“ಉಸ್ತಾದ್ ಬಾಲೇಖಾನ್ ಸ್ಮರಣೆ”,

ಸಿತಾರ್‌ ನವಾಜ್‌ ಉಸ್ತಾದ್ ಬಾಲೇಖಾನ್ ಅವರು ‘ಸಿತಾರ್‌ ರತ್ನ’ ರಹೀಮತ್‌ಖಾನ್ ಅವರ ಸಂಗೀತ ಪರಂಪರೆಯ ಮನೆತನದ ಕುಡಿ. ತಮ್ಮ ‘ಹಾಡುವ ಸಿತಾರ್‌’ನಿಂದ ಪ್ರಸಿದ್ಧಿ ಪಡೆದಿದ್ದರು. ಬಾಲೇಖಾನ್‌, ಸಿತಾರ್ ಕಲಿಕೆಯನ್ನು ತಮ್ಮ ಅಜ್ಜ ರಹೀಮತ್‌ಖಾನ್ ಅವರಿಂದ ಆರಂಭಿಸಿದವರು. ರಹೀಮತ್‌ಖಾನ್ ಮಧ್ಯಪ್ರದೇಶದ ಇಂದೋರ್‌ನಿಂದ 1912ರಲ್ಲಿ ಧಾರವಾಡಕ್ಕೆ ವಲಸೆ ಬಂದವರು. ಮೈಸೂರು ಮಹಾರಾಜರಿಂದ ‘ಸಿತಾರ್ ರತ್ನ’ ಬಿರುದು ಪಡೆದಿದ್ದರು. ಉಸ್ತಾದ್ ಬಾಲೇಖಾನ್ ತಮ್ಮ ತಂದೆ ಪ್ರೊ. ಅಬ್ದುಲ್ ಕರಿಂಖಾನ್ ಅವರಿಂದ ಸಿತಾರ್ ತರಬೇತಿ ಪಡೆದು ಧಾರವಾಡ ಆಕಾಶವಾಣಿಯಲ್ಲಿ 1973ರಿಂದ 2002ರವರೆಗೆ ನಿಲಯ ಕಲಾವಿದರಾಗಿದ್ದರು. ಆಕಾಶವಾಣಿ ಹಾಗೂ ದೂರದರ್ಶನದ ‘ಎ’ ಗ್ರೇಡ್ ಕಲಾವಿದ ಕೂಡ ಆಗಿದ್ದವರು. ಅವರ ಕುಟುಂಬ ದಕ್ಷಿಣ ಭಾರತದಲ್ಲಿ ‘ಸಿತಾರ್’ ಜನಪ್ರಿಯತೆಗೆ ಅಪಾರ ಕೊಡುಗೆ ನೀಡಿದೆ. ಧಾರವಾಡದಲ್ಲಿ ನೆಲೆಸಿದ್ದರೂ ಬಾಲೇಖಾನ್ ಅವರಿಗೆ ಬೆಂಗಳೂರು ಎರಡನೇ ಮನೆಯಂತಿತ್ತು. ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಮೂರು ಅವಧಿ ಸದಸ್ಯರಾಗಿದ್ದರು. ಬೆಂಗಳೂರಿನಲ್ಲಿ ಹಲವಾರು ಕಛೇರಿ ನೀಡಿ ಹೆಸರಾಗಿದ್ದರು. 1970ರ ದಶಕದಿಂದ ಮೂರು ದಶಕಗಳ ಕಾಲ ಪ್ರತಿ ತಿಂಗಳು ಬೆಂಗಳೂರಿನಲ್ಲಿ ತರಗತಿ ನಡೆಸಿ ನೂರಾರು ವಿದ್ಯಾರ್ಥಿಗಳಿಗೆ ಸಿತಾರ್ ತರಬೇತಿ ನೀಡಿದ್ದರು. ಅವರ 50ನೇ ಜನ್ಮದಿನ ವರುಷದ ಪ್ರಯುಕ್ತ ಅಕ್ಟೋಬರ್ 1992ರಲ್ಲಿ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ಅವರ ಅಪಾರ ಶಿಷ್ಯವರ್ಗ, ಅಭಿಮಾನಿ ವೃಂದ, ಹಾಗೂ ಸ್ನೇಹಿತರು ಅವರನ್ನು ಸನ್ಮಾನಿಸಿದರು. ಭಾರತ ರತ್ನ ದಿವಂಗತ ಪಂಡಿತ ಭೀಮಸೇನ ಜೋಶಿ ಅವರ ಘನ ಉಪಸ್ಥಿತಿಯಲ್ಲಿ ಅವರ ಸಂಗೀತ ಕಛೇರಿಯಿಂದ ಸನ್ಮಾನ ಸಮಾರಂಭ ಕಳೆಗಟ್ಟಿತ್ತು. ‘ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಸಂಸ್ಥೆ ಬೆಂಗಳೂರು’ 2010ರಲ್ಲಿ ಉಸ್ತಾದ್ ಹಫೀಝ್ ಖಾನ್ (ಬಾಲೇಖಾನ್ ಪುತ್ರ) ಅವರಿಂದ ಸಂಸ್ಥೆ ಆರಂಭಗೊಂಡಿತು. ಆರು ವರ್ಷಗಳಲ್ಲೇ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಏಳು ಸಂಗೀತ ಕಛೇರಿಯನ್ನು ಯಶಸ್ವಿಯಾಗಿ ನಡೆಸಿದೆ. ಪದ್ಮವಿಭೂಷಣ ಡಾ. ಎನ್. ರಾಜಮ್, ವಿದುಷಿ ಸಂಗೀತಾ ಶಂಕರ್, ಪಂಡಿತ್ ವಿನಾಯಕ್ ತೊರವಿ, ಗ್ರ್ಯಾಮಿ ಪ್ರಶಸ್ತಿ ವಿಜೇತ ಪಂಡಿತ್ ವಿಶ್ವಮೋಹನ್ ಭಟ್, ಪದ್ಮಶ್ರೀ ಉಸ್ತಾದ್ ಶಾಹಿದ್ ಪರ್ವೆಜ್, ಡಾ. ಜಯಂತಿ ಕುಮರೇಶ್, ಪಂ.ರಾಕೇಶ್ ಚೌರಾಸಿಯಾ ಪಂ. ವೆಂಕಟೇಶ್ ಕುಮಾರ್, ಪಂ. ಗಣಪತಿ ಭಟ್ ಹಾಸಣಗಿ, ಪಂ. ಭಜನ್ ಸೊಪೊರಿ ಪಾಲ್ಗೊಂಡು ಬಾಲೇಖಾನ್ ಸ್ಮರಣಾರ್ಥ ಸಂಸ್ಥೆಯ ಆಶಯವನ್ನು ಶ್ರೀಮಂತಗೊಳಿಸಿದ್ದಾರೆ. rಪ್ರಥಮ ‘ಇನ್ಫೊಸಿಸ್-ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ’ ಪ್ರಶಸ್ತಿಯನ್ನು ಇಟಾವಾ ಘರಾಣಾದ ಸಿತಾರ್ ವಾದಕ ಉಸ್ತಾದ್ ಇರ್ಷಾದ್ ಖಾನ್‌ ಅವರಿಗೆ ಪ್ರದಾನ ಮಾಡಲಾಗಿತ್ತು. ಪಂಡಿತ್ ವೆಂಕಟೇಶ್ ಕುಮಾರ್, ಪಂಡಿತ್‌ ಗಣಪತಿ ಭಟ್ ಹಾಸಣಗಿ, ಸಂತೂರ್ ಕಲಾವಿದ ಪಂಡಿತ್‌ ಭಜನ್ ಸೊಪೋರಿ ಇವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸಂಸ್ಥೆ ರಸಿಕರಿಂದ ದೇಣಿಗೆ ಸ್ವಾಗತಿಸುತ್ತದೆ. ಮಾಹಿತಿಗಾಗಿ: ಗೋಪಾಲಕೃಷ್ಣ: 9880659800/ ಆನಂದ ಕುಲಕರ್ಣಿ: 9986755945/ ಜೋಯಿಸ್: 9845480810/ ‘ಉಸ್ತಾದ್ ಬಾಲೇಖಾನ್ ಸ್ಮರಣೆ ಸಮಿತಿ ಬೆಂಗಳೂರು’ ಅಧ್ಯಕ್ಷ ಉಸ್ತಾದ್ ಹಫೀಝ್ ಬಾಲೇಖಾನ್: 9886155663.

courtsey:prajavani.net

https://www.prajavani.net/artculture/music/ustad-

Leave a Reply