ಸ್ವಚ್ಛ ಭಾರತ ಅಭಿಯಾನ
“ಕಸಾನ ಅಲ್ಲಿಲ್ಲೆ,ಗಟರದಾಗ ಒಗೀತೀರ್ಯಾಕ? ಅಪಾರ್ಟ್ಮೆಂಟ್ ನ ಬೇಸ್ ಮೆಂಟ್ ದಾಗ ಕಸದ ಡಬ್ಬೀ ಇಟ್ಟೇವಿ. ಅದರಾಗನ ಹಾಕರಿ. ”
“ನಾ ಇಲ್ಲೇ ಒಗ್ಯಾಕಿ. ನಿಂಗೇನ ಮಾಡೂದು? ನಿನ್ನ ಮನೀ ಹತ್ರಂತೂ ಚೆಲ್ಲಿಲ್ಲಾ…”
“ರಸ್ತೆದಾಗ ಯಾಕ ಊಟಾ ಮಾಡಿದ ಎಲೀ ಛೆಲ್ಲತೀರೀ? ಕಸದ ಡಬ್ಯಾಗ ಹಾಕ್ರೆಲಾ…”
“ಯಾಕರೀ ನಿಮಗ ಮಾಡಲಿಕ್ಕೆ ಕೆಲಸಿಲ್ಲೇನು?ಎಲ್ಲಾರಿಗೂ ಫುಕಟ ಉಪದೇಶ ಕೊಟಗೋತ ಹೊಂಟೀರಿ?”
“ಮುಗೀತsss ಮಂಗಳಾರತೀ.. ಊರ ಉಸಾಬರಿ ಮಾಡಿ…”
ನಮಗ ಇಂಥಾ ಅನುಭವ ಜೀವನದಾಗ ಭಾಳ ಆಗತಾವರೀ. ಅದಕ ಕಾರಬಾರ ಮಾಡಬಾರದಂದ್ರೂ ಮನಸಿಗೆ ತಡಕೊಳ್ಳೋದ ಆಗಂಗಿಲ್ರೀ…
ಇದು ಸಮಷ್ಟಿ ಪ್ರಜ್ಞೆ ಹೊಂದಿರುವ ಪ್ರತಿಯೊಬ್ಬರ ಅನುಭವವೇನೋ.
ನಮ್ಮ ಜನರಿಗೆ ಕಂಡಲ್ಲಿ ಉಗುಳುವುದು, ಮನೆಯಲ್ಲಿಯ, ಆಸ್ಪತ್ರೆಗಳ, ಕಾರಖಾನೆಗಳ ಘನತ್ಯಾಜ್ಯವನ್ನು ರಸ್ತೆಯಲ್ಲಿ ತಂದು ಸುರಿಯುವುದು, ಪ್ಲಾಸ್ಟಿಕ್ಕನ್ನು ಬ್ಯಾನ್ ಮಾಡಿದ್ದರೂ ಇನ್ನೂ ವರೆಗೂ ಅದರ ಉಪಯೋಗವನ್ನು ಮಾಡುತ್ತಲೇ ಇರುವುದು, ತಿಪ್ಪೆ, ಗಟರಗಳಲ್ಲಿ ಕಸ ತಂದು ಹಾಕುವುದು ಇವೆಲ್ಲವೂ ಅತ್ಯಂತ ಸಹಜವೆಂಬಂತಾಗಿದೆ. ಕೊಳೆತು ನಾರುವ ಪರಿಸರದಲ್ಲಿ ಉಸಿರಾಡುವ ನಾವು ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೆಂಬುದನ್ನು ಮರೆತಂತಿದೆ. ಪರಿಸರ ಸ್ವಚ್ಛತಾ ದಿನವೊಂದನ್ನುಳಿದು ಮಿಕ್ಕ ದಿನಗಳಲ್ಲಿ ಸ್ವಚ್ಛತೆ ನಮಗೆ ಸಂಬಂಧಿಸಿದ್ದಲ್ಲವೆಂಬಂತೆ ನಾವಿರುತ್ತೇವೆ. ಇದು ಪ್ರತಿನಿತ್ಯ ಹಾಗೂ ಪ್ರತಿ ಕ್ಷಣದ ಅಗತ್ಯತೆ ಎಂಬುದರ ಅರಿವು ನಮಗಿಲ್ಲ.
ಇದು ಇಂದು ನಿನ್ನೆಯ ಮಾತೇನಲ್ಲ. ಮಹಾತ್ಮಾ ಗಾಂಧೀಜಿಯವರ ಕಾಲದಲ್ಲಿಯೇ ಆರಂಭಗೊಂಡಂಥದು. ಆದರೆ ಹೆಚ್ಚು ಪ್ರಚಲಿತಕ್ಕೆ ಬಂದುದು ಮಾತ್ರ ತೀರಾ ಇತ್ತೀಚೆಗೆ. ಈ ಅಭಿಯಾನವು ಅಕ್ಟೋಬರ್ 2ರಂದು ಪ್ರಧಾನಿ ಮೋದಿಯವರು ನವದೆಹಲಿಯಲ್ಲಿ ರಾಜ್ ಘಾಟಿನಲ್ಲಿಯ ರಸ್ತೆಯೊಂದನ್ನು ಗುಡಿಸುವುದರ ಮೂಲಕ ಆರಂಭವಾಗಿತ್ತು. ಅಲ್ಲದೆ ಪ್ರಧಾನಿಗಳು ತಮ್ಮ ತಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಲು ಜನತೆಗೆ ಕರೆಯಿತ್ತರು. ಜೊತೆಗೆ ಕೆಲ ಪ್ರಭಾವಿ ವ್ಯಕ್ತಿಗಳಿಗೆ ಒಂದೊಂದು ಪ್ರದೇಶದ ಸ್ವಚ್ಛತೆಯ ಹೊಣೆಯನ್ನು ವಹಿಸಿದ್ದರು. ಆದರೆ ಇದಕ್ಕೆ ಸಾರ್ವಜನಿಕರೂ ಕೈಜೋಡಿಸಬೇಕಾದುದು ಅವರದೇ ಹೊಣೆಯಲ್ಲವೇ?
A healthy mind in a healthy body.. ಎಲ್ಲರಿಗೂ ತಿಳಿದ ಮಾತೇ. ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ನಮ್ಮ ಪರಿಸರವನ್ನು ನಾವು ಸ್ವಚ್ಛವಾಗಿರಿಸಿಕೊಳ್ಳುವ ಅಗತ್ಯವಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬ ನಾಗರಿಕನೂ ಸ್ವಯಂಪ್ರೇರಿತರಾಗಿ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.
ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜನ ಜಾಗೃತಿಯಾಗಬೇಕಾಗಿದೆ. ನಾವು ಪ್ಲಾಸ್ಟಿಕ್ ಬಳಸುವುದಷ್ಟೇ ಅಲ್ಲ, ಬಳಸಿದ್ದನ್ನು ಮರುಬಳಕೆಗೂ ನೀಡುತ್ತಲಿಲ್ಲ. ಎಲ್ಲಿಬೇಕಲ್ಲಿ ಎಸೆಯುವುದು, ಒಲೆಗೆ ಉರಿಸಲೆಂದು ಉಪಯೋಗಿಸುವುದು ಇವೆಲ್ಲ ಪರಿಸರವನ್ನು ಮಲಿನಗೊಳಿಸುತ್ತವೆ. ಮಿಲಿಯನ್ ವರ್ಷಗಳೇ ಕಳೆದರೂ ಇದು ತನ್ನ ಸ್ಥಿತಿಯನ್ನು ಹಾಗೇ ಉಳಿಸಿಕೊಳ್ಳುವದರಿಂದ ಭೂಮಿಯ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಹಳ್ಳ ಕೊಳ್ಳ ನದಿ ಸಮುದ್ರಗಳಲ್ಲಿ ಕಾಯಂ ಆಗಿ ತಳವೂರಿ ಜೀವಜಾತಿಗಳ ಅಳಿವಿಗೂ ಕಾರಣವಾಗುತ್ತದೆ. ಹಸಿರು, ಶುದ್ಧ ಗಾಳಿ, ನೀರು ದೊರೆಯಬೇಕಾದರೆ ಪ್ಲಾಸ್ಟಿಕ್ ನಿಂದ ದೂರವಿರಬೇಕು. ವಿಶ್ವದಲ್ಲಿ 100 ಮಿಲಿಯನ್ ಟನ್ ಗಳಷ್ಟು ಪ್ಲಾಸ್ಟಿಕ್ ಉತ್ಪಾದನೆ ಆಗುತ್ತಿದ್ದು, 7000 ಟನ್ ಗಳಷ್ಟು ತ್ಯಾಜ್ಯವಾಗುತ್ತಿದೆ. ಇದನ್ನು ತಪ್ಪಿಸಲು ಮೊದಲು ನಾವು ನಮ್ಮ ಮನೆಯಿಂದಲೇ ಪ್ರಾರಂಭ ಮಾಡಬೇಕಿದೆ. ಈ ದುರ್ಬಳಕೆಯನ್ನು ತಪ್ಪಿಸುವ ಬಗ್ಗೆ ಜಾಗೃತರಾಗಬೇಕಿದೆ. ಹಸಿ ಕಸ, ಒಣ ಕಸದ ಬಗ್ಗೆ ನಮ್ಮ ಜನರಿಗೆ ತಿಳಿವಳಿಕೆ ನೀಡುವುದು ವಿದ್ಯಾವಂತ ನಾಗರಿಕರ ಕೆಲಸ. ಅಲ್ಲದೆ, ನಾವು ಪಿಕ್ನಿಕ್, ಪ್ರವಾಸ ಗಳಿಗೆಲ್ಲ ಹೋದಾಗ, ತಿಂಡಿಗಳನ್ನು ಒಯ್ಯಲು ಪ್ಲ್ಯಾಸ್ಟಿಕ್ ಚೀಲ ಬಳಸಲೇಬಾರದು. ಮಾರುಕಟ್ಟೆಗೆ ಹೋಗುವಾಗ ಬಟ್ಟೆಯ ಚೀಲಗಳನ್ನು ಒಯ್ಯುವ ರೂಢಿ ಇಟ್ಟುಕೊಳ್ಳಬೇಕು. ಮನೆಯಲ್ಲಿಯ ಮಕ್ಕಳ ಹರಿದ ಬಟ್ಟೆಗಳನ್ನು ಈ ಚೀಲ ಹೊಲೆಯಲು ಉಪಯೋಗಿಸಬಹುದು. ಒಂದು ಕೆಜಿ, ಎರಡು, ಐದು, ಹತ್ತು ಕೆಜಿ ವಸ್ತು ಹಿಡಿಯುವ ಸಣ್ಣ ದೊಡ್ಡ ಚೀಲಗಳನ್ನು ಹೊಲೆಯಿಸಬೇಕು. ಅವುಗಳಿಗೆ ಉದ್ದದ ಕಸಿಯನ್ನು ಹಚ್ಚಿದರೆ ಕಟ್ಟಲೂ ಬರುತ್ತದೆ. ಎಲ್ಲವನ್ನೂ ಒಂದು ದೊಡ್ಡ ಸುಂದರವಾಗಿ ಕಾಣುವಂಥ ಬ್ಯಾಗಿನಲ್ಲಿ ಹಾಕಿದರೆ ಹಿಡಿಯಲೂ ಛಂದ ಹಾಗೂ ಅನುಕೂಲವೂ ಕೂಡ.
ಹೀಗೆ ನಾವು ನಮ್ಮ ಭೂಮಿಯ ಅತ್ಯಂತ ಅಮೂಲ್ಯ ಸಂಪನ್ಮೂಲಗಳಾದ ನೀರು, ಹಸಿರು ಗಿಡ ಮರಗಳನ್ನು, ಪಕ್ಷಿ ಪ್ರಾಣಿ ಸಂಕುಲವನ್ನು ಉಳಿಸಿ ಅದನ್ನು ಸುಸ್ಥಿತಿಯಲ್ಲಿ ನಮ್ಮ ಮುಂದಿನ ಪೀಳಿಗೆಗೆ ನೀಡಿದಲ್ಲಿ ಅದಕ್ಕಿಂತಲೂ ದೊಡ್ಡ ಆಸ್ತಿ ಬೇರೊಂದಿಲ್ಲ.
ಮಾಲತಿ ಮುದಕವಿ, ಧಾರವಾಡ.