‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು.ಬೇಂದ್ರೆ ಅವರಿಗೆ ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ (1968) ಪದವಿ , ಕಾಶಿಯ ವಿದ್ಯಾಪೀಠ ಗೌರವ ಡಾಕ್ಟರೇಟ್ (1976) ನೀಡಿದವು. ಕೇಂದ್ರ ಸರ್ಕಾರ ಪದ್ಮಶ್ರೀ (1968)ಪ್ರಶಸ್ತಿ ನೀಡಿತು. ಕೇಂದ್ರದ ಸಾಹಿತ್ಯ ಅಕಾಡೆಮಿ ಫೆಲೋ ಗೌರವಕ್ಕೆ ಪಾತ್ರರಾಗಿದ್ದ ಬೇಂದ್ರೆ ಅವರಿಗೆ ಅದಮಾರು ಮಠದವರು ಕರ್ನಾಟಕ ಕವಿಕುಲತಿಲಕ (1972) ಬಿರುದು ನೀಡಿದ್ದರು. ಶಿವಮೊಗ್ಗದಲ್ಲಿ ನಡೆದ 27 ನೇ ಕನ್ನಡ ಸಾಹಿತ್ಯ ಸಮ್ಮೇಳನ (1943) ಅಧ್ಯಕ್ಷತೆ ವಹಿಸಿದ್ದರು. ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ (1956) ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ (1974) ದೊರಕಿದವು. ಕೆಲವು ಕೃತಿಗಳ: ಕೃಷ್ಣಕುಮಾರಿ, ಸಖೀಗೀತ, ಉಯ್ಯಾಲೆ, ಗರಿ, ನಾದಲೀಲೆ, ಅರುಳುಮರುಳು ಇತ್ಯಾದಿ ೨೫ ಕವನ ಸಂಕಲನಗಳು. ಸಾಹಿತ್ಯ ಮತ್ತು ವಿಮರ್ಶೆ, ಕಾವ್ಯೋದ್ಯೋಗ, ಸಾಹಿತ್ಯ ವಿರಾಟ ಸ್ವರೂಪ, ನಾಕುತಂತಿ, ನಿರಾಭರಣ ಸುಂದರಿ, ಶಾಂತಲಾ (ಅನುವಾದ) ಇತ್ಯಾದಿ. ಬೇಂದ್ರೆಯವರು 1981ರ ಅಕ್ಟೋಬರ್ 26ರಂದು ಮುಂಬಯಿಯಲ್ಲಿ ನಿಧನರಾದರು.