ಅಶೋಕರ ಕಾದಂಬರಿಯನ್ನು ಓದುವಾಗ ಮೇಲಿಂದ ಮೇಲೆ ನೆನಪಾಗುವ ಕೃತಿಗಳೆಂದರೆ ಯು. ಆರ್. ಅನಂತಮೂರ್ತಿಯವರ ಭಾರತಿಪುರ ಹಾಗು ಶಾಂತಿನಾಥ ದೇಸಾಯಿಯವರ ಬೇಜ. ಆದರೆ ಜಗನ್ನಾಥ ಹಾಗು ಶ್ರೇಯಾಂಸರ ಬೌದ್ಧಿಕ ಆಸಕ್ತಿಗಳು ರಾಜೀವನಲ್ಲಿ ಇದ್ದಂತಿಲ್ಲ. ಅವನು ಕ್ರಾಂತಿಯಲ್ಲಿ ತೊಡಗಿಕೊಳ್ಳುವದು ಉದ್ದೇಶಪೂರ್ಣವಾಗಿ ಅಲ್ಲಿ. ಆದರೆ ಒಮ್ಮೆ ತೊಡಗಿಕೊಂಡ ನಂತರ ಸಂಪೂರ್ಣವಾಗಿ ಕ್ರಿಯಾಶೀಲನಾಗುತ್ತಾನೆ. ಅಶ್ವಮೇಧದ ಸಮಾಜ ಭಾರತೀಪುರ ಹಾಗು ಬೀಜಗಳ ಸಮಾಜಗಳಿಗೆ ಹೋಲಿಸಿದರೆ ಆಧುನಿಕತೆಯಿಂದ ಹೆಚ್ಚು ದೂರವಾದುದು. ಅಶ್ವಮೇಧದಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಘಟನೆಗಳಿಗೆ ಆಸ್ಪದವಿಲ್ಲ. ಅಶೋಕರು ವಲ್ಲೀಗದ್ದೆಯಂಥ ಹಳ್ಳಿಯನ್ನು ಆಯ್ದುಕೊಂಡುದುದು ಇದಕ್ಕೆ ಮುಖ್ಯಕಾರಣವೆಂದು ತೊರುತ್ತದೆ. ಅವರ ಕಾದಂಬರಿಯ ಧಾಟಿಯೂ ಅನಂತಮೂರ್ತಿ ಹಾಗು ದೇಸಾಯಿಯವರ ಕಾದಂಬರಿಗಳ ಧಾಟಿಗಿಂತ ಭಿನ್ನವಾಗಿದೆ. ಅಶೋಕರ ಕಾದಂಬರಿಯಲ್ಲಿ ಎದ್ದು ಕಾಣುವ ವಸ್ತುನಿಷ್ಟತೆ ಇರುವುದು ಅವರ ವೈಶಿಷ್ಟ್ಯವಾಗಿದೆ. ಇಲ್ಲಿಯ ಯಾವ ಪಾತ್ರಗಳೂ ಕೇಂದ್ರ ಪಾತ್ರಗಳಲ್ಲ. ಆದ್ದರಿಂದ ದೃಷ್ಟಿಕೋನವು ವಸ್ತುನಿಷ್ಟವಾಗಿದೆ.
ಈ ಮಾದ್ಯಮ ಅವರ ಪ್ರತಿಭೆ ಹಾಗು ಉದ್ದೇಶಗಳಿಗೆ ಒಗ್ಗಿದೆ. ಹೀಗಾಗಿ ಅವರಿಂದ ಇದಕ್ಕೂ ಹೆಚ್ಚಿನ ಪರಿಣಿತಿಯ ಕೃತಿಗಳನ್ನು ಅಪೇಕ್ಷಿಸಬಹುದಾಗಿದೆ. ವಿಪ್ರೋದಂತಹ ದೊಡ್ಡ ಸಂಸ್ಥೆಯಲ್ಲಿ ಮಹತ್ವದ ಸ್ಥಾನದಲ್ಲಿದ್ದುಕೊಂಡು ಅಶೋಕರು ತಮ್ಮ ಅಭಿವ್ಯಕ್ತಿಗಾಗಿ ಸಾಹಿತ್ಯದತ್ತ ತಿರುಗಿದುದು ಕನ್ನಡದ ದೃಷ್ಟಿಯಿಂದ ಬಹಳ ಒಳ್ಳೆಯ ಲಕ್ಷಣ. ಅವರು ತಮ್ಮ ಸಮಕಾಲಿನ ಅನುಭವಗಳಿಗೂ ಕಾದಂಬರಿಯಲ್ಲಿ ಭಾಷೆ ಮತ್ತು ಆಕಾರಗಳನ್ನು ಕೊಡಲಿ ಎಂದು ಹಾರೈಸುತ್ತೇನೆ.
-ಜಿ. ಎಸ್. ಅಮೂರ
Reviews
There are no reviews yet.