ಸಂಯಮಿಯು ತನಗೆ ತಾನೇ ಬಂಧು
ಆರತೀ ವಿ.ಬಿ.
‘ಯಾವನು ತನ್ನನ್ನು ತಾನೇ ಗೆದ್ದಿದ್ದಾನೋ ಅವನು ತನಗೆ ತಾನೆ ಬಂಧುವು. ಯಾವನು ತನ್ನನ್ನು ತಾನು ಗೆದ್ದಿಲ್ಲವೋ ಅಂತಹವನು ತನಗೆ ತಾನೇ ಶತ್ರುವು.’ (ಭ.ಗೀ.: 6.5) ‘ತನ್ನನ್ನು ತಾನು ಗೆಲ್ಲುವುದು’ ಎಂದರೆ, ‘ನಮ್ಮ ದೇಹ, ಮನಸ್ಸು, ಬುದ್ಧೀಂದ್ರಿಯಗಳನ್ನು ನಮ್ಮ ವಶದಲ್ಲಿಟ್ಟುಕೊಂಡಿರುವುದು’ ಎಂದರ್ಥ. ಆಗ ನಮ್ಮ ಮನದಲ್ಲಿ ಮೂಡುವ ಕಾಮ, ಕ್ರೋಧ, ಮದ, ಮಾತ್ಸರ್ಯಾದಿಗಳ ಮೇಲೆ ನಮಗೆ ನಿಯಂತ್ರಣವಿರುತ್ತದೆ. ನಮ್ಮ ಆಲೋಚನೆ, ಭಾವನೆ, ವರ್ತನೆ ಎಲ್ಲವೂ ನಿಯಮಿತವಾಗುತ್ತವೆ. ಏನನ್ನೋ ಮಾಡಿ ಏನನ್ನೋ ಮಾತನಾಡಿ ನಮ್ಮ ನೆಮ್ಮದಿಯನ್ನೂ ಇತರರ ನೆಮ್ಮದಿಯನ್ನೂ ಸಂಬಂಧಗಳನ್ನೂ ನಾವು ಹಾಳುಮಾಡಿಕೊಳ್ಳುವುದಿಲ್ಲ. ಹೊರಜಗತ್ತು ನಮಗೊಡ್ಡುವ ಸಮಸ್ಯೆಗಳನ್ನು ನಿಭಾಯಿಸುವ ಚಾತುರ್ಯ, ತಾಳ್ಮೆ, ಚಾಕಚಕ್ಯತೆಗಳೂ ಮೂಡಲು ಸಾಧ್ಯ. ಪರಿಸ್ಥಿತಿಯು ನಮ್ಮ ಕೈತಪ್ಪಿದರೂ, ಅಳಲದೆ, ಕ್ಷಮಿಸಿ ಬಾಳನ್ನು ಪ್ರಸನ್ನವಾಗಿಯೇ ಮುಂದುವರಿಸುವ ಸಾಮರ್ಥ್ಯವನ್ನು ಪಡೆದಿರುತ್ತೇವೆ. ಇಂತಹ ಮನಃಸ್ಥಿತಿಯು ನಮಗೆ ‘ಬಂಧುವು’ ಎಂದರ್ಥ.
ನಮಗೆ ನಾವೇ ‘ಶತ್ರು’ವಾಗುವುದು ಯಾವಾಗ? ‘ನಮ್ಮ ವಶದಲ್ಲಿ ನಾವಿಲ್ಲದಾಗ’ ಎನ್ನುತ್ತಾನೆ ಕೃಷ್ಣ. ‘ನಮ್ಮ ವಶದಲ್ಲಿ ನಾವಿಲ್ಲದಿರುವುದು’ ಎಂದರೆ, ‘ನಮ್ಮದೇ ಮನ-ಇಂದ್ರಿಯ-ಬುದ್ಧಿಗಳು ನಮ್ಮ ನಿಯಂತ್ರಣ ತಪ್ಪುವುದು’ ಎಂದರ್ಥ. ಜೀವನದಲ್ಲಿ ಹಿಗ್ಗುತ್ತಲೋ ಕುಗ್ಗುತ್ತಲೋ, ಯಾರನ್ನೋ ಅತಿಯಾಗಿ ಮೋಹಿಸುತ್ತಲೋ, ನೆಚ್ಚುತ್ತಲೋ, ಮತ್ತಾರನ್ನೋ ಅತಿಯಾಗಿ ದ್ವೇಷಿಸುತ್ತಲೋ, ಸಂಶಯಿಸುತ್ತಲೋ, ಅನುಕೂಲಿಸಿದವರನ್ನು ಮುಖಸ್ತುತಿ ಮಾಡುತ್ತಲೋ, ಸರಿಬಾರದ್ದರ ಬಗ್ಗೆ ಗೊಣಗುತ್ತಲೋ, ಪ್ರತಿಯೊಂದಕ್ಕೂ ಯಾರನ್ನೋ ದೂಷಿಸುತ್ತಲೋ, ಸಹಾನುಭೂತಿಗಾಗಿ ಎದುರು ನೋಡುತ್ತಲೋ, ಮತ್ತೊಬ್ಬರನ್ನು ತುಳಿಯುವ ಪ್ರಯತ್ನಕ್ಕೂ ಇಳಿಯುತ್ತಲೋ ಬಾಳನ್ನು ತಳ್ಳುತ್ತೇವೆ. ಇಂಥ
ಮನಃಸ್ಥಿತಿಯಲ್ಲಿರುವ ಮನುಷ್ಯನ ಆಲೋಚನೆ, ವರ್ತನೆ, ನಿರ್ಣಯಗಳೆಲ್ಲ ತನ್ನ ಆ ಕ್ಷಣದ ಭಾವುಕ ಮನಃಸ್ಥಿತಿಯನ್ನು ಆಧರಿಸಿರುತ್ತವೆಯೇ ಹೊರತು, ಸತ್ಯಧರ್ಮಗಳ ವಿವೇಚನೆ ಅಲ್ಲಿ ಇರದು. ದೂರಾಲೋಚನೆಯೂ ಬರದು.
ತನ್ನ ಭಾವನೆಗಳ ಹೊಯ್ದಾಟದಲ್ಲಿ ಸಾಮಾಜಿಕನ್ಯಾಯವನ್ನಂತೂ ಮನುಷ್ಯನು ಮರೆತೇಬಿಡುತ್ತಾನೆ! ನಾವು ಸಮಾಜದಲ್ಲಿ ನೋಡುವುದಿಲ್ಲವೆ? ತುಂಬ ಪ್ರಕ್ಷುಬ್ಧಮಾನಸರಾಗಿದ್ದು ಮತ್ತೊಬ್ಬರನ್ನೂ ಪ್ರಕ್ಷುಬ್ಧಗೊಳಿಸುವವರು ಯಾರು ಹೇಳಿ? ಅತಿಯಾಗಿ ಆಸ್ತಿ-ಹಣ ಮಾಡಬೇಕೆಂಬ ಆತುರದವರು! ಅಧಿಕಾರಕ್ಕೇರಿ ತಾನೂ ತನ್ನ ಮಕ್ಕಳು ಮೊಮ್ಮಕ್ಕಳೂ ಮರಿಮಕ್ಕಳೂ ಆಳುತ್ತಲೇ ಇರಬೇಕೆಂಬ ಲೋಭದವರು! ಕಪಟ-ಸುಳ್ಳು-ಕ್ರೌರ್ಯಗಳಿಂದಾದರೂ ಸರಿ; ತನ್ನ ಮತವನ್ನೇ ಶ್ರೇಷ್ಠವೆಂದೂ, ಏಕೈಕಮಾರ್ಗವೆಂದೂ ಜಗತ್ತೆಲ್ಲ ಒಪ್ಪಬೇಕು, ಮತಾಂತರವಾಗಬೇಕು, ಎಂಬ ಹುಚ್ಚುಹಠದವರು! ತನ್ನ ಮಾರ್ಗದಲ್ಲಿ ಯಾರು ಅಡ್ಡ ಬಂದರೂ ಕೊಚ್ಚಿಹಾಕುವ ನಿರ್ದಯರು. ರಾಜಕೀಯವಾಗಿಯೋ ಆರ್ಥಿಕವಾಗಿಯೋ ಮತೀಯವಾಗಿಯೋ ತನಗೆ ಪೈಪೋಟಿ ಎನಿಸಿದವರನ್ನು ‘ನಿರ್ನಾಮ’ ಮಾಡಿಬಿಡಬೇಕೆಂದೇ ಹಗಲು ರಾತ್ರಿ ಯೋಜನೆ ಹೂಡುವವರು¬! ಇವರ ಮನಃಸ್ಥಿತಿ ಎಷ್ಟು ಚಿಂತಾಕ್ರಾಂತವಾಗಿರುತ್ತದೆ ಎನ್ನುವುದನ್ನು ಕಗ್ಗದ ಪದ್ಯವೊಂದು ಹೀಗೆ ಸೂಚಿಸುತ್ತದೆ;
ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳು |
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು ||
ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು |
ನೆಲೆಯೆಲ್ಲಿ ನಿದ್ದೆಗೆಲೊ? – ಮಂಕುತಿಮ್ಮ || 203 ||
ಜೀವನದಲ್ಲಿ ಎಲ್ಲರಿಗೂ ಸುಖದುಃಖಾನುಭವಗಳು ಒಂದಲ್ಲ ಒಂದು ರೀತಿಯಲ್ಲಿ ಆಗುತ್ತವೆ. ಮನಃಸಂಯಮವಿದ್ದವನು ಅದೆಲ್ಲವನ್ನು ಸಮ ಭಾವದಿಂದ ನಿಭಾಯಿಸುತ್ತಾನೆ, ಎಲ್ಲದರಿಂದ ಕಲಿಯುತ್ತಾನೆ, ಪಕ್ವನಾಗುತ್ತಾನೆ. ಮನಃಸಂಯಮವಿಲ್ಲದವನು ಅದೇ ಸುಖದುಃಖಾನುಭವಗಳಲ್ಲಿ ಎದ್ದೆದ್ದು ಬೀಳುತ್ತಾನೆ, ದುರಾಸೆಗಿಳಿಯುತ್ತಾನೆ, ಭಾವುಕನಾಗಿ, ಸ್ವಾರ್ಥಿಯಾಗಿ ತಪ್ಪುನಿರ್ಣಯಗಳನ್ನು ತೆಗೆದುಕೊಳ್ಳುತ್ತಾನೆ. ತಪ್ಪುಗಳ ಫಲಗಳನ್ನುಣ್ಣಬೇಕಾದಾಗ ಅವರಿವರನ್ನೂ, ವ್ಯವಸ್ಥೆಯನ್ನೂ, ದೇವರನ್ನೂ ದೂಷಿಸುತ್ತಾನೆ. ಇದೆಲ್ಲವನ್ನೂ ಗಮನಿಸಿದಾಗ, ನಿಜವಾದ ಬಂಧುವೂ ಶತ್ರುವೂ ನಮಗೆ ನಾವೇ ಎನ್ನುವುದು ನಮಗೇ ಅರ್ಥವಾಗುತ್ತದೆ!
ಈ ತಥ್ಯವನ್ನು ಅರಿತಂತಹ ನಮ್ಮ ಋಷಿಗಳು ಶಿಕ್ಷಣದ ಮೊದಲ ಮೆಟ್ಟಿಲಲ್ಲೇ ಆತ್ಮಸಂಯಮದ ಪಾಠವನ್ನಿಟ್ಟರು. ಸರಳತೆ, ತ್ಯಾಗ ಸಂಯಮಗಳನ್ನೇ ಮಕ್ಕಳಿಗೆ ವಿಧಿಯುಕ್ತವಾಗಿ ಕಲಿಸಿ, ದೃಢಮನಸ್ಕರನ್ನು ತಯಾರಿಸಿದರು. ವೈದಿಕ, ಬೌದ್ಧ, ಜೈನ, ಸಿಕ್ಖ, ಆಗಮ, ಜಾನಪದಾದಿ ಎಲ್ಲ ಭಾರತಜನ್ಯ ಶಿಕ್ಷಣಪದ್ಧತಿಗಳಲ್ಲೂ ಆತ್ಮಸಂಯಮವನ್ನು ಪ್ರಾರಂಭದಲ್ಲೇ ಪಾಠ ಮಾಡಲಾಗುತ್ತದೆ. ‘ಜೀವನವನ್ನು ಪ್ರಾರಂಭಿಸುವ ಮುನ್ನವೇ ಆಗಲಿ, ದೇವರನ್ನು ಪೂಜಿಸುವ ಮುನ್ನವೇ ಆಗಲಿ, ದೇಹವನ್ನೂ ಮನಸ್ಸನ್ನೂ ಮಾತನ್ನೂ ಶುದ್ಧಗೊಳಿಸಿಕೋ’ ಎನ್ನುವ ನೀತಿಯನ್ನೇ ನಮ್ಮ ಹಿರಿಯರು ಬೋಧಿಸುತ್ತ ಬಂದಿದ್ದಾರೆ! ‘ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು, ತನು ಶುದ್ಧಿಯಿಲ್ಲದವಗೆ ತೀರ್ಥದ ಫಲವೇನು…’ ಎನ್ನುತ್ತಾರೆ ಪುರಂದರದಾಸರು. ಆದರೆ ‘‘ನಮ್ಮ ಮತವನ್ನೂ ಪ್ರವರ್ತಕನನ್ನೂ ಒಪ್ಪಿಕೊ ಸಾಕು, ಆ ಬಳಿಕ ‘ಪಾಪ ಮಾಡುವ ಅಧಿಕಾರ’ ನಿನಗೆ ಸಿಗುತ್ತದೆ¬!’’ ಎಂಬೀ ತೆರನಾದ ವಿನಾಶಕಾರಿ ಅಭಿಪ್ರಾಯಗಳನ್ನು ಆಕ್ರಮಣಕಾರರ ಮತಗಳು ಧರ್ಮದ ಹೆಸರಿನಲ್ಲಿ ತಂದು ಈ ಶಾಂತ ಭಾರತದ ನೆಲದಲ್ಲಿ ಬಿತ್ತಿದವು.
ನಿಸರ್ಗದ ನಿಯಮದ ಪ್ರಕಾರ, ಆತ್ಮೋದ್ಧಾರದ ಹಾದಿಯಲ್ಲಿ ಒಳದಾರಿ ಇಲ್ಲವೇ ಇಲ್ಲ! ಹಾಗಾಗಿ ‘ತನ್ನನ್ನು ತಾನು ಗೆದ್ದವನು’ ಮಾತ್ರವೇ ತನಗೂ ಇತರರಿಗೂ ಶ್ರೇಯಸ್ಕರನಾಗಿ ಬದುಕಲು ಸಮರ್ಥನಾಗುತ್ತಾನೆ ಎನ್ನುವುದು ಕೃಷ್ಣನ ಸೂಚನೆ.