ರವಿ ಬೆಳಗೆರೆ ಹುಟ್ಟಿದ್ದು 15 ಮಾರ್ಚ್ 1958 ಬಳ್ಳಾರಿಯಲ್ಲಿ. ಶಾಲಾಶಿಕ್ಷಣ ಬಳ್ಳಾರಿಯಲ್ಲಿ ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಮಾಡಿದರು. ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆ ಹಾಗೂ ‘ಓ ಮನಸೇ’ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕ. ರವಿ ‘ಹಾಯ್ ಬೆಂಗಳೂರ್’ ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.