ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಉತ್ತಮ ಅಂಶಗಳು ಏನೇನು ಇವೆಯೋ ಅವೆಲ್ಲವೂ ವಿದ್ವಾನ್ ಆರ್.ಕೆ. ಶ್ರೀಕಂಠನ್ ಅವರ ಸಂಗೀತದಲ್ಲಿ ಇತ್ತು ಎಂಬುದು ಸಂಗೀತ ಪ್ರೇಮಿಗಳೆಲ್ಲರೂ ಒಪ್ಪುವಂತಹ ಮಾತು. ಸಂಗೀತ ಕಛೇರಿಯೇ ಇರಲಿ, ವಿದ್ವತ್ ಗೋಷ್ಠಿಯೇ ಇರಲಿ ಅಥವಾ ಗಾನ ಶಿಬಿರವೇ ಇರಲಿ ಅಲ್ಲೆಲ್ಲಿಯೂ ಸಲ್ಲುತ್ತಿದ್ದುದು ಅದೇ ಸಾಂಪ್ರದಾಯಿಕ, ಶಾಸ್ತ್ರೀಯತೆಯ ಅತ್ಯುತ್ತಮ ವಿಚಾರ ಮತ್ತು ಚಿಂತನ. ಯಾವುದನ್ನೂ ಕಡೆಗಣಿಸದೆ, ಪ್ರತಿಯೊಂದರ ಗುಣವನ್ನೂ ಗ್ರಹಿಸುತ್ತಾ ತಮ್ಮ ಅನುಭವದ -ಸಾಧನೆಯ ಮೂಸೆಯಲ್ಲಿ ಪಕ್ವಗೊಳಿಸುತ್ತಾ ತಮ್ಮ ಬದುಕನ್ನೇ ಸಂಗೀತಕ್ಕಾಗಿ ಮೀಸಲಿಟ್ಟ ಅಪರೂಪದ ಶಿಸ್ತಿನ ಕಲಾವಿದ ಆರ್.ಕೆ. ಶ್ರೀಕಂಠನ್. ನಿರಾಕಾರದಿಂದ ಸಾಕಾರ ಸೌಂದರ್ಯದೆಡೆಗೆ ಸಾಗುವ ಸಂಗೀತದ ಆರಾಧನೆಯೇ ಅವರ ಉಸಿರಾಯಿತು. ಅದರಲ್ಲೇ ಅವರ ಬದುಕು ಸಾರ್ಥಕತೆಯನ್ನು ಪಡೆಯಿತು. ತ್ರಿಸ್ಥಾಯಿಗಳಲ್ಲಿ ಲೀಲಾಜಾಲವಾಗಿ ಸಂಚರಿಸುತ್ತಿದ್ದ ಕಂಠ ಶ್ರೀಕಂಠನ್ ಅವರಿಗೆ ದೈವದತ್ತ ಕೊಡುಗೆಯಾಗಿ ಒಲಿಯಿತು. ಅವರನ್ನು ಸಂಗೀತ ಪ್ರೇಮಿಗಳು ಪ್ರೀತಿಯಿಂದ ‘ಸಿರಿಕಂಠ’ನೆಂದೇ ಕರೆದರು. ಅದು ಅವರ ಅನ್ವರ್ಥನಾಮವೂ ಆಯಿತು. 1920ರ ಜನವರಿ 14ರ ಸಂಕ್ರಾಂತಿಯಂದು ರುದ್ರಪಟ್ಟಣದಲ್ಲಿ ಹುಟ್ಟಿದ ಶ್ರೀಕಂಠನ್ ಅವರ ಪಾಲಿಗೆ ಬದುಕೇ ಗೀತಸಂಕ್ರಾಂತಿಯಾಯಿತು. ತಂದೆ, ತಾಯಿ, ತಾತ, ಅಣ್ಣಂದಿರು ಎಲ್ಲರೂ ಸಂಗೀತ ಬಲ್ಲವರೇ. ಗಾಯನ, ವೀಣಾವಾದನ, ಹರಿಕಥೆ, ಒಟ್ಟು ಸಂಗೀತದಲ್ಲಿ ಪಳಗಿದವರೇ. ಹೀಗಾಗಿ ಬಾಲಕ ಶ್ರೀಕಂಠನಿಗೆ ಸಂಗೀತ ಆಡುಂಬೊಲವಾಯಿತು. ಜೊತೆಗೆ ಸಂಸ್ಕೃತ, ಕನ್ನಡ ಭಾಷೆಗಳ ತಳಪಾಯವೂ ಬಿತ್ತು. ಅಣ್ಣ ಪಿಟೀಲು ವಿದ್ವಾನ್ ಆರ್.ಕೆ. ವೆಂಕಟ ರಾಮಾಶಾಸ್ತ್ರಿಗಳಿಂದ ಮತ್ತು ತಂದೆ ವಿದ್ವಾನ್ ಆರ್.ಕೃಷ್ಣಶಾಸ್ತ್ರಿಗಳಿಂದ ಬಾಲಕನ ಸಂಗೀತ ಪೋಷಣೆ. ಅವರ ಬಾಲ್ಯದಲ್ಲಿಯೇ ಕುಟುಂಬವು ಮೈಸೂರಿಗೆ ಬಂದು ನೆಲಸಿದಾಗ, ಅಲ್ಲಿ ನಡೆಯುತ್ತಿದ್ದ ದಿಗ್ಗಜರ ಸಂಗೀತದ ಕೇಳ್ಮೆಯು ಅಗೋಚರವಾಗಿ ಬಾಲಕ ಶ್ರೀಕಂಠನ ಮೇಲೆ ಪ್ರಭಾವ ಬೀರುತ್ತಿತ್ತು. ಮುಂದೆ ಅಣ್ಣನವರು ಅವರನ್ನು ಮದ್ರಾಸಿಗೆ ಕರೆಸಿಕೊಂಡ ಮೇಲಂತೂ ಅದು ಮತ್ತಷ್ಟು ಹೆಚ್ಚಾಯಿತು. ಹದಿಹರೆಯದಲ್ಲೇ ಕಛೇರಿ ನೀಡುವಷ್ಟು ಪ್ರೌಢತೆ ಸಂಪಾದಿಸಿದ್ದಲ್ಲದೆ ಹಿರಿಯ ಸಂಗೀತಗಾರರ ಒಡನಾಟದಿಂದ ಶಾಸ್ತ್ರ ವಿಷಯಗಳ ಬಗೆಗೂ ಆಳವಾದ ಅರಿವುಂಟಾಯಿತು. ಮದ್ರಾಸ್ ಕಾರ್ಪೊರೇಷನ್ ರೇಡಿಯೊ ಮೂಲಕ ಪ್ರಾರಂಭವಾದ ಅವರ ರೇಡಿಯೊ ಸಾಂಗತ್ಯ ಮುಂದಿನ ಅವರ ಬದುಕಿನಲ್ಲಿ ಮಹತ್ವದ ಪರಿಣಾಮ ಬೀರುವಂತಾಯಿತು. ಮೈಸೂರು ಆಕಾಶವಾಣಿಗೆ ‘ಸಂಗೀತ ಮೇಷ್ಟ್ರು’ ಆಗಿಯೇ ಪ್ರವೇಶಿಸಿದ ಅವರ ಸಂಗೀತ ಪಾಠ ‘ಗಾನ ವಿಹಾರ’ವು ನಾಡಿನ ಉದ್ದಗಲಕ್ಕೂ ಜನಜನಿತವಾಯಿತು. ಅನೇಕ ಸಂಗೀತ ಪ್ರೇಮಿಗಳಿಗೆ ಅವರು ಪರೋಕ್ಷ ಗುರುಗಳಾದರು. ಆಕಾಶವಾಣಿಯಲ್ಲಿದ್ದಾಗ ಅವರು ನಿರ್ದೇಶಿಸಿದ, ರಾಗ ಸಂಯೋಜಿಸಿದ, ಪ್ರಚುರಪಡಿಸಿದ ರೂಪಕಗಳು, ವಚನ -ದೇವರನಾಮಗಳು, ಭಾವಗೀತೆಗಳು, ತರಂಗಗಳು ಅಸಂಖ್ಯಾತ. ಅವರ ವ್ಯಕ್ತಿತ್ವದಲ್ಲೇ ಮನೆ ಮಾಡಿದ್ದ ಶಿಸ್ತು ಇಲ್ಲಿ ಬಹುವಾಗಿ ನೆರವಾಗಿದ್ದಿರಬೇಕು. ಕಛೇರಿಯಿರಲಿ, ಉಪನ್ಯಾಸವಿರಲಿ, ಸಂಗೀತ ಶಿಬಿರವಿರಲಿ ಅವರ ಅಚ್ಚುಕಟ್ಟಾದ ತಯಾರಿಯನ್ನು ಯಾರೇ ಆಗಲಿ ಪ್ರಶಂಸಿಸಲೇಬೇಕು. ಗುರುವಾಗಿಯೂ ಅವರದು ಕಟ್ಟುನಿಟ್ಟಿನ ಶಿಕ್ಷಣ. ಶ್ರುತಿಜ್ಞಾನ, ಉಚ್ಚಾರಣೆ, ಕಾಲ ಪ್ರಮಾಣ, ಗ್ರಹಿಕೆ, ಅಭ್ಯಾಸ, ಸಾಹಿತ್ಯಭಾವ ಯಾವುದನ್ನೂ ಅಲಕ್ಷಿಸುವಂತೆಯೇ ಇಲ್ಲ. ಇಂತಹುದರ ಕಡೆಗೆ ಸದಾ ಗಮನವೀಯುವ ಗುರು ಶಿಷ್ಯನ ಪಾಲಿಗೆ ದಾರಿದೀಪವಾಗುವುದರಲ್ಲಿ ಸಂದೇಹವೇನು? ಅವರ ಮಾರ್ಗದರ್ಶನದಲ್ಲಿ ತಯಾರಾದ ಅನೇಕರು ಇಂದು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಅವರ ಪುತ್ರ ಆರ್.ಎಸ್. ರಮಾಕಾಂತ್, ಎಂ.ಎಸ್.ಶೀಲಾ, ಟಿ.ಎಸ್. ಸತ್ಯವತಿ, ಶಾಂತಾ ನರಸಿಂಹನ್, ವಿದ್ಯಾಭೂಷಣ, ಡಾ.ಸರ್ವಮಂಗಳಾ ಶಂಕರ್, ಎಚ್.ಕೆ. ನಾರಾಯಣ್, ಆರ್.ಎ.ರಮಾಮಣಿ, ಜಿ. ರವಿಕಿರಣ್, ಮಾನಸನಯನ ಹೀಗೆ ಆ ಶಿಷ್ಯರ ಪಟ್ಟಿ ದೊಡ್ಡದಿದೆ. ಅವರ ಎಲ್ಲ ಶಿಷ್ಯರೂ ಆ ಶಿಷ್ಯ ವಾತ್ಸಲ್ಯದಲ್ಲಿ ಮಿಂದೆದ್ದವರೇ. ಅವರ ಅನ್ಯಾದೃಶ ಮಾರ್ಗದರ್ಶನದ ಪ್ರಯೋಜನ ಪಡೆದು ಧನ್ಯರಾದವರೇ. ಆ ಶುದ್ಧ ಸಂಪ್ರದಾಯದ, ಭಾವಯುಕ್ತ ಶಾಸ್ತ್ರೀಯ ಸಂಪದ್ಭರಿತ ಗಾನಸುಧೆಯನ್ನು ಈಂಟಿದವರೇ. ತಮ್ಮ ಹದಿಹರೆಯದಲ್ಲಿ ಕಛೇರಿ ನೀಡಲಾರಂಭಿಸಿದ ಶ್ರೀಕಂಠನ್ ಅವರು ಹಿಂದಿರುಗಿ ನೋಡಿದುದೇ ಇಲ್ಲ. ಅವರ ಕಂಠಸಿರಿಗೆ, ವಿದ್ವತ್ತಿನ ಪ್ರಭೆಗೆ, ಭಾವಪೂರ್ಣ ಪ್ರಸ್ತುತಿಗೆ, ಅತ್ಯಂತ ನಿಖರ ಲಯಜ್ಞಾನಕ್ಕೆ, ಶಾಸ್ತ್ರೋಕ್ತ ಗಾನಸುಧೆಗೆ ಮನಸೋಲದವರೇ ಇಲ್ಲ. ದೇಶ –ವಿದೇಶಗಳಲ್ಲೆಲ್ಲ ಅವರ ಅಭಿಮಾನಿ ಬಳಗವಿದೆ. ಅವರ ಗಾಯನವು ನಾಡಿನ ಉದ್ದಗಲದಲ್ಲಷ್ಟೇ ಅಲ್ಲದೆ ವಿದೇಶದಲ್ಲೂ ನಡೆದಿದೆ. ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಶಿಕ್ಷಕರಾಗಿಯೂ ಅವರು ಸಂಗೀತ ಸೇವೆ ಸಲ್ಲಿಸಿದ್ದಾರೆ. ಅವರಿಗೆ 75 ವರ್ಷಗಳಾದಾಗ ಅವರ ಶಿಷ್ಯರು, ಅಭಿಮಾನಿಗಳು ಮತ್ತು ಬಂಧುಬಳಗದವರೆಲ್ಲ ಸೇರಿ ಪದ್ಮಭೂಷಣ ವಿದ್ವಾನ್ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರ ಅಧ್ಯಕ್ಷತೆಯಲ್ಲಿ ಒಂದು ಅದ್ದೂರಿ ಸಮಾರಂಭ ಏರ್ಪಡಿಸಿ ಶ್ರೀಕಂಠನ್ಗೆ ₹ 1 ಲಕ್ಷ ಹಮ್ಮಿಣಿ ನೀಡಿ ಗೌರವಿಸಿದರು. ಅವರ ಪುತ್ರ ರಮಾಕಾಂತ ಅವರ ಸಲಹೆಯಂತೆ, 1995ರಲ್ಲಿ ‘ವಿದ್ವಾನ್ ಆರ್.ಕೆ. ಶ್ರೀಕಂಠನ್ ಟ್ರಸ್ಟ್’ ಸ್ಥಾಪಿಸಿ, ಈ ದುಡ್ಡನ್ನು ಕರ್ನಾಟಕ ಸಂಗೀತದ ಸರ್ವತೋಮುಖ ಬೆಳವಣಿಗೆಗಾಗಿ ಮುಡಿಪಾಗಿ ಇಡಲಾಯಿತು. ರಮಾಕಾಂತರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಈ ಸಂಸ್ಥೆಗೆ ಈಗ 25ರ ಸಂಭ್ರಮ. ಶತಾಯುಷಿಗಳಾಗಲು ಕೇವಲ ಆರು ವರ್ಷ ಇರುವಾಗಲೇ ಅವರು ತಮ್ಮ ಇಹಲೋಕದ ವ್ಯಾಪಾರವನ್ನು ಮುಗಿಸಿ ನಾದಲೋಕಕ್ಕೆ ತೆರಳಿದರು. ಈಗ, ಅವರ ಜನ್ಮ ಶತಮಾನೋತ್ಸವದ ಪರ್ವ.
courtsey:prajavani.net
https://www.prajavani.net/artculture/music/sweet-memories-of-sweet-voice-697244.html