ಸಾವಿನ ಖುಶೀ!
ಇಂದು ರವಿವಾರ. ಎದ್ದದ್ದೇ ಏಳು ಗಂಟೆ. ಎದ್ದು ಬಾಗಿಲು ತೆರೆಯಬೇಕೆನ್ನುತ್ತಿದ್ದಂತಯೇ ನನ್ನ ಜಂಗಮವಾಣಿ ರಿಂಗುಣಿಸಿತ್ತು. ಎತ್ತುತ್ತಿದ್ದಂತೆಯೇ ನನ್ನ ತಮ್ಮನ ಹೆಂಡತಿಯ ಧ್ವನಿ. “ಅಕ್ಕಾ, ನಮ್ಮ ಮಾವಶಿ ಗಂಡ ಹೋಗಿಬಿಟ್ರು…”
ನನಗೆ ಏನು ಹೇಳಬೇಕೆಂಬುದೇ ಸುತಾಯಿಸಲಿಲ್ಲದ ಸ್ಥಿತಿ… .
“ಅಕ್ಕಾ, ನೀವು ಆಸ್ಪತ್ರೆಗೆ ಬರೋದು ಬ್ಯಾಡಾ.. ಆಗಲೇ ಅವರ ದಹನನೂ ಆಗೇದ… ಮಾವಶಿ ಮನೀಗೇ ಬರ್ರಿ… ”
ಎಂದಳು…
“ಅಕ್ಕಾ, ಅಲ್ಲಿ ನಡೆದ ಸುದ್ದಿ ಕೇಳಿದ್ರ..”
“ಹೌದ? ಅಂಥಾದ್ದೇನಾತು?”
“ನಿನ್ನೆ ನಡುರಾತ್ರಿ ಅವರಿಗೆ ಆಘಾತ ಆತು. ಆಸ್ಪತ್ರೆಗೆ ಒಯ್ಯಲಿಕ್ಕತ್ತಾಗನ ನಡುದಾರಿಯೊಳಗ ಜೀವ ಹೋತು. ಮುಂದ ಆಸ್ಪತ್ರೆಗೆ ಶವಸಂಸ್ಕಾರಕ್ಕೆ ಅಗತ್ಯವಾದ ಅಧಿಕೃತ ಮರಣ ದಾಖಲೆ ಪತ್ರಕ್ಕಾಗಿ ಅಂತ ಒಯ್ದಿವಿ. ಅಲ್ಲೆ ಅವರು ಎರಡು ತಾಸು ಶವ ಇಟ್ಟುಕೊಂಡು ನಂತರ ಎರಡು ಲಕ್ಷ ರುಪಾಯಿ ತುಂಬಿ ಶವವನ್ನು ತೊಗೊಂಡ ಹೋಗರಿ ಅಂತಂದ್ರು. ನಮ್ಮ ಮಾವಶಿ ಮಗಾ “ಮೊದಲನ ಜೀವ ಹೋಗಿತ್ತು.. ಈಗ ಎರಡ ಲಕ್ಷ ಯಾಕಾಗಿ ತುಂಬಬೇಕರಿ” ಅಂತಂದಾಗ, “ನೀವು ಎರಡು ಲಕ್ಷ ತುಂಬಿದರ ಶವ ಕೊಡತೇವಿ. ಇಲ್ಲದೆದ್ರ ಈ ಚೀನಾದ ಜಡ್ಡು ಆಗೇದಂತ ಬರದು, ಶವಾ ನಾವ ಸಂಸ್ಕಾರ ಮಾಡತೇವಿ” ಅಂತಂದ್ರು. ಆಗ ನಮ್ಮ ಮಾಮಾ ” ಸರಿ. ನಾವು ರೊಕ್ಕಾ ಕೊಡಂಗಿಲ್ಲಾ. ಆದರ ನೀವ ಮಾತಾಡಿದ್ದೆಲ್ಲಾ ನನ್ನ ಈ ಜಂಗಮ ವಾಣಿಯೊಳಗ ತುಂಬಿಕೊಂಡೇನಿ. ಇದನ ನಾ ಒಯ್ದು ವರ್ತಮಾನ ಪತ್ರಿಕಾದವರಿಗೆ ಕೊಡತೇನಿ… ” ಅಂತಂದಾಗ ಅವರನ ಒಳಗ ಕರಕೊಂಡ ಹೋಗಿ “ಇಪ್ಪತ್ತೈದು ಸಾವಿರನರೆ ಕೊಡರಿ” , ಅಂತ ಅಂದರಂತ. ಇವರು ಅಷ್ಟು ಕೊಟ್ಟು ಹೊರಗ ಶವಾ ತೊಗೊಂಡ ಬರೂಮುಂದ ಅಲ್ಲಿರೋ ಕೆಲ ಸಿಬ್ಬಂದಿ “ಖುಶೀ ಕೊಡರಿ” ಅಂತ ಅಂತಾರಂತ! ಅಕ್ಕಾ, ನಮ್ಮವರ ಸಾವಿಗೆ ಇವರಿಗೆ ನಾವು ಖುಶಿ ಕೊಡಬೇಕೆ?” ಎಂದು ಗಳಗಳನೆ ಅತ್ತಳು.
ಇದು ದೊಡ್ಡ ಹಾಗೂ ಹೆಸರಾಂತ ಆಸ್ಪತ್ರೆಯಲ್ಲಿ ನಡೆದಂಥ ಅವ್ಯವಹಾರ! ಇದು ನಡೆದ ಸಂಗತಿ. ಅವರೆಲ್ಲ ದುಃಖದಲ್ಲಿ ಬೇಯುತ್ತಿರುವಾಗ ಇವರು ಸುಡುವ ಮನೆಯ ಗಳು ಹಿರಿಯುವ ಕೆಲಸಕ್ಕೆ ಕೈ ಹಾಕಿದ್ದಾರೆ! ಅಲ್ಲದೆ ಖುಶಿ ಕೇಳುವ ಶಬ್ದ ದಾರಿದ್ರ್ಯ ಇವರನ್ನು ಕಾಡುತ್ತಿದೆ!