ಗುರುಪ್ರಸಾದ ಭಟ್ (ಗುರು) ಇಂಜನಿಯರಿಂಗ್ ಶಿಕ್ಷಣವನ್ನು ಪಡೆದವರು ಮತ್ತು ವ್ಯಾಪಾರ ನಿರ್ವಹಣೆ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು ನಾಲ್ಕು ದಶಕಗಳ ಅನುಭವವುಳ್ಳ ಅವರು, ಸ್ಟಾರ್ಟ್ ಅಪ್ ಗಳಲ್ಲಿ ಕಾರ್ಯವಹಿಸುವುದಲ್ಲಿ ನಿಷ್ಣಾತರು. ಅಮೆರಿಕೆಯ ಒಂದು ಸ್ಟಾರ್ಟ್ ಅಪ್ ಕಂಪನಿಯ ಭಾರತ ಕಾರ್ಯಕ್ಷೇತ್ರದ ಮುಖ್ಯಸ್ಥರಾಗಿದ್ದಾರೆ. ನಿಯಮಿತ ವ್ಯಾಯಾಮ ಮತ್ತು ದೇಹದಾರ್ಢ್ಯತೆ ಅವರ ಮೆಚ್ಚಿನ ಹವ್ಯಾಸಗಳು.
ಗುರು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಅಪ್ರತಿಮ ಭಕ್ತನೆಂದು ನಾವು ಹೇಳಬಹುದು. ಅವರು ಶಿವಾಜಿ ಮಹಾರಾಜರಿಗೆ ಸಂಬಂಧಪಟ್ಟ ಇತಿಹಾಸದ ಸ್ಥಳಗಳೆಲ್ಲವನ್ನು ತೀರ್ಥಯಾತ್ರೆ ಎಂಬಂತೆ ಭೇಟಿಮಾಡುತ್ತಿರುತ್ತಾರೆ. ಶಿವಾಜಿ ಮಹಾರಾಜರು ಅಲ್ಲಿ ಕಳೆದಿರಬಹುದಾದ ಕ್ಷಣಗಳನ್ನು ಮತ್ತು ಜರುಗಿದ ಘಟನೆಗಳನ್ನು ಮೆಲುಕು ಹಾಕಿ ಪುಳಕಿತರಾಗುತ್ತಾರೆ. ಅವರು ತಮ್ಮ ಪ್ರಿಯ ದೇವಸಂಭೂತ ಶ್ರೀ ಛತ್ರಪತಿ ಶಿವಾಜಿ ಮಹಾರಾಜರಿಗೆ ಅರ್ಪಿತವಾದ, ವಿಶೇಷವಾಗಿ ಸಂಶೋಧನೆ ನಡೆಸಿದ, ಎರಡು ಗ್ರಂಥಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. ಒಂದು, “ಛತ್ರಪತಿ – ನಾ ಕಂಡಂತೆ ಶಿವಾಜಿ” ಎನ್ನುವ ಈ ಕೃತಿ ಮತ್ತು ಇನ್ನೊಂದು ಸಧ್ಯದಲ್ಲಿ ಬಿಡುಗಡೆಯಾಗಲಿರುವ “ರಣ ಧುರಂಧರ – ಛತ್ರಪತಿ ಶಿವಾಜಿ ಮಹಾರಾಜರ ಹತ್ತು ನಿರ್ಣಾಯಕ ಮತ್ತು ಪರಿಣಾಮಕಾರಿ ಯುದ್ಧಗಳು, ಹಾಗೂ ಅವರ ಕಟ್ಟಕಡೆಯ ಯುದ್ಧ)” ಎಂಬ ಗ್ರಂಥ.