ಸಾಂಬಾರ್ ಬಟ್ಲು !
ಕಳೆದ ಕೆಲವು ದಶಕಗಳ ಹಿಂದೆ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗಳಲ್ಲಿ ಹಲವಾರು ಮರದ ಆವುಗೆ ಪರಿಕರಗಳು ದಂಡಿಯಾಗಿರುತ್ತಿದ್ದವು. ಮರದ ಸೌಟು, ಚಮಚ, ಮರದ ಟ್ರೇ, ಮಜ್ಜಿಗೆ ಕೆಡೆಯಲು ಬಳಸುವ ಕಡೆಗೋಲು, ಲಟ್ಟಣಿಗೆ, ಚಪಾತಿ ಲಟ್ಟಿಸುವ ಮಣೆ, ಗೊಜ್ಜಿನ ಮರಿಗೆ, ರಂಗೋಲಿ ಮರಿಗೆ, ಬಳೆ ಸ್ಟ್ಯಾಂಡ್, ಕುಂಕುಮ ಭರಣಿ, ಬಾಚಣಿಗೆ,ಒಡವೆ ಪೆಟ್ಟಿಗೆ, ಮಕ್ಕಳ ಆಟಿಕೆಗಳು ಇತ್ಯಾದಿ ಇತ್ಯಾದಿ…… ಗತಕಾಲದಲ್ಲಿ ಬಳಕೆಯಲ್ಲಿದ್ದ ವಿಶಿಷ್ಟವಾದ ಅಡುಗೆ ಮನೆಯ ಸಲಕರಣೆಗಳು. ಎಲ್ಲವೂ ಮರದಿಂದಲೇ ತಯಾರಾಗಿರುವ ಸಾಧನಗಳು. ಚಿತ್ರದಲ್ಲಿ ಕಾಣುವ ಪರಿಕರ ಸಾಂಬಾರ್ ಬಟ್ಲು ಹಾಗೂ ಉಪ್ಪು-ಉಪ್ಪಿನಕಾಯಿಯ ಮರಿಗೆ. ಪ್ರತಿನಿತ್ಯ ಒಗ್ಗರಣೆಗೆ ಬೇಕಾಗುವ ಸಾಂಬಾರ ಪದಾರ್ಥಗಳು ಕ್ವಚಿತ್ತಾಗಿ ಕೈಗೆಟುಕುವಂತಿರುವ ಸಾಧನ ಸಾಂಬಾರ್ ಬಟ್ಲು. ಮತ್ತೊಂದು, ದಿನವೂ ಊಟಕ್ಕೆ ಬೇಕಾಗುವ ಉಪ್ಪು-ಉಪ್ಪಿನಕಾಯಿ ಹಾಕಿಡುವ ಕೈ ಬಟ್ಟಲು. ಇಂಥ ಮರದ ಪರಿಕರಗಳು ಉಷ್ಣತೆ ಮತ್ತು ತೇವಾಂಶದ ಸಮತೋಲನ ಕಾಯ್ದುಕೊಳ್ಳುವ ಗುಣ ಹೊಂದಿರುವುದಲ್ಲದೇ, ಪದಾರ್ಥಗಳು ತಮ್ಮ ನೈಸರ್ಗಿಕ ಗುಣಗಳನ್ನು ಉಳಿಸಿಕೊಂಡು ತಾಜಾತನ ಹೊಂದಿರುವುದರಿಂದ ಆಹಾರಕ್ಕೆ ವಿಶಿಷ್ಟ ರುಚಿ ನೀಡುತ್ತವೆಂಬುದು ಬಲ್ಲ ಹಿರಿಯರ ಅಂಬೋಣ!
ಹೊಸ್ಮನೆ ಮುತ್ತು