ಭಾರತದ ಸಂವಿಧಾನವು ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಸಿದ್ಧಾಂತಗಳ ಮೇಲೆ ರಚಿತವಾಗಿರುವ ಒಂದು ಶ್ರೇಷ್ಠ ದಾಖಲಾತಿ. ದೇಶದಲ್ಲಿ ಸಂಸತ್ತು ಹಾಗೂ ಆಯಾ ರಾಜ್ಯ ಶಾಸಕಾಂಗಗಳು ರಚಿಸುವ ನೆಲದ ಕಾನೂನುಗಳು ಸಂವಿಧಾನದ ಆಶಯಗಳಿಗೆ ಅನುಗುಣವಾಗಿರಬೇಕು. ಇಲ್ಲದಿದ್ದಲ್ಲಿ ಅಂತಹ ಕಾನೂನುಗಳನ್ನು ಅಸಾಂವಿಧಾನಿಕ ಹಾಗೂ ಅಸಿಂಧು ಎಂದು ಘೋಷಿಸಲಾಗುತ್ತದೆ. ಹಾಗಾಗಿಯೇ ಸಂವಿಧಾನವನ್ನು ಭಾರತದ ಸರ್ವೋಚ್ಚ ಕಾನೂನು ಎಂದು ಪರಿಗಣಿಸಲಾಗಿದೆ. ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ರೂಪುಗೊಂಡ ಸಂವಿಧಾನವು ಜನರ ಭಾಗವಹಿಸುವಿಕೆಯನ್ನು ನಿರೀಕ್ಷೆ ಮಾಡುತ್ತದೆ. ಆದರೆ, ಮಾಹಿತಿ ಕೊರತೆಯಿಂದ ಸಾರ್ವಜನಿಕರು ಸರ್ಕಾರಗಳ ಅಸಮಂಜಸ ಕ್ರಮಗಳನ್ನು ಪ್ರಶ್ನೆ ಮಾಡದೆ ತಮ್ಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ (ಮುದ್ರಣ ಸ್ವಾತಂತ್ರ್ಯ ಒಳಗೊಂಡ) ಚ್ಯುತಿ ತಂದುಕೊಂಡಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ನಮ್ಮ ಜನ ಬ್ರಿಟಿಷರ ವಿರುದ್ದ ಧ್ವನಿ ಎತ್ತಲು ಅಭಿವ್ಯಕ್ತಿ ಸ್ವಾತಂತ್ರ್ಯ ಇರಲಿಲ್ಲ. ಆದರೆ, 1950ರ ನಂತರ ಜಾರಿಗೆ ಬಂದ ಸಂವಿಧಾನ ಮಾತನಾಡುವ ಸ್ವಾತಂತ್ರ್ಯ ಕೊಟ್ಟಿದ್ದರೂ ಯಾರು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸದಿರುವುದು ವಿಪರ್ಯಾಸ. ದೇಶದಲ್ಲಿ ಸಂವಿಧಾನದ ಪ್ರೇರಣೆಯಿಂದ ರಚಿಸಿರುವ ಗರಿಷ್ಠ ಕಾನೂನುಗಳಿದ್ದರೂ ಅವುಗಳ ಕನಿಷ್ಠ ಅನುಷ್ಠಾನದಿಂದ ಸಂವಿಧಾನದ ಅಶೋತ್ತರಗಳಿಗೆ ಪೆಟ್ಟು ಬಿದ್ದಿರುವುದು ಸುಳ್ಳಲ್ಲ. ಶಾಸನಸಭೆಗಳಲ್ಲಿ ಎಷ್ಟೋ ಮಸೂದೆಗಳು ಪರಿಣಾಮಕಾರಿ ಚರ್ಚೆಯಿಲ್ಲದೆ ಕಾನೂನುಗಳಾಗಿ ರೂಪುಗೊಂಡಿರುವುದು ಕಣ್ಣಮುಂದಿದೆ. ಉದಾಹರಣೆ, ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗಗಳಿಗೆ ಕೊಟ್ಟಂತಹ ಶೇಕಡ 10ರಷ್ಟು ಮೀಸಲಾತಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ. ದಿನಗಳು ಕಳೆದಂತೆ ಮೀಸಲಾತಿಯ ಪ್ರಮಾಣ ಕಡಿಮೆಯಾಗುವ ಬದಲಾಗಿ ಹೆಚ್ಚುತ್ತಾ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಂಸತ್ತಿನ ಹಾಗೂ ಎಲ್ಲಾ ಶಾಸಕಾಂಗಗಳ ಬಹುತೇಕ ಸದಸ್ಯರು ಕೋಟ್ಯಧೀಶರಾಗಿದ್ದು ಅವರಲ್ಲಿ ಕೆಲವರು ಅಪರಾಧಿಕ ಹಿನ್ನೆಲೆ ಇಟ್ಟುಕೊಂಡು ಬಂದಿರುವವರು. ಇವರು ಯಾವ ಗುಣಮಟ್ಟದ ಕಾನೂನನ್ನು ರೂಪಿಸುತ್ತಾರೆ ಎಂಬುದು ಚಿಂತನಾರ್ಹ ಪ್ರಶ್ನೆ. ಮಾನವನ ಮೂರು ಮುಖ್ಯ ಹಕ್ಕುಗಳಾದ ಆರೋಗ್ಯ, ಶಿಕ್ಷಣ ಹಾಗೂ ಆಹಾರ ಇವುಗಳು ಸಂಪೂರ್ಣವಾಗಿ ನಾಗರಿಕರಿಗೆ ಸಿಗದಿರುವ ಕುರಿತು ಕಾನೂನು ರೂಪಿಸುವವರು ಚಿಂತಿಸದಿರುವುದು ದುರದೃಷ್ಟಕರ. ಇನ್ನೊಂದು ಆಶಾದಾಯಕ ವಿಚಾರವೆಂದರೆ ಹಲವು ಸ್ವಯಂಸೇವಾ ಸಂಸ್ಥೆಗಳಿಂದ (ಉದಾಹರಣೆಗೆ ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬಿರ್ಟೀಸ್ –ಪಿಯುಸಿಎಲ್) ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹೂಡಿ, ನ್ಯಾಯಾಂಗದ ಕ್ರಿಯಾಶೀಲತೆಯ ಸಹಾಯದಿಂದ ಸಂವಿಧಾನದಲ್ಲಿ ಹಲವು ಅವ್ಯಕ್ತ ಮೂಲಭೂತ ಹಕ್ಕುಗಳನ್ನು ರೂಪಿಸಿರುವುದು. ಉದಾಹರಣೆಗೆ ಅನುಚ್ಛೇದ 21ರ ಜೀವಿಸುವ ಹಕ್ಕನ್ನು ನ್ಯಾಯಾಲಯದ ಅರ್ಥೈಸುವ ಸಾಮರ್ಥ್ಯದಿಂದ ಆಹಾರದ ಹಕ್ಕು, ಮಾಹಿತಿ ಹಕ್ಕು, ಆರೋಗ್ಯದ ಹಕ್ಕು, ಪರಿಸರದ ಹಕ್ಕು, ಗೌಪ್ಯತೆಯ ಹಕ್ಕು, ಘನತೆಯಿಂದ ಬಾಳುವ ಹಕ್ಕು, ಜೀವನೋಪಾಯದ ಹಕ್ಕು ಇತ್ಯಾದಿ ಹಕ್ಕುಗಳು ಜನ್ಮ ತಾಳಿರುವುದು ಸಂವಿಧಾನದ ಆಶಯಕ್ಕೆ ಅರ್ಥ ಕಲ್ಪಿಸಿಕೊಟ್ಟಂತಾಗಿದೆ. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗಗಳ ಪಾತ್ರ ಅದ್ವಿತೀಯ. ಆದರೆ, ಇನ್ನೊಂದು ಮುಖ್ಯ ವಿಚಾರವೆಂದರೆ ನ್ಯಾಯಾಂಗದ ಕ್ರಿಯಾಶೀಲತೆಯ ಹೆಸರಿನಲ್ಲಿ, ಉನ್ನತ ನ್ಯಾಯಾಲಯಗಳು ಸರ್ಕಾರದ ಇನ್ನಿತರ ಅಂಗಗಳ ನಡುವೆ ಮಧ್ಯಪ್ರವೇಶಿಸುತ್ತಿರುವುದು ಅಧಿಕಾರ ವಿಭಜನೆ ಸಿದ್ಧಾಂತ ರೂಪಿಸಿರುವ ಲಕ್ಷ್ಮಣ ರೇಖೆಯನ್ನು ದಾಟಿದಂತೆ ಎಂದೂ ಅರ್ಥೈಸಲಾಗುತ್ತಿದೆ. ಕೇಂದ್ರ ರಾಜ್ಯ ಸಂಬಂಧಗಳ ವಿಚಾರ ಬಂದಾಗ 1983ರಲ್ಲಿ ಸರ್ಕಾರಿಯ ಹಾಗೂ ಪೂಂಜಿ ಆಯೋಗಗಳು ಶಿಫಾರಸುಗಳು ಕೇವಲ ಬಿಳಿ ಹಾಳೆಗಳಲ್ಲಿ ಉಳಿದಿರುವುದು ಎದ್ದು ಕಾಣುತ್ತದೆ. ಈ ಆಯೋಗಗಳ ಶಿಫಾರಸುಗಳನ್ನು ಅಲ್ಪ ಮಟ್ಟದಲ್ಲಾದರೂ ಅನುಷ್ಠಾನಗೊಳಿಸಿದರೆ ಕೇಂದ್ರ–ರಾಜ್ಯ ಸರ್ಕಾರಗಳ ಸಂಬಂಧಗಳನ್ನು ಬಲಪಡಿಸಬಹುದು. ಉದಾಹರಣೆಗೆ ರಾಜ್ಯಪಾಲರ ಹುದ್ದೆಗೆ ನೇಮಕವಾಗಿರುವ ವ್ಯಕ್ತಿ ಯಾವ ರಾಜಕೀಯ ಪಕ್ಷಗಳಿಗೂ ಸೇರಿರಬಾರದು, ಹಾಗಿದ್ದಲ್ಲಿ ಮಾತ್ರ ನಿಷ್ಪಕ್ಷಪಾತವಾದ ಕ್ರಮ ತೆಗೆದುಕೊಳ್ಳಬಹುದು. ಆದರೆ, ರಾಷ್ಟ್ರಪತಿ ಆಳ್ವಿಕೆಯ ವಿಚಾರದಲ್ಲಿ ಹಲವು ರಾಜ್ಯಗಳ ರಾಜ್ಯಪಾಲರ ನಡೆ ನ್ಯಾಯಾಲಯಗಳಲ್ಲಿ ನಿರಂತರವಾಗಿ ಪ್ರಶ್ನೆಯಾಗುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಂತಾಗಿದೆ. ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರು 2002ರಲ್ಲಿ ಸಂವಿಧಾನ ಪುನರ್ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ನೀಡಿದ್ದ ಹಲವು ಉತ್ತಮ ಶಿಫಾರಸುಗಳು ಹಾಗೇ ಉಳಿದಿವೆ. ವಿವಿಧ ಧರ್ಮ, ಭಾಷೆ ಹಾಗೂ ಸಂಸ್ಕೃತಿಯಿಂದ ಕೂಡಿದ ಈ ದೇಶದಲ್ಲಿ ಸಂವಿಧಾನ 70 ವರ್ಷಗಳಿಂದಲೂ ಬಳಕೆ ಆಗುತ್ತಿರುವುದು ಸಂತೋಷದ ವಿಚಾರ. ಸಂವಿಧಾನದ ಪೂರ್ಣ ಪ್ರಯೋಜನ ಪಡೆಯುವಂತಹ ವ್ಯವಸ್ಥೆ ರೂಪುಗೊಂಡರೆ ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅದನ್ನು ರಚಿಸಿದ ಎಲ್ಲ ಮಹನೀಯರಿಗೆ ದೇಶ ನೀಡುವ ದೊಡ್ಡ ಗೌರವವಾದೀತು. ಸಂವಿಧಾನದ ಹೊತ್ತಿಗೆಯನ್ನು ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟಿಸಿ, ಪ್ರತಿಯೊಬ್ಬ ನಾಗರಿಕನ ಮನೆಗೆ ತಲುಪುವಂತೆ ಮಾಡಿದರೆ, ಜನ ಅದನ್ನು ಸರಿಯಾಗಿ ಗ್ರಹಿಸುವಂತಾದರೆ ಸಂವಿಧಾನದ ಈ ಏಳು ದಶಕಗಳ ಹುಟ್ಟು ಹಬ್ಬಕ್ಕೆ ಅರ್ಥಬರುತ್ತದೆ. ಇಲ್ಲವಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಆರಂಭದಲ್ಲಿ ಅಪಾಯದ ಅಂಚಿಗೆ ತಲುಪಿ ನಂತರ ತುರ್ತು ನಿಗಾ ಘಟಕ ಸೇರಿ ತದನಂತರ ಸಾಯುತ್ತದೆ.(ಲೇಖಕ: ಬೆಂಗಳೂರು ವಿ.ವಿ. ಕಾನೂನು ಕಾಲೇಜಿನ ಪ್ರಾಧ್ಯಾಪಕ)
courtsey:prajavani.net
https://www.prajavani.net/artculture/art/consitution-still-fulfilling-wish-684334.html