ಉದಾರಭಾವದ ವರ್ಣವ್ಯವಸ್ಥೆಯ ನಿದರ್ಶನಗಳು
ಯಾವುದೇ ವರ್ಣದಲ್ಲಿ ಹುಟ್ಟಿರಲಿ, ಗಮನೀಯ ಸಾಧನೆಗೈದ ಸ್ತ್ರೀಪುರುಷರನ್ನು ಈ ಸಮಾಜ ಆದರಿಸಿದೆ ಎನ್ನುವುದಕ್ಕೆ ಭಾರತದ ಪ್ರಾಚೀನ-ಅರ್ವಾಚೀನ ಇತಿಹಾಸದ ಉದಾಹರಣೆಗಳನ್ನು ನೋಡುತ್ತಿದ್ದೆವು.
ಮಗಧರ ಅವಸಾನದೊಂದಿಗೆ ಕ್ರಿ.ಪೂ. 187ರಲ್ಲಿ ಉದಿಸಿದವರು ಶುಂಗರು. ಬ್ರಾಹ್ಮಣನಾಗಿ ಹುಟ್ಟಿಯೂ ಕ್ಷಾತ್ರಪ್ರವೃತ್ತಿಯಿಂದ ರಾಜ್ಯಸ್ಥಾಪನೆಗೈದ ಪುಷ್ಯಮಿತ್ರಶುಂಗನ ಆಳ್ವಿಕೆಯ ಕಾಲದಲ್ಲಿ, ಚತುರ್ವರ್ಣದವರಲ್ಲದೆ, ವಿಧರ್ವಿುಯರೂ ವಿದೇಶೀಯರೂ, ತಮ್ಮ ಗುಣ-ವೃತ್ತಿಗಳ ಅಗತ್ಯಗಳಿಗೆ ಅನುಗುಣವಾಗಿ ಬ್ರಾಹ್ಮಣ್ಯ-ಕ್ಷಾತ್ರ-ವೈಶ್ಯ-ಶೂದ್ರ ವೃತ್ತಿಗಳನ್ನು ಆಯ್ದುಕೊಳ್ಳುತ್ತಿದ್ದದ್ದು ಕಾಣಬರುತ್ತದೆ. ವೈಷ್ಣವಧರ್ಮ ಸ್ವೀಕರಿಸಿದ ಗ್ರೀಕ್ ದೇಶದ ಹೀಲಿಯೋದರಸ್ ಎಂಬವನು ಸಾಂಚೀನಗರದಲ್ಲಿ ಸ್ಥಾಪಿಸಿದ್ದ ‘ವಿಷ್ಣುಸ್ತಂಭ’ವನ್ನೂ ಕಾಣಬಹುದು.
ಪೂರ್ವಮಧ್ಯಯುಗದಲ್ಲಿ, ವಿದೇಶೀಯರಾದ ‘ಅಯೋನಿಯನ್ನ’ರು ಸುಮಾರು 300 ವರ್ಷಗಳ ಕಾಲ ಈ ನಾಡಿನ ದೊರೆಗಳೊಂದಿಗೆ ಅಧಿಕಾರಕ್ಕಾಗಿ ಸೆಣೆಸಾಡಿದವರು. ಕಾಲಾಂತರದಲ್ಲಿ ಇಲ್ಲಿನ ಧರ್ಮಸಂಸ್ಕೃಗಳನ್ನು ಮೈಗೂಡಿಸಿಕೊಂಡರು. ಕ್ಷಾತ್ರಕುಲದೊಂದಿಗೆ ಗುರುತಿಸಿಕೊಂಡ ಅವರನ್ನು ‘ವ್ರಾತ್ಯಕ್ಷತ್ರಿಯರು’ ಎಂದು ಈ ಸಮಾಜ ಅಂಗೀಕರಿಸಿತು.
ಹೀಗೆ, ಚಂದ್ರಗುಪ್ತ ವಿಕ್ರಮಾದಿತ್ಯ-ಕುಮಾರಗುಪ್ತರ ಕಾಲದವರೆಗೂ ಸ್ವಧರ್ಮದೊಳಗೆ ಹಲವು ವರ್ಣ-ಪರಿವರ್ತನೆಗಳು ಜರುಗುತ್ತಲೇ ಇದ್ದವು. ಅಧಿಕಾರಕ್ಕಾಗಿಯೋ ವ್ಯಾಪಾರಕ್ಕಾಗಿಯೋ ಅನುಕೂಲಕ್ಕಾಗಿಯೋ ಬಂದು ನೆಲೆಸಿದ ವಿದೇಶಿ ಜನಾಂಗಗಳವರೂ ತಮ್ಮ ಗುಣ-ಕಾಯಕಗಳಿಗೊಪ್ಪುವಂತೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರವೃತ್ತಿಗಳನ್ನು ಸೇರಿಕೊಳ್ಳುತ್ತಿದ್ದರು. ಹಾಗೆ ಚತುರ್ವರ್ಣಗಳಲ್ಲಿ ಲೀನವಾದ ಮೇಲೂ, ಅವರವರ ಕೆಲವು ವಿಶಿಷ್ಟ ಸಾಂಸ್ಕೃತಿಕ ಗುರುತುಗಳನ್ನೂ ಆಚಾರವಿಚಾರಗಳನ್ನೂ ಉಳಿಸಿಕೊಳ್ಳುತ್ತ ಬಂದವರೂ ಹಲವರು. ಹೀಗಾಗಿಯೇ ಒಂದೊಂದು ವರ್ಣದೊಳಗೂ ಹಲವು ಉಪಪಂಗಡಗಳು, ಸಾಂಸ್ಕೃತಿಕ ವೈವಿಧ್ಯಗಳು ಎಂದಿನಿಂದಲೂ ವಿಪುಲವಾಗಿ ಕಾಣಬರುತ್ತಿವೆ.
‘ಭಟ್ನಾಗರ’, ‘ಚಿತ್ಪಾವನ’ ಮುಂತಾದ ಬ್ರಾಹ್ಮಣಕುಲದವರೆಲ್ಲ ಮೂಲತಃ ಹಲವು ಭಿನ್ನ ಕುಲಕಸುಬುಗಳಲ್ಲಿದ್ದವರು. ಕಾಲಾಂತರದಲ್ಲಿ ಬ್ರಾಹ್ಮಣ್ಯದ ಗುಣವೃತ್ತಿಗಳನ್ನು ಮೈಗೂಡಿಸಿಕೊಂಡು ಬ್ರಾಹ್ಮಣರಾದವರು. ಇಷ್ಟೆಲ್ಲ ಆಂತರಿಕ ಪರಿವರ್ತನೆಗಳಿಗೆ ಮುಕ್ತಾವಕಾಶ ನೀಡಿರುವುದು ವರ್ಣವ್ಯವಸ್ಥೆಯ ಸರ್ವಸ್ವೀಕಾರಸ್ವಭಾವಕ್ಕೆ ಸಾಕ್ಷಿ.
ಹಿಂದೆ ಬುದ್ಧನ ಜ್ಞಾನವರ್ಚಸ್ಸುಗಳಿಗೆ ಶರಣಾಗಿ ಬೌದ್ಧರಾದ ಹಲವರು, ಬುದ್ಧನ ನಂತರದ ಬೌದ್ಧರ ಅಪಕ್ವ ವ್ಯವಹಾರಗಳಿಂದ ಅಲ್ಲಿ ಆಸಕ್ತಿ ಕಳೆದುಕೊಳ್ಳಲಾರಂಭಿಸಿದ್ದರು. ಶುಂಗರ ಕಾಲಕ್ಕಾಗಲೇ ಬೌದ್ಧರಲ್ಲಿ ‘ತೇರಾವಾದಿ-ಮಹಾಸಾಂಘಿಕ’ ಮುಂತಾದ ಭಿನ್ನಪಥಗಳು ಕವಲೊಡೆದಿದ್ದವು. ಬೌದ್ಧರು ಪ್ರತಿಪಾದಿಸಿದ್ದ ಅತಿಯಾದ ವಿರಕ್ತಿ-ಆಚಾರಸಂಹಿತೆಗಳೂ ಸಾಮಾನ್ಯಜನರಿಗೆ ರುಚಿಸದೆ, ಎಟುಕದೆ ಹೋಗಲಾರಂಭಿಸಿದ್ದವು. ಬಹಳ ಮಂದಿ ಲೋಕವ್ಯವಹಾರಕ್ಕೆ ಸುಲಭವೆನಿಸುವ ಸ್ವವೃತ್ತಿ-ಸ್ವಧರ್ಮಗಳಿಗೇ ಹಿಂದಿರುಗತೊಡಗಿದರು. ವಾಮದೃಷ್ಟಿಯ ‘ಇತಿಹಾಸಕಾರ’ರು, ‘ಪುಷ್ಯಮಿತ್ರಶುಂಗನು ಕ್ರೌರ್ಯದಿಂದ ಬೌದ್ಧರನ್ನು ಭಾರತದಿಂದ ಓಡಿಸಿದ ಬ್ರಾಹ್ಮಣ ರಾಜ’ ಎಂಬ ಸುಳ್ಳುಕಥೆಗಳನ್ನು ಹೆಣೆದು ದಾರಿ ತಪ್ಪಿಸಿದ್ದಾರೆ.
ಜೈನನಾಗಿದ್ದ ಉತ್ಕಳದ ರಾಜ ಖಾರವೇಲನು ಶೌರ್ಯದಲ್ಲೂ ಆಡಳಿತದಲ್ಲೂ ಧರ್ಮಪೋಷಣೆಯಲ್ಲೂ ಕೀರ್ತಿಶಿಖರವನ್ನೇರಿದವನು. ಆತನ ಆಳ್ವಿಕೆಯಲ್ಲಿ ಜೈನ ಹಾಗೂ ವೈದಿಕಮತಗಳೆರಡಕ್ಕೂ ಸಮಾನಾದರವಿತ್ತು. ಈ ಕಾಲದಲ್ಲೂ ವೈದಿಕ, ಜೈನ, ಬೌದ್ಧ, ಶೈವ, ವೈಷ್ಣವ, ಜಾನಪದೀಯ ಮತಗಳ ನಡುವೆ ಹಾಗೂ ವರ್ಣವೃತ್ತಿಗಳಲ್ಲೂ ಜನರ ಸಹಜ ಆಯ್ಕೆಯಾಗಿ ಪರಿವರ್ತನೆಗಳು ನಡೆಯುತ್ತಿದ್ದವು. ಆದರೆ ಅವು ಇಂದಿನ ‘ಮತಾಂತರ’ಗಳಂತೆ ಅಲ್ಲ. ಬಲವಂತ, ಆಕ್ರಮಣಶೀಲ ಭಾವಗಳ ಹಿನ್ನೆಲೆ ಅಲ್ಲಿರಲಿಲ್ಲವೆನ್ನುವುದನ್ನು ಮರೆಯಬಾರದು.
ಭಾರತದಲ್ಲಿ ಭವ್ಯಸಾಮ್ರಾಜ್ಯಗಳನ್ನು ಕಟ್ಟಿ ಮೆರೆದ ವಂಶಗಳ ಪೈಕಿ ಶೂದ್ರವರ್ಣದಲ್ಲಿ ಹುಟ್ಟಿದವರೇ ಶೇ. 90ರಷ್ಟು ಇರುವುದು!
ನಂದ, ಮೌರ್ಯರೂ, ಯಾದವ, ಪರಮಾರ, ಚಂದೇಲ, ಹೊಯ್ಸಳ, ಸೇವುಣ, ಚಾಳುಕ್ಯ, ಚೋಳ, ಚೇರ, ರಾಷ್ಟ್ರಕೂಟ, ಸಂಗಮ, ಸಾಳ್ವ, ತುಳುವ, ಅರವೀಡು, ರಾಠೋಡ, ಸೋಲಂಕಿ, ಭೋನ್ಸಲೆ, ಚೌಹಾಣ ¬- ಹೀಗೆ ಸಾಗುತ್ತದೆ ಶೂದ್ರ ರಾಜವಂಶಗಳ ಸುದೀರ್ಘ ಪಟ್ಟಿ. ಆದರೆ ವಾಮಬುದ್ಧಿಯ ‘ಇತಿಹಾಸಕಾರರು’ ಇಂಥ ಮಾಹಿತಿಯನ್ನೆಲ್ಲ ಮುಚ್ಚಿಟ್ಟು, ಬ್ರಾಹ್ಮಣ-ಕ್ಷತ್ರಿಯ ‘ಜಾತಿ’ಗಳು ಇತರ ‘ಜಾತಿ’ಗಳನ್ನು ಶೋಷಿಸುತ್ತ ಬಂದರೆಂದು ನಂಬಿಸಲು, ರೋಷ ಹುಟ್ಟಿಸಿ ಜನರನ್ನು ಒಡೆಯಲು, ಜಾತಿಭೇದದ ರೋಚಕ ಸುಳ್ಳುಕಥೆಗಳನ್ನು ‘ಇತಿಹಾಸ’ದ ಪುಟಗಳಲ್ಲಿ ತುಂಬಿಟ್ಟು ದಾರಿ ತಪ್ಪಿಸಿದ್ದಾರೆ.
ಐದನೇ ಶತಮಾನದಲ್ಲಿ, ಭೋಜರಾಜನ ಸಭೆಯನ್ನಲಂಕರಿಸಿದ್ದ ಮಹಾಕವಿ ಕಾಳಿದಾಸನ ಹುಟ್ಟಿನ ಬಗ್ಗೆ ಐತಿಹಾಸಿಕ ದಾಖಲೆಗಳು ಲಭ್ಯವಿಲ್ಲದಿದ್ದರೂ, ‘ಆತ ಕುರುಬರ ಕುಲದವನು’ ಎಂಬ ಕಥೆ ಪ್ರಸಿದ್ಧ. ಅದೇನೇ ಆಗಿರಲಿ, ಆತನ ದಾರ್ಶನಿಕ ಕಾವ್ಯಸಿದ್ಧಿಯನ್ನು ಮೆಚ್ಚದಿರುವವರು ಯಾವ ವರ್ಣದಲ್ಲೂ ಇಲ್ಲ!
ಮೊದಲ ಪುಲಕೇಶಿಯಿಂದ ಮೊದಲುಗೊಂಡ ಬಾದಾಮಿ ಚಾಳುಕ್ಯ ವಂಶದವರು ಮೂಲತಃ ಶೂದ್ರರು, ಕೃಷಿ ಮಾಡುತ್ತಿದ್ದವರು. ‘ಸಲಿಕೆ’ ಹಿಡಿದು ಕೃಷಿ ಮಾಡುತ್ತಿದ್ದವರೇ ‘ಚಾಳುಕ್ಯ’ ಹೆಸರನ್ನು ಪಡೆದರು’ ಎಂಬುದು ವಿದ್ವಾಂಸರ ಅಭಿಮತ. ಬಾದಾಮಿಯ ಗುಹಾಂತರ ದೇಗುಲಗಳ ಶ್ರೇಣಿಯಲ್ಲಿ ಶಿವ-ವಿಷ್ಣು-ಜಿನ ಮತಗಳ ದೇಗುಲಗಳು ಚಾಳುಕ್ಯರ ಔದಾರ್ಯಕ್ಕೆ ಸಾಕ್ಷಿ. ಮುಂದೆ ಇನ್ನಷ್ಟು ಉದಾಹರಣೆಗಳನ್ನು ನೋಡೋಣ.
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ