ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ.ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು.1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ.
1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ಬರೆವಣಿಗೆ ಆರಂಭಿಸಿದ ನಂತರ ವಿಜ್ಞಾನ, ಇತಿಹಾಸ, ಸಾಹಿತ್ಯ, ಜೀವನ ಚರಿತ್ರೆ, ಅಭಿವೃದ್ಧಿ ಮತ್ತು ಪರಿಸರ, ಭಾರತೀಯ ಸಂಗೀತ ದ ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತದ ಕಲಾವಿದರ ಜೀವನ ಚರಿತ್ರೆ ಹಾಗೂ ಅನುವಾದ ಸೇರಿದಂತೆ ವೈವಿಧ್ಯಮಯ ವಿಷಯಗಳಲ್ಲಿ ಒಟ್ಟು ನಲವತ್ತು ಕೃತಿಗಳನ್ನು ರಚಿಸಿದ್ದಾರೆ. 2017 ರಿಂದ ಕರ್ನಾಟಕದ ಆರು ವಿಶ್ವ ವಿದ್ಯಾನಿಲಯಗಳಲ್ಲಿ ಇವರ ಕೃತಿಗಳು ಹಾಗೂ ಕೃತಿಗಳ ಕೆಲವು ಅಧ್ಯಾಯಗಳು ಪದವಿ ತರಗತಿಗಳಿಗೆ ಪಠ್ಯಗಳಾಗಿ ಬೋಧಿಸಲ್ಪಡುತ್ತಿವೆ.