ಕಥೆಯೊಂದು ಶುರುವಾಗಲು ಅಥವ ಅಂತ್ಯವಾಗಲು ಹಲವು ರೀತಿಗಳಿರುತ್ತವೆ. ಹಲವು ಕಾರಣಗಳಿರುತ್ತವೆ. ಹಲವು ನೆನಪುಗಳು, ವಾಸ್ತವಗಳು, ಕಲ್ಪನೆಗಳು ಕಥೆಯೊಂದರಲ್ಲಿ ಅಡಕವಾಗಿರುತ್ತವೆ. ಸುಪ್ತ ಮನಸ್ಸಿನಲ್ಲಡಗಿರಬಹುದಾದ ಈ ಭಾವನೆಗಳೇ ನನ್ನನ್ನು ಈ ಕಾದಂಬರಿ ಬರೆಯಲು ಪ್ರೇರೇಪಿಸಿತೇನೋ…ಹುಣಸರಿನ ಪರಿಸರವೂ ಒಮ್ಮೊಮ್ಮೆ ಮಳೆ ಬಂದು ಮಡಿಕೇರಿಯಂತಾದಾಗ ಏನನ್ನಾದರೂ ಬರೆಯಬೇಕೆನ್ನಿಸುತಿತ್ತು. ಹಾಗೆ ಬರೆಯಲು ಕೂತು ಮೂರು ಭಾಗಗಳೊಳಗೊಂಡ ಈ ಕಾದಂಬರಿ ಹುಟ್ಟಿಕೊಂಡ ಬಗೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ.
ಮೊದಲ ಭಾಗವನ್ನು ಮಳೆಗಾಲದಲ್ಲಿ ಬರೆದು ಮುಗಿಸಿದೆ. ವಿಚಿತ್ರವೇನೆಂದರೆ, ಹೊರಗೆ ಮಳೆಯಾಗುತ್ತಿದ್ದರೆ ಮಾತ್ರ ಕಥೆಯ ಕುರಿತು ನೂರಾರು ಯೋಚನೆಗಳು ಸುಳಿದು ಬರೆಯತೊಡಗುತ್ತಿದ್ದೆ. ಹೊರಗೆ ಮಳೆಯ ಸದ್ದು ನಿಂತರೆ, ಅಥವ ಬಿಸಿಲ ದಿನವಾದರೆ ಬರೆಯಲು ಒಂದಕ್ಷರವೂ ಹೊಳೆಯುತ್ತಿರಲಿಲ್ಲ. ಹಾಗಾಗಿ ಮೊದಲ ಭಾಗ ಮಳೆಯೊಂದಿಗೆ, ಪ್ರಕೃತಿಯೊಂದಿಗೆ ಬೆಸೆದುಕೊಂಡಿರಬಹುದೇನೋ..!
ಇನ್ನು ಎರಡನೇ ಭಾಗವನ್ನು ಬರೆಯಲು ನಾನೇ ಮೀನು ಹಿಡಿಯುವ ಮರಕಲನಾಗಿ ಕಡಲಿಗಿಳಿಯಬೇಕಾಯಿತು. ಮಂಗಳೂರಿನ ಬೈಕಂಪಾಡಿಯ ಮರಕಲರನ್ನು ಭೇಟಿ ಮಾಡಿ ನಾನೂ ಮೀನು ಹಿಡಿಯಲು ಬರುತ್ತೇನೆಂದಾಗ ಅವರಿಗೆಲ್ಲ ತಮಾಷೆ ಎನಿಸಿ ನಕ್ಕರು. ಆದರೆ ನನ್ನ ಉದ್ದೇಶ ತಿಳಿಸಿದ ನಂತರ ಮರುದಿನ ಮುಂಜಾನೆ ನಾಕುವರೆಗೆ ಬನ್ನಿ.. ನಾವು ಮೀನು ಹಿಡಿಯಲು ಕಡಲಿಗಿಳಿಯುತ್ತೇವೆ. ಹಾಗೆಯೇ ಒಂದು ನಿಂಬೆಹಣ್ಣನ್ನು ತನ್ನಿ.. ಕಡಲಲ್ಲಿ ತಲೆಸುತ್ತಿ ವಾಂತಿಯಾಗುತ್ತದೆ ಎಂದರು.
ಹಾಗಾಗಿ ಪುಸ್ತಕ, ಕ್ಯಾಮರಾ ಜೊತೆ ಸೀ ಸಿಕ್ ನೆಸ್ ಆಗದಿರಲು ಒಂದು ನಿಂಬೆಹಣ್ಣನ್ನೂ ಬ್ಯಾಗಲ್ಲಿ ತುರುಕಿ ಮರುದಿನ ಮುಂಜಾನೆ ಅವರೊಂದಿಗೆ ಕಡಲಿಗಿಳಿದೆ. ನಾಲ್ಕೈದು ಮರಕಲರಿದ್ದ ಸಣ್ಣ ಓಡ ಅದು. ನನ್ನನ್ನು ದೋಣಿಯ ನಡುಭಾಗದಲ್ಲಿ ಭದ್ರವಾಗಿ ಕೂರಿಸಿ ದೋಣಿಯನ್ನು ಕಡಲಿಗಿಳಿಸಿದರು. ಅಲೆಗಳನ್ನೇರಿ ಜಿಗಿಯುತ್ತ ಸಾಗುವ ಆ ದೋಣಿಯಲ್ಲಿ ನನ್ನನ್ನವರು ಮಕ್ಕಳಂತೆ ನೋಡಿಕೊಳ್ಳಬೇಕಾಯಿತು.
ದೋಣಿ ಅಲೆಗಳ ಸವಾರಿ ದಾಟಿ ಕೊಂಚ ಶಾಂತವಾದ ಸಾಗರಕ್ಕೆ ತಲುಪಿದ ನಂತರ ಪ್ರಪಂಚವೇ ಬದಲಾಯ್ತು. ದೋಣಿಯನ್ನು ಗಟ್ಟಿಯಾಗಿ ಹಿಡಿದು ಕೂತಿದ್ದ ನನ್ನನ್ನು ಮರಕಲರು ನಿಂತುಕೊಳ್ಳಿ.. ಏನೂ ಆಗಲ್ಲ..
ಎಂದಾಗ ನಿಂತುಕೊಂಡೆ. ಆದರೆ ನನ್ನ ಮೈ ಹೆಂಡ ಕುಡಿದವರಂತೆ ವಾಲಾಡುತ್ತಿತ್ತು. ಸೂರ್ಯೋದಯವೇ ಆಗಿರದ ಆ ಕತ್ತಲಲ್ಲಿ ಕಡಲೂ ಕಾಣುತ್ತಿಲ್ಲ.. ಮರಕಲರೆಲ್ಲ ಕಪ್ಪು ಆಕೃತಿಗಳಂತೆ ಕಾಣುತ್ತಿದ್ದರು. ಎತ್ತ ಕಡಲು? ಎತ್ತ ಭೂಮಿ? ಏನೂ ಗೊತ್ತಾಗದೆ ನೀರಿಗೆ ಬೀಳುವ ಭಯದಲ್ಲಿ ಮತ್ತೆ ದೋಣಿಯನ್ನು ಭದ್ರವಾಗಿ ಹಿಡಿದು ಕೂತೆ. ಆರಾಮಾಗಿ ನಿಂತಿದ್ದ ಮರಕಲರೆಲ್ಲ ನನ್ನ ಕಂಡು ನಕ್ಕರು. ನಾನೋದಿದ ಮೈಸೂರು ವಿಶ್ವವಿದ್ಯಾಲಯದಲ್ಲಿ ವಾಲಾಡುವ ದೋಣಿಯಲ್ಲಿ ನಿಂತುಕೊಳ್ಳುವುದನ್ನು ಹೇಳಿಕೊಡಲಿಲ್ಲ ಎಂದು ಅವರಿಗೆ ಹೇಗೆ ತಾನೆ ಅರ್ಥ ಮಾಡಿಸಲಿ!
ಆದರೆ ಅದನ್ನು ಅವರೇ ಅರ್ಥ ಮಾಡಿಕೊಂಡರೇನೋ.. ದೋಣಿಗೆ ಬಿಗಿದಿದ್ದ ಒಂದು ಹಗ್ಗವನ್ನು ನನ್ನ ಕೈಗೆ ಕೊಟ್ಟು ಇದನ್ನು ಹಿಡಿದು ನಿಲ್ಲಿ ಎಂದರು. ನಂತರ ಆ ಹಗ್ಗವನ್ನು ಹಿಡಿದು ನಿರ್ಲಿಪ್ತನಾಗಿ ಮಬ್ಬುಗತ್ತಲಲ್ಲಿ ಕಾಣುತ್ತಿದ್ದ ಕಡಲನ್ನೇ ನೋಡುತ್ತ ನಿಂತೆ. ಜಗತ್ತಿನ ಯಾವ ಸದ್ದೂ, ಜಂಜಾಟವೂ, ಸಂಪರ್ಕವೂ, ಮೊಬೈಲ್ ನೆಟ್ವರ್ಕೂ ಅಲ್ಲಿರಲಿಲ್ಲ. ಕೇವಲ ಕಡಲು, ದೋಣಿಯಲ್ಲಿದ್ದ ಮರಕಲರು, ಕಿವಿಯಲ್ಲಿ ಗುಟ್ಟು ಹೇಳದ ತಂಗಾಳಿ.
-40%
About this Ebook
Information
Additional information
Category | |
---|---|
Author | |
Publisher | |
Book Format | Ebook |
Pages | 200 |
Language | Kannada |
Year Published | 2016 |
Reviews
Only logged in customers who have purchased this product may leave a review.
Reviews
There are no reviews yet.