ಶ್ರೀಕೃಷ್ಣನ ಈ ಪರಿಯ ಸೊಬಗಾವ ದೇವರಲು ನಾ ಕಾಣೆ
ಶ್ರೀಕೃಷ್ಣನದು ಸರ್ವತೋಮುಖ ವ್ಯಕ್ತಿತ್ವ. ಅವನು ಪೂಜಿಸುವ ಭಕ್ತರಿಗೆ ದೇವ, ತಂಗಿಯರಿಗೆ ಕಾಪಾಡುವ ಅಣ್ಣ, ಮಾತೆಯರಿಗೆ ಮುದ್ದಿನ ಕಂದ, ಕಾಡುವ ದುಷ್ಟರಿಗೆ ಅಂತಕ. ಸಮಾಜ ಹಾಗೂ ಸಂಬಂಧಗಳನ್ನು ಕಟ್ಟುವ ಶ್ರೀಕೃಷ್ಣ ವಾತ್ಸಲ್ಯದ ಸಂಗಾತಿಯೂ ಅಕ್ಕರೆಯ ಪ್ರೇಮಿಯೂ ಆಗುವನು.
ಸಮಾಜ ಹಾಗೂ ಸಂಬಂಧಗಳನ್ನು ಕಟ್ಟುವ ಶ್ರೀಕೃಷ್ಣ ವಾತ್ಸಲ್ಯದ ಸಂಗಾತಿಯೂ ಅಕ್ಕರೆಯ ಪ್ರೇಮಿಯೂ ಆಗುವನು. ಕೃಷ್ಣನ ಜನ್ಮದಿನವಾದ ಅಷ್ಟಮಿಯನ್ನು ಭಾರತ ಅತ್ಯಂತ ಇಷ್ಟದಿಂದ ಆಚರಿಸುತ್ತದೆ. ನಮ್ಮ ಜೀವನದ ಧರ್ಮ- ಕರ್ಮಗಳ ಪ್ರೇರಣಶಕ್ತಿಯಾದ ಈ ಪಾವನಚರಿತನ ಸ್ಮರಣೆಗೆ ಈ ವಿಶೇಷ ಲೇಖನ ಮೀಸಲು.
ತಿಳಿಬೆಳಕು ಅಂಕಣ: ಡಾ. ಆರತೀ ಬಿ.ವಿ.
ಶ್ರೀಕೃಷ್ಣನ ವ್ಯಕ್ತಿತ್ವದಲ್ಲಿ ಹಲವು ಆಯಾಮಗಳಿವೆ. ಶಿಶುವಾಗಿರುವಾಗಲೇ ತಾಯಿಗೆ ತನ್ನ ಬೊಚ್ಚು ಬಾಯಲ್ಲಿ ಸಮಸ್ತ ಬ್ರಹ್ಮಾಂಡವನ್ನೇ ತೋರಿಸಿ ತನ್ನ ಭಗವತ್ ಸ್ವರೂಪದ ಇಣುಕುನೋಟವನ್ನೂ ಕೊಟ್ಟ ವಿಭೂತಿಪುರುಷ. ಶೈಶವ- ಬಾಲ್ಯಗಳಲ್ಲೇ ಪೂತನಾ- ತೃಣಾವರ್ತಾದಿ ಹತ್ತಾರು ಭಯಂಕರ ರಕ್ಕಸರನ್ನು ಲೀಲೆಯಿಂದ ಹತಗೈದ ಲೋಕೋತ್ತರ ಪರಾಕ್ರಮವನ್ನು ಮೆರೆದ ವೀರ ಅದ್ಭುತ ರಸಗಳ ಸಾಕಾರ ಅವನು! ಗೊಲ್ಲ ನಂದನ ಮನೆಯಲ್ಲಿ ಬೆಳೆಯುತ್ತಿರುವಾಗ, ಕುಲಮುಖ್ಯರಿಗೆ ತನ್ನ ವಯಸ್ಸಿಗೆ ಮೀರಿದ ಪ್ರೌಢಸಲಹೆಗಳನ್ನಿತ್ತು ಗೊಲ್ಲರ ಕುಲಕ್ಕೇ ಮಹದುಪಕಾರವನ್ನಿತ್ತ ಪುರೋಗಾಮಿ ಚಿಂತಕ, ಸತ್ಕ್ರಾಂತಿಕಾರ. ಮಥುರೆಗೆ ತೆರಳಿ ರಾಜಯೋಗ್ಯ ಕರ್ತವ್ಯಗಳನ್ನು ವಹಿಸಿದಾಗ ತನ್ನ ಧರ್ಮಕರ್ಮಗಳನ್ನು ಕ್ರಮವರಿತು ಅಚ್ಚುಕಟ್ಟಾಗಿ ಆಚರಿಸಿ ಪರಿಪೂರ್ಣತೆಯನ್ನು ಮೆರೆದ ಮಾನವೋತ್ತಮ.
ದುಷ್ಟರೂ ಅವರ ವಲಯಗಳೂ ಅದೆಲ್ಲೇ ಇರಲಿ, ಅದೆಷ್ಟೇ ಮೆರೆಯಲಿ, ಅವರನ್ನು ಹುಡುಕಿಕೊಂಡು ಹೋಗಿ ಛಲ- ಬಲ- ಚಾತುರ್ಯಗಳಿಂದ ಸದೆಬಡಿಯುತ್ತಿದ್ದ ವೀರ ಕ್ಷ ತ್ರಿಯ! ಸಜ್ಜನರು, ಮುಗ್ಧರು, ಧರ್ಮಾತ್ಮರು ಅಸಹಾಯಕರು ಯಾರೇ ಆಗಿರಲಿ, ತನ್ನ ಪರಿವಾರದವರೇ ಆಗಲಿ ಬೇರೆಯವರೇ ಆಗಲಿ, ತನ್ನ ರಾಜ್ಯದಲ್ಲೇ ಅಥವಾ ಬೇರೆ ಎಲ್ಲೇ ಇರಲಿ, ಅವರಿಗೆ ಆಪತ್ತು ಒದಗಿದೆಯೆಂದು ತಿಳಿದುಬಂದರೆ ಸಾಕು, ಒಡನೆಯೇ ಅಲ್ಲಿಗೆ ಧಾವಿಸಿ ತನು- ಮನ- ಧನಗಳಿಂದ ರಕ್ಷ ಣೆಯೀಯುವ ಕರುಣಾಪೂರ್ಣ ಆಪದ್ಬಾಂಧವನೂ ಅವನಾಗಿದ್ದ. ವಿದ್ಯಾಗುರು ಸಾಂದೀಪನಿ ಮಹರ್ಷಿಯೇ ಬೆರಗಾಗುವ ರೀತಿಯಲ್ಲಿ ಅನತಿ ಕಾಲದಲ್ಲಿ ಸಕಲ ವಿದ್ಯೆಗಳನ್ನು ಸಿದ್ಧಿಸಿಕೊಂಡ ಅಸಾಧಾರಣ ಮೇಧಾವಿ! ಗುರುದಕ್ಷಿಣೆ ನೀಡಬೇಕಾದಾಗ ಸಮುದ್ರತಳಕ್ಕೂ, ಯಮಲೋಕಕ್ಕೂ ನುಗ್ಗಿ ಗುರುಪುತ್ರನ ಜೀವವನ್ನು ಹಿಂಪಡೆದು ಬಂದ ಛಲಗಾರ! ಕಡುಬಡವನಾದ ಸಹಪಾಠಿ ಸುಧಾಮನನ್ನು ಆಜನ್ಮವೂ ಪರಮ ಆತ್ಮೀಯತೆಯಿಂದ ಆದರಿಸಿದ ಜೀವದ ಗೆಳೆಯ, ನಿಗರ್ವಿ. ರಾಜಗುರು ಗರ್ಗರು, ಹಸ್ತಿನಾವತಿಯ ಪ್ರಧಾನಿ ವಿದುರ, ರಾಜಕುಮಾರ ಉದ್ಧವರಂತಹ ವರಜ್ಞಾನಿಗಳು ಅವನ ಆಪ್ತಮಿತ್ರರು. ತತ್ವದೆತ್ತರದ ಚಿಂತನೆಗಳಲ್ಲಿ ಇವನ ಸಹಭಾಗಿಗಳು. ವಿದ್ಯಾ- ಬುದ್ಧಿ- ರಾಜ್ಯಾಧಿಕಾರಾದಿಗಳಿಂದ ಬಲಿತಿದ್ದ ಯಾದವ- ಕೌರವ- ಪಾಂಡವಾದಿ ರಾಜವಂಶಸ್ಥರ ಸಂಗಡ ಕೃಷ್ಣನು ಬಹುವಿಧ ರಾಜನೈತಿಕ ತಂತ್ರಗಳನ್ನು ನಿರ್ದೇಶಿಸಿದ ದೂರದೃಷ್ಟಿಯ ಪ್ರೌಢಮುತ್ಸದ್ದಿಯೂ ಆಗಿದ್ದ.
ಮೂಲ ಭಾಗವತ ಮಹಾಭಾರತಗಳ ಕೃಷ್ಣನ ಕಥೆಗಳ ಪರಿಚಯವಿರುವವರಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ ಆತ ‘ಸ್ತ್ರೀಲೋಲ’ನಲ್ಲವೇ ಅಲ್ಲ, ಸ್ತ್ರೀಯರನ್ನು ಅತ್ಯಂತ ಘನತೆ ಗೌರವ ಸ್ನೇಹ ಕಾಳಜಿಗಳಿಂದ ಆದರಿಸಿದ ಸಭ್ಯ ಸಜ್ಜನ ಎಂದು. ಕುಂಡಿನ ರಾಜ್ಯದ ರಾಜಕುವರಿ ರುಕ್ಮಿಣಿಯು, ‘ನಿನ್ನನ್ನು ಮನಸಾ ವರಿಸಿದ್ದೇನೆ. ಶಿಶುಪಾಲನನ್ನು ಒಲ್ಲೆ. ಬಂದು ಕರೆದೊಯ್ಯದಿದ್ದರೆ ವಿಷ ನುಂಗಿ ಸಾಯುವೆ!’ ಎಂದು ದುಗುಡದಲ್ಲಿ ಪತ್ರ ಬರೆದು ಕೋರಿದಾಗ, ‘ಯಾರೋ ಅಪರಿಚಿತ ಹೆಣ್ಣಿನ ರಕ್ಷ ಣೆಗಾಗಿ ಅಲ್ಲಿ ಹೋಗಿ ಎಲ್ಲರ ವೈರ ಕಟ್ಟಿಕೊಳ್ಳಬೇಕೇಕೆ? ನನಗೇಕೆ ಉಸಾಬರಿ?’ ಎಂದು ಸುಮ್ಮನೆ ಕೂರಲಿಲ್ಲ. ಮುಗ್ಧ ಹೆಣ್ಣುಮಗಳೊಬ್ಬಳ ಪ್ರಾಣರಕ್ಷ ಣೆಗಾಗಿಯೂ ಅವಳ ಪ್ರೇಮವನ್ನು ಆದರಿಸುವುದಕ್ಕಾಗಿಯೂ, ತಕ್ಷ ಣ ಅಲ್ಲಿಗೆ ನುಗ್ಗಿ, ಅವಳನ್ನು ರಕ್ಷಿಸಿ ತಂದ ಧೀಮಂತ, ಮತಿವಂತ, ಹೃದಯವಂತ ಕೃಷ್ಣ! ತಾನಾಗಿ ಒಂದೇ ಒಂದು ತರುಣಿಯ ಹಿಂದೆಯೂ ಹೋಗಿ ಪ್ರೇಮಭಿಕ್ಷೆಯನ್ನು ಯಾಚಿಸಿದವನಲ್ಲ. ಆದರೂ ತನ್ನನ್ನು ಮನಸಾರೆ ಬಯಸಿ ಬಂದ ಸಾಧ್ವಿಯರಾರನ್ನೂ ಬೇಡವೆಂದು ತಿರಸ್ಕರಿಸಲಿಲ್ಲ. ಅವನ ಅಷ್ಟಮಹಿಷಿಯರಲ್ಲಿ ರಾಜಕುಮಾರಿಯರಾದ ರುಕ್ಮಿಣೀ ಸತ್ಯಭಾಮೆಯರಂತಹ ರಾಜಕುಮಾರಿಯರೂ ಇದ್ದರಲ್ಲದೆ, ಕಾಡುಮೇಡುಗಳ ಕನ್ಯೆಯರಾದ ಜಾಂಬವತೀ- ಕಾಲಿಂದಿಯರೂ ಇದ್ದರು! ನಿರ್ಮಲ ಮನಸ್ಸಿನಿಂದ ತನ್ನನ್ನು ಆತ್ಮಪತಿಯಾಗಿ ಗುರುತಿಸಿ ಶರಣಾದ ಮುಗ್ಧ ಗೋಪಿಯರಿಗೆ ಕಾಮಾತೀತವೂ ಲೋಕೋತ್ತರವೂ ಆದ ಪ್ರೇಮಾನುಭವದ ರಾಸನೃತ್ಯದ ಆನಂದವನ್ನು ಒದಗಿಸಿದ ಉದಾರಿ. ಆದರೆ ಅದನ್ನು ‘ಭೌತಿಕ ಸಾಂಗತ್ಯ’ದ ನೆಲೆಯಲ್ಲಿ ಅರ್ಥೈಸಿಕೊಂಡು ‘ನಮಗೂ ಆ ಕೃಪೆ ಬೇಕು’ ಎಂದು ಯಾಚಿಸಿ ಬಂದ ಋಷಿಪತ್ನಿಯರಿಗೆ ಬುದ್ಧಿ ಹೇಳಿ ಮರಳಿ ಕಳುಹಿಸಿದವನೂ ಅವನೇ!
ಕಾಮುಕನಾದ ನರಕಾಸುರನ ಸೆರೆಯಲ್ಲಿ ಸಿಲುಕಿ ತನು- ಮನ- ಧನಗಳಿಂದ ಶೋಷಿತರಾಗಿದ್ದ ಹದಿನಾರು ಸಾವಿರ ಅಸಹಾಯಕ ಸ್ತ್ರೀಯರ ಆರ್ತನಾದಕ್ಕೆ ಸ್ಪಂದಿಸಿದ ಕರುಣಾಮಯ ಈತ. ನರಕಾಸುರನನ್ನು ಯುದ್ಧದಲ್ಲಿ ಕೊಂದು, ಆ ಸ್ತ್ರೀಯರನ್ನು ಬಿಡುಗಡೆ ಮಾಡಿದ. ಆದರೆ ಇವರನ್ನು ಸ್ವೀಕರಿಸಲು ಆಶ್ರಯವೀಯಲು ಪುರುಷರಾರೂ ಮುಂದಾಗದಿದ್ದಾಗ, ಮರಣವೊಂದೇ ಗತಿಯೆಂದು ಕುಗ್ಗಿ ಹೋದ ಅಷ್ಟೂ ಅಬಲೆಯರನ್ನು, ಅಲ್ಲೇ ಗುರುಹಿರಿಯರ ಸಮ್ಮುಖದಲ್ಲಿ ‘ಪತ್ನೀಸ್ಥಾನ’ವನ್ನಿತ್ತು ಆದರಿಸಿದ! ಅವರ ಮಕ್ಕಳು- ಮೊಮ್ಮಕ್ಕಳನ್ನೂ ತನ್ನ ಮಡಿಲಿಗೇರಿಸಿಕೊಂಡ! ಲೋಕನಿಂದೆಗೆ ಹೆದರದೆ ಆಜೀವನವೂ ಅವರಿಗೆಲ್ಲ ಘನತೆಯ ಬದುಕನ್ನು ಕಟ್ಟಿಕೊಟ್ಟ! ಜಗತ್ತು ಹಿಂದೆಂದೂ ಕಾಣದ, ಮುಂದೆಂದೂ ಕಾಣಲಾಗದ ಔದಾರ್ಯದ ಪಾರಮ್ಯವನ್ನೇ ಮೆರೆದ!
ಕುರುಸಭೆಯಲ್ಲಿ ಕಪಟದ್ಯೂತಕ್ಕೆ ಬಲಿಯಾದ ಪಾಂಡವರು, ದಾಸ್ಯದ ತಾಪದಲ್ಲಿ ಮತಿಗೆಟ್ಟು ರಾಜವಧು ದ್ರೌಪದಿಯನ್ನೇ ಪಣಕ್ಕಿಟ್ಟು ಸೋತಾಗ, ದುರುಳ ಕೌರವನು ಆ ವಿಮಲೆಯನ್ನು ಅವಮಾನಿಸಲು ವಸ್ತ್ರಹರಣದ ಆದೇಶವನ್ನಿತ್ತಾಗ, ಅಸಹಾಯಕ ಪಾಂಡವರೂ, ಕುರುಸಭೆಯ ಹಿರಿಯ ತಲೆಗಳೂ ದಿಙ್ಮೂಢರಾಗಿ ಅಸಹಾಯಕರಾಗಿ ನೋಡುತ್ತ ಕುಳಿತಾಗ, ಮುಗ್ಧ ಮಾನಿನಿಯ ಮನ ಕರಗಿಸುವ ಮನವಿಯನ್ನು ಮನ್ನಿಸಿ ಅವಳ ಮಾನರಕ್ಷ ಣೆಗೆ ಒದಗಿ, ಅಕ್ಷ ಯವಸ್ತ್ರವನ್ನಿತ್ತು ಊಹಾತೀತ ಕೃಪೆಯನ್ನು ಮೆರೆದ ಪವಾಡಪುರುಷ ಕೃಷ್ಣ!
ಅದೆಲ್ಲ ಸರಿ. ಆದರೆ ತುಂಬ ಸ್ವಾರಸ್ಯವೇನೆಂದರೆ ಇಂತಹ ಭವ್ಯ ವ್ಯಕ್ತಿತ್ವದ, ಲೋಕವಿಖ್ಯಾತಿಯ ಜನನಾಯಕನಾದ ಕೃಷ್ಣನಿಗೆ ಗೊಲ್ಲರ ಕೇರಿಯಲ್ಲಿನ ಮುಗ್ಧ ಗೊಲ್ಲಗೊಲ್ಲತಿಯರ ಸಂಗಡ ಬದುಕುವುದೂ ಅಷ್ಟೇ ಸಹಜವೂ ಸುಲಭವೂ ಆಗಿತ್ತು ಎನ್ನುವುದು! ವಿದ್ಯೆ, ಬುದ್ಧಿ, ಅಧಿಕಾರ, ಅಂತಸ್ತು, ಕೀರ್ತಿ, ಜನಪ್ರಿಯತೆಗಳಾವೊಂದು ಇದ್ದರೂ ‘ಸಾಮಾನ್ಯ’ರೊಡನೆ ಬೆರೆಯಲಾಗದೆ ‘I cannot relate to them’ ಎಂದು ಗೆರೆಯೆಳೆದುಕೊಂಡು ಕೂರುವ ಬಿಂಕ ಮನುಷ್ಯರಿಗೆ ಸಹಜ. ಆದರೆ ಕೃಷ್ಣನಿಗೆ ಎಂದೂ ಈ ‘ಕಾಂಪ್ಲೆಕ್ಸ್’ ಇರಲಿಲ್ಲ! ಗೋಕುಲದಲ್ಲಿದ್ದಾಗ ಗೊಲ್ಲರಂತೆ ಬದುಕಿದ. ಅವರಂತೆ ವೇಷ ಧರಿಸಿದ. ದನ ಕಾಯಲು ಕಾಡುಮೇಡುಗಳಲ್ಲಿ ಸಂಚರಿಸಿದ. ಅವರಿತ್ತ ತಂಗಳನ್ನವನ್ನೂ ಹಾಲು ಬೆಣ್ಣೆಗಳನ್ನೂ ಅಮೃತವೆಂದು ಸವಿದ. ಅವರ ಸುಖದುಃಖಗಳಿಗೆ ಸ್ಪಂದಿಸಿದ. ಅವರ ಮುಗ್ಧಸಲ್ಲಾಪವನ್ನು ಕಿವಿಗೊಟ್ಟು ಆಲಿಸಿದ. ಸರಳರಲ್ಲಿ ಸರಳನಾಗಿ ಇದ್ದುಬಿಟ್ಟ! ಇದನ್ನೆಲ್ಲ ಮಾಡಲು ಅವನಿಗೆ ಕಷ್ಟವೇ ಆಗಲಿಲ್ಲ! ಏಕೆಂದರೆ ಅಹಮಿಕೆಯ ಲೇಶವೂ ಇಲ್ಲದ ಶುದ್ಧಾಂತರಂಗ ಅವನದು! ಕೃಷ್ಣನ ಅಸಾಧಾರಣತೆಯು ಸ್ವತಃ ಅವನಿಗೂ ಅರಿವಿತ್ತಲ್ಲದೆ ಮುಗ್ಧ ಗೊಲ್ಲರಿಗೂ ಕಂಸನಿಗೂ ಮುನಿವೃಂದಕ್ಕೂ ಸಾರ್ವಜನಿಕರಿಗೂ ತಿಳಿದೇ ಇತ್ತಾದರೂ, ಕೃಷ್ಣನಲ್ಲಿ ಬಿಂಕದ ಲೇಶವೂ ಹೆಡೆಯಾಡಲಿಲ್ಲ ಎನ್ನುವುದು ಗಮನೀಯ! ಗೋಪವೃಂದವು ಇಂತಹ ಕೃಷ್ಣನನ್ನು ತಮ್ಮ ‘ಪ್ರಾಣವಲ್ಲಭ’ ಎಂದು ಭಾವಿಸಿ, ಹಗಲೂ ರಾತ್ರೀ ಮುದ್ದಿಸಿ ಆರಾಧಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ!
ಕುರುಕ್ಷೇತ್ರ ಯುದ್ಧ ಸಂದರ್ಭದಲ್ಲಂತೂ ರಾತ್ರಿಯಾಗುತ್ತಲೇ ಎಲ್ಲರೂ ತಮ್ಮ ವಿಶ್ರಾಂತಿಯತ್ತ ಹೊರಟರೆ ನಮ್ಮ ಕೃಷ್ಣನು ಮಾತ್ರ ತನ್ನ ಆಯಾಸವನ್ನೂ ಗಣಿಸದೆ, ರಥದ ಕುದುರೆಗಳನ್ನು ಯಮುನಾ ತೀರಕ್ಕೊಯ್ದು, ಅವುಗಳ ಮೈ ತೊಳೆದು, ತನ್ನ ಉಗುರುಗಳಿಂದಲೇ ಕೆರೆದು ಅವುಗಳ ನವೆಯನ್ನು ನಿವಾರಿಸಿ, ಗಾಯವಾದಲ್ಲೆಲ್ಲ ಮುಲಾಮು ಹಚ್ಚಿ, ಹುಲ್ಲು ತಿನ್ನಿಸಿ ವಾತ್ಸಲ್ಯದಿಂದ ನೇವರಿಸುತ್ತಿದ್ದನಂತೆ! ಆ ಮೂಕ ಪ್ರಾಣಿಗಳ ಸುಖದುಃಖಗಳಿಗೂ ಮರುಗಿದ ಆ ಮಹಾಹೃದಯ ಅಷ್ಟು ದಯಾದ್ರ್ರವಾಗಿತ್ತು!
ಪುರಂದರದಾಸರು ಮನದುಂಬಿ ಹಾಡುವಂತೆ ”ಹೂವ ತರುವರ ಮನೆಗೆ ಹುಲ್ಲ ತರುವ ಣ ಅವ್ವ ಲಕುಮೀರಮಣ ಇವಗಿಲ್ಲ ಗರುವ ಣಣ”
ಮತ್ತೊಂದು ಸ್ವಾರಸ್ಯವನ್ನು ನಾವು ಗಮನಿಸುವುದೇ ಇಲ್ಲ! ಅದೇನೆಂದರೆ ಇದೆಲ್ಲದರ ನಡುವೆ ಕೃಷ್ಣನು ತಾಳಿದ ನಿರ್ಲಿಪ್ತಿ! ಪ್ರಾಣಪ್ರಿಯರಾದ ಗೋಕುಲವಾಸಿಗಳನ್ನು ತೊರೆದು ಮಥುರೆಗೆ ಹೊರಡುವಾಗ, ಗೋಳಾಡುತ್ತಿದ್ದ ಗೊಲ್ಲರ ಬಗ್ಗೆ ಸ್ನೇಹ- ಕರುಣೆಗಳು ತುಂಬಿದ್ದರೂ, ಕರ್ತವ್ಯವು ಕೈಬೀಸಿ ಕರೆದಾಗ ನಿರ್ಮಮವಾಗಿ ಹೊರಟೇಬಿಟ್ಟ ನಿರ್ಮೋಹಿ ಕೃಷ್ಣ!
ತನ್ನ ರಾಜಮನೆತನದ ನೆಂಟರಿಷ್ಟರ ವಿಷಯದಲ್ಲೂ ಅಷ್ಟೇ, ಎಷ್ಟೇ ಸ್ನೇಹವಿದ್ದರೂ ಧರ್ಮಾಧರ್ಮಗಳ ಪ್ರಶ್ನೆಯೆದ್ದಾಗ, ಅವನು ಧರ್ಮಪಕ್ಷ ಪಾತಿಯೇ ಆಗುತ್ತಿದ್ದ! ಶಿಶುಪಾಲ, ಪೌಂಡ್ರಕ, ಅಕ್ರೂರಾದಿಗಳು ದಾರಿ ತಪ್ಪಿದಾಗ ತಿದ್ದಿ ನೋಡಿದ, ಹದ್ದು ಮೀರಿದಾಗ ಶಿಕ್ಷೆಯಿತ್ತ! ಪಾಂಡವ- ಕೌರವರಿಬ್ಬರೂ ಆತ್ಮೀಯ ಭಾವಂದಿರೂ ಬೀಗರೂ ಆಗಿದ್ದರೂ, ಸಂದರ್ಭ ಬಂದಾಗ, ಎಲ್ಲವನ್ನೂ ಕಳೆದುಕೊಂಡು ಕಾಡುಪಾಲಾದ ‘ಧರ್ಮಪಕ್ಷಿ’ಗಳಾದ ಪಾಂಡವರ ಕೈ ಹಿಡಿದನೇ ಹೊರತು, ಅಧಿಕಾರದಲ್ಲಿ ಬೀಗುತ್ತಿದ್ದ ದುಷ್ಟ ಕೌರವರನ್ನಲ್ಲ! ಕೊನೆಗೆ ತನ್ನದೇ ಮಕ್ಕಳು ಮೊಮ್ಮಕ್ಕಳು ‘ಕೃಷ್ಣನ ಸಂತತಿ ತಾವು’ ಎನ್ನುವ ಗರ್ವದಲ್ಲಿ ಸಾಧುಗಳಿಗೆ ಅಪಚಾರವಿತ್ತು ಶಾಪಕ್ಕೊಳಗಾದ ಅವರ ಪರ ವಹಿಸಲಿಲ್ಲ! ಶಿಕ್ಷೆ ಅನುಭವಿಸಲು ಬಿಟ್ಟುಬಿಟ್ಟ! ತನ್ನ ತಪ್ಪಿಲ್ಲದಿದ್ದರೂ ಪುತ್ರಶೋಕದ ಭರದಲ್ಲಿ ಗಾಂಧಾರಿಯಿತ್ತ ಶಾಪವನ್ನು ಶಾಂತನಾಗಿ ಅಂಗೀಕರಿಸಿ, ಕೊನೆಯ ತನಕ ವ್ಯಥೆಯನ್ನನುಭವಿಸಿದ! ಅಂತೂ ಕೃಷ್ಣನು ತಾನು ಭಗವದ್ಗೀತೆಯಲ್ಲಿ ಹೇಳಿದ ಜೀವನ ನೀತಿಗಳನ್ನೂ, ತತ್ವಸಿದ್ಧಾಂತಗಳನ್ನೂ, ಸ್ವತಃ ನಿದರ್ಶಿಸಿ ತೋರಿಸಲು ಮರೆಯಲಿಲ್ಲ!
ಕೃಷ್ಣನ ಸರ್ವತೋಮುಖ ವ್ಯಕ್ತಿತ್ವವನ್ನು ಭಾವಿಸುವಾಗ ಪುರಂದರದಾಸರ ಈ ಹಾಡು ತಾನೇ ತಾನಾಗಿ ನೆನಪಾಗುತ್ತದೆ:
ಈ ಪರಿಯ ಸೊಬಗಾವ ದೇವರಲು ನಾ ಕಾಣೆ ಗೋಪೀಜನಪ್ರಿಯ ಗೋಪಾಲಗಲ್ಲದೇ
ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ ಸಿರಿಯತನದಲಿ ನೋಡೆ ಶ್ರೀಕಾಂತನು
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ ಗುರುವುತನದಲಿ ನೋಡೆ ಜಗದಾದಿಗುರುವು
ಪಾವನತ್ವದಿ ನೋಡೆ ಅಮರಗಂಗಾ ಜನಕ ದೇವತ್ವದಲಿ ನೋಡೆ ದಿವಿಜರೊಡೆಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ ಆವ ಪರಿಯಲಿ ನೋಡೆ ಅಸುರಾಂತಕನು
ನಾವೆಲ್ಲರೂ ಕೃಷ್ಣನು ಬೆಣ್ಣೆ ಕದ್ದದ್ದನ್ನೂ, ರಾಸನೃತ್ಯವಾಡಿದ್ದನ್ನೂ ಮನಸಾ ಆಸ್ವಾದಿಸುತ್ತ ಆರಾಧಿಸುವಾಗ, ಜೊತೆಜೊತೆಗೇ ಅವನು ತನ್ನ ನುಡಿಯಿಂದಲೂ ನಡೆಯಿಂದಲೂ ನಮಗಿತ್ತ ಸಾರ್ವಕಾಲಿಕ ಸಂದೇಶವನ್ನು ಗ್ರಹಿಸಲು ಮರೆಯಬಾರದು. ದೇವತೆಗಳ ಹಾಗೂ ಅವತಾರಪುರುಷರ ಹೆಸರಿನಲ್ಲಿ ಉತ್ಸವಗಳನ್ನು ಆಚರಿಸುವುದು ವಾಸ್ತವಿಕವಾಗಿ ತತ್ವಾನುಸಂಧಾನಕ್ಕಾಗಿಯೇ.
ಒಂದೆಡೆ ಮೌನದಲ್ಲಿ ಕುಳಿತು ದೇವತೆಯ ಸ್ವರೂಪವನ್ನೋ ಮಹಾಪುರುಷನ ಗುಣಲೀಲೆಗಳನ್ನೋ ತನ್ಮಯವಾಗಿ ಧ್ಯಾನಿಸುವುದು ನಮ್ಮಿಂದ ಸಾಧ್ಯವಾದರೆ ಅದು ಸರ್ವೋತ್ಕೃಷ್ಟವಾದ ಪೂಜೆ, ಮಹದಾನಂದದ ಉತ್ಸವ. ಆದರೆ ಲೌಕಿಕ ವಸ್ತು- ವ್ಯಕ್ತಿ- ಸಂಬಂಧ- ಸುಖ- ದುಃಖ ವಿವರಗಳಲ್ಲಿ ಹರಿಹಂಚಿ ಹೋದ ನಮ್ಮ ಮನಸ್ಸು ‘ಒಡೆದ ಸಾಸಿವೆ ಪೊಟ್ಟಣದ ಕಾಳುಗಳಂತೆ’ ಚೆಲ್ಲಾಪಿಲ್ಲಿಯಾಗಿರುತ್ತದೆ. ಮನಸ್ಸನ್ನು ಹಿಂದೆಗೆದು ಧ್ಯಾನಸ್ಥವಾಗಿಸುವುದು ಕಷ್ಟಸಾಧ್ಯ. ಹಾಗಾಗಿ ಧ್ಯಾನವೆಂಬ ಪ್ರಕ್ರಿಯೆಯನ್ನು ಉತ್ಸವವೆಂಬ ವರ್ಣಮಯ ಆವರಣದಲ್ಲಿರಿಸಿ ಜನರಿಗೆ ನೀಡಲಾಗಿದೆ. ಮಕ್ಕಳು ಔಷಧಿ ತಿನ್ನಲು ಒಲ್ಲೆನೆನ್ನುತ್ತಾರೆಂದು ಔಷಧವನ್ನು sugar coated pills s ಮಾಡಿ ಚಪ್ಪರಿಸಲು ಕೊಡುವುದಿಲ್ಲವೆ? ಹಾಗೆ!
ಕೃಷ್ಣಸ್ವರೂಪದ ತಾತ್ವಿಕ ಎತ್ತರ ಬಿತ್ತರಗಳನ್ನು ಧ್ಯಾನಿಸಿ ಅರ್ಥ ಮಾಡಿಕೊಳ್ಳುವುದಿರಲಿ, ಊಹಿಸುವುದೂ ಸಾಮಾನ್ಯಮತಿಗಳಿಗೆ ಸುಲಭವಲ್ಲ. ಆದರೂ ಆತನ ಧ್ಯಾನದಿಂದ ಲೋಕೋದ್ಧಾರವಾಗಲಿ ಎಂದು ‘ಕೃಷ್ಣ-ಸಂಸ್ಕೃತಿ’ಯನ್ನೇ ನಿರ್ಮಿಸಿಕೊಟ್ಟಿದೆ ಆರ್ಷ ಪರಂಪರೆ! ಶ್ರಾವಣ ಮಾಸವೇ ಕೃಷ್ಣೋತ್ಸವಕ್ಕೆ ವೇದಿಕೆ. ಕೃಷ್ಣ ಬರುತ್ತಾನೆಂದರೆ ಸಾಕು, ಮನೆಮನೆಯಲ್ಲಿ ತುಪ್ಪದಲ್ಲಿ ಕರೆದ ಚಕ್ಕುಲಿ- ತೇಂಗೋಳು- ಮುಚ್ಚೋರೆಗಳ, ಗೋಡಂಬಿ- ದ್ರಾಕ್ಷಿಗಳಿಂದ ಸಿಂಗರಿಸಲಾದ ಉಂಡೆ-ಬರ್ಫಿಗಳ ಸುವಾಸನೆ ಪಸರಿಸಲಾರಂಭಿಸುತ್ತದೆ! ಅಷ್ಟಮಿಯ ಬೆಳಿಗ್ಗೆಯಿಂದಲೇ ಮನೆಮನೆಯಂಗಳದಲ್ಲೂ ಮುದ್ದು ಕೃಷ್ಣನ ಪುಟ್ಟ ಹೆಜ್ಜೆ ಗುರುತುಗಳ ಸರಣಿ ಕಂಗೊಳಿಸುತ್ತದೆ! ಮನೆಮನೆಯಲ್ಲಿ ಪುಟ್ಟ ತೊಟ್ಟಿಲಲ್ಲಿ ಹಸುಳೆ ಕೃಷ್ಣನು ಕೂತು ನಗುತ್ತಾನೆ. ಅವನ ಪಕ್ಕದಲ್ಲಿ ಪುಟ್ಟ ಭರಣಿಯಲ್ಲಿ ಹೊಸ ಬೆಣ್ಣೆಯ ಮುದ್ದೆ ನಳನಳಿಸುತ್ತದೆ! ಮಠ- ಮಂದಿರ- ಸಭೆಗಳಲ್ಲಿ ಕೃಷ್ಣೋತ್ಸವಗಳು ಮೊದಲಾಗುತ್ತವೆ. ಭಜನೆ- ವಿಷ್ಣು ಸಹಸ್ರನಾಮ- ವೇದಘೋಷಗಳ ಇಂಪು, ಗೀತ- ನೃತ್ಯ- ಕೋಲಾಟಗಳ ಸೊಂಪೂ, ಅವಲಕ್ಕಿ- ಬೆಣ್ಣೆಗುಲ್ಕನ್ ಪ್ರಸಾದಗಳ ಕಂಪೂ, ಪರಿಸರವನ್ನೆಲ್ಲ ತುಂಬಿರುತ್ತವೆ. ಚಿಣ್ಣರ ಕೃಷ್ಣವೇಷದ ಸಂಭ್ರಮಕ್ಕಾಗಿ ಅಮ್ಮಂದಿರು ಬಿಡುವಿಲ್ಲದಂತೆ ಸಜ್ಜಾಗುತ್ತಿರುತ್ತಾರೆ. ಶಾಲೆ ಸಭೆ ಸಮಾರಂಭಗಳಲ್ಲಿ ನೂರಾರು ಪುಟ್ಟ ಪಿಳ್ಳಂಗೋವಿ ಕೃಷ್ಣರು ನವಿಲುಗರಿ ಮುಡಿದು ಬೆಣ್ಣೆಬಟ್ಟಲುಗಳೊಂದಿಗೆ ಪ್ರತ್ಯಕ್ಷ ವಾಗಿ ಕಣ್ಮನಗಳಿಗೆ ಉಲ್ಲಾಸವೀಯುತ್ತಾರೆ. ದೇಗುಲಗಳೆಲ್ಲ ‘ಭೂಮಿಗಿಳಿದ ವೈಕುಂಠದ ತುಣುಕುಗಳಂತೆ’ ಝಳುಪಿಸುತ್ತವೆ! ಹಬ್ಬದ ವ್ಯಾಪಾರದಿಂದ ಗಿಜಿಗುಟ್ಟುವ ಸಂತೆಗಳು, ಬಿಲ್ಲಿನ ಹಬ್ಬದ ಸಂದರ್ಭದಲ್ಲಿ ಕೃಷ್ಣನು ಸಂಚರಿಸಿದ ಮಥುರಾ ನಗರದ ಬೀದಿಗಳ ಪ್ರತಿರೂಪಗಳಾಗುತ್ತವೆ! ಕಲಾವಿದರೆಲ್ಲ ಗೊಲ್ಲರ ಕೃಷ್ಣನ ಬಳಗವಾಗಿ ಹೊಮ್ಮಿ ಕೃಷ್ಣಲೀಲೆಗಳನ್ನು ವೇದಿಕೆಗಳಲ್ಲಿ ಸಾಕಾರಗೊಳಿಸುತ್ತಾರೆ. ಮನೆಮನೆಯ ಮಾನಿನಿಯರು ದೇವಕೀ- ಯಶೋಧೆಯರಾಗಿ ಕೃಷ್ಣ ಪಾಕಸಿದ್ಧತೆಯಲ್ಲೇ ಮೈಮರೆಯುತ್ತಾರೆ. ಮಠಮಂದಿರ- ಉತ್ಸವಗಳಲ್ಲಿ ನೆರೆಯುವ ಭಕ್ತಕೋಟಿಯು ಬಾನಿನಲ್ಲಿ ನೆರೆದು ಕೃಷ್ಣಲೀಲೆಯನ್ನು ವೀಕ್ಷಿಸಿದ ಸುರಬೃಂದವನ್ನೇ ಹೋಲುತ್ತದೆ. ಹೀಗೆ, ಕೃಷ್ಣನ ಮಹಿಮೆಯು ತರ್ಕಕ್ಕೆ ನಿಲುಕದಿದ್ದರೂ, ಕೃಷ್ಣಪ್ರೇಮವು ಹೃದಯವನ್ನು ತುಂಬಿ ಮುದವೀಯುತ್ತದೆ. ಕೃಷ್ಣೋತ್ಸವದಲ್ಲಿ ಪರಿಸರವೆಲ್ಲ ಕೃಷ್ಣಮಯವಾಗುತ್ತದೆ.
ಒಟ್ಟಿನಲ್ಲಿ ನಮ್ಮ ಒಳಗೂ ಹೊರಗೂ ತುಳುಕುವ ಕೃಷ್ಣಭಾವವೇ ನಮ್ಮನ್ನು ಕಾಲಾಂತರದಲ್ಲಿ ಕೃಷ್ಣಧ್ಯಾನಕ್ಕೆ ಏರಿಸುತ್ತದೆ. ಅಂತರ್ಮುಖ ಅನುಸಂಧಾನಕ್ಕೆ ನಮ್ಮನ್ನು ಅಣಿಯಾಗಿಸುವಂತೆ ಬಾಹ್ಯದ ಆಚಾರಗಳನ್ನು ಕಟ್ಟಿಕೊಟ್ಟಿರುವುದೇ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ.
ಕೃಪೆ: ವಿಜಯಕರ್ನಾಟಕ