ಇದು ಅಶೋಕ ಹೆಗಡೆ ಅವರ ಮೂರನೆಯ ಕಥಾಸಂಕಲನ, ಈಗ ಒಂಭತ್ತು ತಿಂಗಳಿಂದ ಬಿದ್ದಲ್ಲಿಯೆ ಬಿದ್ದಿರುವ ಪಾಂಡುರಂಗ ಹೊರಗೆ ಬಿರಿದ ಒಂದು ಕೊಲ್ಮಿಂಚು, ಅದರ ಹಿಂದೆಯೆ ನಭ ಬಿರಿದ ಸಿಡಿಲಿನ ಸಪ್ಪಳ ಕೇಳಿದಂತೆ ನಡುಮನೆಯಿಂದಲೇ ‘ಯಾರಾದರೂ ಇದ್ದೀರೇನೇ? ಈ ಕಿಟಕಿಯ ಬಾಗಿಲುಗಳನ್ನ ಮುಚ್ಚಿ. ಈಗ ಬೀಳುವ ಮಳೆ ನನ್ನ ಹಾಸಿಗೆಯನ್ನ ಒದ್ದೆ ಮಾಡುತ್ತದೆ’ ಎಂದು ಕೂಗಿಕೊಂಡ. ನಡುಮನೆಯಲ್ಲಿ ಅವನ ಧ್ವನಿ ಅವನಿಗೇ ಪ್ರತಿಧ್ವನಿಸಿತೆ ಹೊರತು ತಿರುಗಿ ಯಾರೂ ಉತ್ತರಿಸಲಿಲ್ಲ. ಪಾಂಡುರಂಗ ಯಾರಿಗೂ ತನ್ನ ಕೂಗು ಕೇಳುವುದು ಸಾಧ್ಯ ಇಲ್ಲ ಅನ್ನಿಸಿದೊಡನೆ ‘ಎಲ್ಲಿ ಹಾಳಾಗಿ ಹೋಗಿದ್ದೀರೋ ಎಲ್ಲರೂ’ ಎಂದು ಹೊರಗೆ ಬೀಳುವ ಮಳೆಯ ಸಪ್ಪಳವನ್ನು ಕೇಳುತ್ತ ಗೊಣಗಿಕೊಂಡ.
‘ಇನ್ನು ಈ ಹಿಡಿದ ಮಳೆ ಬಿಟ್ಟಹಾಗೆ’. ಗುಳಿಬಿದ್ದ ಗಲ್ಲದ ಕಳೆಗೆಟ್ಟ ಮುಖದ ತಾಮ್ರದ ತಲೆಯ ಅಜ್ಜ ತನ್ನ ಬಿಳಿಗಡ್ಡ ಮೀಸೆಗಳ ಒಡಕು ಅಂಗೈಯಲ್ಲಿ ಸವರಿಕೊಳ್ಳುತ್ತ ತಣ್ಣಗೆ ಆದರೆ ಅಷ್ಟೆ ಗಟ್ಟಿ ಸ್ವರಗಳಲ್ಲಿ ನುಡಿದ. ಕಟ್ಟು ಮುರಿದ ಚಾಳೀಸಿನೊಳಗಿಂದ ಮಬ್ಬುಗಣ್ಣುಗಳ ಪಾಪೆ ಅಗಲಿಸಿ, ಗುಡ್ಡೆಗಳ ಹೊರಳಿಸಿ ಮಬ್ಬು ಕಣ್ಣಲ್ಲಿ ಮೋಡ ದಟ್ಟೈಸಿದುದರಿಂದ, ಕತ್ತಲು ಆವರಿಸಿಕೊಂಡ ಅಂಗಳವನ್ನು, ಅದು ಒಂದು ಶಾಸ್ತ್ರದ ತಿಥಿ ನೋಡುವ ಪಂಚಾಂಗದಂತೆ ಎನ್ನುವಷ್ಟರ ಮಟ್ಟಿಗಿನ ಆಸಕ್ತಿಯಿಂದ ನೋಡುತ್ತ, ಶಿವರಾಮಜ್ಜ ಸ್ವಲ್ಪ ಗಟ್ಟಿಯಾಗಿಯೇ ನುಡಿದ. ಮನೆಯ ಒಳಗಿನ ಯಾರಿಗಾದರೂ ಅದು ಕೇಳಲಿ ಬಿಡಲಿ ಹಾಗೆ ಕೇಳಿ ಅವರು ಅದಕ್ಕೆ ಏನನ್ನಾದರೂ ಪ್ರತಿಕ್ರಿಯಿಸಲಿ ಬಿಡಲಿ ಹೇಳುವುದನ್ನು ಮತ್ತೊಂದೆರಡು ಬಾರಿಯಾದರೂ ಹೇಳಬೇಕೆನ್ನುವ ಹಠ ತೊಟ್ಟವನಂತೆ ಹೇಳಿದ್ದನ್ನೆ ಮತ್ತೆರಡು ಬಾರಿ ಹೇಳಿದ.
ಶಿವರಾಮಜ್ಜ ಗಾಳಿ ನಿರೋಧಕ ಅಂಗವಸ್ತ್ರವನ್ನು ಕಿವಿಗೆ ಬಿಗಿಯುತ್ತಾ ಬೋಳು ತಲೆ ಮೇಲೆ ಹಾದ ರಕ್ತನಾಳಗಳನ್ನು ಇಷ್ಟಿಷ್ಟೆಯಾಗಿ ಉಬ್ಬಿಸುತ್ತಾ ಹೊರಗಿನ ಬೆಳಗಿಗೆ ಮುಖನೆಟ್ಟ. ಬರುವ ಶ್ರಾವಣದ ಮಳೆ ತರುವ ಹಿತಕ್ಕೆ ಬೆಚ್ಚಗಾಗುವ ಬಯಕೆಗೆ ಪಕ್ಕಾಗಿ ಬಚ್ಚಲೊಲೆಯ ಮುಂದೆ ನಿಟ್ಟುಸಿರು ಸೂಸುತ್ತ ಕೆಂಪು ಜ್ವಾಲೆಗಳ ಝಳಕಕ್ಕೆ ಅಡ್ಡವಿಟ್ಟ ಕೈಗಳನ್ನ ತದೇಕ ದೃಷ್ಠಿಯಿಂದ ನೋಡುತ್ತ ಕುಳಿತುಕೊಂಡ ತನ್ನ ಸೊಸೆ ರುಕ್ಮಿಣಿಗೆ ತಾನು ಹೇಳಿದ್ದು ಕೇಳಿತೋ ಇಲ್ಲವೋ ಎನ್ನುವ ಸಂದೇಹದಲ್ಲಿ ‘ಇನ್ನೂ ಕಾಯುವದೇ ಈ ಆಶಾಡದ ಮಳೆ ನಿಲ್ಲುವದನ್ನ, ರುಕ್ಮಿಣಿ, ಇನ್ನೂ ಇದು ಮುಗಿಯುವಂತೆ ಕಾಣುವದಿಲ್ಲ’ ಎಂದು ಮತ್ತೆ ಕೂಗಿದ.
ರುಕ್ಮಿಣಿಗೆ ಅಜ್ಜನ ಈ ಪರಿ ಹೊಸದಲ್ಲ. ದರೆಯ ಹಿಂದಿನ ಮೋಡ ಮಳೆ ತುಂಬಿ ಅಂಗಳದ ಮೇಲೆ ಬಂದು ನಿಂತಾಗಲೇ ಅಜ್ಜ ಕವಳದ ಬಟ್ಟಲುಗಳನ್ನು ಹುಡುಕಿ ಅಡಿಕೆ ತುಂಬಿದ್ದ. ಮೇಲಿನ ಮನೆಯ ಶ್ರೀಕಾಂತನಿಗೆ ಹೇಳಿ ಪೇಟೆಯಿಂದ ಒಂದು ಅರ್ಧ ಕೆ.ಜಿ ಸುಣ್ಣ, ಒಂದು ಹತ್ತು ಜರ‍್ದಾ ಡಬ್ಬಿ, ಮೂರು ಕಟ್ಟು ಎಲೆ ತರಿಸಿದಾಗಲೇ ರುಕ್ಮಿಣಿಗೆ ಮಳೆ ಹಿಡಿಯುವುದು ಖಾತ್ರಿಯಾದಂತೆ ಇತ್ತು. ಅಜ್ಜ ಹಸಿ ಅಡಿಕೆಯ ಚೂರು ನೆತ್ತಿಗೇರಿ ಬಾಯಿ ತುಂಬ ತುಂಬಿಕೊಂಡ ತಾಂಬೂಲದ ತಂಬಾಕು, ಎಲೆ, ಚೂರ್ಣ, ಮೇಲೆ ಹೇಳಿಯೂ ಹೇಳದಂತಿದ್ದ ಎರಡು ಕಾಯಿ ಚೂರನ್ನು ಮೆಲ್ಲುತ್ತಾ ಹಿಡಿದ ಮಳೆ ಇನ್ನು ಯಾವತ್ತಿಗಾದರೂ ಮುಗಿಯಲಿ ಎಂದು ತನಗೆ ಯಾವ ಅವಸರವೂ ಇರದಂತೆ ಜಗುಲಿಯ ಮೇಲೆ ಕುಳಿತುಕೊಂಡಿದ್ದ.
ಹೊರಗೆ ಜಡಿ ಹಿಡಿದ ಮಳೆ ಎಲ್ಲವನ್ನೂ ತೊಳೆಯುವಂತೆ ಸುರಿಯುತ್ತಿತ್ತು. ರುಕ್ಮಿಣಿಗೆ ಅಜ್ಜ ತನಗಾಗಿಯೇ ಹೇಳಿದ್ದು ಎಂದು ಅನ್ನಿಸಿದರೂ ಉತ್ತರಿಸಲು ಏನೋ ಆಲಸ್ಯ. ಒಲೆಯ ಮುಂದೆ ಬೆಂಕಿಗೆ ಕೈ ಒಡ್ಡಿ ಕುಳಿತ ಅವಳೊಳಗೆ ಬೆಂಕಿಯ ಕಾವು ನಿಧಾನವಾಗಿ ಹೊರಗಿನ ತಂಡಿಯನ್ನು ಮೀರಿ ಇಳಿದಂತಹ ಭಾವ. ಬೀಳುವ ಮಳೆಗೆ ಹೊರಗಿನ ಸಪ್ಪಳವೆಲ್ಲವೂ ಉಡುಗಿ ಕೇವಲ ಮಳೆಯ ರಭಸ ಮಾತ್ರ ಉಳಿಯುವ ಈ ಆಷಾಢದ ದಿನಗಳನ್ನು ಅದು ಮುಗಿಯುವವರೆಗೆ ಕಾಯುವದೇ ಒಂದು ಕೆಲಸ. ಬೀಳುವ ಮಳೆ ನಿಲ್ಲುವದನ್ನು ಕಾಯಬೇಕು. ಮನೆಗೆ ಮತ್ತೆ ದೀಪ ಬರುವದನ್ನು ಕಾಯಬೇಕು. ಬರುವ ಬಿಸಿಲಿಗಾಗಿ ಕಾಯಬೇಕು. ಜೊತೆಗೆ ಪಾಂಡುರಂಗ ಎದ್ದು ಓಡಾಡುವುದನ್ನೂ ಕಾಯಬೇಕು. ಒಟ್ಟಾರೆ ಕಾಯುತ್ತ, ಕಾಯುವುದನ್ನು ಕಾಯಬೇಕು, ಯಾವ ಅವಸರವೂ ಇಲ್ಲದಂತೆ.
ಹೊರಗೆ ದರೆಯ ಮೇಲಿಂದ ಒಂದು ಮರ ಭಾರಿ ಸಪ್ಪಳದ ಜೊತೆ ನೆಲ ಕಚ್ಚಿತು. ಹಿಂದೆಯೇ ಎದ್ದ ಗಾಳಿ ನೆಲದ ಕಾಲು ಬಿಡಿಸಿದಂತೆ ಎಲ್ಲವನ್ನೂ ಸುಳಿ ಸುಳಿದು ಮೇಲಕ್ಕೆತ್ತಿತು. ದೂರದ ದರೆಯ ಮೇಲಿದ್ದ ವಿದ್ಯುತ್ ವಾಹಕದ ತಂತಿಗಳು ಜೋರು ಗಾಳಿಗೆ ಅಲ್ಲಾಡಿ ಒಂದಕ್ಕೊಂದು ತಾಗಿ ಚಟ್ಟೆಂದು ಬೆಂಕಿ ಹತ್ತಿಸಿಕೊಂಡು ಉರಿದವು. ಅದರ ಹಿಂದೆಯೇ ಟ್ರಾನ್ಸ್ ಫಾರಂ ಇರಬೇಕು ದಡೀರ್ ಎಂದು ಸಿಡಿದಿದ್ದು, ಹಿಂದೆಯೇ ಅರ್ಧ ಮಿನುಗುತ್ತಿದ್ದ ದೀಪ ಆರಿ ಇಡಿಯ ಊರು ಅರ್ಧ ಕತ್ತಲಲ್ಲಿ ಅರ್ಧ ಬೆಳಕಿನಲ್ಲಿ ಅದ್ದಿಕೊಂಡಿತು.
Reviews
There are no reviews yet.