ರಕ್ಷಾಬಂಧನ
*ಹೆಣ್ಣೀನ ಜನುಮಾಕ ಅಣ್ಣ ತಮ್ಮರು ಬೇಕ
ಬೆನ್ನ ಕಟ್ಟುವರು ಸಭೆಯೊಳಗೆ| ಸಾವಿರ
ಹೊನ್ನ ಕಟ್ಟುವರು ಉಡಿಯೊಳಗೆ||*
ನಾವು ಶ್ರಾವಣ ಮಾಸದ ಹುಣ್ಣಿಮೆ ಯಂದು ಆಚರಿಸುವ ಹಬ್ಬವಿದು. ಅಂದು ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಶುಭಾಶಯಗಳನ್ನು ಪಡೆಯುತ್ತಾರೆ. ಪರಸ್ಪರ ಭ್ರಾತೃತ್ವದ ಭಾವನೆಯನ್ನು ಗಟ್ಟಿಗೊಳಿಸುವ ಹಬ್ಬ ಇದಾಗಿದೆ. ಅಲ್ಲದೆ ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದಲೂ ಆಚರಿಸುತ್ತ ಬಂದಿದ್ದಾರೆ. ಮೊದಲು ಉತ್ತರ ಭಾರತದಲ್ಲಿ ಮಾತ್ರ ಪ್ರಚಲಿತವಾಗಿದ್ದ ಈ ‘ರಕ್ಷಾಬಂಧನ’ ಅಥವಾ ‘ರಾಖಿ’ ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ.
ಸೋದರರು ಕೊಡುವ ಕಾಣಿಕೆಗಾಗಿ ಹಂಬಲಿಸುವ, ಕಾಯುವ, ತುಡಿಯುವ ಕ್ಷಣವಿದು. ಆ ಕಾಣ್ಕೆಗೆ ಸಮಾನವಾದುದು ಈ ಪ್ರಪಂಚದಲ್ಲಿ ಮತ್ತೊಂದಿಲ್ಲ.
ಹಾಗೆ ನೋಡಿದರೆ ಒಂದೊಂದು ಕಾಣಿಕೆಯ ಹಿಂದೆಯೂ ಒಂದೊಂದು ಸವಿನೆನಪೇ ಇರುತ್ತದೆ. ಆ ಮಾತು ಬೇರೆ.
ಮೀಸೆ ಮೂಡುತ್ತಿದ್ದಂತೆ ಸೋದರಿಯರಿಗೆ ಅಪ್ಪನಾಗಲು ಹಂಬಲಿಸುವಂಥ ಸೋದರ…
ಅದೆಷ್ಟೊ ಹೆಸರುಗಳಲ್ಲಿ, ರೂಪಗಳಲ್ಲಿ, ಅದೆಷ್ಟೊ ಸಂಬಂಧಗಳು ನಮ್ಮ ಸುತ್ತುವರೆಯುತ್ತವೆ. ಕೆಲವು ಹುಟ್ಟಿನಿಂದಲೇ ಬರುತ್ತವೆ. ಕೆಲವು ಆನಂತರ ಹುಟ್ಟಿಕೊಳ್ಳುತ್ತವೆ. ಕೆಲವು ಬದಲಾಗದೇ ಉಳಿಯುತ್ತವೆ, ಕೆಲವು ಬದಲಾಗಿ ಹೋಗುತ್ತವೆ. ಬದಲಾಗಿಯೂ ಬೆರತುಕೊಂಡಿರುವುದು ಈ ಸಂಬಂಧ ಮಾತ್ರ. ಬೇರಾವ ಸಂಬಂಧವೂ ಈ ಅನುಬಂಧಕ್ಕೆ ಸಾಟಿಯಾಗದು.
ಈ ರೀತಿ ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಜೀವನದ ಕೆಲವು ನಾಜೂಕಿನ ಸಮಯಗಳಲ್ಲಿ ತನ್ನ ಸಹೋದರಿಯನ್ನು ರಕ್ಷಣೆ ಮಾಡಬೇಕೆಂಬುದು ರಕ್ಷಾಬಂಧನದ ಆಚರಣೆಯ ತಳಹದಿಯಾಗಿದೆ.
ಸೋದರರಿಲ್ಲದೆ ಪರಿತಪಿಸುವ ಕೆಲವು ಜೀವಗಳಿರುತ್ತವೆ. ಅಂಥ ಜೀವಗಳು ತಮ್ಮನ್ನು ಒಡಹುಟ್ಟಿದವರಿಗಿಂತಲೂ ಹೆಚ್ಚು ಪ್ರೀತಿಸುವವರಲ್ಲಿ ಸೋದರನನ್ನು ಕಾಣುವಾಗ ಈ ಕಥೆ ನನ್ನನ್ನು ಕಾಡುತ್ತದೆ..
ರಕ್ಷಾಬಂಧನ ಇಂದು ರಾಖಿ ಪೌರ್ಣಮಿ. ಎಲ್ಲ ಹೆಣ್ಣು ಮಕ್ಕಳು ತಮ್ಮ ತಮ್ಮ ಒಡಹುಟ್ಟಿದ ಅಥವಾ ತಾವು ಮನಸಾರೆ ಒಪ್ಪಿಕೊಂಡಂಥ ಸೋದರರಿಗೆ ರಕ್ಷಾಬಂಧನ ಮಾಡುವ ದಿನ. ಇಂದು ನಾನು ಅಂಥದೆ ಒಂದು ರಕ್ಷಾಬಂಧನದ ಮಹತ್ವವನ್ನು ಸಾರುವ ಲೋಕೋತ್ತರ ಪ್ರಸಂಗವನ್ನು ಹೇಳುತ್ತೇನೆ.
ನಾನು ದ್ರೌಪದಿ. ನನ್ನ ಅಣ್ಣ ದ್ರಷ್ಟದ್ಯುಮ್ನ ಹಾಗೂ ನಾನು ಇಬ್ಬರೂ ಜೊತೆಯಲ್ಲೇ ಹುಟ್ಟಿದವರು. ಜೊತೆಯಲ್ಲೇ ಬೆಳೆದವರು. ಆದರೂ ಅವನೊಂದಿಗೆ ನನ್ನ ಸಲುಗೆ ಅಷ್ಟಕ್ಕಷ್ಟೇ! ಅವನೊಂದಿಗೆ ನಾನು ಕುಂಟೆಬಿಲ್ಲೆ ಆಡಲಿಲ್ಲ.. ಜಗಳವಾಡಲಿಲ್ಲ, ಸಲುಗೆಯಿಂದ ಇರಲೂ ಇಲ್ಲ! ನಮ್ಮಿಬ್ಬರ ನಡುವೆ ಒಂದು ಅಂತರ ಯಾವಾಗಲೂ ಇದ್ದೆ ಇತ್ತು! ಅವ್ವ ಲಲ್ಲೆಗರೆದು ಇಬ್ಬರಿಗೂ ಜೊತೆಯಾಗಿಯೇ ಕೈತುತ್ತು ನೀಡಲಿಲ್ಲ. ನಮ್ಮಿಬ್ಬರಿಗೂ ತಾಯಿಯೇ ಇರಲಿಲ್ಲವಲ್ಲ! ಅಪ್ಪನೋ ನಮ್ಮ ಎಳೆಯ ಹೆಗಲ ಮೇಲೆ ಗುರುತರವಾದ ಸೇಡಿನ ಭಾರವನ್ನೇ ಹೊರೆಸಿದ್ದ. ಅವನು ನಮ್ಮನ್ನು ಪಡೆದದ್ದೇ ತನ್ನ ಸೇಡು ತೀರೀಸಿಕೊಳ್ಳುವುದಕ್ಕಾಗಿ!
ನನ್ನ ಮನಸ್ಸು ಸೋದರಪ್ರೀತಿಗಾಗಿ ತಹತಹಿಸುತ್ತಿದ್ದಾಗಲೇ ನನ್ನ ಜೀವನದಲ್ಲಿ ಅವನ ಪ್ರವೇಶವಾಗಿತ್ತು! ಅವನು ನನ್ನ ಪತಿಗಳ ಆತ್ಮಬಂಧು, ಸಖ… ಮೇಲಾಗಿ ಅತ್ತೆಯ ಅಣ್ಣನ ಮಗ. ನನಗೂ ಅವನು ಅಂತರಂಗದ ಸಖನೇ ಆಗಿಹೋಗಿದ್ದ ನಂತರದ ದಿನಗಳಲ್ಲಿ!
ಅಂದು ನಾನು ನನ್ನ ಪತಿ ಮಣಿಪುರಕ್ಕೆ ಹೋದಾಗ ತಂದಿದ್ದ ಬಂಗಾರದ ಗುಂಡು, ಮುತ್ತುಗಳ, ರತ್ನದ ಹರಳುಗಳ ಕುಸುರಿಕೆಲಸದ ರೇಷ್ಮೆ ಸೀರೆಯೊಂದರ ಗಳಿಗೆ ಮುರಿದಿದ್ದೆ. ಕನ್ನಡಿಯೆದುರು ನನ್ನ ಚೆಲುವನ್ನು ನೋಡಿಕೊಂಡು ಸಂತಸಿಸುತ್ತಲಿದ್ದೆ. ಆಗಲೇ ನಾರದರು ಬಂದು ಹೇಳಿದ್ದರು, ಆ ನನ್ನ ಸಖನ ಕೈಬೆರಳು ಕತ್ತರಿಸಿ ರಕ್ತ ಸುರಿಯುತ್ತಿದೆ ಎಂದು! ನನಗೆ ಏನೂ ಮಾಡಲು ತೋಚದಂತಾಯಿತು. ಎಡಗೈಯಲ್ಲಿ ಸೆರಗನ್ನು ಸೊಂಟಕ್ಕೆ ಜೋಡಿಸುತ್ತಲಿದ್ದ ನಾನು ಅದೇ ಕೈಯಿಂದ ಸೆರಗನ್ನು ಪರ್ರನೇ ಹರಿದಿದ್ದೆ. ಅದನ್ನು ಪನ್ನೀರಿನಲ್ಲಿ ತೋಯಿಸಿಕೊಂಡು ಆ ಸಖನತ್ತ ಓಡಿದ್ದೆ! “ಪ್ರಿಯಸಖಾ! ಏನು ಮಾಡಿಕೊಂಡೆ ನೀನು! ಅರಮನೆಯಲ್ಲಿ ಇಷ್ಟೊಂದು ದಾಸಿಯರಿರುವಾಗ ನೀನೇ ಈ ಕೆಲಸ ಮಾಡಬೇಕಿತ್ತೇ?” ಎನ್ನುತ್ತಾ ಅವನ ಬೆರಳಿಗೆ ಬಿಗಿಯಾಗಿ ಆ ತಣ್ಣನೆಯ ಬಟ್ಟೆ ಬಿಗಿದಿದ್ದೆ!
“ತಂಗಿ, ಈ ರಕ್ಷೆಯ ಋಣ ನನ್ನ ಮೇಲುಳಿಯಿತು!” ಎಂದು ಪ್ರೀತಿ, ಅಭಿಮಾನಗಳಿಂದ ನನ್ನೆಡೆಗೆ ನೋಡಿದ್ದ ಆ ನನ್ನ ಸಖ!
ಇಂದು! ಇಂದು ನನ್ನ ಮರ್ಯಾದೆ ಹೊರಟುಹೋಗುವ ಪ್ರಸಂಗ! ಪತಿಗಳೈವರೋ ಮೂರು ಲೋಕದ ಗಂಡರು! ಆದರೂ ಸತ್ಯವ್ರತದಲ್ಲಿ ಕಟ್ಟಿಸಿಕೊಂಡವರು! ಹಿರಿಯರೋ.. ದುಷ್ಟ ಶಕ್ತಿಗಳ ಎದುರು ಅಸಹಾಯಕರು! ಈ ಸಖ ನನ್ನ ರಕ್ಷಣೆಗೆ ಒದಗಿದ್ದ! ನನಗೆ ಅಕ್ಷಯ ವಸನವನ್ನಿತ್ತು ರಕ್ಷಾಬಂಧನದ ನಿಜವಾದ ಅರ್ಥ ತಿಳಿಸಿದ್ದ ಜಗಕೆ! ಅಣ್ಣಾ, ಈ ಜಗದಲ್ಲಿ ಎಲ್ಲಾ ಸೋದರಿಯರಿಗೂ ನಿನ್ನಂಥ ಸೋದರರೇ ದೊರೆಯಲಣ್ಣಾ!