ಸ್ಮಾರ್ಟ್ ಫೋನ್ ಜಮಾನಾ
ಸ್ಮಾರ್ಟ್ ಫೋನ್ ಗಳು ಬಂದ ಮೇಲೆ ಸೆಲ್ಫಿ ತೆಗೆಯುವ ಗೀಳು ಹೆಚ್ಚಾಗುತ್ತಿದೆ. ಸೆಲ್ಫಿಗಳು ಸ್ವಯಂ ಅಭಿವ್ಯಕ್ತಿಯ ಒಂದು ರೂಪ. ತಮಗೆ ತಾವೇ ಪ್ರಾಮುಖ್ಯತೆ ಕೊಟ್ಟುಕೊಳ್ಳಲು, ಸಂಭ್ರಮಪಟ್ಟುಕೊಳ್ಳಲು ಜನರು ಸೆಲ್ಫಿ ತೆಗೆಯುವುದಕ್ಕೆ ಹೋಗುತ್ತಾರೆ. ಸೆಲ್ಫಿ ತೆಗೆಯುವಾಗ ಮನಸ್ಸಿನ ಭಾವನೆಗಳು ಕೂಡ ವಿಸ್ತಾರವಾಗುತ್ತದೆ, ಖುಷಿ ನೀಡುತ್ತದೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸಂಭ್ರಮಿಸುವವರ ಸಂಖ್ಯೆಗಂತೂ ಲೆಕ್ಕವೇ ಇಲ್ಲ.
ಈ ಗೀಳು ಕೆಲವೊಮ್ಮೆ ಅತ್ಯಂತ ಅಪಾಯಕಾರಿ ಪರಿಣಮಿಸುತ್ತದೆ. ಸೆಲ್ಫಿ ತೆಗೆಯುವ ಭರದಲ್ಲಿ ಅನೇಕರು ಜೀವ ತೆತ್ತಿದ್ದಾರೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ಸೆಲ್ಫೀ ತೆಗೆಯುತ್ತಿದ್ದ ವೇಳೆ ಮೊಸಳೆಯೊಂದು ಹಠಾತ್ ದಾಳಿ ನಡೆಸಿ ಫ್ರೆಂಚ್ ಪ್ರವಾಸಿ ಮಹಿಳೆಯನ್ನು ಗಾಯಗೊಳಿಸಿರುವ ಘಟನೆ ಥೈಯ್ಲೆಂಡ್ನ ಖೊಯೊಯ್ ನ್ಯಾಷನಲ್ ಪಾರ್ಕ್ನಲ್ಲಿ ನಡೆದಿದೆ. ಮಹಿಳೆಯ ಕಾಲಿಗೆ ಆಳವಾದ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ತನ್ನ ಪತಿಯೊಂದಿಗೆ ಮೊಸಳೆಯನ್ನು ಹಿನ್ನೆಲೆಯಾಗಿಟ್ಟುಕೊಂಡು 44 ವರ್ಷದ ಬೆನೆಟೂಲಿಯರ್ ಸೆಲ್ಫಿ ತೆಗೆಯುತ್ತಿದ್ದಳು. ಆಗ ಕೊಳದಲ್ಲಿದ್ದ ಇನ್ನೊಂದು ಮೊಸಳೆ ಹಠಾತ್ ದಾಳಿ ನಡೆಸಿ ಗರಗಸದಂಥ ಹಲ್ಲಿನಿಂದ ಕಚ್ಚಿತು. ತಕ್ಷಣ ಭದ್ರತಾ ಗಾರ್ಡ್ಗಳು ರಕ್ಷಣೆಗೆ ಧಾವಿಸಿ ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದರು. ಕಾಲಿಗೆ ಆಳವಾದ ಗಾಯಗಳಾಗಿರುವ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ರಾಷ್ಟ್ರೀಯ ಉದ್ಯಾನವನದಲ್ಲಿ ಮೊಸಳೆ ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಕೆ ಫಲಕಗಳನ್ನು ಹಾಕಿದ್ದರೂ ಅದನ್ನು ಲೆಕ್ಕಿಸದೇ ಮಹಿಳೆ ಸೆಲ್ಫೀ ತೆಗೆಯುವ ದುಸ್ಸಾಹಸಕ್ಕೆ ಕೈಹಾಕಿದ್ದರಿಂದಲೇ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ಸುದ್ದಿ ಕೇಳಿರಿಲ್ಲಿ ಬಹಳ ದಿನಗಳ ನಂತರ ನನ್ನ ಗೆಳತಿ ಯೊಬ್ಬಳ ಮನೆಗೆ ಹೋಗಿದ್ದೆ. ಖುಷಿಯಿಂದ ಬರಮಾಡಿಕೊಂಡು ಸೋಫಾ ಮೇಲೆ ಕುಳ್ಳಿರಿಸಿ ಒಳಹೋದಳು. ಕಾಫಿ ತರಲು ಹೋಗಿರಬಹುದು ಎಂದುಕೊಂಡು ಮನೆಯ ಅಂದ ಚಂದ ನೋಡುತ್ತಾ ಕುಳಿತೆ. ಕೆಲವೇ ನಿಮಿಷದಲ್ಲಿ ಬಂದವಳ ಕೈಯಲ್ಲಿ ಕಾಫಿ ಟ್ರೇ ಬದಲು ಮೊಬೈಲ್ ಇತ್ತು.
“ಎಲ್ಲಿ, ನಿನ್ನ ಜತೆ ಒಂದು ಫೋಟೊ, ಈ ಕಡೆ ತಿರುಗಿ, ಸ್ವಲ್ಪ ನಗು ಇರಲಿ, ಆ ಕೂದಲು ಸ್ವಲ್ಪ ಹಿಂದೆ ಮಾಡಿಕೋ, ಇಲ್ಲವಾದರೆ ನನ್ನ ಮುಖ ಸರಿಯಾಗಿ ಕಾಣಿಸುವುದೇ ಇಲ್ಲ”– ಹೀಗೆಲ್ಲ ಮಾತನಾಡುತ್ತ, ನನ್ನ ಪಕ್ಕ ಕುಳಿತು ಸೆಲ್ಫೀ ಕ್ಲಿಕ್ ಶುರು ಮಾಡಿದಳು. ನಾಲ್ಕು ಐದು ಪೋಸುಗಳಾದ ಮೇಲೆ ಅದನ್ನು ಫೇಸ್ ಬುಕ್ಕಿನಲ್ಲಿ ಅಪ್ಲೋಡ್ ಮಾಡುವ ಸಂಭ್ರಮ.
“ಇಲ್ಲಿ ನೋಡು, ಆಗಲೇ 6 ಲೈಕುಗಳು. ನನ್ನ ಗೆಳತಿ ಕಲ್ಪನದು ಮೊದಲ ಕಾಮೆಂಟ್, ಮೊನ್ನೆ ಚೆನ್ನಾಗಿ ಬೈದೆ, ನನ್ನ ಸ್ಟೇಟಸ್ ಮೇಲೆ ಕಾಮೆಂಟ್ ಮಾಡದಿದ್ದಕ್ಕೆ. ಅವಳ ಪೋಸ್ಟ್ಗಳಿಗೆಲ್ಲ ನನ್ನದೇ ಮೊದಲ ಕಾಮೆಂಟು. ಅಷ್ಟಾಗಿ ಅವಳ ಪೊಗರು ನೋಡು, ಪೋಸ್ಟ್ ಹಾಕಿ ಹತ್ತು ನಿಮಿಷಗಳಾದರೂ ಲೈಕ್ ಸಹ ಇಲ್ಲ ಅಂದರೆ? ನನ್ನ ಬಾಯಿಗೆ ಹೆದರಿ ಕಾಮೆಂಟ್ ಹಾಕಿದ್ದಾಳೆ” ಎಂದಳು. ನನ್ನ ಬಾಯಿ ಒಣಗಿ ಹೋಗುತ್ತಿತ್ತು. ದೂರದಿಂದ ಹೋಗಿದ್ದೆ, ಬಿಸಿಲು ಬೇರೆ. ಧೈರ್ಯ ಮಾಡಿ “ಸ್ವಲ್ಪ ನೀರು ಕೊಡತೀಯಾ’’ ಎಂದು ಕೇಳಿದೆ. ಹೂಂ ಎಂದಳು. ಒಂದು ಛಂದ ದ ಟ್ರೇಯಲ್ಲಿ ಹೊಸ ರೀತಿಯ ಗ್ಲಾಸು, ಗಾಜಿನ ಹೂಜಿ. ನಾನು ಲಪಕ್ಕನೆ ನೀರಿನ ಗ್ಲಾಸನ್ನು ಎತ್ತಿಕೊಂಡಿದ್ದೆ.
“ಎಲ್ಲಿ, ನೀರಿನ ಗ್ಲಾಸು ಹಿಡಿದು ಈ ಸೋಫಾ ಮೇಲೆ ಕೂತುಕೋ. ನಮ್ಮ ಹೊಸ ಸೋಫಾ ಸೆಟ್ ಫೋಟೊ ಹಾಕಿದ ಹಾಗೂ ಆಗುತ್ತದೆ’’ ಎಂದಳು. ಅವಳ ಸೆಲ್ಫೀ ಉತ್ಸಾಹದ ಎದುರು ಕಾಫಿ , ಟೀ ಇರಲಿ, ನೀರು ಸಹ ಸರಿಯಾಗಿ ಕುಡಿಯಲಾಗಲಿಲ್ಲ. ಇನ್ನು ಮಾತುಕತೆ, ಸುಖ–ದುಃಖ ಹಂಚಿಕೊಳ್ಳುವುದು ದೂರವೇ ಉಳಿಯಿತು. ಎರಡು ಗಂಟೆಗಳ ಫೋಟೋ ಸೆಶನ್ನನ ನಂತರ ಗಂಟಲೊಣಗಿಸಿಕೊಂಡು ಮನೆಗೆ ಬಂದಿದ್ದೆ.
ಇನ್ನೊಂದು ಘಟನೆ. ಅದು ಹೊಸ ಕಂಪ್ಯೂಟರ್ ಕೋಣೆಯ ಉದ್ಘಾಟನೆ. ಕಾರ್ಯಕ್ರಮ ಮುಗಿದ ಕೂಡಲೇ ಹೊಸ ಗಣಕ ಯಂತ್ರಗಳ ಜತೆ ಫೋಟೊ ತೆಗೆಸಿಕೊಳ್ಳುವುದಕ್ಕೆ ನಾ ಮುಂದು, ತಾ ಮುಂದು ಎಂದು ಕ್ಯೂ. ಒಂದೆರಡು ಗಂಟೆಗಳ ನಂತರ ಎಲ್ಲರ ಪ್ರೊಫೈಲ್ ಪಿಕ್ಚರ್ ಬದಲು! ಹೊಸ ಗಣಕ ಯಂತ್ರ ಫೇಸ್ಬುಕ್ನ ಮುಖಪುಟದಲ್ಲಿ ಮೆರೆದಿದ್ದೂ ಮೆರೆದಿದ್ದೆ!
ಅರ್ಥ ಆಯಿತಲ್ಲ? ಕೆಲಸ ಮಾಡುವುದಕ್ಕಿಂತ ಅದರ ಫೋಟೊ ತೆಗೆದು ಅಪ್ಲೋಡ್ ಮಾಡುವುದು ಮುಖ್ಯ! ಗೆಳೆಯರನ್ನು ಮೀಟ್ ಮಾಡಿದ ತಕ್ಷಣ ಸೆಲ್ಫೀ ತೆಗೆಯುವುದು ಬಹಳ ಪ್ರಮುಖ ಕೆಲಸ. ತಿಥಿಯೇ ಇರಲಿ, ಹುಟ್ಟುಹಬ್ಬವೇ ಇರಲಿ, ಮೊದಲು ಫೋಟೊ ತೆಗೆಯುವುದು, ಅದನ್ನು ಫೇಸ್ಬುಕ್ನಲ್ಲಿ ಹಾಕುವುದು; ಲೈಕು–ಕಾಮೆಂಟುಗಳಿಗಾಗಿ ಕಾಯುವುದು. ನೀವು, ನಾನು ಎಲ್ಲಾ ಇದರ ಗೀಳಿಗೆ ಕೆಲವು ಸಮಯಕ್ಕಾದರೂ ಬಲಿಯಾದವರೇ. ಕೆಲಸ ಜಾಸ್ತಿ ಇರುವರು, ಯಾವುದಾದರೂ ಅಧ್ಯಯನದಲ್ಲಿ ತೊಡಗಿರುವವರು ಅಥವಾ ಅಂತರ್ಜಾಲದ ಸಂಪರ್ಕ ಇಲ್ಲದವರು ಮಾತ್ರ ಈ ಗೀಳಿನಿಂದ ದೂರ ಉಳಿದಿರಬಹುದು.
ಇತ್ತೀಚೆಗೆ ಗೆಳತಿಯರೆಲ್ಲ ಸೇರಿ ಹೋಟೆಲ್ಲೊಂದಕ್ಕೆ ನುಗ್ಗಿದ್ದೆವು. ನಮ್ಮ ಗುಂಪು ನೋಡಿ ಬಂದ ಸರ್ವರ್– ‘‘ಫೋಟೊ ತೆಗೀಲಾ ಮ್ಯಾಡಮ್?’’ ಎಂದ. ಅವನಿಗೂ ಗೊತ್ತು, ಫೋಟೊ ಮೊದಲು, ಆರ್ಡರ್ ಆಮೇಲೆ ಅಂತ! ತಿನ್ನುತ್ತಾ ಕುಡಿಯುತ್ತಾ, ಹರಟುತ್ತಾ, ಪೋಸುಗಳು ಕೊಟ್ಟಿದ್ದೇ ಕೊಟ್ಟಿದ್ದು. ತುತ್ತಿಗೊಂದು ಫೋಟೊ, ಗುಟುಕಿಗೊಂದು ಕ್ಲಿಕ್. ಸರ್ವರ್ ನಮ್ಮ ಮೇಜಿನ ಬಳಿಯೇ ಇದ್ದು, ಕ್ಯಾಮೆರಾ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು.
ಸುತ್ತ ಮುತ್ತ ಮೇಜುಗಳಲ್ಲೂ ಸುಮಾರು ಇದೇ ದೃಶ್ಯ. ಇದರಿಂದ ಹೊರತಾದವರೆಂದರೆ ಜೋಡಿಗಳು– ಮನೆಯವರ ಕಣ್ಣು ತಪ್ಪಿಸಿ ಮೀಟ್ ಮಾಡಬಂದ ಜೋಡಿಗಳು. ಏನೋ ವಿಷಯ ಚರ್ಚಿಸಲು ಬಂದ ಹಿರಿಯರು, ಮಧ್ಯ ವಯಸ್ಸಿನ ಜೋಡಿಗಳು… ಊಟ ಎಷ್ಟು ಮಾಡಿದೆವೋ ನೆನಪಿಲ್ಲ. ಫೋಟೊಗೆ ಪೋಸ್ ನೀಡಿದ ಎಲ್ಲಾ ಕ್ಷಣಗಳೂ ಚೆನ್ನಾಗಿ ನೆನಪಿವೆ! ಅದೂ ಅಲ್ಲದೆ, ಆ ವೇಟರನ ಟಿಪ್ಸ್ ಶಿವಧನುಸ್ಸಿಗಿಂತಲೂ ಒಜ್ಜೆಯಾಗಿ ರಾವಣನಂತೆ ತಿಣುಕಿದ್ದು ಕೂಡ ನೆನಪಿನಲ್ಲಿದೆ!
ಇನ್ನೂ ಒಂದು ಅನಿರ್ವಚನೀಯ ಭೇಟಿಯ ಬಗ್ಗೆ ಹೇಳುವೆ. ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಘಟನೆಯೊಂದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಅಂದು ನನ್ನ ಗೆಳತಿಯೋರ್ವಳ ಹುಟ್ಟಿದ ಹಬ್ಬ. ಅವಳಿಗೆ ಅದನ್ನು ಸ್ವಲ್ಪ ವಿಭಿನ್ನವಾಗಿ ಆಚರಿಸಿಕೊಳ್ಳುವ ಇರಾದೆ. ಹೀಗಾಗಿ ಒಂದ ವೃದ್ಧಾಶ್ರಮ ಕ್ಕೆ ಹೋದೆವು. ಯಾವುದೋ ಅನಿರ್ವಾರ್ಯತೆಯಿಂದ ಆಶ್ರಮ ಸೇರಿದ ವಯಸ್ಸಾದವರು, ನೈಟಿ ಧರಿಸಿ ಪೆಚ್ಚು ಪೆಚ್ಚುನಗೆ ಬೀರಿ ನಿಂತ ಅಜ್ಜಿಯರು– ಇವರನ್ನೆಲ್ಲ ಬಲವಂತವಾಗಿ ನಗಿಸಿ ಎಲ್ಲರೊಂದಿಗೆ ಸೆಲ್ಫಿ ತೆಗೆಯಲಾಯಿತು. ಬಲೂನ್ ಕಟ್ಟಿ, ಕೇಕ್ ತಿನ್ನಿಸಿ ಅವರ ಜತೆ ಸೆಲ್ಫಿ ತೆಗೆಸಿಕೊಳ್ಳುವ ಸಂಭ್ರಮ ಬೇರೆ. ಈ ತೋರಿಕೆಯ ಭೇಟಿ ಮುಜುಗರ ತರುವಂತಿತ್ತು.
ಫೋಟೊಗಳಿಗಾಗಿ ಭೇಟಿಯೋ ಭೇಟಿಯಿಂದ ಫೋಟೊಗಳೊ? ಫೇಸ್ಬುಕ್ಗಾಗಿ ಏನೆಲ್ಲ ಮಂಗಾಟ ಆಡುವ ನಡವಳಿಕೆ ವಿಷಾದ ಹುಟ್ಟಿಸುತ್ತದೆ. ಈಚೆಗೆ, ‘ಅನಾಥಾಶ್ರಮಕ್ಕೆ ಹೋಗೋಣ’ ಎಂದು ಫೋನ್ ಮಾಡಿದ ಗೆಳತಿಗೆ ಕಟ್ಟುನಿಟ್ಟಾಗಿ ಹೇಳಿದೆ– ‘‘ನಾನು ಬರುವೆ, ಆದರೆ ಯಾರೂ ಕ್ಯಾಮೆರಾ ತರಬಾರದು, ಮೊಬೈಲ್ಗಳಲ್ಲೂ ಫೋಟೊ ತೆಗೆಯಬಾರದು’’. ಕ್ಷಣಕಾಲ ಆ ಕಡೆಯಿಂದ ಮೌನ. “ಆಯಿತು, ತಿಳಿಸುವೆ” ಎಂದು ಕಾಲ್ ಕಟ್ ಮಾಡಿದವಳು ಆಮೇಲೆ ಪತ್ತೇನೆ ಇಲ್ಲ.
ಸೆಲ್ಫಿ ತೆಗೆಯುವ ಗೀಳು ನಿಮ್ಮಲ್ಲಿದೆ ಎಂದಾದರೆ ನೀವು ಸೆಲ್ಫಿಟಿಸ್ ಗೆ ಒಳಗಾಗಿದ್ದೀರಿ ಎಂದರ್ಥ. ಸೆಲ್ಫಿಟಿಸ್ ಒಂದು ರೀತಿಯ ಮಾನಸಿಕ ಪರಿಸ್ಥಿತಿಯಾಗಿದ್ದು ಒಬ್ಬ ವ್ಯಕ್ತಿ ನಿರಂತರವಾಗಿ ತನ್ನ ಫೋಟೋಗಳನ್ನು ತೆಗೆಯುತ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುವುದು ಎಂದರ್ಥ. ಕೆಲ ವರ್ಷಗಳ ಹಿಂದೆ ಈ ಸೆಲ್ಫಿಟಿಸ್ ನ್ನು ಒಂದು ಮಾನಸಿಕ ಅಸ್ವಸ್ಥತೆ ಎಂದು ಪರಿಗಣಿಸಬೇಕೆಂದು ಅಮೆರಿಕಾದ ಮನೋಶಾಸ್ತ್ರ ಸಂಘಟನೆ ಮನವಿ ಮಾಡಿಕೊಂಡಿತ್ತು ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
ವಯಸ್ಕರು ಮತ್ತು ಯುವಕ-ಯುವತಿಯರು ಇಂದು ಹೆಚ್ಚಾಗಿ ಸೆಲ್ಫಿಟಿಸ್ ಗೆ ಒಳಗಾಗುತ್ತಿದ್ದು ಅದು ಅವರ ವರ್ತನೆ ಮೇಲೆ ಕೂಡ ಪ್ರಭಾವ ಬೀರುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸೆಲ್ಫಿ ಮತ್ತು ಗುಂಪು ಸೆಲ್ಫಿ ತೆಗೆಯುವುದು ಹೆಚ್ಚು. ಇದೊಂದು ತೀವ್ರ ಮಾನಸಿಕ ಖಾಯಿಲೆ ಅಲ್ಲವಾದರೂ ಕೂಡ ನಿರಂತರವಾಗಿ ಸೆಲ್ಫಿಗಳನ್ನು ತೆಗೆಯುತ್ತಾ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿ ತಮ್ಮ ಫೋಟೋಗಳಿಗೆ ಹೆಚ್ಚೆಚ್ಚು ಲೈಕ್ ಸಿಗುತ್ತಿರಬೇಕೆಂದು ಭಾವಿಸುವುದು ಅಪಾಯಕಾರಿ ಗುಣಗಳು. ವ್ಯಕ್ತಿಗತ ಗುಣಲಕ್ಷಣಗಳು ಮತ್ತು ಸಾಮಾಜಿಕ ಪ್ರದರ್ಶನದಂತಹ ಲಕ್ಷಣಗಳು ಸ್ವಯಂ ಸ್ವಾಧೀನತೆಯ ವರ್ತನೆಗಳನ್ನು ಹೆಚ್ಚಿಸುತ್ತವೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ.
ಭಾರತ ದೇಶದಲ್ಲಿ 30 ವರ್ಷಕ್ಕಿಂತ ಕೆಳಗಿನ ಶೇಕಡಾ 30ಕ್ಕೂ ಹೆಚ್ಚಿನ ಜನರು ಯುವಕ-ಯುವತಿಯರು. ಇವರಲ್ಲಿ ಇಂಟರ್ನೆಟ್ ಮತ್ತು ಸ್ಮಾರ್ಟ್ ಫೋನ್ ಬಳಕೆ ಮಾಡುವವರು ಸೋಷಿಯಲ್ ಮೀಡಿಯಾವನ್ನು ಕೂಡ ಅಪಾರವಾಗಿ ಬಳಸುತ್ತಾರೆ. ಹಾಗೆಯೇ ಸೆಲ್ಫಿಯ ಗೀಳಿಗೆ ಪ್ರಾಣವನ್ನು ಕಳೆದುಕೊಂಡವರು ಕೂಡ ಸಾಕಷ್ಟು ಜನರಿದ್ದಾರೆ.
ಸೆಲ್ಫಿ ತೆಗೆದುಕೊಳ್ಳುವುದರಿಂದ ತಕ್ಷಣಕ್ಕೆ ಸಿಗುವ ಖುಷಿ ಮತ್ತು ಸಂಭ್ರಮ ಅವರು ಎದುರಿಸುವ ಅಪಾಯವನ್ನು ಮರೆಸುತ್ತದೆ. ಹೀಗಾಗಿ ಆಪತ್ತು ಎದುರಾಗುತ್ತವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮನುಷ್ಯ ಸುಖ-ಸಂತೋಷವನ್ನು ಬೇರೆ ಮಾರ್ಗಗಳ ಮೂಲಕ ಕಂಡುಕೊಳ್ಳಬಹುದು. ಅದರಲ್ಲೂ ಮುಖ್ಯವಾಗಿ ಮಕ್ಕಳಲ್ಲಿ ಸ್ಮಾರ್ಟ್ ಫೋನ್, ಸೋಷಿಯಲ್ ಮೀಡಿಯಾ ಬಳಕೆಯನ್ನು ಪೋಷಕರು ಗಮನಿಸುತ್ತಿರಬೇಕು. ಮಕ್ಕಳಲ್ಲಿ ಸೆಲ್ಫಿ ಗೀಳು ಬಂದರೆ ಇನ್ನೂ ಅಪಾಯಕಾರಿ. ಬೇರೆ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವಂತೆ ಮಾಡಬೇಕು.
ಬೋಧನೆ ಹೆಚ್ಚಾಯಿತೇನೋ… ಅರೆ, ನನ್ನದೊಂದು ಸೆಲಫೀ ತೋ ಬನತಾ ಹೈ ನಾ ನಂ ಜೊತೆ?