ತೇಜೋ-ತುಂಗಭದ್ರಾ

ತೇಜೋ-ತುಂಗಭದ್ರಾ
ಇದೊಂದು ಸಾರ್ವಕಾಲಿಕ ಕೃತಿ ಎನ್ನಬಹುದು. . ಇದರಲ್ಲಿ ಬರುವ ಕೆಲ ಪಾತ್ರಗಳಿಂದಾಗಿ ನಮಗೆ ಕಾಲದ ಗಣನೆಯುಂಟಾಗುತ್ತದೆಯಾದ್ದರಿಂದಾಗಿ ಇದರಲ್ಲಿ ಬದುಕಿದವರು 15-16 ನೆಯ ಶತಮಾನದವರು ಎಂದು ಹೇಳಬಹುದಾದರೂ ನಾವು ಇಂದೂ ಇದೇ ಬದುಕನ್ನು ಅನುಭವಿಸುತ್ತಿದ್ದೇವೆ.
ಕಾಲ ರಾಜರದಾದರೂ ಇದರಲ್ಲಿ ಬರುವ ನಾಯಕ ನಾಯಕಿಯರು ಸಾಮಾನ್ಯರು. ಕೆಲವೊಮ್ಮೆ ರಾಜ-ರಾಣಿಯರೇ ಖಳರೂ ಆಗಿ ಸಾಮಾನ್ಯ ಜನರ ಜೀವನವನ್ನು ಹಾಳುಗೆಡವುತ್ತಾರೆ..
ತೇಜೋ ನದಿಯ ದಡದ ಬದುಕು ಒಂದೆಡೆಯಾದರೆ ಇನ್ನೊಂದೆಡೆ ತುಂಗಭದ್ರಾ ನದಿಯ ದಡದ ಬದುಕು. ದೇಶಗಳು ಬೇರೆ ಬೇರೆಯಾದರೂ, ಪದ್ಧತಿಗಳು ಹಾಗೂ ಸಂಸ್ಕೃತಿಗಳು ಬೇರೆ ಬೇರೆಯಾದರೂ ಅದೇ ಧರ್ಮ ಧರ್ಮಗಳ ಸಂಘರ್ಷ. ಅದೇ ಮಾನವ ರಾಗ-ದ್ವೇಷಗಳ ಕಥೆ..
ಇದೊಂದು ಬೃಹತ್ ಕಾದಂಬರಿ. ಇದರ ರಚನೆಗೆ ಬೇಕಾದ ಸಿದ್ಧತೆ ಸಹಜವಾಗಿಯೇ ಹೆಚ್ಚು ಹರಹಿನದು. ಮೊದಲು ಕಥಾವಸ್ತುವಿನ ಸಿದ್ಧತೆ. ಪಾತ್ರಗಳ ವಿನ್ಯಾಸ, ಪ್ರತಿಯೊಂದು ಘಟನೆಯ ಸೂಕ್ಷ್ಮವಾದ ನಿರೂಪಣೆ, ಚಾರಿತ್ರಿಕ ಬದ್ಧತೆ ಅತ್ಯಂತ ಅವರ್ಣನೀಯ. ಇದರಲ್ಲಿ ಬರುವ ಸತಿಪದ್ಧತಿ, ಮಾಸತಿಯಾಗುವ ಪದ್ಧತಿಯ ವರ್ಣನೆ ಎದೆ ನಡುಗಿಸುವಂಥದು. ಲೆಂಕನಾಗಿ ಕೃಷ್ಣ ದೇವರಾಯನಿಗೆ ಮಗ ಜನಿಸಿದಾಗ ತನ್ನ ಜೀವಕ್ಕೆ ಎರವಾಗುವ ಕೇಶವ ಕೂಡ ಯಾವ ಮಹಾಸತಿಗೂ ಕಡಿಮೆ ಇಲ್ಲವೆಂದೆನ್ನಿಸುತ್ತದೆ. ಜೀವನದಲ್ಲಿ ಏನನ್ನೋ ಮಹತ್ತನ್ನು ಸಾಧಿಸುವ ಉದ್ದೇಶದಿಂದ ತನ್ನ ಪ್ರೀತಿಯನ್ನೆ ಪಣಕ್ಕಿಟ್ಟು ಜೀವಕ್ಕೇ ಎರವಾದ ಕೇಶವ, ಅದೇ ರೀತಿಯಲ್ಲಿ ಪ್ರೇಯಸಿ ಬೆಲ್ಲಾಳನ್ನು ವರಿಸುವುದಕ್ಕಾಗಿ ಅಪಾರ ಧನಸಂಪತ್ತನ್ನು ಗಳಿಸುವ ಆಶೆಯಿಂದ ದೂರದ ಲಿಸ್ಬನ್ ನಗರದಿಂದ ಸುದೀರ್ಘಸಮುದ್ರ ಪ್ರಯಾಣ ಮಾಡಿ ಭಾರತಕ್ಕೆ ಬರುವ ಗೇಬ್ರಿಯಲ್… ಇವರಿಬ್ಬರೂ ಪ್ರೀತಿಯಲ್ಲಿ ವೈಫಲ್ಯವನ್ನೇ ಅನುಭವಿಸುತ್ತಾರೆ. ಕುಸ್ತಿಯ ಪಣದಲ್ಲಿ ಗೆದ್ದು ಹಂಪಮ್ಮನನ್ನು ಮದುವೆಯಾದರೂ ಅವಳೊಂದಿಗೆ ಪರಿಪೂರ್ಣ ವೈವಾಹಿಕ ಜೀವನವನ್ನು ಕಳೆಯಲಾಗದ ಕೇಶವ.. ಆ ಸುದೀರ್ಘ ಪ್ರಯಾಣದ ನಡುವೆ ಅನೇಕ ಕರುಣಾಜನಕ ಪ್ರಸಂಗಗಳಿಗೆ ಗುರಿಯಾದ ಗೇಬ್ರಿಯಲ್… ಹಸಿವಿನಿಂದ ಕಂಗಾಲಾದಾಗ ಸತ್ತ ಇಲಿಯನ್ನು ಬೇಯಿಸಿ ತಿನ್ನುವ ಪ್ರಸಂಗವಂತೂ ಅತ್ಯಂತ ಹೇವರಿಕೆಯನ್ನುಂಟು ಮಾಡುವಂಥದು. ಧರ್ಮಾಂಧತೆಯ ಕ್ರೂರ ಅಲಗಿಗೆ ಸಿಲುಕಿದ ಅವನು ಎರಡೂ ಜಾತಿಯವರ ಕ್ರೌರ್ಯಕ್ಕೊಳಗಾಗಿ ಕಿವಿ ಮೂಗುಗಳನ್ನೇ ಕತ್ತರಿಸಿಕೊಳ್ಳುವ ಶಿಕ್ಷೆಗೊಳಗಾಗುತ್ತಾನೆ. ಹೆಸರು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅದರ ಜೊತೆಗೇ ಯಾವ ಬೆಲ್ಲಾಳ ಸಲುವಾಗಿ ಅರ್ಧ ಭೂಮಂಡಲವನ್ನೇ ಸುತ್ತಿ ಬಂದನೋ ಆ ಬೆಲ್ಲಾ ಈಗ ಪರರ ಸತಿ. ಎರಡು ಮಕ್ಕಳ ತಾಯಿ. ಒಬ್ಬರನ್ನೊಬ್ಬರು ಗುರುತಿಸಿ ವೇದನೆ ಪಡುತ್ತಾರೆ… ಇವರೀರ್ವರ ಪ್ರೀತಿಯ ಕಥೆಯನ್ನು ಅರಿತಂಥ ಬೆಲ್ಲಾಳ ಪತಿಯ ಸಮಾಧಾನದಿಂದ ಸ್ಪಂದಿಸುವ ಹೃದಯ ವೈಶಾಲ್ಯತೆ ಬಹುಶಃ ನಮ್ಮ ಭಾರತೀಯ ಪತಿಯಲ್ಲಿ ಕಾಣದೇನೋ ಎಂಬ ಭಾವ ಒಂದು ಕ್ಷಣ ನನ್ನ ಮನದಲ್ಲಿ ಹೊಳೆದುಹೋಗಿದ್ದಂತೂ ನಿಜ!
ಈ ಕಾದಂಬರಿಯಲ್ಲಿಯ ಕೆಲವು ವಾಕ್ಯಗಳು ಜೀವನದ ನಿತ್ಯ ಸತ್ಯವನ್ನು ಸಾರುತ್ತವೆ… ಉದಾಹರಣೆಗೆ, “ಜೀವ ಉಳಿಸಿಕೊಳ್ಳುವುದೇ ಈ ಜಗತ್ತಿನ ಶ್ರೇಷ್ಠ ಧರ್ಮ… ಹೊಟ್ಟೆ ತುಂಬಿರುವಾಗ ಧರ್ಮವನ್ನು ಕುರಿತಾಗಿ ನಾವಾಡುವ ಮಾತುಗಳಿಗೂ, ಪ್ರಾಣ ಹೋಗುವ ಸಂದರ್ಭದಲ್ಲಿ ನಾವಾಡುವ ಮಾತುಗಳಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ…” ಪುರಂದರದಾಸರ ಬಾಯಿಯಿಂದ ಹೇಳಿಸಿದ ಮಾತುಗಳು….”ಆ ಶ್ರೀ ಹರಿ ನಾದಯೋಗಿ. ಪ್ರತಿಯೊಬ್ಬರನ್ನೂ ತಂಬೂರಿ ಮಾಡಿಕೊಂಡು ಹಾಡು ಹಾಡ್ತಾನೆ ಇರ್ತಾನೆ. ಆದರೆ ಬರೀ ವಿಷಾದ ರಾಗವನ್ನೇ ಅವನಾದರೂ ಎಷ್ಟು ದಿನ ಹಾಡೋಕೆ ಸಾಧ್ಯ ಹೇಳು? ಭಗವಂತನಾದರೂ ಅಷ್ಟೇ, ಮನುಷ್ಯನಾದರೂ ಅಷ್ಟೇ- ಒಂದೇ ರಾಗ ನುಡಿಸೋಕೆ ಬೇಸರ ಬರ್ತದೆ. ಸ್ವಲ್ಪ ದಿನ ಬಿಟ್ಟು ಹೊಸ ಸಂಭ್ರಮದ ರಾಗ ಹಾಡೋಕೆ ಶುರು ಮಾಡ್ತಾನೆ..” ಎಂಥ ಸುಂದರ ಸತ್ಯಗಳಿವು!
ವಾಸ್ಕೋಡಗಾಮಾ, ಅಲ್ಬುಕರ್ಕ್ ರಂಥ ಸಾಹಸೀ ನಾವಿಕರೊಳಗಿನ ಅಸೀಮ ಕ್ರೌರ್ಯ ಎರಡೂ ನಮ್ಮನ್ನು ಮಾನಸಿಕ ಹಿಂಸೆಗೀಡು ಮಾಡುತ್ತವೆ. ನಾವೆಯಲ್ಲಿ ವರ್ಷಾನುಗಟ್ಟಲೆ ದುಡಿದ ಕೆಲಸಗಾರರ ಆರೋಗ್ಯ ಕೆಟ್ಟರೆ ಸಮುದ್ರಕ್ಕೆ ತಳ್ಳುವುದರಿಂದ ಹಿಡಿದು ದಾರಿಯಲ್ಲಿ ಸಿಗುವ ಎಲ್ಲಾ ಮಹ್ಮದೀಯ ದೇಶಗಳನ್ನೂ ಕ್ರೂರವಾಗಿ ಆಕ್ರಮಿಸುವ ಸಂಭವಗಳು ಮೈ ನಡುಗಿಸುತ್ತವೆ. ಇಷ್ಟಾಗಿಯೂ ಅವರ ಅಂತಿಮ ಲಕ್ಷ್ಯ ಭಾರತ, ಅದರೊಡಲಿನ ಮಸಾಲೆಗಳು- ಅದರಲ್ಲೂ ಮೆಣಸು- ಮತ್ತು ಸಾಧ್ಯವಿದ್ದಷ್ಟು ಪ್ರದೇಶಗಳಲ್ಲಿ ತಮ್ಮ ಆಧಿಪತ್ಯ! ಮೆಣಸಿನ ಎದುರು ಚಿನ್ನವೂ ಕಳೆಗುಂದುವ, ಅರಬ್ಬೀ ಕುದುರೆಗಳ ಶಕ್ತಿ, ಸಾಮರ್ಥ್ಯಕ್ಕೆ ಮನಸೋಲುವ ರಾಜರು ವ್ಯಾಪಾರಿಗಳ ಶರತ್ತುಗಳನ್ನು ಒಪ್ಪಿಕೊಳ್ಳುವಲ್ಲಿ ವಿಳಂಬಿಸದ ಅನಿವಾರ್ಯತೆ ವ್ಯಾಪಾರವೆಂಬ ಮೋಸದ ಲೋಕದ ಮಗ್ಗುಲುಗಳನ್ನು ತೆರೆಯುತ್ತದೆ.
ಈ ಕಾದಂಬರಿಯ ವಸ್ತು ವಿಷಯದ ಹರಹು ಕೊನೆಯ ಪುಟದ ವರೆಗೂ ಅಚ್ಚರಿಪಡಿಸುತ್ತಲೇ ಸಾಗುತ್ತದೆ. ಒಂದು ನೀರಿನಿಂದ ಇನ್ನೊಂದು ನೀರು ಸೇರಲು ವರ್ಷಾನುಗಟ್ಟಲೆ ಹಡಗಿನಲ್ಲಡಗಿ ಸಾಗುವ ಬೆಲ್ಲಾಳ ಹೊಂಬಣ್ಣದ ಮೀನುಗಳು ಮತ್ತು ಕರಿಕಾಳುಮೆಣಸು ಇವೆರಡೂ ತೇಜೋ ತುಂಗಭದ್ರಾ ಕಥಾನಕದ ತಳಪಾಯಗಳು ಎಂದೆನಿಸುತ್ತದೆ. ಇಂಥದೊಂದು ಬರಹಕ್ಕೆ ಅಗತ್ಯವಿರುವ ಅಧ್ಯಯನ ಮತ್ತು ಭಿನ್ನಪ್ರದೇಶಗಳ ಸೂಕ್ಷ್ಮಾವಲೋಕನಗಳಿಗೆ ಆಳವಾದ ಪ್ರತಿಭಾಚಕ್ಷುವಿನ ಅವಶ್ಯಕತೆ ತುಂಬ ಹೆಚ್ಚು.
ಹಂಪಮ್ಮ ಅಮ್ಮದಕಣ್ಣ ಅಂದರೆ ಗೇಬ್ರಿಯಲ್ಗೆ ತನ್ನನ್ನು ಬಿಟ್ಟು ಹೋಗದಿರಲು ಹೇಳುತ್ತಾಳೆ. ಆದರೆ ಗೇಬ್ರಿಯಲ್ “ಕಿವಿ, ಮೂಗುಗಳಿಲ್ಲದ ವ್ಯಕ್ತಿ ಸ್ವಲ್ಪೇ ದಿಗಳಲ್ಲಿ ಬೇಸರ ಹುಟ್ಟಿಸುತ್ತಾನೆ..” ಎಂದಾಗ ಆಕೆ, …” ಮನುಷ್ಯನಿಗೆ ಬೇಕಾದದ್ದು ಹೃದಯವೊಂದೇ” ಎಂದು ಉತ್ತರಿಸುತ್ತಾಳೆ..
ಕೊನೆಯಲ್ಲಿ ಗೇಬ್ರಿಯಲ್ ಅಂದರೆ ಅಮ್ಮದಕಣ್ಣ ಹಾಗೂ ಹಂಪಮ್ಮ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವುದರೊಂದಿಗೆ ಈ ಕಾದಂಬರಿಯೂ ಮುಗಿಯುತ್ತದೆ. ಕೆಲವು ಪ್ರಸಂಗಗಳಲ್ಲಿ ಈ ಕಾದಂಬರಿ ಕೆ ವಿ ಅಯ್ಯರರ “ಶಾಂತಲಾ” ವನ್ನು ನೆನಪಿಗೆ ತರುತ್ತದೆ.. ಒಟ್ಟಿನಲ್ಲಿ ಇದೊಂದು ಸುಂದರ ಕಾದಂಬರಿ.
ಈ ಕಾದಂಬರಿಯನ್ನು ರಚಿಸುವಲ್ಲಿ ಲೇಖಕ ವಸುಧೇಂದ್ರರು ಅತ್ಯಂತ ಶೃದ್ಧೆಯಿಂದ ಸಂಶೋಧನೆ ಮಾಡಿದ್ದಾರೆ. ಇದು ಎಲ್ಲರೂ ಒಮ್ಮೆಯಾದರೂ ಓದಲೇಬೇಕಾದ ಕಾದಂಬರಿ.

Leave a Reply