ತೋರಾ ಮನ ದರಪನ ಕಹಲಾಯೆ…
1970 ರ ದಶಕ…. ಧಾರವಾಡದ ‘ಕರ್ನಾಟಕ ಕಲೋದ್ಧಾರಕ ಸಂಘ’ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಶ್ರೀ ರಂಗರಂಥವರ ಮಾರ್ಗದರ್ಶನದಲ್ಲಿ ಅನೇಕ ಅತಿರಥ- ಮಹಾರಥರು ಅದರ ಸದಸ್ಯರಾಗಿದ್ದರು. ಧಾರವಾಡದ ಒಳ ಹೊರಗೆ ಸತತ ನಾಟಕಪ್ರಯೋಗಗಳಾಗುತ್ತಿದ್ದ ಸಮಯವದು. ಆಗ ಸಂಘದಲ್ಲೊಂದು ಪರಿಪಾಠವಿತ್ತು. ಯಾವುದೇ ನಾಟಕವಾದ ಒಂದು ವಾರದಲ್ಲಿ ಒಂದು ಸಭೆ ಸೇರಿ’ಸ್ಟೂಲ್ ಪ್ರೋಗ್ರಾಂ’ ಎಂಬ ಕಾರ್ಯಕ್ರಮವೊಂದು ಜರುಗುತ್ತಿತ್ತು. ಅದು ಮುಗಿದ ನಾಟಕದpost martum. . ನಾಟಕಕ್ಕೆ ಸಂಬಂಧಿಸಿದ ಸಮಸ್ತರೂ ಹಾಜರಿರಲೇ ಬೇಕಿತ್ತು. ಸಭಾಗ್ರಹದ ಮಧ್ಯದಲ್ಲೊಂದು ಸ್ಟೂಲ್. ಒಬ್ಬೊಬ್ಬರೇ ಅದರ ಮೇಲೆ ಕೂಡಬೇಕು. ಉಳಿದವರು ಅವರ ನಟನೆಯ ವಿಶ್ಲೇಷಣೆ ಮಾಡಬೇಕು. ಮೊದಲು ಉತ್ತಮ ಅಂಶಗಳನ್ನೆಲ್ಲ ಹೇಳಿ, ಅಭಿನಂದಿಸಿ ನಂತರ ಸುಧಾರಣೆಯಾಗ ಬೇಕಾಗಿದ್ದವರ ಬಗ್ಗೆ ಚರ್ಚೆ…. ಅಭಿನಯ ರಂಗದ ಮೇಲಿನ ಚಲನ ವಲನ, dialogue delivery, ಧ್ವನಿಯ modulation, ಎಲ್ಲದರ ಬಗ್ಗೆ ಚರ್ಚೆ ಸಭೆಯ ಉದ್ದೇಶ. ಯಾರೂ ಯಾವ ಮಾತನ್ನೂ ಗಂಭೀರವಾಗಿ ತೆಗೆದುಕೊಳ್ಳದೇ ಎಲ್ಲ ಅಭಿಪ್ರಾಯಗಳನ್ನೂ ಸಮಚಿತ್ತದಿಂದ ಸ್ವೀಕರಿಸಿ ಅಪೇಕ್ಷಿತ ಬದಲಾವಣೆ ಮಾಡಿಕೊಂಡು ಮುಂದಿನ ನಾಟಕವನ್ನು ಯಶಸ್ವಿಗೊಳಿಸುತ್ತಿದ್ದರು. ಚಿಕ್ಕ ಪುಟ್ಟ ಅಸಮಾಧಾನಗಳು, ಕಾಲೆಳೆಯುವಿಕೆ, ಸಭೆ ಮುಗಿಸಿ ಹೊರಹೊರಟೊಡನೇ ಮಾಯವಾಗಿ ಬಿಡುತ್ತಿದ್ದವು… ಒಂದು ರೀತಿ ‘deep cleaning’… ಎಷ್ಟೇ ಹಿರಿಯ ಸದಸ್ಯರಾಗಿರಲಿ ಈ security checkನಿಂದ ರಿಯಾಯಿತಿ ಊಹುಂ….
ಇದನ್ನು ನೆನಸಿದಾಗಲೆಲ್ಲ ನನ್ನ ಮನಸ್ಸಿಗೆ ಒಂದು ವಿಚಾರ ಬರುತ್ತದೆ…ನಮ್ಮ ಜೀವನದಲ್ಲೂ ಆಗಾಗ ಇಂಥ ‘ಸ್ಟೂಲ್ ಪ್ರೋಗ್ರಾಮ್” ಆಗಬೇಕು. ನಿತ್ಯದ ಧಾವಂತದಲ್ಲಿ ಯಾವುದಕ್ಕೂ ಸಮಯವಿಲ್ಲದೇ ಒದ್ದಾಡುವ ನಮ್ಮಲ್ಲಿ ಇಂಥ ಎಷ್ಟೋ ಗುಣ/ ದೋಷಗಳು ಗಮನಕ್ಕೆ ಬರುವುದೇ ಇಲ್ಲ. ಯಾರಾದರೂ ತೋರಿಸಿದರೆ ಬಡ ಪೆಟ್ಟಿಗೆ ಒಪ್ಪಿಕೊಳ್ಳುವ ಜಾಯಮಾನವೂ ಇರುವುದಿಲ್ಲ. ಪ್ರಶಂಸೆ ಹಿತವೆನಿಸಿದಷ್ಟು ನಿಂದೆ ಹಿತವೆನಿಸುವುದಿಲ್ಲ. ನಮಗೆ ಸುಳ್ಳೇ ಇದ್ದರೂ ಕೇವಲ ಹೊಗಳಿಕೆಯೇ ಆಪ್ಯಾಯಮಾನ. ಅಂತೆಯೇ likes, comments ಸತತ ತುಲಾಭಾರ. ವ್ಹಾ ವ್ಹಾಗಳು ಮನಸ್ಸನ್ನು ಹಿಗ್ಗಿಸುವಷ್ಟು ಬೇರಾವುದೂ ಹಿಗ್ಗಿಸುವುದಿಲ್ಲ… ಅಂತೆಯೇ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳೂ ಅತ್ಯಂತ ಕಹಿಯನಿಸಿ ಬಿಡುವ ಅಪಾಯವೇ ಹೆಚ್ಚು. ಎಷ್ಟೇ ಇದನ್ನು ಮಾನವ ಸಹಜ ಗುಣ ಎಂದು ಸಮಾಧಾನಿಸಿಕೊಂಡರೂ ಅದು ನಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಒಂದು ಸಸಿ ಬೆಳೆಯುವ ಪ್ರಕ್ರಿಯೆಯಲ್ಲಿ ನೀರು ಗೊಬ್ಬರದ ಪೋಷಣೆಯ ಜೊತೆ ಜೊತೆಗೆ, ಒಣಗಿದ ಭಾಗ ಕತ್ತರಿಸಿ ಒಗೆಯುವದು, ಒಣಗಿದೆಲೆಗಳ ಉದುರಿಸುವವದು trim ಮಾಡುವದೂ ಸೇರಿಕೊಂಡಿರುತ್ತದೆ. ಹಾಗೆಯೇ ಬರಿ ಪ್ರಶಂಸೆಯ ಆರಾಧರಾಗಿರದೇ ದೋಷ ಗುರುತಿಸಿ ತಿದ್ದಿಕೊಳ್ಳುವದೂ ಒಂದು ಪ್ರಯತ್ನವಾಗಬೇಕು… ಯಾವ ಮನುಷ್ಯನೂ ಪರಿಪೂರ್ಣನಲ್ಲ. ಆದರೆ ಆ ದಿಶೆಯಲ್ಲಿ ಎರಡು ಹೆಜ್ಜೆ ನಡೆದರೂ ಸ್ವಲ್ಪ ಸಾಧನೆಯಾದಂತೆಯೇ..
ಯಾರಾದರೂ ದೋಷ ತೋರಿಸಿದರೆ ತಪ್ಪು ತಿದ್ದಿದರೆ ಮನಸ್ಸು ಒಗರು/ ಕಹಿ ಮಾಡಿಕೊಳ್ಳುವ ಕಾರಣವಿಲ್ಲ. ದೋಷರಹಿತರಾಗಬೇಕೆಂದರೆ ದೋಷಗಳನ್ನು ತಾನೇ ಕಡಿಮೆ ಮಾಡಿಕೊಳ್ಳಬೇಕು? ಕಾರಣ ಮನಸ್ಸೊಂದು ಕನ್ನಡಿಯಾಗಿರಲಿ ಅದರಲ್ಲಿ ಆಗಾಗ ನೋಡೋಣ..ಮುಖಕ್ಕೆ ಮೆತ್ತಿದ್ದನ್ನು ತೊಳೆಯೋಣ.
ಇದು ಉಪದೇಶವಲ್ಲ. ನಾನು ಇದನ್ನು ಸಾಧಿಸಿದ್ದೇನೆ ಎಂದಂತೂ ಖಂಡಿತ ಅಲ್ಲ. ಯಾಕೋ ಬೆಳ್ಳಂಬೆಳಿಗ್ಗೆ ಸಂಘ ನೆನಪಾಯಿತು. ಜೊತೆಗೆ ನೆನಪುಗಳ ಇನ್ನಿಲ್ಲದ ಮೆರವಣೆಗೆ. ಅದು ಸ್ಟೂಲ್ ಪ್ರೊಗ್ರಾಮ್ ಗೆ ಬಂದು ನಿಂತಾಗ ನನ್ನೊಳಗೇ ಬಂದ ಒಂದು ವಿಚಾರಧಾರೆ ಇದು… ಹೀಗೆ ಸಾಧ್ಯವಾದರೆ ಎಷ್ಟು ಚನ್ನ ಎನಿಸಿತು ಮನಸ್ಸಿಗೆ ಇದನ್ನು ಇತರರಿಗೆ ಎಂದು ಬರೆಯುವದಕ್ಕಿಂತ ನಾನು Auto suggestions ಅಥವಾ self counselling ಎಂದೇ ಪರಿಗಣಿಸುತ್ತೇನೆ. ಯಾರಿಗಾದರೂ ಇದು ಸರಿ ಅನಿಸಿದರೆ ‘ಸೋನೆ ಪೆ ಸುಹಾಗಾ’ ಇಲ್ಲದಿದ್ದರೆ’ ಹಾಗೇ ಸುಮ್ಮನೇ’ ಅಷ್ಟೇ….