ಸುಖೇ ದುಃಖೇ ಸಮೇಕೃತ್ವಾ…
ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಒಂದು ಉಕ್ತಿಯಿದೆ.. “ಸುಖೇ ದುಃಖೇ ಸಮೇಕೃತ್ವಾ…” ಎಂದು. ಅದರರ್ಥ, ಜೀವನದಲ್ಲಿ ಸುಖ ದುಃಖ ಗಳು ಬರುತ್ತಿರುತ್ತವೆ. ಅವಾವವೂ ಸ್ಥಾಯಿಯಲ್ಲ. ಯಾವಾಗಲೂ ಸ್ಥಿತಪ್ರಜ್ಞತೆಯನ್ನು ಕಾಯ್ದುಕೊಳ್ಳಬೇಕು. ಅಂತಿಮವಾಗಿ ದೊರಕುವುದು ತೃಪ್ತಿಯೊಂದೇ. ಈ ಸೋಲು ಗೆಲುವುಗಳೆಲ್ಲವೂ ದಾರಿಯಲ್ಲಿ ನಡೆವಾಗಿನ ನಿಲ್ದಾಣಗಳಷ್ಟೇ.
ನಾಲಿಗೆಯಲ್ಲಿ ಷಡ್ರಸಗಳನ್ನೂ ಗುರುತಿಸಬಲ್ಲ ಗ್ರಂಥಿಗಳಿವೆಯಾದರೂ ನಾವು ಯಾವಾಗಲೂ ಬಯಸುವುದು ಸಿಹಿಯನ್ನೇ. ನಮ್ಮ ಆಹಾರದಂತೆ, ನಮ್ಮ ಜೀವನದಲ್ಲಿ ಕೂಡ ಸಿಹಿಗೆ ಅಪಾರ ಮಹತ್ವವಿದೆ. ಏನಾದರೂ ಒಳ್ಳೆಯದಾದರೆ ಸಿಹಿ ಹಂಚುತ್ತೇವೆ… ಸುದ್ದಿ ಒಳ್ಳೆಯದಾದರೆ ಸಿಹಿ ಸುದ್ದಿ ಎಂದೇ ಹೇಳುತ್ತೇವೆ.. ಆದರೆ, ಜೀವನವನ್ನು ಒಂದು ಊಟಕ್ಕೆ ಹೋಲಿಸಿದಲ್ಲಿ ಸಿಹಿಯ ಮಹತ್ವದ ಅರಿವಾಗಬೇಕಾದರೆ ಕಹಿ, ಒಗರು, ಖಾರ, ಹುಳಿಗಳನ್ನೂ ಸವಿಯಲೇಬೇಕು ಎನ್ನುವುದನ್ನು ಮರೆಯುತ್ತೇವೆ. ಅದರಂತೆ ಜೀವನದಲ್ಲಿ ಕೂಡ ಯಾವಾಗಲೂ ಸಿಹಿ ಘಟನೆಗಳೇ ನಮಗೆ ಎದುರಾಗುವುದಿಲ್ಲ. ಈ ಜೀವನವೆಂದರೆ ಒಂದು ಹೋರಾಟ. ಹೋರಾಟದಲ್ಲಿ ಸೋಲಿನ ಕಹಿಯೂ ಇರುತ್ತದೆ, ಗೆಲುವಿನ ಸಿಹಿಯೂ ಇರುತ್ತದೆ.
ಎದುರಿನವರು ಯಾವಾಗಲೂ ನಮಗೆ ಒಳ್ಳೆಯ ನುಡಿಗಳನ್ನೇ ಆಡಲಿ ಎಂದು ಬಯಸುತ್ತೇವೆ. ಆದರೆ ಅದು ಸಾಧ್ಯವೇ? ಒಮ್ಮೊಮ್ಮೆ ಜಗಳಗಳೂ, ಕಟುಮಾತುಗಳೂ ನಮ್ಮ ಪದರಿನಲ್ಲಿ ಬೀಳುತ್ತವೆ. ಆತ್ಮೀಯರಿಂದ ಇಂಥ ಪ್ರಸಂಗವನ್ನು ಎದುರಿಸಿದಾಗ ಜೀವನ ಬೇಸರವಾಗುತ್ತದೆ. ಆಗಲೇ ಇನ್ನೊಂದೆಡೆಯಿಂದ ಆತ್ಮೀಯರ ಸಾಂತ್ವನ ಕೂಡ ದೊರೆಯುತ್ತದೆ. ಹೀಗೆ ಸಿಹಿಯ ಬೆನ್ನಲ್ಲೇ ಕಹಿಯೂ, ಕಹಿಯ ಬೆನ್ನಿಗೆ ಒಗರೂ ನಮ್ಮ ಜೀವನದ ರಸಪಾಕದಲ್ಲಿದ್ದರೇ ಅದು ಸಮತೂಕದ ಆಹಾರವಾದೀತು. ಒಮ್ಮೊಮ್ಮೆ ನಮ್ಮ ಅಧರಕ್ಕೆ ಸಿಹಿಯಾದುದು ಉದರಕ್ಕೆ ಕಹಿ ಆಗುವ ಸಂದರ್ಭ ಎದುರಾದಾಗ ಸಿಹಿಯನ್ನು ತ್ಯಜಿಸಬೇಕಾಗುತ್ತದೆ.
ತಿರುಗಿಸಲಿ ವಿಧಿರಾಯನಿಚ್ಛೆಯಿಂ ಯಂತ್ರವನು
ಚರಿಕೆ ತಾರಾಗ್ರಹಗಳಿಷ್ಟವೋದಂತೆ
ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ
ಸ್ಥಿರಚಿತ್ತ ನಿನಗಿರಲಿ ಮಂಕುತಿಮ್ಮ
ನಿನ್ನ ನಿಯಂತ್ರಿಸುವ ಆ ವಿಧಿರಾಯನು ತನ್ನ ಇಚ್ಛೆಯಂತೆ ಜೀವನಚಕ್ರವನ್ನು ತಿರುಗಿಸಲಿ, ಜಾತಕದ ರೀತ್ಯಾ ಗ್ರಹ ನಕ್ಷತ್ರಗಳು ನಿನ್ನ ಬದುಕಿನ ಗತಿಯನ್ನು ಬದಲಾಯಿಸುತ್ತಲಿರಲಿ, ದೈವ ಕರ್ಮಗಳು ಅಟ್ಟಹಾಸದಿಂದ ಕೇಕೆಗೈಯಲಿ, ಆದರೂ ಸ್ಥಿರ ಚಿತ್ತ ನಿನಗಿರಲಿ ಎಂದು ಡಿವಿಜಿಯವರು ಹೇಳಿರುವುದೂ ಇದೇ ಸಾರವನ್ನು.
ಯುಗಾದಿಯನ್ನು ಹೊಸ ವರುಷದ ಸಂಭ್ರಮದ ಸಂಕೇತವಾಗಿ ಆಚರಿಸುತ್ತೇವೆ. ಬೇವು ಬೆಲ್ಲವನ್ನು ಜೊತೆಯಲ್ಲಿ ಸೇರಿಸಿ ತಿನ್ನುವ ನಾವು ಇದರ ಹಿಂದಿರುವ ಜೀವನದ ಮೂಲತತ್ವವಾದ ಸಿಹಿಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕೆನ್ನುವುದನ್ನು ಅರಿತಿರುವ ಅಗತ್ಯವಿದೆ. ಚಳಿಗಾಲದಲ್ಲಿ ಉದುರಿರುವ ಪ್ರಕೃತಿಯ ಹಸಿರುಡುಗೆ ಮತ್ತೆ ವಸಂತದಲ್ಲಿ ಚಿಗುರಲಿರುವದಕ್ಕೆ ದ್ಯೋತಕ. ಅದರಂತೆ ಜೀವನದಲ್ಲಿ ಕೂಡ ಸಿಹಿಯಂತೆಯೇ ಕಹಿ, ಒಗರುಗಳನ್ನೂ ಸಮಾನವಾಗಿ ಸ್ವೀಕರಿಸಿ, ಮುಂಬರುವ ಒಳ್ಳೆಯದಕ್ಕೆ ಅಣಿಯಾಗುವುದೇ ಜೀವನ.