ಕಾಶ್ಮೀರದ ಹಿಂದುಗಳನ್ನು ಇಸ್ಲಾಮಿಗೆ ಮತಾಂತರ ಮಾಡುವ ಮೊದಲು ತನ್ನನ್ನು ಮತಾಂತರ ಮಾಡು – ಎಂದು ಮೊಘಲ್ ದೊರೆ ಔರಂಗಜೇಬನಿಗೆ ಸವಾಲೆಸೆದವರು ಸಿಖ್ಖರ ಒಂಬತ್ತನೆಯ ಗುರು ತೇಗ್ ಬಹಾದ್ದೂರ್ ಅವರು. ಅವರನ್ನು ಮತಾಂತರಕ್ಕೆ ಒಪ್ಪಿಸಲು ಸಾಧ್ಯವಾಗದಿದ್ದಾಗ ಅವರ ತಲೆಯನ್ನು ಕತ್ತರಿಸಿದ ಔರಂಗಜೇಬ್. ಧರ್ಮರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಅಂತಹ ಗುರು ತೇಗ್ ಬಹಾದ್ದೂರ್ ಅವರ ಮಗನೇ ಗುರು ಗೋವಿಂದ ಸಿಂಹ. 1666ರ ಜನವರಿ 5ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ ಗೋವಿಂದ ರಾಯ್ ಮನಸ್ಸಿನಲ್ಲಿ ತಂದೆಯ ಬಲಿದಾನವನ್ನು ನೆನಪು ಹಚ್ಚಹಸಿರಾಗಿತ್ತು. ಹಿಂದುಗಳು ತಮ್ಮ ಕ್ಷಾತ್ರಬಲ ತೋರಿಸದಿದ್ದರೆ ಔರಂಗಜೇಬನ ಎದುರು ತಮಗೆ ಉಳಿಗಾಲವಿಲ್ಲ ಎಂಬುದು ಬಾಲಕ ಗೋವಿಂದ ರಾಯ್‌ಗೆ ಸ್ಪಷ್ಟವಾಗಿತ್ತು. 1676ರಲ್ಲಿ ಪಟ್ಟ ಏರಿದ ಬಾಲಕ ಗೋವಿಂದ ರಾಯ್ ತನ್ನ ಅಧ್ಯಯನವನ್ನು ಮುಂದುವರಿಸಿ, ಕುದುರೆ ಸವಾರಿ, ಕತ್ತಿವರಸೆ, ಬಿಲ್ಲುಗಾರಿಕೆ, ಮಲ್ಲಯುದ್ಧ ಮೊದಲಾದ ವಿದ್ಯೆಗಳನ್ನು ಕಲಿತ. 1699ರ ಬೈಸಾಖಿ ಹಬ್ಬದ ದಿನ ಗುರು ಗೋವಿಂದ ರಾಯ್ ತನ್ನ ಎಲ್ಲ ಅನುಯಾಯಿಗಳನ್ನು ಪಂಜಾಬಿನ ಆನಂದಪುರದಲ್ಲಿ ಸೇರಲು ಕರೆ ಕೊಟ್ಟರು. ಸಾವಿರಾರು ಸಂಖ್ಯೆಯಲ್ಲಿ ಬಂದ ಅವರನ್ನು ಉದ್ದೇಶಿಸಿ ಗುರು ಗೋವಿಂದರು ಹೇಳಿದರು: ‘ಇಂದು ನಮ್ಮ ಧರ್ಮರಕ್ಷಣೆಗಾಗಿ ಬಲಿ ಕೊಡಬೇಕಾಗಿದೆ. ತನ್ನ ಜೀವವನ್ನು ಕೊಡಲು ಸಿದ್ಧವಿರುವವರು ಮುಂದೆ ಬನ್ನಿ’. ಕೈಯಲ್ಲಿ ಖಡ್ಗ ಹಿಡಿದ ಗುರುವಿನ ಗಂಭೀರವಾಣಿಯನ್ನು ಕೇಳಿದ ಎಲ್ಲರೂ ಮುಖ ಮುಖ ನೋಡಿಕೊಂಡರು. ಮತ್ತೊಮ್ಮೆ ಅದೇ ಪ್ರಶ್ನೆ ಎದುರಾಯಿತು. ಒಬ್ಬ ಬಂದ. ಅವನನ್ನು ಡೇರೆಯೊಳಗೆ ಕರೆದುಕೊಂಡು ಹೋದರು ಗುರು. ‘ಚಕ್’ ಎಂಬ ಕತ್ತಿಯ ಸದ್ದಾಯಿತು. ರಕ್ತ ಸೋರುತ್ತಿದ್ದ ಕತ್ತಿಯನ್ನು ಹಿಡಿದು ಹೊರ ಬಂದು ಮತ್ತೊಂದು ಬಲಿ ಬೇಕೆಂದರು. ಇನ್ನೊಬ್ಬ ಬಂದ. ಹೀಗೆ ಐದು ಜನರನ್ನು ಡೇರೆಯೊಳಗೆ ಕರೆದುಕೊಂಡು ಹೋಗಿ, ಕೊನೆಗೆ ಎಲ್ಲರನ್ನೂ ಜೀವಂತ ಹೊರಗೆ ಕರೆದುಕೊಂಡು ಬಂದರು. ಅವರಿಗೇನೂ ಅಪಾಯವಾಗಿರಲಿಲ್ಲ. ಎಲ್ಲರಿಗೂ ಪ್ರಸಾದ ನೀಡಿ, ಅವರಿಗೆ ಧರ್ಮರಕ್ಷಣೆಗಾಗಿ ಖಾಲ್ಸಾ ದೀಕ್ಷೆ ನೀಡಿದರು. ತಾವೂ ದೀಕ್ಷೆಯನ್ನು ತೆಗೆದುಕೊಂಡು, ಎಲ್ಲರ ಹೆಸರಿನ ಜೊತೆಗೆ ‘ಸಿಂಹ’ ಎಂದು ಸೇರಿಸಿದರು. ಅಂದಿನಿಂದ ಅವರೂ ಗುರು ಗೋವಿಂದ ಸಿಂಹರಾದರು. ಪ್ರಾಣ ನೀಡಲು ಬಂದ ಆ ಐವರು ‘ಪಂಚ್ ಪ್ಯಾರೇ’ ಎಂದು ಹೆಸರಾದರು. ಸಿಖ್ಖರೆಲ್ಲರು ಕೇಶ ಬಿಡಬೇಕು, ಕಂಘ, ಕಡ, ಕಚ್ಛಾ, ಕೃಪಾಣ ಇವುಗಳನ್ನು ಧರಿಸಬೇಕೆಂದು ನಿಯಮ ರೂಪಿಸಿದರು. ಅಷ್ಟೇ ಅಲ್ಲ, ಇನ್ನು ಮುಂದೆ ಎಲ್ಲ ಸಿಖ್ಖರಿಗೆ ಪವಿತ್ರ ಗ್ರಂಥ ಸಾಹಿಬ್ ಗುರುವಾಗಿರುವುದು ಎಂದು ಘೋಷಿಸಿದರು. ಹಾಗಾಗಿ, ಇವರೇ ಸಿಖ್ಖರ ಕೊನೆಯ ಗುರು. ಗುರು ಗ್ರಂಥ ಸಾಹಿಬ್‌ನಂತೆಯೇ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ದಶಮಗ್ರಂಥವನ್ನು ರಚಿಸಿ, ಸಿಖ್ಖರಿಗೆ ಮಾರ್ಗದರ್ಶನ ಮಾಡಿದವರು ಗುರು ಗೋವಿಂದ ಸಿಂಹರು. ಅತಿಥಿಗಳಿಗೆ ಮತ್ತು ಪ್ರವಾಸಿಗರಿಗೆ ಸದಾ ಅನ್ನದಾನ ಮಾಡಬೇಕೆಂದು ಶಿಷ್ಯರಿಗೆ ಬೋಧಿಸಿದ ಅವರು, ಲಂಗರ್ ಪರಂಪರೆಯನ್ನು ಪ್ರಾರಂಭಿಸಿದರು. ಮಾರುವೇಷದಲ್ಲಿ ಪ್ರವಾಸಿಗನಂತೆ ತಮ್ಮ ಶಿಷ್ಯರ ಮನೆಗೆ ಹೋಗಿ ಅನ್ನದಾನ ನಡೆಯುತ್ತಿದೆಯೇ ಇಲ್ಲವೇ ಎಂದೂ ಪರೀಕ್ಷಿಸುತ್ತಿದ್ದರು! ಇಂದಿಗೂ ಸಿಖ್ಖರು ಅನ್ನದಾನದ ಪರಂಪರೆಯನ್ನು ಪಾಲಿಸಿಕೊಂಡು ಬಂದಿದ್ದಾರೆ. ತಮ್ಮ ಕೊನೆಯುಸಿರಿನವರೆಗೂ ಮೊಘಲರ ವಿರುದ್ಧ ಹೋರಾಡುತ್ತಾ, ಸಿಖ್ಖರಲ್ಲಿ ಹೋರಾಟದ ಕೆಚ್ಚನ್ನು ಹೆಚ್ಚಿಸಿದವರು ಗುರು ಗೋವಿಂದ ಸಿಂಹರು. ನಾಂದೇಡ್‌ನಲ್ಲಿ ಶತ್ರು ಸೈನಿಕರ ಧಾಳಿಯಿಂದ ಘಾಸಿಗೊಂಡು 1708ರಲ್ಲಿ ಕೊನೆಯುಸಿರೆಳೆದರು. ಇವರ ಮಕ್ಕಳಾದ ಫತೇಸಿಂಹ ಮತ್ತು ಜೋರಾವರಸಿಂಹ ಎಂಬಿಬ್ಬರನ್ನು ಮೊಘಲರು ಸೆರೆ ಹಿಡಿದು ಮತಾಂತರ ಮಾಡಲು ಯತ್ನಿಸಿದರು. ಏಳು ಮತ್ತು ಐದು ವರ್ಷದ ಆ ಮಕ್ಕಳು ಒಪ್ಪದಿದ್ದಾಗ ಅವರನ್ನು ಜೀವಂತಸಮಾಧಿ ಮಾಡಿದರು ಮೊಘಲರು.
courtsey:prajavani.net
https://www.prajavani.net/artculture/article-features/guru-gobind-singh-jayanti-693747.html