ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ
ಉಪ್ಪು ನಮ್ಮ ಆಹಾರದಲ್ಲಿ ರುಚಿಯ ಪಾತ್ರ ವಹಿಸಿದೆ. ಆದ್ದರಿಂದಲೇ ಅದಕ್ಕೆ ತಾಯಿಯಂತೆಯೇ ಆತ್ಮಬಂಧು ಎಂದು ಹೇಳುತ್ತಾರೆ. ಅಂತೆಯೇ ಜೀವನದಲ್ಲಿ ಉಪ್ಪಿನ ಪಾತ್ರವು ನಮ್ಮ ಯುವಕರದಾಗಿದೆ… ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದ್ದಾರೆ.. “Youths are the salt of Nation” ಎಂದು! ನಮ್ಮ ರಾಷ್ಟ್ರದ ಚೇತನದಂತಿದ್ದ ವಿವೇಕಾನಂದರು ನಮ್ಮ ಯುವ ಜನಾಂಗಕ್ಕೆ ಪ್ರೇರಣೆಯ ಒಂದು ಸ್ರೋತವಿದ್ದಂತೆ. ಅವರೂ ಕೂಡ ಯುವಶಕ್ತಿಯನ್ನು ಅರಿತವರಾಗಿದ್ದರು.. ಆದ್ದರಿಂದಲೇ ಅವರು “ಎದ್ದೇಳಿ ಯುವಕರೆ.. ನಿಮ್ಮ ಗುರಿಯನ್ನು ತಲುಪುವ ವರೆಗೂ ಎಲ್ಲಿಯೂ ನಿಲ್ಲದಿರಿ” ಎಂದು ಯುವಕರ ತಲೆಯಲ್ಲಿ ಕ್ರಾಂತಿಕಾರಿ ವಿಚಾರವನ್ನು ಬಿತ್ತಿದರು. “ಕಣ್ಣುಗಳಲ್ಲಿ ವೈಭವದ ಕನಸು, ಮನಸ್ಸಿನಲ್ಲಿ ಬಿರುಗಾಳಿಯ ವೇಗ ಇರಬೇಕು..” ಹೀಗೆ ಹೃದಯದಲ್ಲಿ ಏಳುತ್ತಿರುವ ಏರಿಳಿತಗಳು, ಪರಿವರ್ತನೆಯ ದಾಹ, ಅದಮ್ಯ ಸಾಹಸ, ಸ್ಪಷ್ಟ ಸಂಕಲ್ಪಗೈಯುವ ಇಚ್ಛೆ, ಇದರ ಹೆಸರೇ ಯುವಾವಸ್ಥೆ ಎಂದು ಹೇಳಬಹುದೇನೋ!
ಸ್ವಾಮಿ ವಿವೇಕಾನಂದರು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಅತ್ಯಂತ ಮಹತ್ವದ್ದೆಂದು ತಿಳಿದಿದ್ದರು. ಅವರು ಒಂದು ವೇಳೆ ನಮ್ಮ ಯುವಕರು ತಮ್ಮ ಅಂತಃಶಕ್ತಿಯನ್ನು ದೇಶದ ಪ್ರಗತಿಗಾಗಿ ವಿನಿಯೋಗಿಸಿದಲ್ಲಿ ನಮ್ಮ ರಾಷ್ಟ್ರವು ಅತ್ಯಂತ ಉನ್ನತಿಯತ್ತ ಸಾಗಬಹುದು. ಯುವಕರೇ ನಮ್ಮ ದೇಶದ ವರ್ತಮಾನ ಹಾಗೂ ಭವಿಷ್ಯವನ್ನು ನಿರ್ಧರಿಸುವವರು. ವಿಶ್ವದಲ್ಲಿ ನಡೆದಂಥ ಎಲ್ಲಾ ಮಹತ್ವಪೂರ್ಣ ಬದಲಾವಣೆಗಳೂ ಯುವಜನರ ಆಸ್ಥೆ ಹಾಗೂ ಬಲಿದಾನಗಳಿಂದಲೇ ಸಾಧ್ಯವಾದಂಥವು. ನಮ್ಮ ಯುವಶಕ್ತಿಯು ದೇಶದ ಅದೃಷ್ಟ ಹಾಗೂ ಅದರ ಚಿತ್ರವನ್ನೇ ಬದಲಾಯಿಸಬಲ್ಲದು. ಒಂದು ಹೊಸ ಪ್ರತಿಬಿಂಬವನ್ನೇ ತೋರಿಸುವಂಥ ಯೋಗ್ಯತೆಯನ್ನು ಹೊಂದಿದೆ. ಅನುಭವಿಗಳ ಮುಂದಾಳುತ್ವವು ನಮ್ಮ ಯುವಕರ ಧನಾತ್ಮಕ ಅಂತಃಶಕ್ತಿಯನ್ನು ರಾಷ್ಟ್ರದ ಹಿತಕ್ಕಾಗಿ ವಿನಿಯೋಗಿಸಲು ಪ್ರೇರಣೆಯನ್ನು ಕೂಡ ನೀಡುತ್ತದೆ. ಆದ್ದರಿಂದ ಇಂದಿನ ನಮ್ಮ ಯುವಕರು ರಾಷ್ಟ್ರದ ಎದುರು ಎಷ್ಟೇ ಸವಾಲುಗಳಿದ್ದರೂ ಅವುಗಳನ್ನು ತಾವು ಅತ್ಯಂತ ಧೈರ್ಯದಿಂದ ಎದುರಿಸಬಲ್ಲೆವೆಂಬ ಸಂಕಲ್ಪವನ್ನು ಮಾಡಬೇಕು.” ಎಂದೂ ಹೇಳಿದರು.
ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಯುವಕರ ಸಂಖ್ಯೆ ಅತ್ಯಂತ ಹೆಚ್ಚು. ಒಟ್ಟು ಜನಸಂಖ್ಯೆಯ ೬೫%ನಷ್ಟು ಭಾಗ ೩೫ ವರ್ಷದೊಳಗಿನವರೇ ಆಗಿದ್ದಾರೆ. ಅಂದರೆ ವಿಶ್ವದಲ್ಲಿ ಎರಡನೆಯ ಅತಿ ದೊಡ್ಡ ಜನಸಂಖ್ಯೆಯನ್ನು ಪಡೆದಂಥ ನಮ್ಮ ದೇಶದಲ್ಲಿ ಉದ್ಯೋಗದಲ್ಲಿರುವ ಯುವಕರ ಸಂಖ್ಯೆಯೂ ಹೆಚ್ಚೇ ಆಗಿರುವುದು. ಹೀಗಾಗಿ ನಮ್ಮ ದೇಶವನ್ನು ಯುವಶಕ್ತಿಯನ್ನು ಹೊಂದಿರುವ ರಾಷ್ಟ್ರ ಎಂದೂ ಹೇಳಬಹುದು. ಹಾಗಾದರೆ ದೇಶವು ತಮ್ಮಲ್ಲಿಯ ಈ ಯುವಶಕ್ತಿಯನ್ನು ಹೇಗೆ ಉಪಯೋಗಿಸಬಹುದಾಗಿದೆ? ಎಂಬುದೇ ಈಗ ನಮ್ಮೆದುರು ಇರುವ ಪ್ರಶ್ನೆ. ಈ ವಿಶಾಲವಾದ ಯುವಸಂಖ್ಯೆಯನ್ನು ಪ್ರಗತಿಕಾರ್ಯದಲ್ಲಿ ಹೇಗೆ ತೊಡಗಿಸಬಹುದಾಗಿದೆ? ನಮ್ಮ ಈ ಯುವಶಕ್ತಿಯನ್ನು ರಾಷ್ಟ್ರದ ಮೇಲಿನ ಒಂದು ಭಾರದಂತೆ ಕಾಣಬೇಕೆ? ರಾಷ್ಟ್ರದ ಒಂದು ದೌರ್ಬಲ್ಯದಂತೆ ನಿರೂಪಿಸಬೇಕೇ? ಅಥವಾ ಸಶಕ್ತ, ಸಮೃದ್ಧ, ಶಕ್ತಿಶಾಲಿ, ಹಾಗೂ ಆತ್ಮನಿರ್ಭರ ಭಾರತದ ನಿರ್ಮಾಣದಲ್ಲಿ ಅದರ ಉಚಿತವಾದ ಉಪಯೋಗವನ್ನು ಮಾಡುವುದರಲ್ಲಿ ವಿನಿಯೋಗಿಸಬೇಕೋ?
ಯುವಕರೆಂದರೆ ಪರಮಾಣು ಶಕ್ತಿಯಿದ್ದಂತೆ. ಅದರ ಧನಾತ್ಮಕವಾದಂಥ ಉಪಯೋಗವನ್ನು ಮಾಡಿಕೊಂಡರೆ ನಮ್ಮ ದೇಶಕ್ಕೆ ಉಪಯುಕ್ತವಾದಂಥ ಶಕ್ತಿ ಉತ್ಪನ್ನವಾಗುತ್ತದೆ. ಆದರೆ ಅದರ ಪ್ರತಿಕೂಲ ಉಪಯೋಗವನ್ನು ಮಾಡಿಕೊಂಡದ್ದಾದರೆ ಪರಮಾಣು ಬಾಂಬ್ ಕೂಡ ತಯಾರಾಗಬಹುದು! ಈ ನಮ್ಮ ದೇಶದ ಯುವಶಕ್ತಿಯು ದೇಶ ಹಾಗೂ ವಿದೇಶಗಳಲ್ಲಿ ತನ್ನ ಭಾರತಮಾತೆಯ ಪ್ರತಿಷ್ಠೆಯನ್ನು ಮೆರೆಸುವುದಕ್ಕಾಗಿ ತನ್ನ ಪಾತ್ರವನ್ನು ವಹಿಸುತ್ತಿದೆ. ಅನೇಕ ಯುವ ವಿಜ್ಞಾನಿಗಳು, ಖಗೋಲ ಶಾಸ್ತçಜ್ಞರು, ಅಭಿಯಂತರು, ವೈದ್ಯರು ಪುರುಷರು, ಮಹಿಳೆಯರೆಂಬ ಭೇದವಿಲ್ಲದೆ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಸಬ್ಬೀರ ಭಾಟಿಯಾ, ಅವನೀಶ ಬಜಾಜ, ಸುಹಾಸ ಗೋಪಿನಾಥ, ನಿಕ್ಕೀ ಹೇಲಿ, ಬಾಬಿ ಜಿಂದಾಲ್‌ರಂಥ ಇನ್ನೂ ಎಷ್ಟು ಜನ ಯುವಕರು ವಿಶ್ವದಲ್ಲಿ ಭಾರತದ ಹೆಸರನ್ನು ಎತ್ತಿಹಿಡಿದಿದ್ದಾರೆಯೋ! ಆದರೆ ಈ ನಾಣ್ಯದ ಇನ್ನೊಂದು ಮುಖವು ಬಹಳ ವಿಕೃತವಾಗಿದೆ. ದೊಡ್ಡ ಸಂಖ್ಯೆಯಲ್ಲಿ ನಮ್ಮ ಯುವಜನರು ಅನೇಕ ವಿಘಟನಕಾರಿ ಹಾಗೂ ಅಸಂಗತವಾದ ಕಾರ್ಯಗಳನ್ನು ಮಾಡುತ್ತಲಿದ್ದಾರೆ! ಯಾಕೆ? ಇದಕ್ಕೆ ಕಾರಣವೇನು? ಇಂಥ ಕಾರ್ಯಗಳಲ್ಲಿ ತೊಡಗಿರುವವರು ನಮ್ಮ ಅಶಿಕ್ಷಿತ ಯುವಕರೇ? ಆದರೆ ಅಶಿಕ್ಷಿತ ಯುವಕರಿಗೆ ಹೋಲಿಸಿದಲ್ಲಿ ಸುಶಿಕ್ಷಿತ ಯುವಕರು ದಿನದಿಂದ ದಿನಕ್ಕೆ ಇಂಥ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಲಿರುವುದು ಕಂಡುಬರುತ್ತದೆ. ಇವರು ನಮ್ಮ ದೇಶದ ಹೆಸರನ್ನು ಹಾಳು ಮಾಡುವುದಕ್ಕಾಗಿ ಷಡ್ಯಂತ್ರವನ್ನು ರಚಿಸುತ್ತಿದ್ದಾರೆ. ನಿಮಗೆಲ್ಲರಿಗೂ ಗೊತ್ತಿದ್ದಂತೆ ಹಿಂದಕ್ಕೆ ನಡೆದಂಥ ಅನೇಕ ಬಾಂಬು ಸ್ಫೋಟಗಳಾಗುವುದಕ್ಕೆ ನಮ್ಮ ಅದೆಷ್ಟು ಸುಶಿಕ್ಷಿತ ಯುವಕರು ಕಾರಣೀಭೂತರಾಗಿದ್ದಾರೋ!
ಮುಂದುವರೆಯುತ್ತದೆ……