ವಿದುಷಿ ಗಿರಿಜಾ ದೇವಿ ಅವರು ಭಾರತೀಯ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಖ್ಯಾತಿ ಪಡೆದವರು. ಅವರು ಹಾಡುತ್ತಿದ್ದುದು ಬನಾರಸ್ ಘರಾಣಾ ಶೈಲಿಯಲ್ಲಿ. ಖಯಾಲ್, ಠುಮ್ರಿ, ದಾದ್ರಾ ಸೇರಿದಂತೆ ಹಲವು ಪ್ರಕಾರಗಳಲ್ಲಿ ಹಿಡಿತ ಹೊಂದಿದ್ದರೂ, ಅವರು ಹೆಚ್ಚು ಖ್ಯಾತರಾಗಿದ್ದು ಠುಮ್ರಿ ಶೈಲಿಯ ಬಳಕೆಯಿಂದ. ಠುಮ್ರಿ ಶೈಲಿಯ ಮಹಾರಾಣಿ ಎಂದೂ ಗಿರಿಜಾ ಅವರನ್ನು ಕರೆಯುತ್ತಿದ್ದರು. ಗಿರಿಜಾ ಅವರ ತಂದೆ ರಾಮದೇವ್ ರೈ. ಗಿರಿಜಾ ಅವರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಕುರಿತು ಪ್ರೀತಿಯನ್ನು ಬೆಳೆಸಿದ್ದು ರಾಮದೇವ್ ಅವರು. ತಂದೆಯಿಂದ ಪ್ರೇರಣೆ ಪಡೆದು, ಐದನೆಯ ವಯಸ್ಸಿನಲ್ಲೇ ಗಿರಿಜಾ ಸಂಗೀತ ಕಲಿಯಲು ಆರಂಭಿಸಿದರು. ಸಂಗೀತ ಗುರು ಶ್ರೀಚಂದ್‌ಜಿ ಅವರ ತರಬೇತಿ, ಕಠಿಣ ಅಭ್ಯಾಸ, ಪತಿಯಿಂದ ದೊರೆತ ಬೆಂಬಲ ಇವೆಲ್ಲವುಗಳ ಕಾರಣದಿಂದಾಗಿ ಗಿರಿಜಾ ಅವರು ಸ್ವರಗಳ ಮೇಲೆ ಹಿಡಿತ ಸಾಧಿಸಿದರು. ಕಾವ್ಯ ಮತ್ತು ಸಾಹಿತ್ಯದ ಪ್ರಾಮುಖ್ಯವನ್ನು ಅರ್ಥ ಮಾಡಿಕೊಂಡ ಗಿರಿಜಾ, ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು ಹಲವು ಕೃತಿಗಳನ್ನು ರಚಿಸಿದರು. ಭಾವನೆಗಳ ಅಭಿವ್ಯಕ್ತಿಯೇ ಅವರ ರಚನೆಗಳಲ್ಲಿ ಮುಖ್ಯವಾಗಿದ್ದವು. ಪ್ರೀತಿ, ಬಯಕೆ ಮತ್ತು ಭಕ್ತಿ ಠುಮ್ರಿ ಪ್ರಕಾರದ ಅವಿಭಾಜ್ಯ ಭಾವಗಳು. ಇವನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ ಗಿರಿಜಾ, ಗೀತಸಾಹಿತ್ಯವು ಜೀವಂತಿಕೆಯಿಂದ ತುಂಬಿರುವಂತೆ ಮಾಡಿದರು. ಗಿರಿಜಾ ಅವರ ಮೊದಲ ಗಾಯನವು 1949ರಲ್ಲಿ ಅಲಹಾಬಾದ್ ರೇಡಿಯೊ ಕೇಂದ್ರದಿಂದ ಪ್ರಸಾರವಾಯಿತು. ಅವರು ವೃತ್ತಿಪರ ಸಂಗೀತಗಾರ್ತಿಯಾದಾಗ ಅವರ ವಯಸ್ಸು ಕೇವಲ 20 ವರ್ಷ. ಅಲ್ಲಿಂದ ಮುಂದೆ ಅವರ ಇಡೀ ಜೀವನ ಹೊಸತನ್ನು ಕಲಿಯುವತ್ತ, ಸಂಗೀತ ಪ್ರದರ್ಶನ ನೀಡುವತ್ತ ಕೇಂದ್ರೀಕೃತವಾಯಿತು. ಅವರು ಭಾರತದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲಿಯೂ ಸಂಗೀತ ಕಛೇರಿ ನಡೆಸಿಕೊಟ್ಟರು. ಅವರ ಪ್ರತಿಭೆಯನ್ನು ಗುರುತಿಸಿ, ಹತ್ತು ಹಲವು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ತಾನ್‌ಸೇನ್ ಪ್ರಶಸ್ತಿ, ಪದ್ಮಶ್ರೀ (1972), ಪದ್ಮಭೂಷಣ (1989) ಮತ್ತು ಪದ್ಮವಿಭೂಷಣ (2016) ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಗಿರಿಜಾ ದೇವಿ ಅವರು 88ನೇ ವಯಸ್ಸಿನಲ್ಲಿ, 2017ರ ಅಕ್ಟೋಬರ್ 24ರಂದು ಮೃತರಾದರು.
courtsey:prajavani.net
https://www.prajavani.net/artculture/music/tumri-style-singer-girija-devi-663012.html