ಸುವರ್ಣ ಸಂಭ್ರಮದಲ್ಲಿ ‘ವಂಶವೃಕ್ಷ’ ಮತ್ತು ‘ಸಂಸ್ಕಾರ’
ಸರಿ ಸುಮಾರು 1965 ರಲ್ಲಿ ಪ್ರಕಟಗೊಂಡ ಎಸ್.ಎಲ್.ಭೈರಪ್ಪನವರ ‘ವಂಶವೃಕ್ಷ’ ಮತ್ತು ಯೂ.ಆರ್.ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಗಳು ಪ್ರಕಟಗೊಂಡು ಐವತ್ತು ವರ್ಷಗಳು ಕಳೆದಿದ್ದು ಅವು ಈಗ ಸುವರ್ಣ ಸಂಭ್ರಮದಲ್ಲಿವೆ. ಅನಂತಮೂರ್ತಿಯವರು ನಮ್ಮನ್ನಗಲಿ ಹೋಗಿದ್ದರೆ ಭೈರಪ್ಪ ಇನ್ನೂ ನಮ್ಮ ನಡುವೆ ಇದ್ದು ಬರವಣಿಗೆಯಲ್ಲಿ ತಮ್ಮನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಇಷ್ಟು ಕಾಲ ಸಂದರೂ ಈ ಕಾದಂಬರಿಗಳು ಇನ್ನೂ ಜನಪ್ರಿಯತೆಯನ್ನು ಗಳಿಸಿವೆ. ಅನೇಕ ಬಾರಿ ಪುನರ್ಮುದ್ರಣ ಕಂಡಿವೆ ಅಲ್ಲದೆ ಬೇರೆ ಬೇರೆ ರಾಷ್ಟ್ರೀಯ ಭಾಷೆಗಳಲ್ಲಿ ಅಲ್ಲದೆ ವಿದೇಶಿ ಭಾಷೆಗಳಲ್ಲಿ ಅನುವಾದಗೊಂಡಿವೆ. ಈ ಸುಸಂಧರ್ಭದಲ್ಲಿ ಅವು ಸಾಗಿ ಬಂದ ದಾರಿಯ ಅವಲೋಕನದ ಜೊತೆಗೆ ಅವುಗಳ ಸಾಹಿತ್ಯಾತ್ಮಕ ಪುನರ್ಮನನದ ಅಗತ್ಯವಿದೆ. 1965 ರಲ್ಲಿ ಈ ಎರಡೂ ಕೃತಿಗಳು ಪ್ರಕಟಗೊಂಡುದು ಪ್ರತಿಷ್ಟಿತ ಪ್ರಕಾಶನ ಸಂಸ್ಥೆಗಳಾದ ಮನೋಹರ ಗ್ರಂಥಮಾಲೆ ಮತ್ತು ಸಾಹಿತ್ಯ ಭಂಡಾರಗಳಿಂದ. ಇನ್ನೂ ಇವುಗಳ ಜನಪ್ರಿಯತೆ ಕುಂದಿಲ್ಲ ಹೊಸ ಪೀಳಿಗೆಯನ್ನು ಸಹ ಇವು ಇಂದಿಗೂ ಆಕರ್ಷಿಸುತ್ತಿರುವುದು ಇವುಗಳ ಮಹತಿಗೆ ಸಾಕ್ಷಿ ಎನ್ನಬಹುದು.
ಆ ಕಾಲಘಟ್ಟದಲ್ಲಿ ಅನಂತಮೂರ್ತಿಯವರು ಕಥಾ ರಚನೆಗಳಲ್ಲಿ ತೊಡಗಿ ನವ್ಯದ ಹೊಸ ಶೈಲಿಯ ಹುಡುಕಾಟ ದಲ್ಲಿದ್ದರೆ ಭೈರಪ್ಪ ‘ಧರ್ಮಶ್ರೀ’ ಕಾದಂಬರಿಯನ್ನು ಬರೆದು ಜನಪ್ರಿಯರಾಗಿದ್ದರು. ಪ್ರಮುಖ ನವ್ಯ ಕವಿಗಳಲ್ಲಿ ಒಬ್ಬರಾದ ಗೋಪಾಲಕೃಷ್ಣ ಅಡಿಗರ ‘ಭೂಮಿಗೀತ’ ಕವನ ಸಂಕಲನಕ್ಕೆ ಬರೆದ ಮುನ್ನುಡಿ ಅವರ ಭಿನ್ನ ಚಿಂತನಾ ಕ್ರಮ ಹಾಗೂ ನಿರರ್ಗಳ ವಾಕ್ಝರಿಯ ಮೂಲಕ ವಿಶಿಷ್ಟ ಪ್ರಭಾವಳಿಯನ್ನು ಹೊಂದಿದ್ದರು. ನವ್ಯದ ಪ್ರಾಥಮಿಕ ಕಾಲಘಟ್ಟದಲ್ಲಿ ಸಾಹಿತಿಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಕಾದಂಬರಿಕಾರರನ್ನು ಕಾಡಿದ್ದು ಹುಟ್ಟಿನ ಪ್ರಶ್ನೆ. ಈ ಕುರಿತು ಕೆಲ ಉದಾಹರಣೆಗಳನ್ನು ಕೊಡುವುದಾದರೆ ಯಶವಂತ ಚಿತ್ತಾಲರು ಬರೆದ ‘ಪುರುಷೋತ್ತಮ’ ಮತ್ತು ‘ಶಿಕಾರಿ’, ಕೇಶವ ಮಳಗಿಯವರ ‘ಕುಂಕುಮಭಾಗ್ಯ’. ಇವರ ಸಾಲಿಗೆ ‘ವಂಶವೃಕ್ಷ’ ಬರೆದ ಎಸ್.ಎಲ್.ಭೈರಪ್ಪ ಮತ್ತು ‘ಸಂಸ್ಕಾರ’ ಕಾದಂಬರಿ ಬರೆದ ಅನಂತಮೂರ್ತಿಗಳು ಸಹ ಸೇರುತ್ತಾರೆ. ಸಂಸ್ಕಾರವನ್ನ ಬರೆಯುವಾಗ ಅನಂತಮೂರ್ತಿಯವರು ಇಂಗ್ಲಂಡ್ ದೇಶದ ಬರ್ಮಿಂಗ್ ಹ್ಯಾಮ್‍ನಲ್ಲಿದ್ದರೆ ‘ವಂಶವೃಕ್ಷ’ ಕೃತಿ ಬರೆದ ಭೈರಪ್ಪ ದೂರದ ಗುಜರಾತನಲ್ಲಿದ್ದರು.
‘ವಂಶವೃಕ್ಷ’ ಭೈರಪ್ಪನವರು ಬೃಹತ್ ಕ್ಯಾನವಾಸಿನಲ್ಲಿ ಚಿತ್ರಿಸಿದ ಸಾಹಿತ್ಯ ಕೃತಿ. ಈ ಇಬ್ಬರೂ ಕಾದಂಬರಿಕಾರರು ತಮ್ಮ ಈ ಕೃತಿಗಳನ್ನು ಬರೆಯುವಾಗ ತಮ್ಮ ಸೃಜನಶೀಲತೆಯನ್ನು ಒಗ್ಗೂಡಿಸಿಕೊಂಡು ಬರೆದಿದ್ದಾರೆ. ಇವು ಓದುಗ ವಲಯವನ್ನು ತಲುಪಿವೆ ಎನ್ನುವುದಕ್ಕೆ ಇವುಗಳು ಅನೇಕ ಬಾರಿ ಪುನರ್ಮುದ್ರಣ ಕಂಡಿರುವುದೆ ಸಾಕ್ಷಿ. 1970-80 ಸಾಂಸ್ಕೃತಿಕ ಚಳುವಳಿಯ ಕಾಲ ಈ ಸಮಯದಲ್ಲಿ ಇವರ ಈ ಕೃತಿಗಳು ಅಂದಿನಿಂದ ಇಂದಿಗೂ ಗಂಭೀರ ಚರ್ಚೆಗೆ ಗ್ರಾಸವಾದ ರಚನೆಗಳು. ಇವರಿಬ್ಬರೂ ಪರಸ್ಪರ ವೈಚಾರಿಕ ವಿರುದ್ಧ ಬಿಂದುಗಳಲ್ಲಿ ನಿಂತಿದ್ದಾರೆ. ಆಸಕ್ತಕರ ಚರ್ಚೆಗಳ ಮೂಲಕ ಇವು ಕಾಲದಿಂದ ಕಾಲಕ್ಕೆ ಜನಪ್ರಿಯತೆಯನ್ನು ಪಡೆಯುತ್ತ ಸಾಗಿ ಬಂದಿವೆ. ಚರ್ಚೆ ಮಾಡುವವರು ದಣಿದಿಲ್ಲ ಚರ್ಚೆಗಳು ನಿಂತಿಲ್ಲ.
*
ಸಾಂಪ್ರದಾಯಿಕ ಮೌಲ್ಯಗಳು ಕೇಂದ್ರಿತವಾಗಿರುವುದು ಮತ್ತು ನಿಂತಿರುವುದು ವಂಶದ ಹಾಗೂ ಕುಟುಂಬದ ಕಲ್ಪನೆಯ ಮೇಲೆ ಇದರ ಆಧಾರದ ಮೇಲೆ ‘ವಂಶವೃಕ್ಷ’ವನ್ನು ನೋಡುವುದಾದರೆ ಅದು ಒಂದು ಆಳವಾದ ಚಿಂತನಾ ಕ್ರಮದಲ್ಲಿ ರಚನೆಯಾದ ಕೃತಿ. ಶ್ರೀನಿವಾಸ ಶ್ರೋತ್ರಿಯರು ಈ ಕಾದಂಬರಿಯ ಕೇಂದ್ರ ಬಿಂದು. ಕೃತಿಕಾರ ತಮ್ಮವೇ ಆದ ಕೆಲವು ಮೌಲ್ಯಗಳನ್ನು ಅನುಭವದ ಒರೆಗಲ್ಲಿಗೆ ಹಚ್ಚಿದ್ದಾರೆ. ಹೀಗಾಗಿ ಕೆಲವರು ಅನ್ನುವಂತೆ ಅವರು ಶುಷ್ಕ ಪರಂಪರೆಯ ಪ್ರತಿನಿಧಿಯಾಗುವುದಿಲ್ಲ. ಯಾವುದನ್ನೆ ಆಗಲಿ ನಿಷ್ಕರ್ಷ ಮಾಡುವ ಅಧಿಕಾರ ಮನುಷ್ಯ ಜೀವಿಗೆ ಇದೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಕಾದಂಬರಿಕಾರರು ಶ್ರೀನಿವಾಸ ಶ್ರೋತ್ರಿಗಳ ಪಾತ್ರಕ್ಕೆ ಒಂದು ಪ್ರಭಾವಳಿಯನ್ನು ನಿರ್ಮಿಸಿದ್ದಾರೆ. ಇದ್ರಕ್ಕೆ ಸಮಾನಾಂತರವಾಗಿ ಇನ್ನೊಂದು ಕುಟುಂಬದ ಕಥೆಯೂ ಅಲ್ಲಲ್ಲಿ ಬಂದು ಹೋಗುತ್ತದೆ. ಆ ಕುಟುಂಬದ ಮುಖ್ಯಸ್ಥ ಸದಾಶಿವ ರಾಯ ಅತ ಇತಿಹಾಸ ತಜ್ಞಜೊತೆಗೆ ಸಂಶೋಧಕ ಆತ ಭಾರತೀಯ ಮೌಲ್ಯಗಳ ಹುಡುಕಾಟದಲ್ಲಿದ್ದಾರೆ. ಆತನ ತಮ್ಮ ರಾಜಾರಾವ್ ಸೃಜನಶೀಲ ಮನಸ್ಸಿನ ತರುಣ ಆತ ಪಾಶ್ಚ್ಯಾತ್ಯ ಸಾಹಿತ್ಯವನ್ನು ಓದಿದವನು ಜೊತೆಗೆ ಇಂಗ್ಲೀಷ್ ಪ್ರಾಧ್ಯಾಪಕ. ಇದು ಒಂದು ರೀತಿಯ ಮೌಲ್ಯಗಳ ತಾಕಲಾಟದ ಮನೋಜ್ಞ ಕಾದಂಬರಿ.
ಶ್ರೋತ್ರಿಯರ ಅಭಿಪ್ರಾಯದಲ್ಲಿ ವಂಶದ ಮುಂದುವರಿಕೆಯೆ ಜೀವಿಯ ಮತ್ತು ಅದರ ಜೀವನದ ಸಾತತ್ಯ, ಈ ಪರಿಮಿತಿಯೊಳಗೆ ಸಂಬಂಧಗಳು ಏರ್ಪಡುತ್ತವೆ. ಅದನ್ನು ಬಿಟ್ಟು ಬೇರೇನೂ ಇಲ್ಲ ಎನ್ನುವ ಪ್ರಬಲ ನಂಬಿಕೆ ಅವರದು. ಒಟ್ಟು ವಂಶದ ಪರಿಕಲ್ಪನೆಯಲ್ಲಿ ವ್ಯಕ್ತಿಯ ಅಭಿಪ್ರಾಯ ಗೌಣ. ವಂಶದ ಚೌಕಟ್ಟಿನಲ್ಲಿ ಮದುವೆ ಮತ್ತು ಸಂಬಂಧಗಳಿಗೆ ಒಂದು ತಾತ್ವಿಕ ಧಾರ್ಮಿಕ ಅರ್ಥವಿದೆ ಅವರು ಇದನ್ನು ಪರೀಕ್ಷೆಗೆ ಒಡ್ಡಿ ನಿಷ್ಕರ್ಷೆ ಮಾಡಿಯೆ ಒಪ್ಪಿಕೊಂಡಿದ್ದಾರೆ. ಈ ಕಾದಂಬರಿಯಲ್ಲಿ ಬರುವ ಕಾತ್ಯಾಯನಿ ಮತ್ತು ರಾಜಾರಾವ್ ಹೊಸ ತಲೆಮಾರಿನವರು. ಕಪಿಲಾ ನದಿಯ ಸುತ್ತ ಮುತ್ತಲಿನ ಪರಿಸರದಲ್ಲಿ ನಡೆಯುವ ಈ ಕಥಾನಕ ಪಯಣದ ಮೂಲಕ ತೆರೆದು ಕೊಳ್ಳುತ್ತ ಹೋಗುವಂತಹುದು. ಇಲ್ಲಿ ಆಧುನಿಕತೆ ಒಂದು ಬರಡು ಸತ್ಯವಾಗಿ ಪರಿಣಮಿಸುತ್ತದೆ. ಈ ಕಾದಂಬರಿಯ ಇನ್ನೊಂದು ಪ್ರಮುಖ ಪಾತ್ರ ಸದಾಶಿವರಾವ್ ಪಾತ್ರ ಸಹ ಒಂದು ಸತ್ಯವನ್ನು ಅರಸಿ ಹೊರಟಿದ್ದಾರೆ. ಅವರಿಗೆ ನಾಗುವಿನೊಂದಿಗೆ ಈ ಮೊದಲೆ ಮದುವೆಯಾಗಿದೆ, ಅವರ ದಾಂಪತ್ಯಕ್ಕೆ ಪೃಥ್ವಿ ಎಂಬ ಏಕೈಕ ಗಂಡು ಸಂತಾನವಿದೆ. ಪತಿಯೆ ಪರದೈವ ಎಂದು ನಂಬಿದ ಪರಂಪರಾಗತ ಮೌಲ್ಯಗಳ ಬಂದಿ. ಈ ನಾಗುವಿಗೆ ತನ್ನ ಗಂಡ ಮಗ ಮತ್ತು ಮೈದುನ ರಾಜಾರಾವ್‍ರೊಂದಿಗಿನ ಸಂಬಂಧ ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಆಕೆ ಜಡ್ಡುಗಟ್ಟಿದ ಮೌಲ್ಯಗಳ ಮುಂದುವರಿಕೆಯಾಗಿ ಕಂಡು ಬರುತ್ತಾಳೆ. ಆದರೆ ಗಂಡ ಸದಾಶಿವರಾಯನ ಆದ್ಯತೆಗಳೆ ಬೇರೆ ಇವೆ. ಆತ ಜ್ಞಾನವನ್ನು ಕೃಷಿ ಮಾಡಬೇಕು ಎನ್ನುವವರು ಇತಿಹಾಸ ಸಂಶೋಧನೆ ಅವರನ್ನು ಪೂರ್ತಿಯಾಗಿ ಆವರಿಸಿಕೊಂಡು ಬಿಟ್ಟಿದೆ. ಈ ಮಾರ್ಗ ಕ್ರಮಣೆಯಲ್ಲಿ ಪತ್ನಿ ನಾಗುವಿನ ಸಾಹಚರ್ಯ ಅವರಿಗಿಲ್ಲ ಆಕೆಯೆ ಜೀವನಕ್ರಮ ಮತ್ತು ಮೌಲ್ಯಗಳು ಬೆರೆಯೆ ಇವೆ. ಅವರಿಗೊಬ್ಬ ಸಂಶೋಧನಾ ಸಹಾಯಕಿ ಇದ್ದಾಳೆ ಅವಳೆ ಕರುಣ, ಅವರು ಅಪ್ಪಿಕೊಂಡ ಸಂಶೋಧನಾ ಮಾರ್ಗದಲ್ಲಿ ಆಕೆ ಜೊತೆ ಜೊತೆಗೆ ಸಾಗಬಲ್ಲಳು ಮತ್ತು ಸಹಕಾರಿಯಾಗಬಲ್ಲಳು. ಆಕೆಯ ಸಾಹಚರ್ಯದ ಅನಿವಾರ್ಯತೆ ಸದಾಶಿವರಾಯರಿಗೆ ಇದೆ. ಈ ಉದ್ದೇಶ ಈಡೇರಿಕೆಗಾಗಿ ಅವರು ಆಕೆಯನ್ನು ಮದುವೆಯಾಗುತ್ತಾರೆ. ಇದೊಂದು ರೀತಿಯ ಬೌದ್ಧಿಕ ಸಾಹಚರ್ಯ, ಇಲ್ಲಿ ಲೇಖಕನಿಗೆ ತನ್ನವೆ ಆದ ಸ್ಪಷ್ಟ ನಿಲುವುಗಳಿವೆ.
ಇದಕ್ಕೆ ಸಮಾನಾಂತರವಾಗಿ ಶ್ರೀನಿವಾಸ ಶ್ರೋತ್ರಿಗಳ ಕುಟುಂಬದಲ್ಲಿ ಹೆಂಡತಿ ಭಾಗಿರಥಿ ಮಗ ನಂಜುಂಡ ಶ್ರೋತ್ರಿ ಸೊಸೆ ಕಾತ್ಯಾಯನಿ ಮತ್ತು ಮೊಮ್ಮಗ ಚೀನಿ ಇದ್ದಾರೆ. ಇಲ್ಲಿ ಶ್ರೀನಿವಾಸ ಶ್ರೋತ್ರಿಗಳ ಹೆಂಡತಿ ಪರಂಪರಾಗತ ಮೌಲ್ಯಗಳ ಮುಂದುವರಿಕೆಯ ಪ್ರತಿನಿಧಿಯಾದರೆ ಸೊಸೆ ಆ ಪರಂಪರಾಗತ ಮೌಲ್ಯಗಳ ಪೊಳ್ಳುತನಕ್ಕೆ ಬಲಿಯಾಗದ ಭಿನ್ನ ಅಭಿಪ್ರಾಯದ ಸ್ವಕೇಂದ್ರಿತ ಪಾತ್ರ. ಕುಟುಂಬದ ಎರಡು ಚರಮ ಬಿಂದುಗಳ ಮಧ್ಯೆ ನವ ಪೀಳಿಗೆಯ ಪ್ರತಿನಿಧಿ ಚೀನಿ ಇದ್ದಾನೆ. ಅತ್ತ ಹೋಗಲಾಗದ ಇತ್ತ ಬಿಡಲಾಗದ ಹೊಯ್ದಾಟದ ಸ್ಥಿತಿಯಲ್ಲಿ ಅವನಿದ್ದಾನೆ. ಬಿ.ಎ.ಪದವಿಗೆ ಓದುತ್ತಿದ್ದ ನಂಜುಂಡ ಶ್ರೋತ್ರಿ ಹಾವು ಕಚ್ಚಿ ಮೃತ ಪಟ್ಟಿದ್ದಾನೆ ವಿಧವೆ ಸೊಸೆಯನ್ನು ತಲೆ ಬೋಳಿಸಿ ಆಕೆಯ ಕುಂಕುಮ ಅಳಿಸಿ ಬಳೆ ಒಡೆದು ಸಂಪ್ರದಾಯದ ಹಾದಿಯಲ್ಲಿ ಸಾಗುವ ಇಂಗಿತ ಶ್ರೋತ್ರಿಗಳ ಹೆಂಡತಿಯದು. ಸೊಸೆ ಕಾತ್ಯಾಯನಿ ಸಣ್ಣ ವಯಸ್ಸಿನವಳು ಅವಳು ಮನಃಪೂರ್ವಕವಾಗಿ ಒಪ್ಪಿದರೆ ಸರಿ ಇಲ್ಲವಾದರೆ ಆಕೆಯನ್ನು ಬಲವಂತದಿಂದ ಮಡಿ ಮಾಡಿಸುವುದು ಶ್ರೀನಿವಾಸ ಶ್ರೋತ್ರಿಯರಿಗೆ ಒಪ್ಪಿಗೆಯಾಗದ ಸಂಗತಿ. ಕಾತ್ಯಾಯನಿ ವೈಧವ್ಯದ ನೋವು ಮರೆಯಲು ಕಾಲೇಜು ಓದು ಮುಂದುವರೆಸಿ ಬಿ.ಎ.ಪದವಿ ಪೂರೈಸಿ ತನ್ನ ಗಂಡನ ಪದವಿಯ ಆಶೆಯನ್ನು ಪೂರೈಸುವುದು. ಸಂಪ್ರದಾಯದ ಕಟ್ಟು ಪಾಡುಗಳನ್ನು ಮೀರಿ ಮಾನವೀಯ ನೆಲೆಯಲ್ಲಿ ಯೋಚಿಸಿದ ಶ್ರೀನಿವಾಸ ಶ್ರೋತ್ರಿಗಳು ತಮ್ಮ ಹೆಂಡತಿಯ ಪ್ರಭಲ ವಿರೋಧದ ಮಧ್ಯೆಯೂ ಸೊಸೆ ಕಾತ್ಯಾಯನಿಯ ಓದು ಮುಂದುವರಿಸುವಿಕೆಗೆ ಅಸ್ತು ಎಂದಿದ್ದಾರೆ.
ಕಾತ್ಯಾಯನಿ ತಾನೋದುವ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕ ರಾಜಾರಾವ್‍ನ ವಿದ್ವತ್ತು ಬುದ್ಧಿಮತ್ತೆ ಸುಸಂಸ್ಕೃತ ನಡುವಳಿಕೆಗೆ ಮಾರು ಹೋದ ಆಕೆ ಆತನಲ್ಲಿ ಅನುರಕ್ತಳಾಗಿದ್ದಾಳೆ. ಪರಸ್ಪರ ಆಕರ್ಷಿತರಾದ ಅವರಿಬ್ಬರೂ ಮದುವೆಯಾಗ��ವ ತೀರ್ಮಾನಕ್ಕೆ ಬಂದಿದ್ದಾರೆ. ರಾಜಾರಾವ್ ಮನೆಯಲ್ಲಿ ಯಾವುದೆ ತಕರಾರು ಇಲ್ಲ ಆತನ ಅತ್ತಿಗೆ ಒಪ್ಪಿಗೆ ನೀಡಿದ್ದಾಳೆ. ತೊಡಕು ಇರುವುದು ಕಾತ್ಯಾಯನಿಯ ಮನೆಯಲ್ಲಿ. ಅತ್ತೆ ಜಡ್ಡುಗಟ್ಟಿದ ಮೌಲ್ಯಗಳ ಪ್ರತಿನಿಧಿ ಮಾವ ವಿಚಾರವಂತರಾದರೂ ಅವರೆದುರು ತನ್ನ ಮದುವೆ ಕುರಿತು ಮಾತನಾಡಲು ಒಂದು ರೀತಿಯ ಅಂಜಿಕೆ. ಅವಳಿಗೆ ತಾನು ವಿಧವೆ ಮರು ಮದುವೆಯಾಗುವುದು ಸಂಪ್ರದಾಯದ ವಿರೋಧಿ ಎಂಬ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಹೀಗಾಗಿ ಅವಳು ಒಂದು ಪತ್ರ ಬರೆದು ತನ್ನ ಮದುವೆಗೆ ಅನುಮತಿ ಕೋರಿದ್ದಾಳೆ ಅವರು ಅದನ್ನು ಓದಿದ್ದಾರೆ ಕೂಡ. ಶ್ರೋತ್ರಿಗಳ ಪ್ರಕಾರ ಮದುವೆ ಎನ್ನುವುದು ಸಂತಾನದ ಅಭಿವೃದ್ಧಿಗಾಗಿ ಇದು ಧರ್ಮ ಮತ್ತು ಸಮಾಜ ಒಪ್ಪಿದ ರೀತಿ. ಇಲ್ಲಿ ತನ್ನ ಸೊಸೆಗೆ ಒಂದು ಮಗುವಿದೆ ಹೀಗಾಗಿ ಆಕೆಯ ಮರು ಮದುವೆಯ ಇಚ್ಛೆ ಅಕ್ರಮ ಮತ್ತು ಸಂಪ್ರದಾಯ ವಿರೋದಿ ನಡೆ ಎಂದು ತೋರಿ ಬರುತ್ತದೆ. ಇಲ್ಲಿ ಲೇಖಕರು ಚಿತ್ರಿಸಿದ ಕಾತ್ಯಾಯನಿಯ ಪಾತ್ರ ಜೀವನಾನುಭೋಗ ಜೀವಂತಿಕೆ ಮತ್ತು ಆರೋಗ್ಯವಂತಿಕೆಯಿಂದ ಕೂಡಿರುವುದಾಗಿದೆ ಎನಿಸುತ್ತದೆ. ಪ್ರಕೃತಿಗೆ ನೈತಿಕತೆಯ ಯಾವುದೆ ನಿರ್ಭಂಧಗಳಿಲ್ಲ ನಾವು ರೂಪಿಸಿದ ನೀತಿ ನಿಯಮಗಳಿಗೆ ಅದು ಬದ್ಧವಲ್ಲ ಎನ್ನುವುದು ಕಾತ್ಯಾಯನಿಯ ನಿಲುವಾದರೆ, ನಮ್ಮ ಜೀವನದಲ್ಲಿ ಒಂದು ಹಂತ ದಾಟಿದ ಮೇಲೆ ಮತ್ತೆ ಅದಕ್ಕೆ ಮರಳುವುದು ಸಮಂಜಸವಲ್ಲ ಶ್ರೀನಿವಾಸ ಶ್ರೋತ್ರಿಯರ ನಿಲುವು. ಒಂದು ಹಂತದಲ್ಲಿ ಸಾಯಲು ನಿರ್ಧರಿಸುವ ಕಾತ್ಯಾಯನಿಗೆ ಆಕೆಯ ಅಂತರ್ದನಿ ಆ ದಾರಿಗೆ ಹೋಗದಂತೆ ಆಕೆಯನ್ನು ತಡೆಯುತ್ತದೆ.
ಈ ಕಥಾನಕ ನಡೆಯುವ ಕಾಲಘಟ್ಟ ಸಾಂಪ್ರದಾಯಿಕ ಮೌಲ್ಯಗಳ ಮತ್ತು ವ್ಯಕ್ತಿಗಳ ಮಾನಸಿಕ ಹೊಯ್ದಾಟ ಮತ್ತು ತಾಕಲಾಟಗಳನ್ನು ನಿರೂಪಿಸುವಂತಹುದು. ಶ್ರೀನಿವಾಸ ಶ್ರೋತ್ರಿ ಪರಂಪರಾಗತ ಮೌಲ್ಯಗಳನ್ನು ಪ್ರತಿನಿಧಿಸುವ ಒಂದು ಉನ್ನತ ಶಿಖರ ಅದನ್ನು ಏರಿ ನಿಲ್ಲುವುದು ಕಾತ್ಯಾಯನಿಗೆ ಸಾಧ್ಯವಾಗುವುದಿಲ್ಲ. ಕಡೆಗೂ ಪರಂಪರೆಯ ಮೌಲ್ಯಗಳ ಅಕ್ಟೊಪಸ್ ಹಿಡಿತದಿಂದ ಹೊರ ಬರುವುದು ಆಕೆಗೆ ಆಗದೆ ಇರುವುದು ಆಕೆಯು ಆಯ್ದುಕೊಂಡ ಬದುಕಿನ ದುರಂತ. ಇಲ್ಲಿ ರಾಜಾರಾವ್ ಎಲ್ಲ ವೈಚಾರಿಕ ಚಿಂತನೆಗಳ ಮಧ್ಯೆಯೂ ಪುರುಷ ಸಂಕೇತವಾಗಿದ್ದಾನೆ. ಈ ಪರಂಪರೆಯ ತಾಕಲಾಟಗಳಲ್ಲಿ ನಿಜಕ್ಕೂ ತಬ್ಬಲಿಗಳಾಗುವವರು ಸದಾಶಿವರಾವ್ ಮತ್ತು ನಾಗೂ ದಂಪತಿಗಳ ಮಗ ಪೃಥ್ವಿ ಮತ್ತು ಶ್ರೀನಿವಾಸ ಶ್ರೊತ್ರಿಗಳ ಮೊಮ್ಮಗ ಚೀನಿ. ಅವರಿಬ್ಬರೂ ಆಯಾ ವಂಶಗಳ ಮೂರನೆ ತಲೆಮಾರಿನ ಪ್ರತಿನಿಧಿಗಳಾಗಿ ಗೋಚರಿಸುತ್ತಾರೆ. ಒಂದು ರೀತಿಯ ಮುಜುಗರ ಮತ್ತು ಅನಾಥ ಪ್ರಜ್ಞೆ ಅವರನ್ನು ಕಾಡುತ್ತ ಬಂದಂತೆ ಕಾಣುತ್ತದೆ. ಈ ಕೃತಿಗೆ ತನ್ನದೆ ಆದ ಹರಿಯುವಿಕೆಯ ಓಘವಿದೆ ಮತ್ತು ಯಾವುದು ಸಂಪ್ರದಾಯ ಎನ್ನುವುದು ತೀವ್ರವಾಗಿ ಕಾದಂಬರಿಯುದ್ದಕ್ಕೂ ಓದುಗನನ್ನು ಕಾಡುತ್ತದೆ. ಕಾದಂಬರಿಕಾರರು ಶ್ರೀನಿವಾಸ ಶ್ರೋತ್ರಿಯರ ವ್ಯಕ್ತಿತ್ವಕ್ಕೆ ಒಂದು ವಿಶೇಷ ಪ್ರಭಾವಳಿಯನ್ನು ಅಗತ್ಯತೆ ಮೀರಿ ನಿರ್ಮಿಸಿದ್ದಾರೆ ಎನಿಸುತ್ತದೆ. ಅಷ್ಟೆಲ್ಲ ವೇದ ಪುರಾಣ ಅರಣ್ಯಕ ಮತ್ತು ಧರ್ಮ ಗ್ರಂಥಗಳನ್ನು ಓದಿದ ಶ್ರೀನಿವಾಸ ಶ್ರೋತ್ರಿ ತಾನು ಈ ವಂಶಕ್ಕೆ ಸೇರಿದ ವ್ಯಕ್ತಿಯಲ್ಲ ಎನ್ನುವ ಸತ್ಯ ಗೊತ್ತಾದಾಗ ಅದನ್ನು ಮೀರಿ ನಿಲ್ಲದೆ ಚೀನಿಯನ್ನು ಒಬ್ಬಂಟಿಯಾಗಿ ಬಿಟ್ಟು ಯಾಕೆ ತೆರಳುತ್ತಾರೆ ಅವರು ಪಲಾಯನವಾದಿಯಾಗಿ ಕಂಡು ಬರುತ್ತಾರೆ. ಈ ಶ್ರೋತ್ರಿಗಳ ಪಾತ್ರ ಮಾತ್ರ ಗೊಮ್ಮಟನ ಹಾಗೆ ಬೆಳೆದು ಉಳಿದ ಪಾತ್ರಗಳು ಕುಬ್ಜವಾಗಿವೆ ಎನಿಸುತ್ತದೆ. ಈ ರಚನೆಯಲ್ಲಿ ತಮ್ಮ ಹುಟ್ಟಿನ ಸತ್ಯ ತಿಳಿದ ಶ್ರೀನಿವಾಸ ಶ್ರೋತ್ರಿ ವೈರಾಗ್ಯದ ಹಾದಿ ಹಿಡಿದರೆ ಸಂಸ್ಕಾರದ ಪ್ರಾಣೇಶಾಚಾರ ಜೀವನಕ್ಕೆ ಮರಳುವ ಸ್ಥಿತಿಗೆ ತಲುಪುತ್ತಾರೆ. ವಂಶವೃಕ್ಷದ ಶ್ರೋತ್ರಿಯರು ತಮ್ಮ ಜೀವನಕ್ಕೆ ವಿಮುಖರಾಗುತ್ತಾರೆ.
*
ಸಾಹಿತ್ಯ ಸರಳವಾಗಬೇಕು ಸಹಜವಾಗಬೇಕು ಎನ್ನುವುದು ಒಟ್ಟಾರೆಯಾಗಿ ಒಂದು ಆಶಯ. 1960-70ರ ಕಾಲದಲ್ಲಿ ಕಾದಂಬರಿಗಳು ಜನಪ್ರಿಯವಾಗುತ್ತಿದ್ದಂತೆ ಅವುಗಳಲ್ಲಿ ಕೆಲವು ಸಿನೆಮಾ ರೂಪ ಪಡೆಯಲು ಪ್ರಾರಂಭಿಸಿದವು. ಸಂಸ್ಕಾರ ಮತ್ತು ವಂಶವೃಕ್ಷ ಕಾದಂಬರಿಗಳು ಚಿತ್ರಗಳಾಗಿ ಹೊಸ ಅಲೆಯ ಚಿತ್ರಗಳ ಸೃಷ್ಟಿ ಕನ್ನಡ ಚಲನಚಿತ್ರ ರಂಗದಲ್ಲಿ ಪ್ರಾರಂಭವಾಯಿತು. ಈ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಹೊಸ ಅಲೆಯನ್ನು ಸೃಷ್ಟಿಸಿದವು. ಈ ಕೃತಿಗಳಿಂದ ಪ್ರಭಾವಿತರಾಗಿ ಸಿನೆಮಾಗಳನ್ನು ನೋಡಿದಂತೆ ಈ ಚಿತ್ರಗಳಿಂದ ಪ್ರಭಾವಿತರಾಗಿ ಕಾದಂಬರಿಗಳನ್ನು ಓದಿದವರೂ ಆಗ ಇದ್ದರು. ಈಗ್ಗೆ ಐವತ್ತು ವರ್ಷಗಳ ಹಿಂದೆ ಕಾದಂಬರಿಗಳ ಓದು ಸಮಯ ಕಳೆಯುವ ಒಂದು ಹವ್ಯಾಸ ಸಹ ಆಗಿತ್ತು. ಆ ಕಾಲದಲ್ಲಿ ಅನಂತಮೂರ್ತಿಯವರು ಸಂಸ್ಕಾರದ ನಾರಾಯಣಪ್ಪನೋ ಇಲ್ಲ ಪ್ರಾಣೇಶಾಚಾರ್ಯರೋ ಅಂದು ಸಮೀಕರಿಸಿ ನೋಡಿದವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಈ ಕಾದಂಬರಿಯನ್ನು ಅನಂತಮೂರ್ತಿಯವರು ಯಾಕೆ ಬರೆದರು ಎನ್ನುವ ಜಿಜ್ಞಾಶೆ ನಡೆದ್ದೂ ಉಂಟು. ಬಹುಶಃ ಇಂಗ್ಲೀಷ್ ಪ್ರಾಧ್ಯಾಪಕ, ವಿದೇಶದಲ್ಲಿ ಓದಿದವರು ಮತ್ತು ಪಾಶ್ಚಾತ್ಯ ಸಾಹಿತ್ಯದೆಡೆಗೆ ಆಕರ್ಷಿಸಲ್ಪಟ್ಟ ಅವರು ಮಾನವ ಸಹಜ ಚಪಲ ಮತ್ತು ಕಾಮನೆಗಳನ್ನು ಕುರಿತು ಬರೆಯುವ ಅಗತ್ಯ ಆ ಕಾಲಕ್ಕೆ ಇತ್ತೋ ಏನೋ.
ಪ್ಲೇಗ್ ಕಾಯಿಲೆ ಬಂದು ಸತ್ತ ನಾರಾಯಣಪ್ಪನ ಹೆಣದ ನಿರೂಪಣೆಯ ಮೂಲಕ ‘ಸಂಸ್ಕಾರ’ ಕಾದಂಬರಿಯ ಪುಟ ತೆರೆದು ಕೊಳ್ಳುತ್ತ ಸಾಗುತ್ತದೆ. ಈ ಕಾದಂಬರಿಯ ಕಥಾ ನಾಯಕ ಪ್ರಾಣೇಶಾಚಾರ್ಯ ಸ್ವಾತಂತ್ರ ಪೂರ್ವದ ಅಗ್ರಹಾರವೊಂದರ ವೇದ ಶಾಸ್ತ್ರ ಪಾರಂಗತ ವೈದಿಕ ಪರಂಪರೆಯ ನಾಯಕ. ಇದಕ್ಕೆ ತದ್ವಿರುದ್ಧವಾಗಿ ನಾರಾಯಣಪ್ಪ ಪರಂಪರೆಯ ವಿರೋಧಿ ಪ್ರತಿ ನಾಯಕ ಎನ್ನಬಹುದಾದಂತಹ ವ್ಯಕ್ತಿತ್ವದವನು. ಈ ಕಾದಂಬರಿ ತನ್ನ ರೂಪಕ ಶಕ್ತಿಯ ಮೂಲಕ ಓದುಗನನ್ನು ವೈಚಾರಿಕತೆಯ ಕಡೆಗೆ ಹೊರಳಿಕೊಳ್ಳುವಂತೆ ಮಾಡುತ್ತದೆ. ಅಗ್ರಹಾರವೊಂದರ ಈ ಕಥೆ ಓದುಗನನ್ನು ತಟ್ಟುವುದು ಕಥಾವಸ್ತುವಿನ ಗಟ್ಟಿತನದಿಂದಾಗಿ ಹೀಗಾಗಿ ಲೇಖಕನಿಗೆ ಸಾವಿಲ್ಲ. ಈ ಕೃತಿಗೆ ಬಂದಷ್ಟು ಪರ ವಿರೋಧ ವಿಮರ್ಶೆ ಬೇರಾವ ಕನ್ನಡ ಕೃತಿಗೆ ಈವರೆಗೂ ಬಂದಿಲ್ಲ. ಭಾರತೀಯ ಮೂಲದ ಖ್ಯಾತ ವಿದೇಶಿ ಬರಹಗಾರ ವಿ.ಎಸ್.ನಯಪಾಲ್ ಈ ಕೃತಿ ಕುರಿತು ಬರೆಯುತ್ತ ಇದು ಹಿಂದೂ ಸಂಸ್ಕೃತಿಯ ಅವನತಿಯನ್ನು ಬಿಂಬಿಸುತ್ತದೆ ಎನ್ನುತ್ತಾನೆ. ಇನ್ನೊಬ್ಬ ಖ್ಯಾತ ಮನ ಶಾಸ್ತ್ರಜ್ಞ ಎರಿಕ್ ಎರಿಕ್ಸನ್ ಭಾರತದ ಮಧ್ಯ ಕಾಲದ ತಾಕಲಾಟಗಳನ್ನು ಈ ಕೃತಿ ಸಮರ್ಥವಾಗಿ ಪ್ರತಿಪಾದಿಸುತ್ತದೆ ಎನ್ನುತ್ತಾನೆ. ಅಸ್ವಸ್ಥ ಮನಸ್ಥಿತಿಯಿಂದ ಸ್ವಾಸ್ಥ್ಯದ ಕಡೆಗೆ ಸಾಗಬೇಕು ಈ ಚಲನಶೀಲತೆ ಈ ಕೃತಿಗೆ ಇದೆ ಮತ್ತು ಕಾದಂಬರಿಕಾರರ ಬರವಣಿಗೆಗೆ ಒಂದು ಕಾವ್ಯದ ಗುಣವಿದೆ. ಅದು ಈ ಕೃತಿಯ ಓದಿನುದ್ದಕ್ಕೂ ಗೋಚರಿಸುತ್ತ ಹೋಗುತ್ತದೆ.
ಈ ಕಾದಂಬರಿಯ ಪ್ರತಿನಾಯಕ ನಾರಾಯಣಪ್ಪ ಅಗಾಧ ಜೀವನ ಪ್ರೇಮದ ವ್ಯಕ್ತಿ ಜೊತೆಗೆ ಪರಂಪರಾಗತ ಜಡ್ಡುಗಟ್ಟಿದ ಮೌಲ್ಯಗಳ ಕಟ್ಟಾ ವಿರೋಧಿ. ಆತನಿಗೆ ಮದುವೆಯಾಗಿದೆ ಆದರೆ ಹೆಂಡತಿಯೆಡೆಗೆ ಆತನ ಒಲವಿಲ್ಲ, ಆದರೆ ತುಂಬು ಮೈಯ ಚೆಲುವೆ ಚಂದ್ರಿ ಆತನನ್ನು ಆಕರ್ಷಿಸಿದ್ದಾಳೆ. ಆತ ವಾಸಿಸುವ ಅಗ್ರಹಾರದಲ್ಲಿ ಜಾತಿ ವ್ಯವಸ್ಥೆ ಎನ್ನುವುದು ಒಂದು ಸಂಕೀರ್ಣ ಕಟ್ಟೆಳೆಯಾಗಿ ಜೀವನದ ಓಟಕ್ಕೆ ತೊಡಕಾಗಿದೆ. ಅಗ್ರಹಾರದ ಗುರುರಾಜಾಚಾರ್ಯರ ಮಗ ಮಿಲಿಟರಿಗೆ ಹೋಗಿದ್ದಾನೆ ಅದಕ್ಕೆ ಕಾರಣ ನಾರಾಯಣಪ್ಪ ಎಂಬ ಗುಮಾನಿ ಇದೆ. ಅದೇ ರೀತಿ ನಾರಾಯಣಪ್ಪ ತನ್ನ ಹೆಂಡತಿಯ ಜೊತೆಗೆ ಸಂಸಾರ ಮಾಡುತ್ತಿಲ್ಲ ಚಂದ್ರಿಯ ಜೊತೆಗೆ ಇದ್ದಾನೆ. ಜೀವನವನ್ನು ಯಾವುದೆ ಕಟ್ಟೆಳೆಗಳ ಹಂಗಿಲ್ಲದೆ ಅನುಭವಿಸಬೇಕು ಎನ್ನುವ ಧೋರಣೆ ಆತನದು. ಕೆಲ ಹುಡುಗರು ಆತನನ್ನು ಮೆಚ್ಚಿದ್ದು ಅವನ ಅನುಯಾಯಿಗಳಾಗಿದ್ದಾರೆ ಇದು ಅಗ್ರಹಾರದ ಹಿರಿಯ ತಲೆಗಳಿಗೆ ಅರಗಿಸಿ ಕೊಳ್ಳಲಾಗದ ಸತ್ಯ ಹೀಗಾಗಿ ಆತ ಅಗ್ರಹಾರದ ಹುಡುಗರನ್ನು ಕೆಡಿಸುತ್ತಿದ್ದಾನೆ ಎಂಬ ಎಲ್ಲರ ಒಟ್ಟಾರೆಯಾದ ಅಭಿಪ್ರಾಯ. ಒಂದು ಸಲ ಪ್ರಾಣೇಶಾಚಾರ್ಯರು ಆತನಿಗೆ ಬುದ್ಧಿ ಹೇಳಲು ಹೊಗಿ ಅದು ಯಶಸ್ವಿಯಾಗದೆ ಮರಳಿ ಬಂದಿದ್ದಾರೆ. ಇವೆಲ್ಲ ಪ್ರಾಣೇಶಾಚಾರ್ಯರ ಮನದಲ್ಲಿ ಬಿಚ್ಚಿ ಕೊಳ್ಳುತ್ತ ಹೋಗುತ್ತಿವೆ. ಹೀಗಾಗಿ ಮೃತ ನಾರಾಯಣಪ್ಪ ಅಗ್ರಹಾರದ ಕಟ್ಟು ಪಾಡುಗಳು ನಿಯಮಗಳ ಅಡಿಯಲ್ಲಿ ಬದುಕಿಲ್ಲ ಹೀಗಾಗಿ ಆತನ ಅಂತ್ಯ ಸಂಸ್ಕಾರದ ಸಮಸ್ಯೆ ತಲೆದೋರಿದೆ. ನಾರಾಯಣಪ್ಪನ ಸಾವು ಆತನ ಸಂಬಂಧಿಕರ ವಲಯದಲ್ಲಿ ಭಿನ್ನ ಬಿನ್ನ ರೀತಿಯಲ್ಲಿ ಆತನ ವ್ಯಕ್ತಿತ್ವ ನಡೆದದು ಕೊಂಡ ರೀತಿಗಳ ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಪ್ರಾಣೇಶಾಚಾರ್ಯರ ಮನೆಗೆ ಅಗ್ರಹಾರದ ಅನೇಕರು ನಾರಾಯಣಪ್ಪ ಶವ ಸಂಸ್ಕಾರದ ಕುರಿತು ಸಲಹೆ ಕೇಳಲು ಬಂದಿದ್ದಾರೆ. ಅವರರಿಗೂ ಈ ಸಾವು ಸಮಸ್ಯೆಯಾಗಿ ಕಾಡುತ್ತಿದೆ. ಶವ ಸಂಸ್ಕಾರವಾಗುವವರೆಗೂ ಯಾರೂ ಊಟ ತಿಂಡಿ ಏನೂ ಮಾಡುವಂತಿಲ್ಲ. ಅವರೆಲ್ಲರಿಗೂ ಪ್ರಾಣೇಶಾಚಾರ್ಯರು ತಾನು ಧರ್ಮ ಗ್ರಂಥಗಳಲ್ಲಿ ಇದಕ್ಕೆ ಪರಿಹಾರ ನೋಡುವುದಾಗಿ ಆಶ್ವಾಸನೆ ನೀಡಿ ಕಳಿಸಿ ಕೊಟ್ಟಿದ್ದಾರೆ.
ಬೆಳಗಿನ ವರೆಗೂ ಹುಡುಕಿದರೂ ಯಾವ ಪರಿಹಾರವೂ ದೊರೆಯಲಿಲ್ಲ. ಮತ್ತೆ ಬಂದ ಅಗ್ರಹಾರದ ಜನಕ್ಕೆ ತಮಗೆ ಪರಿಹಾರ ಕಂಡು ಹಿಡಿಯಲಾಗಿಲ್ಲವೆಂದೂ ಗ್ರಾಮದ ದೇವರು ಮಾರುತಿಯಲ್ಲಿ ಪ್ರಸಾದ ಕೇಳಲು ಹೋಗುತ್ತಾರೆ. ಆದರೆ ಎಷ್ಟು ಸಮಯ ಕಾದರೂ ಪ್ರಸಾದ ಆಗುವುದಿಲ್ಲ. ಅಗ್ರಹಾರದ ಪ್ರಮುಖರಿಗೆ ಶ್ರೀ ಮಠದ ಸ್ವಾಮಿಗಳಲ್ಲಿಗೆ ಹೋಗಿ ಈ ಬಗೆಗೆ ಸಲಹೆ ಕೇಳಲು ಕಳಿಸುತ್ತಾರೆ. ತಮ್ಮ ಹೆಂಡತಿ ಕಾಯಿಲೆಯ ಹೆಣ್ಣು ಮಗಳಾಗಿದ್ದು ಆಕೆಯ ಆರೈಕೆ ಮಾಡಲು ತಾವು ಅಗ್ರಹರದಲ್ಲಿ ಉಳಿದಿದರುವುದಾಗಿ ಸ್ವಾಮಿಗಳಲ್ಲಿ ಬಿನ್ನವಿಸುವಂತೆ ಹೇಳಿ ಕಳಿಸಿದ್ದಾರೆ. ಇತ್ತ ಒಂದು ವಿಚಿತ್ರಕರ ಸನ್ನಿವೇಶದಲ್ಲಿ ಪ್ರಾಣೇಶಾಚಾರ್ಯರು ಚಂದ್ರಿ ಸಂಬಂಧ ಬೆಳೆಸುತ್ತಾರೆ. ಅವರ ದಾರ್ಮಿಕ ನಂಬಿಕೆಗಳು ಸಡಿಲವಾಗುತ್ತ ಸಾಗುತ್ತವೆ. ಮನೆಗೆ ಬಂದು ನೋಡಿದರೆ ಅವರ ಹೆಂಡತಿ ಭಾಗೀರಥಿ ಮೃತ ಪಟ್ಟಿರುತ್ತಾಳೆ. ಚಕ್ಕಡಿಯಲ್ಲಿ ಆಕೆಯ ಶವವನ್ನು ಒಯ್ದು ಅಂತ್ಯ ಸಂಸ್ಕಾರ ಜರುಗಿಸಿ ಪ್ರಾಣೇಶಾಚಾರ್ಯರು ಅಗ್ರಹಾರ ತೊರೆಯುತ್ತಾರೆ. ಗೊತ್ತು ಗುರಿಯಿಲ್ಲದ ಅವರ ಪಯಣದಲ್ಲಿ ಮಾತುಗಾರ ಮತ್ತು ನೇರ ನಡೆ ನುಡಿಯ ಸಹೃದಯಿ ಮಾಲೇರ ಪುಟ್ಟ ದೊರೆಯುತ್ತಾನೆ. ಮರವನ್ನೂ ಸಹ ಮಾತನಾಡಿಸಬಲ್ಲ ಆತನ ಜೊತೆ ಅವರ ಮೌನ ಕೆಲಸ ಮಾಡುವುದಿಲ್ಲ. ಅವರನ್ನು ಪುಟ್ಟ ಪೂರ್ತಿಯಾಗಿ ತನ್ನ ವಶವರ್ತಿಯನ್ನಾಗಿ ಮಾಡಿಕೊಂಡು ಬಿಡುತ್ತಾನೆ. ಅಗ್ರಹಾರ ಬಿಟ್ಟು ಹೊರ ಜಗತ್ತಿನ ಪರಿಚಯವಿಲ್ಲದ ಅವರಿಗೆ ಪುಟ್ಟನ ಸಾಂಗತ್ಯದಲ್ಲಿ ಹೊರ ಜಗತ್ತಿನ ದರ್ಶನವಾಗುತ್ತ ಸಾಗುತ್ತದೆ. ಅವರಿಗೆ ದಾರಿಯಲ್ಲಿ ಅಡ್ಡಲಾಗಿ ಅಕಸ್ಮಾತ ಒಂದು ನಾಗರ ಹಾವು ಕಾಣಿಸಿಕೊಳ್ಳುತ್ತದೆ. ಅದು ವಿಷ ಜಂತು ಯಾರಿಗಾದರೂ ಕಚ್ಚಿ ಅನಾಹುತವಾಗಬಹುದು ಅದನ್ನು ಪುಟ್ಟ ಒಂದು ಬಡಿಕೆಯನ್ನು ಹುಡುಕಿ ಅದರಿಂದ ಬಡಿದು ಆ ಹಾವನ್ನು ಸಾಯಿಸಿ ಕಟ್ಟಿಗೆಯನ್ನು ಒಟ್ಟು ಮಾಡಿ ಅದನ್ನು ಸುಟ್ಟು ಸಂಸ್ಕಾರ ಮಾಡಿ ಮುಂದೆ ಸಾಗುತ್ತಾನೆ. ಪ್ರಾಣೇಶಾಚಾರ್ಯರಿಗೆ ಆತನ ನಿಲುವು ನಿರ್ಧಾರಗಳು ಅಚ್ಚರಿ ಮೂಡಿಸುತ್ತವೆ. ತಮ್ಮ ನಡುವೆ ಬಾಳಿ ಸತ್ತು ಹೊದ ಒಬ್ಬ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಲಗದ ತಾವೆಲ್ಲಿ ಸಂಸ್ಕಾರ ಕ್ರಿಯೆಯನ್ನು ಎಷ್ಟು ಸರಳವಾಗಿ ಪುಟ್ಟ ಬಗೆಹರಿಸಿದ ಎಂದು ಅವರು ಆಶ್ಚರ್ಯ ಚಕಿತರಾಗುತ್ತಾರೆ.
ಹೋಗುವ ಮಾರ್ಗ ಮಧ್ಯದಲ್ಲಿ ಒಂದು ತೊರೆಯ ಹತ್ತಿರ ಸ್ನಾನ ಮಾಡುತ್ತಿರುತ್ತಾಳೆ, ಪ್ರಾಣೇಶಾಚಾರ್ಯರ ಗಮನ ಕೆಲ ಕ್ಷಣ ಆಕೆಯ ಕಡೆಗೆ ಹರಿಯುತ್ತದೆ. ಒಂದು ಕ್ಷಣ ಅದನ್ನು ಗಮನಿಸಿದ ಪುಟ್ಟ ಅದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡು ಅವರನ್ನು ಪದ್ಮಾವತಿಯ ಮನೆಗೆ ಕರೆದೊಯ್ಯುತ್ತಾನೆ. ಅದನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಿದ ಪ್ರಾಣೇಶಾ ಚಾರ್ಯರು ಆ ಸ್ಥಳದ ಮುಜುಗರದಿಂದ ತಪ್ಪಿಸಿಕೊಳ್ಳಲು ಅಲ್ಲಿಂದ ಹೊರಟು ಬಂದು ಬಿಡುತ್ತಾರೆ, ಅವರು ಎಲ್ಲಿಗೆ ಹೋದರು ದೂರ್ವಾಸಪುದರದ ಅಗ್ರಹಾರಕ್ಕೆ ಹೋದರೆ, ಕುಂದಾಪುರದ ಚಂದ್ರಿಯನ್ನು ಹುಡುಕಿಕೊಂಡು ಹೋದರೆ ಅದು ಓದುಗನ ಗ್ರಹಿಕೆಗೆ ಬಿಟ್ಟದ್ದು. ವ್ಯಕ್ತಿ ನಿಷ್ಟೆ ಬದಲಾವಣೆಯ ಜೊತೆಗೆ ಮನುಷ್ಯನ ಒಳ ಹೊರಗನ್ನು ಶೋಧಿಸಿದವರು ಅನಂತಮೂರ್ತಿ ಆ ಕಾರಣಕ್ಕಾಗಿ ಈ ಕೃತಿ ಶ್ರೇಷ್ಟವಾದುದು. ಈ ಮೊದಲು ಚಂದ್ರಿ ಬೇರೆ ತನಗೆ ಪರಿಚಿತರ ಸಹಾಯದಿಂದ ನಾರಾಯಣಪ್ಪನ ಶವ ಸಂಸ್ಕಾರ ನೆರವೇರಿಸಿ ಆತನ ಋಣ ತೀರಿಸಿದ ನಿಷ್ಟಳು ಆಕೆ.
ಅನಂತ ಮೂರ್ತಿಯವರು ಅಲ್ಲಲ್ಲಿ ಚುಕ್ಕಿಗಳನ್ನಿಟ್ಟು ರಂಗೋಲಿಯ ಹಂದರ ನಿರ್ಮಿಸಿದ್ದಾರೆ, ಎಳೆಗಳನ್ನು ಓದುಗರೆ ಎಳೆಯಬೇಕು ಈ ಮಾತು ಭೈರಪ್ಪನವರ ವಂಶವೃಕ್ಷಕ್ಕೂ ಅನ್ವಯಿಸುತ್ತದೆ. ರಂಗೋಲಿಯ ಹಂದರ ಹಾಗೆಯೆ ಉಳಿದಿದೆ. ಈ ಐವತ್ತು ವರ್ಷಗಳ ದೀರ್ಘ ಕಾಲಾವಧಿಯಲ್ಲಿ ಓದುಗರು ತಮಗೆ ತೋಚಿದ ರೀತಿಯಲ್ಲಿ ಎಳೆಗಳನ್ನು ಎಳೆಯುತ್ತ ಅವುಗಳನ್ನು ಅರ್ಥೈಸುತ್ತ ಬಂದಿದ್ದಾರೆ. ರಂಗೋಲಿಯ ಹಂದರ ಹಾಗೆಯೆ ಇದೆ ಮುಂದೆಯೂ ಇರುತ್ತದೆ, ಮುಂದೆ ಬರುವ ಹೊಸ ಹೊಸ ಪೀಳಿಗೆಯ ಓದುಗರು ಆ ಚುಕ್ಕಿಗಳ ಜೊತೆಗೆ ಆಟವಾಡುತ್ತ ಅವರವರಿಗೆ ತೋಚಿದಂತೆ ಎಳೆಗಳನು ಎಳೆಯುತ್ತ ರಂಗೋಲಿಯನ್ನು ಬೆರಗಿನಿಂದ ನೋಡುತ್ತ ಆಸ್ವಾದಿಸುತ್ತ ಅರ್ಥೈಸುತ್ತ ಸಾಗುತ್ತಾರೆ. ಕಾದಂಬರಿಕಾರರು ತಮ್ಮ ಕೃತಿಗಳಲ್ಲಿ ಎತ್ತಿದ ತಾತ್ವಿಕ ಪ್ರಶ್ನೆಗಳು ಸಾರ್ವಕಾಲಿಕ. ಹೀಗಾಗಿ ಅವುಗಳು ಕಾಲದ ಒಟದಲ್ಲಿ ಇಲ್ಲವಾಗದೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿ ಉಳಿಯುವಂತಹವು. ಇನ್ನು ಐವತ್ತು ವರ್ಷಗಳ ನಂತರ ಆ ಕೃತಿಗಳು ಶತಮಾನೋತ್ಸವ ಆಚರಿಸಬಹುದು ಆ ಗಟ್ಟಿತನ ಕೃತಿಗಳಿಗಿದೆ.
ಹನುಮಂತ ಪಾಟೀಲ
* * *