ಶ್ರದ್ಧಾವಂತನಿಗಷ್ಟೇ ಪವಿತ್ರ ಜ್ಞಾನ ಲಭ್ಯ
‘ಜ್ಞಾನವೆಂಬ ದೋಣಿಯನ್ನೇರಿ ಪಾಪಸಾಗರವನ್ನು ದಾಟಿಹೋಗು’ ಎಂದು ಕೃಷ್ಣನು ಅರ್ಜುನನಿಗೆ ತಿಳಿಹೇಳಿದ್ದನ್ನು ನೋಡಿದ್ದೇವೆ. ಕೃಷ್ಣ ಹೇಳುತ್ತಾನೆ; ‘ಜ್ಞಾನದಂತಹ ಪವಿತ್ರವಾದದ್ದು ಬೇರೊಂದಿಲ್ಲ, ಅದು ಕಾಲಾಂತರದಲ್ಲಿ ಸ್ವಯಂ ಅಂತರಂಗದಲ್ಲಿ ಯೋಗಸಂಸಿದ್ಧಿಯ ಮೂಲಕ ಸಿದ್ಧಿಸುವಂತಹದ್ದು.’ (ಭ.ಗೀ.: 04.38)
ಜ್ಞಾನವು ಪವಿತ್ರ, ಪಾವಕ. ಪವಿತ್ರತೆಯಲ್ಲಿ ಅದಕ್ಕೆ ಸಾಟಿಯಿಲ್ಲ. ಕಾಮ-ಭೋಗಪ್ರವೃತ್ತಿಗಳ ಮಲವು ಅಂತರಂಗದಲ್ಲಿ ಇರುವ ತನಕ, ಮನುಷ್ಯನನ್ನು, ಅವನ ಪಾಪಪ್ರವೃತ್ತಿಯನ್ನೂ ಕೇವಲ ತಿಳಿಹೇಳುವುದರಿಂದಾಗಲಿ, ಬಾಹ್ಯ ನಿಯಮಗಳಿಂದಾಗಲೀ ಶಿಕ್ಷೆಯ ಬೆದರಿಕೆಯಿಂದಾಗಲಿ ಸಂಪೂರ್ಣ ನಿಯಂತ್ರಿಸಲಾಗದು. ಪಾಪದ ಕೊಳೆ ಸಂಪೂರ್ಣ ತೊಲಗಿ ಆತ ಶುದ್ಧನಾಗಬೇಕಾದರೆ, ಅಂತರಂಗದಲ್ಲಿ ‘ಜ್ಞಾನ’ ಮೂಡಬೇಕು. ಆ ಜ್ಞಾನಾಗ್ನಿಯು ಪಾಪವೆಂಬ ಕಲ್ಮಶವನ್ನು ನಿಶ್ಶೇಷವಾಗಿ ಸುಟ್ಟುಹಾಕುತ್ತದೆ. ಆ ಜ್ಞಾನವಾದರೂ ಯೋಗಸಂಸಿದ್ಧವಾದದ್ದು. ಕಾಲಾಂತರದಲ್ಲಿ ಸ್ವಯಂ ಅಂತರಂಗದಲ್ಲಿ ಮೂಡುವಂತಹದ್ದಂತೆ! ಜ್ಞಾನವೆನ್ನುವುದು ಹೊರಗಡೆಯಿಂದ ಪಡೆಯುವಂತಹದ್ದಲ್ಲ. ಅದೊಂದು ಆಂತರಿಕ ವಿಕಾಸ, ಸಾಕ್ಷಾತ್ಕಾರ. ‘‘ಜ್ಞಾನವು ಯೋಗಸಂಸಿದ್ಧ’’ವಾದದ್ದು ಎಂದಿದ್ದಾನೆ ಕೃಷ್ಣ. ಯೋಗವೆಂದರೆ ‘ಕರ್ಮವನ್ನು ನಿರ್ಮಮ ನಿಃಸ್ಪ ೃ ನಿಷ್ಕಾಮ ಭಾವದಿಂದ ಮಾಡಿ ದೇವತಾರ್ಪಣ ಮಾಡಿ ತನ್ನೊಳಗೆ ತಾನು ವಿರಮಿಸುವ ಕರ್ಮಯೋಗ’. ಅರಿತು ಆಚರಿಸಿದ ಕರ್ಮಯೋಗವು ಅಂತರಂಗದಲ್ಲಿ ಜ್ಞಾನವನ್ನು ಮೂಡಿಸಿ ಪಾಪಪ್ರವೃತ್ತಿಯನ್ನು ಕಳೆಯುತ್ತದೆ ಎಂದು ತಾತ್ಪರ್ಯ.
ಜೀವನದ ಎಲ್ಲ ಅನುಭವಗಳೂ, ಸಂಬಂಧಗಳೂ, ಸಂವೇದನೆಗಳೂ, ಆಲೋಚನೆಗಳು, ಬಾಹ್ಯಾಂತರಿಕ ಕರ್ಮಗಳೂ ಮನುಷ್ಯನ ಅಂತರಂಗದಲ್ಲಿ ಕ್ರಮೇಣ ಪಕ್ವತೆಯನ್ನುಂಟುಮಾಡುತ್ತವೆ. ಭೋಗವಾಗಲೀ ತ್ಯಾಗವಾಗಲೀ ಒಳಿತಾಗಲಿ ಕೆಡುಕಾಗಲಿ ಎಲ್ಲವೂ ಜೀವನ ಪಾಠಗಳೇ! ಭೋಗಾಸಕ್ತಿಗೆ ವಶನಾದ ಮನುಷ್ಯನು ಹಲವು ಅನಗತ್ಯ ಗೊಂದಲಗಳಲ್ಲೂ ಬಂಧನಗಳಲ್ಲೂ ಪಾಶಗಳಲ್ಲೂ ಸಿಲುಕಿ ನರಳುತ್ತಾನೆ. ಕಾಲಾಂತರದಲ್ಲಿ ಅವನು ತಾನಾಗಿಯೇ ಆ ಭೋಗಗಳ ನಶ್ವರತೆಯನ್ನೂ ಸಂಬಂಧಗಳ ಅನಿತ್ಯತೆಯನ್ನೂ ಮನಗಾಣುತ್ತ ಹೋಗುತ್ತಾನೆ. ಕ್ರಮೇಣ ಅವನಾಗಿಯೇ ಕಳಚಿಕೊಳ್ಳಲಾರಂಭಿಸುತ್ತಾನೆ! ಕೆಲವರು ಬೇಗನೆ ಕಲಿಯುತ್ತಾರೆ, ಕೆಲವರು ನಿಧಾನವಾಗಿ ಕಲಿಯುತ್ತಾರೆ, ಅಷ್ಟೆ! ಒಟ್ಟಿನಲ್ಲಿ ಎಲ್ಲ ಜೀವನಾನುಭವಗಳು ನಮ್ಮನ್ನು ಜ್ಞಾನದತ್ತಲೇ ಮುನ್ನಡೆಸುತ್ತಿವೆ ಎಂದಾಯಿತು! ಎಂತಹ ಭರವಸೆ! ನಾವು ಯಾರೂ ಪಾಪದತ್ತ ಸಾಗುತ್ತಿಲ್ಲ! ಜ್ಞಾನದತ್ತ ಸಾಗುತ್ತಿದ್ದೇವೆ! ದಾರಿಯಲ್ಲಿ ಅಲ್ಲಿಲ್ಲಿ ಸುತ್ತಿ, ಬಳಸಿ, ಎಡವಿ, ಜಾರಿ, ಬಿದ್ದು, ಎದ್ದು ಮುನ್ನಡೆಯುತ್ತಿದ್ದೇವೆ ಅಷ್ಟೆ!
ವಿಶ್ವವೇ ಒಂದು ವಿದ್ಯಾಲಯ. ಲೋಕದ ವಿದ್ಯಾಲಯಗಳು ನಿರ್ದಿಷ್ಟ ಪಠ್ಯಸಾಮಗ್ರಿಯನ್ನು ಕಲಿಸಿ ಪರೀಕ್ಷೆ ಕೊಡುತ್ತವೆ. ಆದರೆ ವಿಶ್ವವೆಂಬ ಅಸಾಮಾನ್ಯ ವಿದ್ಯಾಲಯದ ಪರಿ ಸ್ವಲ್ಪ ಭಿನ್ನ. ಇಲ್ಲಿ ಪಠ್ಯಸಾಮಗ್ರಿ ಅತ್ಯಂತ ಸರ್ಜನಶೀಲ! ಅದಕ್ಕೆ ಮನುಷ್ಯರಾರೂ ಚೌಕಟ್ಟು ಕೊಟ್ಟು ನಿರ್ವಚಿಸಲಾರರು! ಇಲ್ಲಿ ಬಗೆಬಗೆಯಾಗಿ ಪಾಠಗಳೂ ನಡೆಯುತ್ತವೆ. ಕೆಲವೊಮ್ಮೆ ಪಾಠವಾದ ಮೇಲೆ ಪರೀಕ್ಷೆ, ಕೆಲವೊಮ್ಮೆ ಪರೀಕ್ಷೆಯಾದ ಮೇಲೆ ಪಾಠ! ಮಗದೊಮ್ಮೆ ಪಾಠವನ್ನೂ ಪರೀಕ್ಷೆಯನ್ನೂ ಜೊತೆಜೊತೆಗೇ ಕೊಡಲಾಗುತ್ತದೆ ಕೂಡ! ಒಬ್ಬರು ಮತ್ತೊಬ್ಬರನ್ನು ನೋಡಿ ಕಾಪಿ ಹೊಡೆಯುವಂತೆಯೂ ಇಲ್ಲ! ಏಕೆಂದರೆ ಒಬ್ಬೊಬ್ಬರಿಗೂ ಬೇರೆಬೇರೆ ಪಠ್ಯ, ಬೇರೆ ಬೇರೆ ಪ್ರಶ್ನಪತ್ರಿಕೆ! ನೋಡಿ ಕೇಳಿ ಕಲಿಯುವಂತಹದ್ದು ಒಂದಷ್ಟಿದ್ದರೂ, ನಮ್ಮೊಳಗಡೆಯೇ ವಿವೇಚಿಸಿ ಕಲಿಯಬೇಕಾದದ್ದೇ ಹೆಚ್ಚು!
ಜೀವನವು ಕಾಲಾಂತರದಲ್ಲಿ ಎಲ್ಲರಿಗೂ ಅರಿವನ್ನು ಮೂಡಿಸುತ್ತ ಸಾಗುತ್ತದೆ. ಈ ಜನ್ಮದಲ್ಲಿ ಕಲಿಯದಿದ್ದರೆ ಜನ್ಮಾಂತರದಗಳಲ್ಲೂ ಪಾಠ ಮುಂದುವರಿಯುತ್ತದೆ! ಕರ್ಮಯೋಗವನ್ನು ಆಚರಿಸುವುದರ ಮೂಲಕ, ಮನುಷ್ಯನು ಈ ಅರಿವನ್ನು ಬೇಗ ಬೆಳೆಸಿಕೊಳ್ಳುತ್ತಾನೆ, ಬೇಗನೆ ಪಾಪರಹಿತನಾಗುತ್ತಾನೆ.
‘ಶ್ರದ್ಧಾವಂತನೂ ತತ್ಪರನಾದವನು (ಪರತತ್ವದಲ್ಲಿ ನೆಲೆಗೊಂದವನು) ಇಂದ್ರಿಯಗಳನ್ನು ಜಯಿಸಿದವನು ಈ ಜ್ಞಾನವನ್ನು ಪಡೆಯುತ್ತಾನೆ. ಅಂತಹವನು ಜ್ಞಾನವನ್ನು ಪಡೆದು ತಕ್ಷಣವೇ ಪರಾಶಾಂತಿಯನ್ನು ಹೊಂದುತ್ತಾನೆ.’ (ಭ.ಗೀ.: 04.39)
ಶ್ರದ್ಧೆಯೆನ್ನುವುದು (ಬ್ರಿಟಿಷರ ಕಾಲದಿಂದೀಚೆಗೆ ಶಬ್ದಕೋಶಗಳಲ್ಲಿ ಅನುವಾದವಾಗಿರುವಂತೆ) ಕೇವಲ ‘ನಂಬಿಕೆ’ಯಲ್ಲ. ಇಲ್ಲಿ ಕೃಷ್ಣನಾದರೋ ಯಾವುದೋ ‘ನಂಬಿಕೆ’ಯ ಬಗ್ಗೆ ಮಾತನಾಡುತ್ತಿಲ್ಲ. ‘ಶ್ರದ್ಧೆ’ಯೆಂದರೆ ಆತ್ಮನಿಶ್ಚಯ. ಅಂತರಂಗದಲ್ಲಿ ‘ಋತ’ದ ಅನುಸಂಧಾನವಾಗತೊಡಗಿದಾಗ, ಮನುಷ್ಯನಿಗೆ ಸತ್ಯಾಸತ್ಯಗಳ ಧರ್ವಧರ್ಮಗಳ ಸ್ಪಷ್ಟತೆ ಮೂಡುತ್ತದೆ. ಆತ ಜೀವನದ ಎಲ್ಲ ವಿವರಗಳನ್ನೂ ತನ್ನ ಅಂತರಂಗದ ವಿವೇಚನೆಯ ಮೂಲಕ ಸಮಷ್ಟಿಭಾವದಿಂದ ಅರಿತು ಆಚರಿಸಬಲ್ಲವನಾಗುತ್ತಾನೆ. ‘ಬೇಕು-ಬೇಡ’ಗಳ, ‘ಲಾಭ-ನಷ್ಟ’ಗಳ ಪ್ರಭಾವಗಳು ಅವನ ಮೇಲೆ ಆಗಲಾರವು. ಯಾವ ಬೇರೆ ವ್ಯಕ್ತಿಯೂ ಸಿದ್ಧಾಂತವೂ ಪ್ರಭಾವವೂ ಅವನನ್ನು ಆ ಆತ್ಮನಿಶ್ಚಯದಿಂದ ಸಡಿಲಿಸಲು ಸಾಧ್ಯವಾಗದು. ಜಗತ್ತೇ ಅವನಿಗೆ ಅಡ್ಡಿಬಂದರೂ ಆತನು, ತನ್ನೊಳಗಿನ ಋತದ ಅನುಸಂಧಾನದಿಂದಲೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾನೆಯೇ ಹೊರತು ಸ್ತುತಿನಿಂದೆಗಳಿಗೆ ಅಂಜಲಾರ. ಇದು ‘ಶ್ರದ್ಧಾ’ಗುಣದ ಸ್ಥೂಲಪರಿಚಯವೆನ್ನಬಹುದು. ಅದನ್ನುಳ್ಳವನು ಜ್ಞಾನಿಯಾಗುತ್ತಾನೆ ಎನ್ನುತ್ತಿದ್ದಾನೆ ಕೃಷ್ಣ.
ಶ್ರದ್ಧಾವಂತನು ಜ್ಞಾನವನ್ನು ಪಡೆದ ತಕ್ಷಣವೇ ‘ಪರಾ-ಶಾಂತಿ’ಯನ್ನು ಹೊಂದುತ್ತಾನಂತೆ. ಅರ್ಥಾತ್, ಮತ್ತೆ ಅವನ ಮನೋಬುದ್ಧೀಂದ್ರಿಯಗಳು ಯಾವುದೇ ಭೋಗಚಾಪಲ್ಯಕ್ಕೂ ವಶವಾಗಲಾರವು, ಭೋಗವಿರಲಿ ಇಲ್ಲದಿರಲಿ, ಸರ್ವತ್ರ ಸಮಭಾವ ಮೂಡುತ್ತದೆ ಎಂದರ್ಥ.
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ