ಕೋ.ಲ. ಕಾರಂತ, ಸೇಡಿಯಾಪು ಕೃಷ್ಣಭಟ್ಟ, ಬಿ.ವಿ. ಕಾರಂತ ಅವರಂಥ ಹಿರಿಯ ಚೇತನಗಳ ಮಾತುಗಳ ಲಿಪಿಕಾರ್ತಿಯಾಗಿ ಆಡುಮಾತಿನ ಜೀವನ ವೃತ್ತಾಂತಕ್ಕೆ ಬರಹದಲ್ಲಿ ಆಕಾರ ಮೂಡಿಸಿ ಮಹತ್ತ್ವದ ಸಾಂಸ್ಕ ತಿಕ ದಾಖಲೆಗಳನ್ನು ಕನ್ನಡ ವಾಙ್ಮಯಕ್ಕೆ ಸೇರಿಸಿರುವ ವೈದೇಹಿ ಈಗ ಈ ಸರಣಿಗೆ ಮತ್ತೊಂದು ಅಮೂಲ್ಯವಾದ ಕೊಡುಗೆಯನ್ನು ಕೂಡಿಸಿದ್ದಾರೆ. ಪ್ರಸ್ತುತ
ಸಂಪುಟವು ಇನ್ನೂ ಒಂದು ಕಾರಣಕ್ಕಾಗಿ ಮುಖ್ಯವಾಗುತ್ತದೆ. ಈ ಹೊತ್ತಿನ ಓದುಗರಿಗೆ ಅಪರಿಚಿತವೇ ಆಗಿದ್ದ ಹಳೆ ತಲೆಮಾರಿನ ಪ್ರತಿಭಾವಂತ ಬರಹಗಾರ್ತಿಯೊಬ್ಬರ ಜೀವನ ಸಾಧನೆಗಳನ್ನು ತೆರೆದು ತೋರಿಸುವ ಮೂಲಕ ಕನ್ನಡದ ಕಥನದಲ್ಲಿ ಕಣ್ಮರೆಯಾಗಿದ್ದ ಕೊಂಡಿಯೊಂದನ್ನು ಈ ಕೃತಿಯು ಸಮಕಾಲೀನ ಸಾಹಿತ್ಯ ಸಂಸ್ಕ ತಿಗೆ ಜೋಡಿಸುತ್ತದೆ. ಮಾತ್ರವಲ್ಲ, ಈ ಪುಸ್ತಕದಲ್ಲಿ ವೈದೇಹಿಯವರು ಸರಸ್ವತಿಬಾಯಿ ರಾಜವಾಡೆಯವರ ಭೂತಕಾಲದ ವೃತ್ತಾಂತಗಳಿಗೆ ಕಿವಿಯಾಗಿ, ಮತ್ತು ಅವರ ಕೊನೆಗಾಲದ ವರ್ತಮಾನದ ಜೀವನಕ್ರಮಕ್ಕೆ ಪ್ರತ್ಯಕ್ಷ ಸಾಕ್ಷಿಯೂ ಆಗಿ, ಇವೆರಡರ ದ್ವಂದ್ವಾತ್ಮಕ ಗ್ರಹಿಕೆಯಲ್ಲಿ ಪ್ರಸ್ತುತ ಕಥನವನ್ನು ಕಟ್ಟಿದ್ದಾರೆ. ರಾಗದಿಂದ ವಿರಾಗದೆಡೆಗೆ ಸಾಗಿದ ರಾಜವಾಡೆಯವರ ಬದುಕಿನ ನಡೆಯು ಆಯಾ ಘಟ್ಟಗಳಲ್ಲಿ ನಡೆಸಿದ ವ್ಯಾಪಾರವಿಸ್ಮಯಗಳನ್ನು ಸೂಕ್ಷ ವಾಗಿ ಗ್ರಹಿಸುವ ಮೂಲಕ ಎರಡು ಬಗೆಯ ಕೆಲಸಗಳನ್ನು ವೈದೇಹಿ ಏಕಕಾಲಕ್ಕೆ ಮಾಡಿದ್ದಾರೆ — ಒಂದು, ಆ ಕಾಲದ ಮಹಿಳೆಯರ ಸ್ಥಿತಿಗತಿಗಳ ಸಂವೇದನಾಶೀಲ ದಾಖಲಾತಿ ಮತ್ತು ಆ ಒತ್ತಡಗಳ ನಡುವೆಯೇ ರೂಪುಗೊಂಡ ಅನನ್ಯವ್ಯಕ್ತಿತ್ವವೊಂದರ ಅವಲೋಕನ; ಇನ್ನೊಂದು, ಆ ಪ್ರಕ್ರಿಯೆಯ ಮೂಲಕ ಅರಳಿದ ಅಭಿವ್ಯಕ್ತಿ ಮಾದರಿಯ ಅನಾವರಣ.
ವಿಶಿಷ್ಟ ರೀತಿಯ ಜೀವನಕಥನವೂ ಮಹತ್ತ್ವದ ಐತಿಹಾಸಿಕ ದಾಖಲೆಯೂ ಆಗಿರುವ ಈ ಪುಸ್ತಕವು ಆ ಕಾಲದ ಪ್ರಮುಖ ವ್ಯಕ್ತಿತ್ವವೊಂದರ ಸಾಧನೆಯನ್ನೂ ಈ ಕಾಲದ ಮುಖ್ಯ ಬರಹಗಾರ್ತಿಯೊಬ್ಬರ ಸೃಜನಶೀಲ ಪ್ರತಿಸ್ಪಂದನೆಯನ್ನೂ ಒಟ್ಟಯಿಸಿ ಕೊಡುವ ಮೂಲಕ ಈಚೆಗೆ ಬಂದ ಇಂಥ ಕಥನಗಳಲ್ಲೇ ಗಣನೀಯವಾಗಿ ಎದ್ದು ನಿಲ್ಲುತ್ತದೆ.
Reviews
There are no reviews yet.