ಈ ಪುಸ್ತಕದಲ್ಲಿನ ಪರಸ್ಪರ ಸಂಬಂಧಿತವಿರುವ ಎರಡು ಲೇಖನಗಳು ಒಟ್ಟುಗೂಡಿ ನಿರ್ಮಿಸುವ ವಾದಸರಣಿಯೇನಿದೆ, ಅದು ಕಳೆದ ಸುಮಾರು ಒಂದು ದಶಕದ ಅವಧಿಯಲ್ಲಿ ರೂಪುಗೊಂಡಂಥದು. ಈ ವಾದವು ಆಧುನಿಕಪೂರ್ವ ಕಾಲದ ಪಶ್ಚಿಮ ಏಶಿಯಾದ ಸಂಸ್ಕೃತಿ ಮತ್ತು ಅಧಿಕಾರಗಳ ಇತಿಹಾಸವನ್ನೂ ಹಾಗೂ ಆ ಇತಿಹಾಸದ ಮಹತ್ವವನ್ನೂ ಕುರಿತಾದದ್ದು. ನನ್ನ ಪ್ರಕಾರ, ಇಂಥ ಒಂದು ಮಹತ್ವವು ಈ ಇತಿಹಾಸಕ್ಕೇ ವಿಶಿಷ್ಟವಾದದ್ದು; ಜತೆಗೆ, ಇದು ಇವತ್ತು ಜಗತ್ತಿನ ಎಲ್ಲ ಭಾಗಗಳಲ್ಲೂ ಜನರು ಎದುರಿಸುತ್ತಿರುವ ಕೆಲವು ಬಿಕ್ಕಟ್ಟುಗಳನ್ನು ಕುರಿತು ಮರುಚಿಂತನೆಯೊಂದನ್ನು ನಡೆಸಲು ತುಂಬ ಉಪಯುಕ್ತ ಕೂಡಾ ಆಗಿ ಒದಗಿ ಬರಬಹುದಾದದ್ದು.
ಜಾಗತೀಕರಣಗೊಳ್ಳತೊಡಗಿರುವ ಈ ಲೋಕದ ಸಂಸ್ಕೃತಿ ಮತ್ತು ಏಕಕೇಂದ್ರಿತ ಪ್ರಾಬಲ್ಯಕ್ಕೆ ಸಿಲುಕಿರುವ ಈ ಜಗತ್ತಿನ ಅಧಿಕಾರ – ಇವುಗಳ ನಡುವಿನ ತರ್ಕವನ್ನು ಇವತ್ತು ತುಂಬ ಸರಳೀಕೃತಗೊಂಡ ದ್ವಂದ್ವದಲ್ಲಿ ಗ್ರಹಿಸಲಾಗುತ್ತಿದೆ. ಈ ತರ್ಕದ ಪ್ರಕಾರ – ಸಾಂಸ್ಕೃತಿಕವಾಗಿ, ಒಂದೇ ನೀವು ಜಾಗತೀಕರಣದ ಪ್ರಾಬಲ್ಯವನ್ನು ಪಡೆದಿರುವ ನಮ್ಮಂತೆ ಆಗಬೇಕು; ಅಥವಾ, ನೀವು ಏನೂ ಆಗದೆಯೇ ಉಳಿದು, ಅಂತಿಮವಾಗಿ ವರ್ಜಿತ ಜೀವನಕ್ರಮಗಳ ವಸ್ತು ಸಂಗ್ರಹಾಲಯವೆಂಬ ಗೋದಾಮಿಗೆ ತಳ್ಳಲ್ಪಡುವ ಅನಿವಾರ್ಯತೆಗೆ ಪಕ್ಕಾಗಬೇಕು. ಹಾಗೆಯೇ ರಾಜಕೀಯ ನೆಲೆಯಲ್ಲಿ, ನೀವು ಒಂದೇ ನಮ್ಮೊಂದಿಗೆ ಕೈಜೋಡಿಸಬೇಕು ಅಥವಾ ನಮ್ಮ ಶತ್ರುಗಳೆಂದು ಪರಿಗಣಿಸಲ್ಪಟ್ಟು ನಮ್ಮ ವಿರೋಧವನ್ನು ಎದುರಿಸಬೇಕು. ಈ ಹಾದಿಯಲ್ಲೂ ಕೂಡಾ ಅಂತಿಮವಾಗಿ – ಆದರೆ ಅನಿವಾರ್ಯವಾಗಿ – ನಿಮ್ಮ ಆಡಳಿತಕ್ರಮವು ಮಾರ್ಪಾಟುಗೊಳ್ಳುವುದು ಅನಿವಾರ್ಯ. ಇಂಥ ಒಂದು ತರ್ಕವೇನಿದೆ ಅದು, ಗೆದ್ದವನಲ್ಲಿ ಅಹಂಕಾರವನ್ನೂ ವಿಕೃತ ಆತ್ಮವಿಶ್ವಾಸವನ್ನೂ ಸೃಷ್ಟಿಸುವ ಜತೆಗೆ, ಸೋತವರಲ್ಲಿ ಪ್ರತಿರೋಧವನ್ನೂ ಮತ್ತು ಹಲವೊಮ್ಮೆ ಉತ್ಪ್ರೇಕ್ಷಿತ ಸ್ಥಳೀಯತೆಯ ಪ್ರಜ್ಞೆಯನ್ನೂ ಸೃಷ್ಟಿಸುತ್ತದೆ. ಆದ್ದರಿಂದ, ಈ ಮಾರ್ಗದಲ್ಲಿ, ಸಂಸ್ಕೃತಿ ಮತ್ತು ಅಧಿಕಾರದ ಇತಿಹಾಸವು, ಆರಂಭದಿಂದಲೇ ನಿರ್ಧಾರಿತವಾದ ಇಂಥ ಎರಡು ಅಂತಿಮ ಬಿಂದುಗಳ ಕಡೆಗೆ ನಡೆಯುವ ಬೆಳವಣಿಗೆ ಮಾತ್ರವೆಂದೂ, ಹಾಗೂ ಅಂಥ ಬೆಳವಣಿಗೆಯ ನಕ್ಷೆಯು ಅನಾವರಣಗೊಳ್ಳುತ್ತ ಹೋಗುವುದು ಅನಿವಾರ್ಯವೆಂದೂ ಭಾವಿಸಲಾಗುತ್ತದೆ. ಅಂದರೆ, ಬಂಡವಾಳಶಾಹಿ ಸಂಸ್ಕೃತಿಯು ಸಾರ್ವತ್ರೀಕರಣಗೊಳ್ಳುವುದೂ, ಹಾಗೂ, ಹಲವು ರಾಷ್ಟ್ರ​ಪ್ರಭುತ್ವಗಳು ಅಮೇರಿಕಾದ ಚಕ್ರಾಧಿಪತ್ಯಕ್ಕೆ ಅಡಿಯಾಳಾಗಿರುವ ರಾಜಕೀಯ ವ್ಯವಸ್ಥೆಯೊಂದು ನಿರ್ಮಾಣವಾಗುವುದೂ – ಇವೆರಡೂ, ಈ ತರ್ಕದ ಪ್ರಕಾರ ಸಹಜವಾದ ಬೆಳವಣಿಗೆ. ಈ ಬೆಳವಣಿಗೆಯು, ತುಂಬ ನಿರ್ದಿಷ್ಟವಾದ ಪ್ರೇರಣೆಗಳ ಕಾರಣದಿಂದ ಮತ್ತು ಅನುಕೂಲಕರ ಸನ್ನಿವೇಶಗಳಿಂದ ಉದ್ಭವಿಸಿದ ಸ್ಥಿತಿ ಎಂದು ಈ ತರ್ಕವು ತಿಳಿಯುವುದಿಲ್ಲ; ಬದಲು, ಇದು ಎಲ್ಲ ಇತಿಹಾಸವೂ ತನ್ನ ಒಡಲಲ್ಲೇ ಅವ್ಯಕ್ತವಾಗಿ ಇರಿಸಿಕೊಂಡಿರುವ ಒಂದು ಬೆಳವಣಿಗೆಯ ನಕ್ಷೆಯೆಂದೂ, ಆದ್ದರಿಂದ, ಇಂಥ ಸನ್ನಿವೇಶವು ಮನುಷ್ಯ ಆಯ್ಕೆಯಿಂದ ಬದಲಾಗಬಹುದಾದದ್ದೇ ಅಲ್ಲವೆಂದೂ ಈ ತರ್ಕವು ತಿಳಿಯುತ್ತದೆ. ಸಂಸ್ಕೃತಿ ಮತ್ತು ಅಧಿಕಾರಗಳ ಇತಿಹಾಸವನ್ನು ಕುರಿತಂಥ ಇಂಥ ಒಂದು ಯೋಚನಾಕ್ರಮವು – ಇದು ಇವತ್ತು ವ್ಯಾಪಕವಾಗಿ ಚಾಲ್ತಿಯಲ್ಲಿದೆ – ದ್ವಂದ್ವ ತರ್ಕದ ನೆಲೆಗಟ್ಟಿನ ಮೇಲೆ ನಿಂತು ಈ ಬೆಳವಣಿಗೆಯೆಲ್ಲವೂ ಪ್ರಾಕೃತಿಕ ಇತಿಹಾಸದಷ್ಟೇ ಸಹಜವೆಂದು ಭಾವಿಸುತ್ತದೆ. ದಕ್ಷಿಣ ಏಶಿಯಾದಾದ್ಯಂತ, ಕ್ರಿ.ಶ. 1000ದಿಂದ ತೊಡಗಿ ಬೇರೆಬೇರೆ ಕಾಲಾವಧಿಗಳಲ್ಲಿ – ಹೆಚ್ಚಿನ ಕಡೆ ಕ್ರಿ.ಶ. 1500ರ ಹೊತ್ತಿಗೆ – ಅಲ್ಲಿಯ ಬರಹಗಾರರು ಸಾಹಿತ್ಯಕ ಅಭಿವ್ಯಕ್ತಿಗೆ ಸ್ಥಳೀಯ ಭಾಷೆಗಳನ್ನು ಬಳಸಲು ಆರಂಭ ಮಾಡಿದರು; ಅಲ್ಲಿಂದ ಮುಂಚಿನ ಸುಮಾರು 1000 ವರ್ಷಗಳಲ್ಲಿ ಸಾಹಿತ್ಯಕವಾಗಿ ಪ್ರಾಬಲ್ಯವನ್ನು ಸ್ಥಾಪಿಸಿಕೊಂಡಿದ್ದ ಸ್ಥಳೀಯೇತರ ಭಾಷೆಗಳನ್ನು ಬಳಸುವ ತಮ್ಮ ರೂಢಿಯನ್ನು ಬಿಟ್ಟುಕೊಟ್ಟರು. ಇದು ಒಂದು ಅತ್ಯಂತ ಪ್ರಮುಖವಾದ ಸಾಂಸ್ಕೃತಿಕ ವಿದ್ಯಮಾನ; ಹಾಗೆಯೇ ಇದು ಆಯಾ ಪ್ರಾಂತ್ಯಗಳು ತಮ್ಮ ಎರಡು ಸಹಸ್ರಮಾನಗಳ ಇತಿಹಾಸದಲ್ಲಿ ಕಂಡ ಪ್ರಾತಿನಿಧಿಕ ಬದಲಾವಣೆಯೂ ಹೌದು. ಈ ಬದಲಾವಣೆಗಳು ನಡೆದದ್ದು ಎರಡು ಪ್ರಮುಖ ಮಹಾಪಲ್ಲಟಗಳ ನಡುವೆ – ಮೊದಲನೆಯದು, ಮೊದಲ ಸಹಸ್ರಮಾನದ ಆರಂಭದಲ್ಲಿ ಒಂದು ವಿಶ್ವವ್ಯವಸ್ಥೆ ನಿರ್ಮಿತವಾದದ್ದಾದರೆ, ಇನ್ನೊಂದು ಅದಕ್ಕಿಂತ ಭಿನ್ನವಾದ ಇನ್ನೊಂದು ವಿಶ್ವವ್ಯವಸ್ಥೆಯ ನಿರ್ಮಿತಿಯ ಪ್ರಕ್ರಿಯೆ; ಅದು, ಎರಡನೆಯ ಸಹಸ್ರಮಾನದ ತುದಿಗೆ ವಸಾಹತೀಕರಣ ಮತ್ತು ಜಾಗತೀಕರಣಗಳ ಮೂಲಕ ರೂಪುಗೊಂಡಂಥದು.

Additional information

Language

Kannada

Publisher

Translator

Akshara K V

Reviews

There are no reviews yet.

Only logged in customers who have purchased this product may leave a review.