ಸಾಮಾಜಿಕ ಜಾಲಗಳು, ನಾ ಕಂಡಂತೆ…
ಮನುಷ್ಯ ಸಮಾಜಜೀವಿ. ಅವನ ಸುಖ, ಸಮಾಧಾನಗಳೆಲ್ಲವೂ ಈ ಸಮಾಜದಲ್ಲಿ ಅವನು ಯಾವ ರೀತಿಯಲ್ಲಿ ಹೊಂದಿಕೊಂಡು ಹೋಗುವನೆಂಬುದರ ಮೇಲೇ ಅವಲಂಬಿಸಿವೆ. ಮೊದಲು ಸಂವಹನಕ್ಕೆ ಕೇವಲ ಭಾಷೆ, ನಂತರ ಲಿಪಿ.. ನಂತರ ಕಾಗದವೂ ಕೂಡ ಸಂವಹನದ ಸಾಧನವಾಯಿತು. ಈಗ ಈ ಸಂವಹನ ಕ್ರಿಯೆ ಅತ್ಯಂತ ವೇಗದಿಂದ ಬೆಳೆಯುತ್ತಿದೆ. ಒಂದು ಕಾಲದ ಪೋಸ, ಟೆಲೆಗ್ರಾಫ್ಗಳೆಲ್ಲವೂ ಈಗ ನಶಿಸಿ ಹೋಗುತ್ತಿವೆ. ಅಷ್ಟೇ ಏಕೆ, ಲ್ಯಾಂಡ್ ಫೋನ್ ಕೂಡ ಮರೆಯಾಗಿದೆ.
ಎಲೆಕ್ಟ್ರಾನಿಕ್ ಸಂಪರ್ಕ ಸಾಧನಗಳು ಲಭ್ಯವಾದ ನಂತರ ಇ-ಮೇಲ್ ಅಂದರೆ “ಮಿಂಚಂಚೆ”ಯು ಜನಪ್ರಿಯವಾಯಿತು. ಆನಂತರ ಬಂದದ್ದು ಮೊಬೈಲ್ ಯುಗ. ಈ ಸಮಯದಲ್ಲಿ ಸಾಮಾಜಿಕ ತಾಣಗಳು ಅಂದರೆ ಸೋಷಿಯಲ್ ನೆಟ್ವರ್ಕಿಂಗ್ ಎಂಬ ಪರಿಕಲ್ಪನೆ ಹುಟ್ಟಿತು. ಟ್ವಿಟ್ಟರ್, ಫೇಸ್ಬುಕ್, ವಾಟ್ಸಾಪ್ ಮೊದಲಾದ ತಾಣಗಳು ಜನಪ್ರಿಯವಾದವು.
ಈ ಮೊಬೈಲ್ ಕೂಡ ಜಾಲತಾಣದ್ದೇ ಒಂದು ರೂಪ. ಅಲ್ಲದೆ, ಇದೊಂದು ಬಡವ ಹಾಗೂ ಬಲ್ಲಿದರಿಗೂ ಕೈಗೆಟಕುವಂಥದು. ಇದರಿಂದ ಅನುಕೂಲಗಳು ಬಹಳ. ನಾವು ಯಾರದಾದರೂ ಮನೆಗೆ ಹೊರಟಿದ್ದರೆ ಅವರಿಗೆ ಆ ಕುರಿತು ಮಾಹಿತಿ ನೀಡಬಹುದು. ಅವರು ಊರಲ್ಲಿ ಇರುವರೋ ಇಲ್ಲವೋ, ಮನೆಯಲ್ಲಿ ಅವರು ನಮ್ಮನ್ನು ಸ್ವಾಗತಿಸಲು ಸಾಧ್ಯ ಇದೆಯೋ ಇಲ್ಲವೋ ಎಂಬುದನ್ನು ಕೂಡ ತಿಳಿಯಬಹುದು. ಒಮ್ಮೊಮ್ಮೆ ಅವರಿಗೆ ಅನಾನುಕೂಲವೂ ಇರುತ್ತದೆ.
ನಮ್ಮ ಎಲ್ಲಾ ಕುಶಲವಾರ್ತೆಗಳನ್ನೂ ಮೊಬೈಲ್ನಲ್ಲಿ ತಿಳಿಸಬಹುದು. ಹುಟ್ಟು, ಸಾವುಗಳು, ಒಳ್ಳೆಯ ಹಾಗೂ ಕೆಟ್ಟ ಸುದ್ದಿ ಗಳು, ತುರ್ತು ಪರಿಸ್ಥಿತಿಗಳು ಎಲ್ಲವೂ ಕ್ಷಣಾರ್ಧದಲ್ಲಿ ತಲುಪಬೇಕಾದವರಿಗೆ ತಲುಪಬಹುದು. ಯಾವುದೇ ಒಂದು ಕಾರ್ಯಕ್ರಮವಿದ್ದಲ್ಲಿ ಆಮಂತ್ರಣ ಕೂಡ ಕೊಡಬಹುದು. ಆಗಲೇ ಅವರೂ ಕೂಡ ಬರಲು ಆಗುವುದೋ ಇಲ್ಲವೋ ಎಂಬುದನ್ನು ಕೂಡ ತಿಳಿಸಬಹುದು. ಸಾಹಿತ್ಯದ ಬಗ್ಗೆ ಚರ್ಚೆ ನಡೆಸಬಹುದು.
ಮೊದಲೆಲ್ಲ “ಯಾವಾಗ ನೋಡಿದ್ರೂ ಮೊಬೈಲ್ ದಾಗನ ಇರತಾರ ಇಬ್ಬರೂ! ಏನ ಮಾತಾಡಿದ್ರನ್ನೋದರ ಮ್ಯಾಲ ಒಂಚೂರರೆ ಲಕ್ಷ್ಯ? ಮೂಕಬಸಪ್ಪನ ಹಂಗ ಕೂಡೋದೂ… ಒಮ್ಮೆ ನಗತಾವ.. ಒಮ್ಮೆ ಅಳತಾವ… ಅಲ್ಲಾ, ನೀವ ಅಭ್ಯಾಸರೆ ಯಾವಾಗ ಮಾಡವ್ರೂ? ಕಸದ ಇಡತೇನಿ ನೋಡರಿ ಇನ್ನ ಫೋನು… ‘
ಇದು ದಿನದ ಗೋಳು ಎಲ್ಲಾರ ಮನೆಯಲ್ಲೂ. ಇಷ್ಟು ದಿನಗಳೆಲ್ಲ ಪುಸ್ತಕ, ಪೆನ್ನು, ಟೀಚರು.. ಕ್ಲಾಸ್ ರೂಮು.. ಹೀಗೆ ಎದರಾಬದರು ಕುಳಿತುಕೊಂಡು ಕಲಿಯುವುದು ಸಹಜ ಮಾರ್ಗವಾಗಿತ್ತು. ಆಗೆಲ್ಲ ತಮ್ಮ ಪಾಠದ ಕಡೆಗೆ ಹುಡುಗರಿಗೆ ಲಕ್ಷ್ಯ ಇರದಿದ್ದರೆ ಟೀಚರು ಸಿಟ್ಟಾಗುತ್ತಿದ್ದರು. ಹೀಗೆ ಅವರ ದೇಖರೇಖಿಯಲ್ಲಿಯೇ ಮಕ್ಕಳು ಕಲಿಯುತ್ತಿದ್ದರು. ಗುರು-ಶಿಷ್ಯರ ಸಂವಹನಕ್ಕೆ ಮಹತ್ವ ಇತ್ತು!
ಈ ಕೊರೋನಾ ಬಂದ ಮೇಲೆ ಶೈಕ್ಷಣಿಕ ಮನೋವಿಜ್ಞಾನದ ವ್ಯಾಖ್ಯೆಯೇ ಬದಲಾಗಿದೆ! ಹೊರಗ ಹೋಗುವತಿಲ್ಲ, ಕೆಮ್ಮುವಂತಿಲ್ಲ, ಸೀನುವಂತಿಲ್ಲ, ಕೈ ಹಿಡಿದುಕೊಳ್ಳುವಂತಿಲ್ಲಾ, ಎಲ್ಲಾ ದೂರ ದೂರ… ಎರಡ ತಿಂಗಳು ಆಫೀಸ್, ಶಾಲೆ ಯಾವುದೂ ಇಲ್ಲದೆ ಕಳೆದದ್ದಾಯಿತು. ಪರೀಕ್ಷೆ ಇಲ್ಲದೆ ಮಕ್ಕಳು ಒಂದ ಕ್ಲಾಸು ಪ್ರೊಮೋಟೂ ಆದವು. ಆದರೆ ಜೂನ್ ಬಂದಿತ್ತು… ಇನ್ನು ಮುಂದಿನ ಶೈಕ್ಷಣಿಕ ವರ್ಷದ ಬಗ್ಗೆ ವಿಚಾರ ಮಾಡಬೇಕಲ್ಲವೇ?
ಇಂಥ ಸಮಯದಲ್ಲಿ ಆನ್ ಲೈನ್ ಮೂಲಕ ಶಿಕ್ಷಣ ಕೊಡುವ ವಿಚಾರ ಶೈಕ್ಷಣಿಕ ತಜ್ಞರ ತಲೆಯಲ್ಲಿ ಬಂದಿತ್ತು. ಕೀಟಲೆ, ತಲೆಹರಟೆ, ಒಂದಿಷ್ಟು ಪ್ರಬುದ್ಧ ಚರ್ಚೆ ಮಾಡುತ್ತ ಕಲಿಯುವ ಪ್ರಕ್ರಿಯೆಗೆ ಇದು ಯಾವತ್ತೂ ಪರ್ಯಾಯವಲ್ಲ. ಆದರೂ ಇದು ಸಾಧ್ಯವಾದದ್ದು ಈ ಜಾಲತಾಣಗಳ ಮುಖಾಂತರ! ಯಾವುದೋ ಊರಿನಲ್ಲಿ ಶಿಕ್ಷಕರು ಪಾಠ ಮಾಡುತ್ತಾರೆ. ಇನ್ನಾವುದೋ ಹಳ್ಳಿಯ ಮೂಲೆಯಲ್ಲಿ ಇರುವ ವಿದ್ಯಾರ್ಥಿಗೆ ಕ್ಷಣಾರ್ಧದಲ್ಲಿ ಆ ಪಾಠ ಸಿಗುವಂತೆ ಮಾಡುವುದು ಇಂದಿನ ನಮ್ಮ ಈ ತಂತ್ರಜ್ಞಾನದ ಶಕ್ತಿ. ಆದರೆ ಮನುಷ್ಯ ಮನುಷ್ಯನ ಜೊತೆಗಿನ ಒಡನಾಟದ ಮೂಲಕ ಪಠ್ಯದಲ್ಲಿಯ ವಸ್ತುವನ್ನು, ಅದಕ್ಕೆ ಮೀರಿದ, ಜೀವನಕ್ಕೆ ಅಗತ್ಯವಿರುವ ಕೌಶಲಗಳನ್ನು ಆನ್ ಲೈನ್ ಮೂಲಕ ಕಲಿಸಲಿಕ್ಕಾಗದು. ಇದು ತಂತ್ರಜ್ಞಾನದ ಮಿತಿ. ಅದು ಬೇರೆ ಮಾತು.
ಮೊಬೈಲ್ ಕ್ಯಾಮೆರಾ ಆಗುತ್ತದೆ, ಗಡಿಯಾರ ಆಗುತ್ತದೆ, ವಿಡಿಯೋ ಆಗುತ್ತದೆ. ನೋಟಬುಕ್ಕು ಆಗುತ್ತದೆ. ಪತ್ರ ಸಂದೇಶವಾಗುತ್ತದೆ.
ಅದರಂತೆ ಇದರಿಂದಾಗಿ ಅನಾನುಕೂಲವೂ ಆಗುತ್ತದೆ. ಫೋಟೊ ಗ್ರಾಫರ್ ಈಗ ನೊಣ ಹೊಡೆಯುವಂತಾಗಿದೆ. ಆ ಉದ್ಯೋಗ ಈಗ ಕೇವಲ ಪಾಸ್ಪೋರ್ಟ್ ಗಾಗಿಯೇ ಸೀಮಿತವಾಗಿದೆ. ಈ ಸ್ಮಾರ್ಟ್ ಫೋನ್ ಗಳು ಬಂದ ಮೇಲೆ ಸೆಲ್ಫಿ ತೆಗೆಯುವ ಗೀಳು ಹೆಚ್ಚಾಗುತ್ತಿದೆ. ಸೆಲ್ಫಿಗಳು ಸ್ವಯಂ ಅಭಿವ್ಯಕ್ತಿಯ ಒಂದು ರೂಪ. ತಮಗೆ ತಾವೇ ಪ್ರಾಮುಖ್ಯತೆ ಕೊಟ್ಟುಕೊಳ್ಳಲು, ಸಂಭ್ರಮಪಟ್ಟುಕೊಳ್ಳಲು ಜನರು ಸೆಲ್ಫಿ ತೆಗೆಯುವುದಕ್ಕೆ ಹೋಗುತ್ತಾರೆ. ಸೆಲ್ಫಿ ತೆಗೆಯುವುದೇನೋ ಮನಸ್ಸಿಗೆ ಖುಷಿ ನೀಡುತ್ತದೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸಂಭ್ರಮಿಸುವವರ ಸಂಖ್ಯೆಗಂತೂ ಲೆಕ್ಕವೇ ಇಲ್ಲ. ಆದರೆ ಈ ಗೀಳು ಕೆಲವೊಮ್ಮೆ ಅತ್ಯಂತ ಅಪಾಯಕಾರಿ ಪರಿಣಮಿಸುತ್ತದೆ. ಸೆಲ್ಫಿ ತೆಗೆಯುವ ಭರದಲ್ಲಿ ಅನೇಕರು ಜೀವ ತೆತ್ತಿದ್ದಾರೆ.
ಸಾಮಾಜಿಕ ಜಾಲಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವುದಕ್ಕೂ ಅನುಕೂಲ ಆಗುತ್ತದೆ. ಅಪರಾಧಿಗಳ ಕಮ್ಮ್ಯುನಿಕೇಶನ್ ಜಾಲವನ್ನು ಪರೀಕ್ಷಿಸಿದರೆ ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಬಗ್ಗೆ ಬಹು ಬೇಗನೆ ಪತ್ತೆ ಮಾಡಿ ಅಪರಾಧಿಯ ಮೂಲದ ವರೆಗೆ ಹೋಗಲು ಅನುಕೂಲವಾಗುತ್ತದೆ! ಎಂಥೆಂಥಾ ದೊಡ್ಡ ಅಪರಾಧಿಗಳೂ ಈ ಜಾಲದಲ್ಲಿ ಈ ಜಾಲತಾಣಗಳಿಂದಾಗಿ ಸಿಕ್ಕುಬೀಳುತ್ತಾರೆ.
ಇತ್ತೀಚೆಗೆ ಈ ಜಾಲಗಳಿಂದಾಗಿ ಆನ್ ಲೈನ್ ಶಾಪಿಂಗ್ ಕೂಡ ಪ್ರಾರಂಭವಾಗಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ತಯಾರಾದ ವಸ್ತು ಎರಡೇ ದಿನಗಳಲ್ಲಿ ನಮ್ಮ ಮನೆಬಾಗಿಲಿಗೆ ಬರುವುದು ಸಾಧ್ಯವಾಗಿದೆ. ಸಿನಿಮಾ ಟಿಕೆಟ್, ಬಸ್ ರಿಜರ್ವೇಶನ್, ರೈಲ್ವೆ ರಿಜರ್ವೇಶನ್, ಓಲಾ ಮುಂತಾದ ಟ್ಯಾಕ್ಸಿ ಕರೆ, ಬ್ಯಾಂಕ್ ನಿಂದ ದುಡ್ಡು ಸಂದಾಯ ಎಲ್ಲವನ್ನೂ ಆನ್ಲೈನ್ ಮಾಡಬಹುದು. ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿಯಂತೂ ಬಯಸದೆಯೇ ಹತ್ತಾರು ಜಾಹೀರಾತುಗಳು, ಉತ್ಪನ್ನಗಳು ಕಣ್ಣಿಗೆ ರಾಚುತ್ತವೆ. ನಮಗೆ ಯಾವುದು ಅವಶ್ಯಕವಿದೆಯೋ ಅದನ್ನು ನಾವು ಆಯ್ಕೆ ಮಾಡಿಕೊಂಡರಾಯಿತು. ಇದೇ ಇಲ್ಲಿಯ ಒಂದು ಸಮಸ್ಯೆ. ಅವಶ್ಯಕತೆ ಇರಲಿ, ಇಲ್ಲದಿರಲಿ ತಂದು ಒಟ್ಟಿಕೊಳ್ಳುವ ಚಟ ನಮ್ಮಲ್ಲಿ ಇನ್ನೂ ಹೆಚ್ಚಾಗಲು ಇದೂ ಒಂದು ಕಾರಣವೇ ಆಗುತ್ತದೆಯೋ ಏನೋ. ಆದರೂ ಇಲ್ಲಿ ನಾವು ಕೆಲವೊಂದು ಎಚ್ಚರಿಕೆಗಳನ್ನೂ ಅನುಸರಿಸಬೇಕಾಗುತ್ತದೆ. ನಾವು ಮಾಡುವ ಆನ್ಲೈನ್ ಶಾಪಿಂಗ್ ಎಷ್ಟು ಸುರಕ್ಷಿತ? ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಕ್ಷೇತ್ರದ ಸಾಧಕ ಬಾಧಕಗಳ ಬಗ್ಗೆ ಕೂಡ ಅರಿಯಲೇಬೇಕು.
ಈ ಜಾಲತಾಣಗಳಿಂದಾಗಿ ಒಮ್ಮೊಮ್ಮೆ ಜಗಳ ಹುಟ್ಟುವುದುಂಟು… ರಾಜಕೀಯ ಸ್ಥಿತ್ಯಂತರಗಳೂ ಆಗುವುದುಂಟು. ಕೆಲವು ವೀಡಿಯೊಗಳು ಆತ್ಮಹತ್ಯೆಗೂ ಕಾರಣವಾಗುವುದುಂಟು… ಒಟ್ಟಿನಲ್ಲಿ ಎಲ್ಲಿಯವರೆಗೆ ಈ ಎಲ್ಲಾ ಸಂಶೋಧನೆಗಳೂ ಮಾನವನ ಹಿಡಿತದಲ್ಲಿರುವವೋ ಅಲ್ಲಿಯವರೆಗೆ ಎಲ್ಲ ಛಂದ. ಮನುಷ್ಯ ಅದಕ್ಕೆ ದಾಸನಾದನೋ ಅಂದಿನಿಂದ ಅವನತಿಗೆ ಆರಂಭ!
ಮಾಲತಿ ಮುದಕವಿ