ಟೈಪಿಸ್ಟ್ ತಿರಸ್ಕರಿಸಿದ ಕಥೆ ನವಿರು ಭಾವನೆಗಳ ಗರಿ

‘ಇರುವ‍ ಪಾತ್ರಗಳನ್ನು ಕಥೆಗಾರ ಸೃಷ್ಟಿಸುತ್ತಾನೋ ಅಥವಾ ಕಥೆಗಾರ ಸೃಷ್ಟಿಸಿದ ಪಾತ್ರಗಳು ಲೋಕದಲ್ಲಿ ಹುಟ್ಟಿಕೊಳ್ಳುತ್ತವೆಯೋ’,‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ಯ ಈ ಕೊನೆಯ ಸಾಲುಗಳು ಇಡೀ ಪುಸ್ತಕದ ಧ್ವನಿ ಹಾಗೂ ಇಲ್ಲಿನ ಕಥೆಗಳಿಗೆ ಹಿಡಿದ ಕೈಗನ್ನಡಿ. ಓದಿದಂತೆಲ್ಲ ನಾವೂ ತಳೆಯಬಹುದಾದ ಭಾವನೆಗಳ ಗರಿಬಿಚ್ಚಿಸುತ್ತದೆ. ಹೊಸ ತಲೆಮಾರಿನ ಯುವ ಕಥೆಗಾರ ಶಿವಕುಮಾರ ಮಾವಲಿಯವರ ಇಲ್ಲಿನ 30 ಕಥೆಗಳು ಇಂತಹದ್ದೇ ನವಿರು ಚಿತ್ರಣದ ಸಾರ. ಓದುಗರೊಡನೆ ಮಾತನಾಡುವ, ಹೊಸದೊಂದು ಚಿಂತನೆಗೆ ಎಡತಾಕುವಂತೆ ಮಾಡುವ ಕಥೆಗಳಿವೆ ಇಲ್ಲಿ. ಎರಡೇ ವಾಕ್ಯದ ಕಥೆ ಕಾಡಬಲ್ಲದು ದೀರ್ಘಕಾಲ, ಮಾತಿನಂಗಡಿಯಲ್ಲೂ ನೀರವ ಮೌನ, ಉದ್ದೇಶ ಕಾರ್ಯಗಳ ನಡುವೆ ದಾಟಲಾರದ ಕಂದಕ, ವ್ಯಕ್ತಿ ಪೂಜೆಯ ಭ್ರಾಂತಿ, ಪ್ರೇಮ ನಿವೇದನೆಯ ನಾವೀನ್ಯತೆ, ಜೀವನ ಜೀಕುವ ಇಂತಹದ್ದೇ ಕಥೆಗಳ ಸಂಕಲನ ಈ ಹೊತ್ತಿಗೆ. ಕಥೆ ಅನುಭವವಾಗಬಲ್ಲದು ಅಥವಾ ಅನುಭವ ಕಥೆಯಾಗಬಹುದು. ಇದಕ್ಕೆ ಅನ್ವರ್ಥದಂತೆ ಇವೆ ಇಲ್ಲಿ ಬರಹಗಳು. ಓದುಗರೇ ಕಟ್ಟಬಹುದಾದ, ಕಥೆಗೊಂದು ಅಂತ್ಯ ನೀಡುವ, ಅಂತ್ಯದೊಡನೆ ಆರಂಭಿಸಲೂಬಹುದಾದ ಆಯ್ಕೆಯನ್ನು ಲೇಖಕ ನೀಡಿರುವುದು ವಿಶೇಷ. ಅರ್ಥಾತ್ ಯುವಜನರ ನಾಡಿಮಿಡಿತವರಿತು ಬರೆದಂತಿದೆ. ಮೇಲ್ನೋಟಕ್ಕೆ ಹಾಸ್ಯವೆನಿಸುವ ಘಟನೆ, ಸಂಗತಿಗಳ ಒಳನೋಟ ಬೇರೇಯದ್ದೇ ಆಯಾಮ ಹೊಂದಿದ್ದು, ತನ್ಮೂಲಕ ವ್ಯವಸ್ಥೆಯನ್ನು ಪ್ರಶ್ನಿಸುವ ಧಾಟಿ ಸಮಂಜವೆನಿಸದೇ ಇರದು. ಸೂಕ್ಷ್ಮ ಗ್ರಹಿಕೆ, ಸಂವೇದನಾ ಶೀಲತೆಗೆ ಗೋಚರಿಸುವ ಅವುಗಳ ಗ್ರಹಿಕೆಗೆ ನೋಟ ಶುದ್ಧವಿರಬೇಕು. ಮಾತ್ರವಲ್ಲ ಬದುಕಿಗಲ್ಲದ, ಆದರೆ ಬರಹಕ್ಕೆ ಒಗ್ಗುವ ನಾಟಕೀಯತೆಯೂ ಇಲ್ಲಿನ ಕೆಲ ಕಥೆಗಳಲ್ಲಿದೆ ಎಂಬುದು ಲೇಖಕರ ಅಂಬೋಣ. ಎಲ್ಲರೂ ಓದಬಹುದಾದ ಪುಸ್ತಕವಿದು.

courtsey:prajavani.net

https://www.prajavani.net/artculture/book-review/modala-odu-666442.html

Leave a Reply