ಸತ್ಯಾನ್ವೇಷಣೆ

ಸತ್ಯಾನ್ವೇಷಣೆ
ನಮ್ಮ ಪುರಾಣಗಳಲ್ಲಿಯ ಸಮುದ್ರ ಮಂಥನ ಪ್ರಸಂಗವು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ. ದೇವತೆಗಳು ಮತ್ತು ರಾಕ್ಷಸರು ಮಂದಾರ ಪರ್ವತವನ್ನು ಕಡೆಗೋಲಾಗಿ ಆಮೆಯ ಬೆನ್ನಿನ ಮೇಲೆ ಇಟ್ಟು (ಕೂರ್ಮಾವತಾರ) ವಾಸುಕಿ ಸರ್ಪವನ್ನು ಹಗ್ಗವನ್ನಾಗಿ ಮಾಡಿಕೊಂಡು ಸಮುದ್ರವನ್ನು ಕಡೆದಿದ್ದರು, ಸಮುದ್ರದಲ್ಲಿ ಮಂಥನವು ನಡೆದಿತ್ತು.. ಅದರಲ್ಲಿ ಅನೇಕ ಒಳ್ಳೆಯ ವಸ್ತುಗಳು ದೊರಕಿದ್ದವು.. ಲಕ್ಷ್ಮೀ ದೇವಿ. ಉಚ್ಚೈಶ್ರವ ಇತ್ಯಾದಿ.. ಅದರೊಂದಿಗೆ ಅನೇಕ ಕೆಡುಕನ್ನುಂಟುಮಾಡುವ ವಸ್ತುಗಳೂ ದೊರಕಿದ್ದವು.. ಅವುಗಳನ್ನು ಅರಗಿಸಿಕೊಳ್ಳಬಹುದಾದ ಸಾಮರ್ಥ್ಯವನ್ನು ಹೊಂದಿರುವ ದೇವತೆಗಳು ಅವುಗಳನ್ನು ಸ್ವೀಕರಿಸಿ, ಜಗತ್ತಿನ ನಾಶವನ್ನು ತಪ್ಪಿಸಿದ್ದರು. ಇದನ್ನು ಸಾಂಕೇತಿಕ ಎನ್ನಬಹುದಾದರೆ ನಮ್ಮ ಈ ಜಗದಲ್ಲಿ ನಿತ್ಯವೂ ಮಂಥನವು ನಡೆದೇ ಇರುತ್ತದೆ. ಎಲ್ಲದರಲ್ಲೂ ನಡೆದಿರುತ್ತದೆ.. ಈ ಮಂಥನದಿಂದಾಗಿ ಸೃಷ್ಟಿ ಸ್ಥಿತಿ ಲಯಗಳು ನಡೆದಿರುತ್ತವೆ. ಅದರಂತೆಯೇ ಮನಸ್ಸೂ ಕೂಡ ಮಂಥನದ ನೆಲೆವೀಡು. ಮನಮಂಥನದಿಂದಾಗಿ ಒಳ್ಳೆಯ ಆಲೋಚನೆಗಳು ಹುಟ್ಟುತ್ತವೆ. ಅವುಗಳನ್ನು ಲಿಂಗಿಸಿಕೊಂಡು ಕೆಟ್ಟ ಆಲೋಚನೆಗಳನ್ನು ತೊಡೆದುಹಾಕಲೂ ಸಾಧ್ಯವಾಗುತ್ತದೆ. ಇಂಥ ಮಂಥನವು ಈ ದಿನಗಳಲ್ಲಿ ನಮ್ಮ ಕಥಾಗುಚ್ಛದಲ್ಲಿ ಹೊಸದೊಂದು ಹೊಳಹು ಮೂಡಿದೆ. ಚಿಂತನ ಮಂಥನವೆಂಬ ಹೆಸರಿನಿಂದ ವೈಚಾರಿಕ ಮಂಥನವು ನಡೆದಿದೆ.. ಅದರಲ್ಲಿ ನನ್ನದೂ ಪಾಲು ಇದೆ.. ನಾನು ಮಹಾಲಕ್ಷ್ಮಿಯೂ ಅಲ್ಲ, ಉಚ್ಚೈಶ್ರವವೂ ಅಲ್ಲ.. ಆದರೂ ಹಾಲಾಹಲವೂ ಅಲ್ಲವೆಂದು ಹೇಳಬಲ್ಲೆ.. ಇಂದು ನಾನು ಸತ್ಯದ ಹಲವು ಮುಖಗಳ ಬಗೆಗೆ ಕೆಲವು ವಿಚಾರಗಳನ್ನು ಹೇಳಬಯಸುತ್ತೇನೆ.
ಸತ್ಯ..
ಸತ್ಯವು ಭಾರತೀಯ ಧರ್ಮಗಳಲ್ಲಿ ಒಂದು ಮುಖ್ಯ ಪರಿಕಲ್ಪನೆಯಾಗಿದೆ. ಸತ್ಯದ ಅರ್ಥವೆಂದರೆ, ಸತೆ ಹಿತಂ ಅಂದರೆ ಯಾವುದರಿಂದ ಹಿತ ಅಥವಾ ಕಲ್ಯಾಣವು ನಿಶ್ಚಿತವೋ ಅದೇ ಸತ್ಯ. ಸತ್ಯವು ಭೂತ, ಭವಿಷ್ಯ ಹಾಗೂ ವರ್ತಮಾನ ಮೂರೂ ಕಾಲಗಳಲ್ಲಿ ಒಂದೇ ರೀತಿಯದಾಗಿರುತ್ತದೆ. ಹಾಗೂ ಇದರಿಂದ ಯಥಾರ್ಥ ಜ್ಞಾನವುಂಟಾಗುತ್ತದೆ. ಸಾಧಾರಣವಾದ ಮಾತುಗಳಲ್ಲಿ ಹೇಳಬಹುದಾದರೆ ಯಾವುದು ಸತ್ಯವಾಗಿದೆಯೋ, ಯಥಾರ್ಥವಾಗಿದೆಯೋ ಅದನ್ನು ತಿಳಿದುಕೊಳ್ಳುವುದು, ಅರಿಯುವುದು, ಒಪ್ಪುವುದು, ಹೇಳುವುದು ಹಾಗೂ ಅದಕ್ಕನುಗುಣವಾಗಿಯೇ ವ್ಯವಹಾರವನ್ನು ಮಾಡುವುದು ಸತ್ಯ ಎಂದೆನ್ನಿಸುತ್ತದೆ. ಮನುಷ್ಯನ ಉಪದೇಶಗಳಲ್ಲಿ ಸತ್ಯಕ್ಕೆ ಶೃದ್ಧೆಯೂ, ಅಸತ್ಯಕ್ಕೆ ತಿರಸ್ಕಾರವೂ ಸ್ವಾಭಾವಿಕವೆಂದು ಕಾಣುತ್ತದೆ. ಸತ್ಯದ ಅರಿವು ಉಂಟು ಮಾಡುವ ಮಾತುಗಳು ಮನಸ್ಸಿನ ಪ್ರತಿಬಿಂಬವೇ ಆಗಿರುತ್ತವೆ. ಅಂದರೆ ಮನಸ್ಸಿನಲ್ಲಿ ಇದ್ದುದನ್ನೇ ನಾವು ಮಾತಿನ ಮೂಲಕ ಹೇಳುತ್ತೇವೆ. ಸತ್ಯವು ಸರಳವಾಗಿರುತ್ತದೆ ಮತ್ತು ನೇರವಾದ ಮಾತುಗಳಿಂದ ಕೂಡಿರುತ್ತದೆ. ಆದರೆ ಸುಳ್ಳು ಹೇಳುವವರ ಮನಸ್ಸಿನಲ್ಲಿ ಯಾವಾಗಲೂ ಮೋಸವು ತುಂಬಿರುತ್ತದೆ. ನಮ್ಮ ಪ್ರಾಚೀನ ಧರ್ಮಗ್ರಂಥಗಳಲ್ಲಿ ಕೂಡ ಸತ್ಯದ ಅನೇಕ ವಿಶೇಷತೆಗಳನ್ನು ಹೇಳಿದ್ದಾರೆ. ಮನುವು ಹೇಳಿದ ಧರ್ಮದ ಹತ್ತು ಲಕ್ಷಣಗಳಲ್ಲಿ ಸತ್ಯವು ಒಂದು ಪ್ರಮುಖ ಅಂಶವಾಗಿ ಗುರುತಿಸಲ್ಪಟ್ಟಿದೆ. ಧೃತಿಃ, ಕ್ಷಮಾ, ಸಂಯಮ, ಅಸ್ತೇಯ (ಕಳುವು ಮಾಡದಿರುವುದು), ಶೌಚ ಅಂದರೆ ಅಂತರ್ಮನದಿಂದ ಹಾಗೂ ಶರೀರದಿಂದ ಪವಿತ್ರವಾಗಿರುವುದು, ಇಂದ್ರಿಯ ನಿಗ್ರಹ ಅಂದರೆ ಇಂದ್ರಿಯಗಳಿಂದ ಧರ್ಮಸಮ್ಮತ ಆಚರಣೆ, ಧೀ ಅಂದರೆ ಸದ್ಬುದ್ಧಿ, ವಿದ್ಯೆ, ಸತ್ಯ ಹಾಗೂ ಅಕ್ರೋಧ ಅಂದರೆ ಯಾವಾಗಲೂ ಶಾಂತಮನದಿಂದ ಇರುವುದು. ಸತ್ಯಮೇವ ಜಯತೆ ನಾನೃತಂ ಅರ್ಥಾತ್ ವಿಜಯವು ಯಾವಾಗಲೂ ಸತ್ಯಕ್ಕೇ ಸಿಗುತ್ತದೆ. ಸತ್ಯವೇ ಧರ್ಮ. ಹಾಗೂ ಧರ್ಮವಿರುವಲ್ಲಿ ವಿಜಯವಿದೆ.
ಮಹಾಭಾರತದ ಶಾಂತಿ ಪರ್ವದಲ್ಲಿ ಸತ್ಯಸ್ಯ ವಚನಂ ಅಂದರೆ ಶ್ರೇಯಂ ಎಂದರೆ ಸತ್ಯವಾಣಿಯೇ ಶ್ರೇಷ್ಠವಾದದ್ದು ಹಾಗೂ ಸತ್ಯಾದಪಿ ಹಿತಂ ವದೇತ್ ಅಂದರೆ ಸತ್ಯವಾಣಿಯನ್ನು ಹಿತದ ಕಾರಣದಿಂದಲೇ ಹೇಳಬೇಕು. ಸತ್ಯದ ಸಮನಾದ ತಪವಿಲ್ಲ, ಸುಳ್ಳಿನ ಸಮನಾದ ಪಾಪವಿಲ್ಲ ಎಂದೂ ಹೇಳಿದ್ದಾರಲ್ಲವೇ? ಯಾರ ಹೃದಯವು ಸತ್ಯವಾಗಿದೆಯೋ ಅವರ ಹೃದಯದಲ್ಲಿ ನಿವಿದ್ದೀರಿ ಎಂದು ದಾರ್ಶನಿಕರು ಹೇಳುತ್ತಾರೆ.
ಸಾಂಚ ಬರಾಬರ ತಪ ನಹೀ, ಝೂಟ ಬರಾಬರ ಪಾಪ.
ಜಾಕೆ ಹೃದಯ ಸಾಂಚ ಹೈ ತಾಕೆ ಹೃದಯ ಆಪ
ಸತ್ಯಕ್ಕೆ ಮಹತ್ವವು ಬರುವುದು ಅದನ್ನು ನಾವು ಜೀವನದಲ್ಲಿ ಸ್ವೀಕರಿಸಿದಾಗ ಮಾತ್ರವೇ. ಮನಸ್ಸು, ವಚನ, ಕರ್ಮಗಳಿಂದ ಸ್ವೀಕರಿಸಿ, ಅದನ್ನು ಜೀವನದಲ್ಲಿ ಪ್ರಯೊಗಿಸಿದಾಗಲೇ ಸತ್ಯವು ಮಹತ್ವಪೂರ್ಣವೆಂಬುದರ ಅರಿವುಂಟಾಗುತ್ತದೆ. ಸತ್ಯದ ಮಹಿಮೆಯನ್ನು ನಾವು ವರ್ಣಿಸಬಹುದು, ಸತ್ಯದ ವಿಷಯದಲ್ಲಿ ಇತರರಿಗೆ ಉಪದೇಶ ಮಾಡಬಹುದು. ಆದರೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಕಷ್ಟ. ಸತ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ವ್ಯಕ್ತಿಯೇ ಸಾಮಾಜಿಕ ಜೀವನದಲ್ಲಿ ಪ್ರತಿಷ್ಠೆ ಹಾಗೂ ಸಮ್ಮಾನವನ್ನು ದೊರಕಿಸಿಕೊಳ್ಳುತ್ತಾನೆ. ಸತ್ಯದ ಆಚರಣೆಯಿಂದಲೇ ನಮಗೆ ಒಬ್ಬರಿನ್ನೊಬ್ಬರ ಮೇಲೆ ವಿಶ್ವಾಸವುಂಟಾಗುತ್ತದೆ. ಹೀಗೆ ಪರಸ್ಪರ ವಿಶ್ವಾಸದ ತಳಪಾಯದ ಮೇಲೆಯೇ ಇಡೀ ಸಮಾಜವು ರಚನೆಗೊಂಡಿದೆ.
ಆದರೆ ಸತ್ಯಕ್ಕೆ ಹಲವು ಮುಖಗಳು. ಯಾವುದನ್ನು ನಾವು ‘ಇದೇ ಸತ್ಯ’ ಎಂದು ನಿಖರವಾಗಿ ಹೇಳುತ್ತೇವೆಯೋ, ಆಗಲೇ ಅದು ಮತ್ತೊಂದು ರೂಪವನ್ನು ಧರಿಸಿರುತ್ತದೆ. ಒಬ್ಬೊಬ್ಬರ ಸತ್ಯವು ಒಂದೊಂದು ರೀತಿಯದಾಗಿರುತ್ತದೆ. ಹಾಗಾದರೆ ಸತ್ಯ ಎಂದರೇನು ಎಂಬುದನ್ನು ನಿಖರವಾಗಿ ಹೇಳಬಹುದೇ? ಉತ್ತರ ತುಂಬಾ ಸರಳ. ಯಾವುದನ್ನು ನಾವು ಮೇಲೆ ಮೇಲೆ ಒಪ್ಪದಿದ್ದರೂ ನಮ್ಮ ಅಂತರಾತ್ಮವು ಮಾತ್ರ ಒಪ್ಪುತ್ತದೆಯೋ ಅದೇ ಸತ್ಯ. ಹಾಗಾದರೆ ಸತ್ಯ ಅಂದರೆ ಕಠಿಣ ಎನ್ನೋಣವೇ? ಇಲ್ಲ.. ಯಾವುದನ್ನು ನಾವು ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದೋ ಅದೇ ಸತ್ಯ.
ನೋಡುವುದು ನೇರ, ಮುಟ್ಟುವುದು ನೇರ, ಅನುಭವಿಸುವುದು ನೇರ. ಆದರೆ ಚಿಂತನೆ ಮಾತ್ರ ಪರೋಕ್ಷ. ಆದ್ದರಿಂದಲೇ, ಪ್ರೇಮಿಗೆ, ನೃತ್ಯಪಟುವಿಗೆ, ಸಂಗೀತಗಾರನಿಗೆ, ರೈತನಿಗೆ ಸಾಧ್ಯವಾಗಬಹುದಾದ ದರ್ಶನ ಆಲೋಚಕನಿಗೆ ಸಾಧ್ಯವಾಗುವುದಿಲ್ಲ ಎಂದು ಓಶೋ ರಜನೀಶ್ ಹೇಳುತ್ತಾರೆ.
ಅಹಿಂಸೆಯನ್ನು ಅಪ್ಪಿಕೊಳ್ಳಲು ಗಾಂಧಿಜಿಯವರ ಸತ್ಯಾನ್ವೇಷಣೆಯ ಧ್ಯೇಯವೇ ಕಾರಣ. ತಮ್ಮ ತಪ್ಪುಗಳನ್ನು ಅರಿಯುವುದರಿಂದ ಹಾಗೂ ತಾವಾಗಿ ತಮ್ಮ ಮೇಲೆ ನಡೆಸಿದ ಪ್ರಯೋಗಗಳಿಂದ ಈ ಧ್ಯೇಯವನ್ನು ಸಾಧಿಸಲು ಅವರು ಪ್ರಯತ್ನಿಸಿದೆನೆಂದು ಅವರು ತಮ್ಮ ಆತ್ಮಕಥೇಯಲ್ಲಿ ಹೇಳಿದ್ದಾರೆ. ಅವರು ಕಂಡುಕೊಂಡಂತೆ ಸತ್ಯವನ್ನು ಹೊರತರುವುದು ಕೆಲವೊಮ್ಮೆ ಜನರಿಗೆ ಪ್ರಿಯವಲ್ಲ-ಏಕೆಂದರೆ ಬಹಳಷ್ಟು ಜನರು ಬದಲಾವಣೆಗೆ ವಿರೋಧ ವ್ಯಕ್ತಪಡಿಸುತ್ತಾರೆ. ಇದಕ್ಕೆ ಕಾರಣವೆಂದರೆ ಅವರು ತಮ್ಮಲ್ಲಿರುವ ಹುಸಿನಂಬಿಕೆಗಳಲ್ಲಿ ಮತ್ತು ಸ್ವಾರ್ಥಗಳಲ್ಲಿಯೇ ಜೀವಿಸುವುದಕ್ಕೆ ಇಷ್ಟಪಡುತ್ತಾರೆ. ಹಾಗಿದ್ದರೂ ಕೂಡ ಒಮ್ಮೆ ಸತ್ಯದ ಪ್ರಭಾವ ಹೆಚ್ಚಾದಲ್ಲಿ, ಇದನ್ನು ತಡೆಯಲು ಯಾವುದರಿಂದಲೂ ಸಾಧ್ಯವಿಲ್ಲವೆಂದೂ ಅವರು ಕಂಡುಕೊಂಡರು. ಈ ಸ್ಥಿತಿಯು ಹೊರಬರಲು ಸಮಯ ಬೇಕಷ್ಟೆ. ಸತ್ಯವು ಯಾವುದೇ ಸಾಮೂಹಿಕ ನಿರ್ನಾಮದ ಅಸ್ತ್ರಕ್ಕಿಂತ ಶಕ್ತಿಶಾಲಿಯಾಗಿದೆ ಎಂದು ಅವರು ಹೇಳಿದ್ದಾರೆ. ಬದುಕಿನಲ್ಲಿ ಅತಿ ಮುಖ್ಯ ಯುದ್ಧವೆಂದರೆ ತನ್ನೊಳಗಿನ ಭಯ ಮತ್ತು ಅಭದ್ರತೆಗಳನ್ನು ಓಡಿಸುವುದಾಗಿದೆ. ಪರರನ್ನು, ವಿರೋಧಿಗಳನ್ನು ದೋಷಿಗಳನ್ನಾಗಿ ಮಾಡುವುದು ಬಹಳ ಸುಲಭ. ಬಹಳಷ್ಟು ಸಮಸ್ಯೆಗಳಿಗಿರುವ ಮದ್ದೆಂದರೆ ಕನ್ನಡಿಯಲ್ಲಿ ತನ್ನನ್ನೇ ನೋಡಿಕೊಳ್ಳುವುದು. ತನ್ನದೇ ಪ್ರತಿಬಿಂಬಕ್ಕೆ ತಾನು ಬರೆಯುವ ಶರಾ! ನಾವೂ ಒಮ್ಮೊಮ್ಮೆ ಕನ್ನಡಿಯಲ್ಲಿ ನಮ್ಮನ್ನು ನಾವೇ ನೋಡಿಕೊಂಡು ಮಾತನಾಡುತ್ತೇವೆಯಲ್ಲವೇ.. ‘ನೀನು ಮಾಡಿದ್ದು ತಪ್ಪು.. ಹೀಗೆ ಮಾಡಬಾರದಿತ್ತು.. ಕೇಳು ಹೋಗು ಅವರ ಕ್ಷಮೆಯನ್ನು’ ಎಂದು? ಇದು ಆತ್ಮವಿಶ್ಲೇಷಣೆಯ ಹಂತ.. ಈ ಹಂತವನ್ನು ತಲುಪಿದವರು ನಿಜಕ್ಕೂ ಇಂದಿಲ್ಲ ನಾಳೆ ದಾರ್ಶನಿಕರಾಗುತ್ತಾರೆ.. ಜೀವನದಲ್ಲಿ ಹಣ, ಪ್ರಸಿದ್ಧಿ ಗಳಿಸದೆಹೋದರೂ ಶಾಂತಿಯನ್ನು, ಸಂಯಮವನ್ನೂ ಪಡೆದೇ ಪಡೆಯುತ್ತಾರೆ. ಇದೇ ಬಿಂಬ ಪ್ರತಿಬಿಂಬಗಳ ನಡುವಿನ ಸಂಬಂಧ!

Leave a Reply