ತಿರಿ
ರೈತರು ತಾವು ಬೆಳೆದ ದವಸ ಧಾನ್ಯವನ್ನು ಸುರಕ್ಷಿತವಾಗಿ ದಾಸ್ತಾನು ಮಾಡಿಕೊಳ್ಳಲು ತಮ್ಮದೇ ಆದ ಹತ್ತು ಹಲವಾರು ವಿಧಾನಗಳನ್ನು ಕಂಡು ಕೊಂಡಿದ್ದರು. ಅದರಲ್ಲಿ ಅತೀ ಮುಖ್ಯವಾದುದು ಬೈ ಹುಲ್ಲಿನಿಂದ ನಿರ್ಮಿಸುವ ಅತಿ ವಿಶಿಷ್ಟವಾದ ಹಾಗೂ ಅಪರೂಪದ ಧಾನ್ಯ ಸಂಗ್ರಹ ವ್ಯವಸ್ಥೆ. ಇದಕ್ಕೆ ಕನ್ನಡದಲ್ಲಿ ‘ತಿರಿ’ ಎಂತಲೂ, ತುಳುವಿನಲ್ಲಿ ‘ತುಪ್ಪೆ’ ಎಂತಲೂ ಹೆಸರಿಸುತ್ತಾರೆ. ಇದರಲ್ಲಿ ಸಂಗ್ರಹಿಸಿದ ದವಸ ಧಾನ್ಯಗಳು ಹುಳು- ಹುಪ್ಪಟೆಗಳ ಬಾಧೆಗಳಿಂದ ಮುಕ್ತವಾಗಿರುವುದಲ್ಲದೇ, ವಾತಾವರಣದ ಯಾವ ವೈಪರೀತ್ಯೆಗಳಿಂದಲೂ ಹಾಳಾಗುವುದಿಲ್ಲ. ಪರಿಸರ ಸ್ನೇಹಿ ರಚನೆಯಾದ ಈ ಕಣಜ ಪೂರ್ಣ ಪ್ರಮಾಣದಲ್ಲಿ ಭತ್ತದ ಹುಲ್ಲಿನಿಂದಲೇ ತಯಾರಾಗುತ್ತದೆ. ಈ ವ್ಯವಸ್ಥೆ ಕೇವಲ ಧಾನ್ಯದ ಸುರಕ್ಷಿತ ದಾಸ್ತಾನಿಗಷ್ಟೇ ಅಲ್ಲದೇ, ಬಿತ್ತನೆಗೆ ಬೇಕಾದ ‘ ಬೀಜ ಬ್ಯಾಂಕ್’ ಆಗಿಯೂ ಉಪಯುಕ್ತ. “ತಿರಿ ಇದ್ದ ಮನೆಗೆ ಸಿರಿ ಬರುತ್ತದೆ!” ಎಂಬ ನುಡಿಗಟ್ಟು ಇದೆ. ಆಧುನಿಕ ಜೀವನ ಕ್ರಮದಲ್ಲಿ ಕಣ್ಮರೆಯಾಗಿರುವ ನಮ್ಮ ಹಿರಿಯರ ಇಂತಹ ಬೇಸಾಯದ ವಿಧಿ, ವಿಧಾನಗಳನ್ನು ಈ ಕಾಲದ ಯುವ ಜನಾಂಗಕ್ಕೆ ಪರಿಚಯಿಸಬೇಕಿದೆ.
ಹೊಸ್ಮನೆ ಮುತ್ತು