ರಾಜಧಾನಿಯ ಕಲಾಪ್ರೇಮಿಗಳಿಗೂ ಕರಾವಳಿಯ ಯಕ್ಷಗಾನ, ತಾಳಮದ್ದಲೆಯ ಸವಿ ಉಣಸುತ್ತಿರುವ ಮಲ್ಲೇಶ್ವರದ ‘ಸಪ್ತಕ’ 15 ವಸಂತಕ್ಕೆ ಕಾಲಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಜಿ.ಎಸ್. ಹೆಗಡೆ ಮತ್ತು ಗೀತಾ ಹೆಗಡೆ 2005ರಲ್ಲಿ ‘ಸಪ್ತಕ’ ಸಂಸ್ಥೆಯನ್ನು ಹುಟ್ಟು ಹಾಕಿದರು. ಅಲ್ಲಿಂದ ಇಲ್ಲಿಯವರೆಗೆ ಒಂದೂವರೆ ದಶಕ ನಿರಂತರವಾಗಿ 400ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮ, ಚಟುವಟಿಕೆಗಳ ಮೂಲಕ ಕಲೆ, ಸಂಸ್ಕೃತಿ, ಪರಂಪರೆ ಪಸರಿಸುವ ಕೆಲಸ ಮಾಡುತ್ತಿದೆ. ಯಕ್ಷಗಾನ ಕುಟುಂಬದಿಂದ ಬಂದ ದಂಪತಿಗಳಿಬ್ಬರೂ ಹಲವಾರು ವರ್ಷಗಳಿಂದ ತಪ್ಪದೆ ತಾಳಮದ್ದಳೆ, ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದಾರೆ.ನೂರಾರು ಯಕ್ಷಗಾನ ಮತ್ತು ತಾಳಮದ್ದಳೆಯ ಹಲವು ಪ್ರಸಂಗಗಳನ್ನು ಉಚಿತವಾಗಿ ಬೆಂಗಳೂರಿನ ಕಲಾಪ್ರಿಯರಿಗೆ ಪರಿಚಯಿಸಿದ್ದಾರೆ. ವೈವಿಧ್ಯಮಯ ಯಕ್ಷಗಾನ ಪ್ರಸಂಗಗಳೊಂದಿಗೆ ಈ ವರ್ಷದ ಯಕ್ಷಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಹೊಸ್ತೋಟ ಮಂಜುನಾಥ ಭಾಗವತರ ಸ್ಮರಣಾರ್ಥ ಮಾರ್ಚ್ 1ರಿಂದ ‘ಯಕ್ಷೋತ್ಸವ’ ಆಯೋಜಿಸಿದೆ. ನಾಲ್ಕು ದಿನ ಯಕ್ಷಗಾನ ಮತ್ತು ತಾಳಮದ್ದಲೆ ಪ್ರಿಯರಿಗೆ ರಸದೌತಣ ಉಣಬಡಿಸಲಿದೆ. ಮಾರ್ಚ್ 1ರಂದು ಸಂಜೆ4.30ಕ್ಕೆ ಮಲ್ಲೇಶ್ವರದ ಮಿಲ್ಕ್ ಕಾಲೊನಿಯಲ್ಲಿರುವ ಸಪ್ತಕ ಸಭಾಂಗಣದಲ್ಲಿ ‘ಯಕ್ಷೋತ್ಸವ’ಕ್ಕೆ ಚಾಲನೆ ದೊರೆಯಲಿದೆ. ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಅವರು ಹೊಸ್ತೋಟ ಮಂಜುನಾಥ ಭಾಗವತರಿಗೆ ನುಡಿ ನಮನ ಸಲ್ಲಿಸಲಿದ್ದಾರೆ. ನಂತರ ‘ರುಕ್ಮಾಂಗದ ಚರಿತ್ರೆ’ ತಾಳ ಮದ್ದಳೆ ನಡೆಯಲಿದೆ. ಮಾರ್ಚ್ 6ರಿಂದ ಮೂರು ದಿನ ಪ್ರತಿನಿತ್ಯ ಸಂಜೆ 6ಗಂಟೆಗೆ ಬೆಂಗಳೂರಿನ ಮೂರು ಕಡೆ ಕೆರೆಮನೆಯ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾವಿದರು ಮೂರು ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ. ಮೂರು ಪ್ರದರ್ಶನ ಸಪ್ತಕದ ಸಹಯೋಗದಲ್ಲಿಯೇ ನಡೆಯಲಿವೆ. ಮಾರ್ಚ್ 6ರಂದು ಸಂಜೆ 6ಕ್ಕೆ ಯಲಹಂಕ ನ್ಯೂಟೌನ್‌ನ ವಿವೇಕ ಬಾಲಮಂದಿರದಲ್ಲಿ ‘ಪಂಚವಟಿ’ ಯಕ್ಷಗಾನ ಪ್ರಸಂಗ ನಡೆಯಲಿದೆ. ಮಾರ್ಚ್ 7ರಂದು ಸಂಜೆ 6ಕ್ಕೆ ಹೆಸರಘಟ್ಟ ಮುಖ್ಯರಸ್ತೆಯ ಹಾವನೂರು ಬಡಾವಣೆಯ ವಿವೇಕಾನಂದ ಆದರ್ಶ ಸಾಧನಾ ಕೇಂದ್ರದಲ್ಲಿ ‘ದಕ್ಷಯಜ್ಞ’ ನಡೆಯಲಿದೆ. 8ರಂದು ಸಂಜೆ 6ಕ್ಕೆ ಬಿಟಿಎಂ 2ನೇ ಹಂತದಲ್ಲಿರುವ ಮೈಕೊ ಲೇಔಟ್‌ನ ಕುವೆಂಪು ಕಲಾಮಂಟಪದಲ್ಲಿ ‘ಸುಭದ್ರಾ ಕಲ್ಯಾಣ’ ಪ್ರದರ್ಶನ ನಡೆಯಲಿದೆ. ಈ ಎಲ್ಲ ಪ್ರದರ್ಶನಗಳು ಉಚಿತವಾಗಿರುತ್ತವೆ ಎಂದು ಸಪ್ತಕ ಸಂಚಾಲಕ ಜಿ.ಎಸ್. ಹೆಗಡೆ ತಿಳಿಸಿದ್ದಾರೆ.
courtsey:prajavani.net
https://www.prajavani.net/artculture/art/yakshagana-708267.html