ಮೊದಲ ನಾಟಕ ‘ಏನಾಗಲಿ ನಾನು?’ ಆದಿಯಿಂದ ಅಂತ್ಯದವರೆಗೆ ಪೂರಾ ಕಾಲ್ಪನಿಕ ವಸ್ತು ವಿಚಾರವನ್ನು ಒಳಗೊಂಡಿದ್ದಾಗಿದೆ. ಈ ನಾಟಕದಲ್ಲಿ ಮುಗ್ಧ ಮನಸ್ಸಿನ ಮಕ್ಕಳು ನೈಜ ಬದುಕಿಗೆ ಹೊಂದಿಕೊಂಡು ವಿದ್ಯಾವಂತರಾಗಿ ತಮ್ಮ ಭವಿಷ್ಯದ ಬದುಕನ್ನು ಅರ್ಥಪೂರ್ಣವೆಂಬಂತೆ ರೂಪಿಸಿಕೊಳ್ಳಬೇಕೆಂಬ ಸಂದೇಶವಿದೆ.
ಎರಡನೆಯ ನಾಟಕ `ಕರಿಶಿಲೆ ಬಿಳಿಯಾಗಬಹುದು’ ಒಬ್ಬ ತಂದೆ ತನ್ನ ಪೆದ್ದು ಮಗನನ್ನು ಬಲು ಬುದ್ಧಿವಂತನನ್ನಾಗಿಸಿ, ಪರೀಕ್ಷೆಯಲ್ಲಿ 90%ಟಿಗೂ ಹೆಚ್ಚು ಅಂಕಗಳನ್ನು ಗಳಿಸಿ ಹೆತ್ತವರಿಗೆ ಕೀರ್ತಿ ತರಬೇಕೆಂದು ಆಶಿಸಿ, ಈ ನಿಟ್ಟಿನಲ್ಲಿ ತನ್ನ ಮೊದ್ದು ಮಗನನ್ನು ತೀಡಲು ಒಬ್ಬ ಉಪಾಧ್ಯಾಯನನ್ನು ನೇಮಿಸಿ ಏನೆಲ್ಲ ಮಾಡಿದರೂ ಪ್ರಯೋಜನವಾಗುವುದಿಲ್ಲ. ನಂತರ ತಾನೇ ತನ್ನ ಮಗನಿಗೆ ಪಾಠ ಹೇಳಿ ತಿದ್ದುವ ಪ್ರಯತ್ನ ಮಾಡುತ್ತಾನೆ. ಪ್ರಯೋಜನವಾಗುವುದಿಲ್ಲ. ತಂದೆಗಾಗುವ ನಿರಾಶೆ ಹೇಳತೀರದು. ಏತನ್ಮಧ್ಯೆ ಪಕ್ಕದ ಮನೆಯ ಹುಡುಗನೊಬ್ಬ ಅವನೂ ಹೆಚ್ಚು ಅಂಕಗಳನ್ನು ಪಡೆಯಲಾಗದೆ, ಬೇಸತ್ತು ತಂದೆಯ ಬೈಗುಳವನ್ನು ತಾಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಪಕ್ಕದ ಮನೆಯಲ್ಲಿದ್ದ ಪೆದ್ದು ಹುಡುಗನೇ ಅವನನ್ನು ಕಾಪಾಡುತ್ತಾನೆ.
ಹೀಗಾಗಿ ಬದುಕಿನಲ್ಲಿ ಮಕ್ಕಳು ಬಾಲಕರಾಗಿದ್ದಾಗ ಓದುವ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ಉತ್ತಮ ರೀತಿಯಲ್ಲಿ ತೇರ್ಗಡೆಯಾಗುವುದೇ, ಅತಿ ಮುಖ್ಯವಲ್ಲ. ಓದುವುದರ ಜೊತೆಜೊತೆಗೆ ಮಾನವೀಯ ಗುಣಗಳನ್ನೂ ಮುಖ್ಯವಾಗಿ ಬೆಳೆಸಿಕೊಳ್ಳಬೇಕೆಂಬುದು ಈ ನಾಟಕದ ಸಾರಾಂಶ.
Reviews
There are no reviews yet.