭುತವಾಗಿವೆ. ನಮ್ಮ ಪೂರ್ವಜರು ದೈನಂದಿನ ಉಪಯೋಗದ ಸಲಕರಣೆಗಳನ್ನು ಕೂಡ ಅತ್ಯಂತ ಕಲಾತ್ಮಕವಾಗಿ ತಯಾರು ಮಾಡಿದ್ದು ಅವರ ಸೃಜನಶೀಲತೆ ಗೆ ಸಾಕ್ಷಿಯಾಗಿದೆ. ಕೆಲವು ಅಪರೂಪದ ಆರತಿ ಪರಿಕರಗಳನ್ನು ಅಲಂಕಾರಿಕ ವಸ್ತುವಾಗಿ ಕೂಡಾ ಮನೆಗಳಲ್ಲಿ ಪ್ರದರ್ಶಿಸಬಹುದು . ನಮ್ಮ ಸಂಸ್ಕೃತಿಯ ದ್ಯೋತಕವಾದ ಇವು ಐತಿಹಾಸಿಕ ಹಾಗು ಕಲಾತ್ಮಕವಾದ ಮಹತ್ವವನ್ನು ಹೊಂದಿವೆ.